ಮಂಗಳವಾರ, ಮೇ 17, 2022
27 °C

ಹೂ ಮಾರಾಟಗಾರರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಂದಾಪುರ: ಹೂ ಮಾರಾಟ ಅಂಗಡಿ ಸ್ಥಳಾಂತರ ವಿಷಯದಲ್ಲಿ ಪುರಸಭೆ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಕುಂದಾಪುರ ಹೂ ಮಾರಾಟಗಾರರ ಸಂಘದ ನೇತೃತ್ವದಲ್ಲಿ ಶನಿವಾರ ವಿನೂತನ ರೀತಿಯ ಪ್ರತಿಭಟನೆ ನಡೆಯಿತು.ಹೂ ಮಾರುಕಟ್ಟೆಯಿಂದ ಪೊಲೀಸ್ ಠಾಣೆಯವರೆಗೆ ಬ್ಯಾಂಡ್, ವಾದ್ಯಗಳೊಂದಿಗೆ ಸಾಗಿದ ಪ್ರತಿಭಟನಾಕಾರರು ಪುರಸಭೆ ವಿರುದ್ಧ ಘೋಷಣೆ ಕೂಗಿದರು. ಠಾಣಾಧಿಕಾರಿಗೆ ಮನವಿ ಸಲ್ಲಿಸಿ, ಪುರಸಭೆಯವರೆಗೆ ಮೆರವಣಿಗೆಯಲ್ಲಿ ಸಾಗಿದರು.`ಸುಂದರ ಕುಂದಾಪುರ~ ಯೋಜನೆ ಅನುಷ್ಠಾನಗೊಳಿಸುವ ಸಲುವಾಗಿ ಪುರಸಭಾ ವ್ಯಾಪ್ತಿಯ ಹೂ ಮಾರಾಟಗಾರರಿಗೆ ಮಾರುಕಟ್ಟೆ ನಿರ್ಮಿಸಿಕೊಡಲು ಪುರಸಭೆ ನಿರ್ಧರಿಸಿತ್ತು.ಪಾರಿಜಾತ ವೃತ್ತದಲ್ಲಿ ಮೂಲಸೌಕರ್ಯವಿರುವ ಮಾರುಕಟ್ಟೆ ನಿರ್ಮಿಸಿದ ಬಳಿಕ  ಹೂ ಮಾರುತ್ತಿದ್ದವರು ಅಲ್ಲಿಗೆ ತೆರಳಬೇಕು ಎಂದು ಸೂಚಿಸಿತ್ತು. ಅದರಂತೆ ಹೆಚ್ಚಿನ ಮಾರಾಟಗಾರರು ನೂತನ ಮಾರುಕಟ್ಟೆಗೆ ಅಂಗಡಿ ಸ್ಥಳಾಂತರಿಸಿದ್ದರು.ಆದರೆ, ಪುರಸಭಾ ಕಟ್ಟಡ ಎದುರಿನ ಹಳೆ ಬಸ್ ನಿಲ್ದಾಣದಲ್ಲಿ ಹೂ ಮಾರುತ್ತಿದ್ದವರೊಬ್ಬರು ನೂತನ ಮಾರುಕಟ್ಟೆಗೆ ಸ್ಥಳಾಂತರಗೊಂಡಿರಲಿಲ್ಲ. ಇದರಿಂದ ಅಸಮಾಧಾನಗೊಂಡಿದ್ದ ಉಳಿದ ಮಾರಾಟಗಾರರು ಸಂಘಟನೆ ವತಿಯಿಂದ ಪುರಸಭೆಗೆ ಸಾಕಷ್ಟು ಬಾರಿ ಮನವಿ ನೀಡಿದ್ದರು. ಆದರೆ ಆ ಅಂಗಡಿ ಮಾತ್ರ ತೆರವು ಮಾಡಿರಲಿಲ್ಲ.`ಪುರಸಭೆಗೆ ಮನವಿ ಪತ್ರ ನೀಡಿದರೂ ಪ್ರಯೋಜನವಾಗಿಲ್ಲ. ಅದಕ್ಕೆ ಇಂದು ಪ್ರತಿಭಟನೆ ನಡೆಸಿದ್ದೇವೆ. ಭಾನುವಾರದಿಂದ ಮಾರುಕಟ್ಟೆಯ 29 ಮಾರಾಟಗಾರರು ಪುರಸಭೆ ಎದುರಿನ ಹಳೆ ಬಸ್ ನಿಲ್ದಾಣ ಪರಿಸರದಲ್ಲಿ ಹೂ ಮಾರಾಟ ಪ್ರಾರಂಭಿಸುತ್ತೇವೆ~ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.ಸಂಘದ ಅಧ್ಯಕ್ಷ ಚಂದ್ರಕಾಂತ ಖಾರ್ವಿ, ಉಪಾಧ್ಯಕ್ಷ ಶಿವಕುಮಾರ, ಕಾರ್ಯದರ್ಶಿ ಶೇಖರ ಖಾರ್ವಿ, ಕೋಶಾಧಿಕಾರಿ ಸುಧೀರ ಹಾಗೂ ಸಲಹೆಗಾರ ಸೀನ ನೇತೃತ್ವ ವಹಿಸಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.