ಗುರುವಾರ , ಜೂನ್ 24, 2021
29 °C

ಹೃದಯ ಶ್ರೀಮಂತಿಕೆಗಿಂತ ಮಿಗಿಲಾದ ಸಿರಿತನವಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೃದಯ ಶ್ರೀಮಂತಿಕೆಗಿಂತ ಮಿಗಿಲಾದ ಸಿರಿತನವಿಲ್ಲ

ಹುಬ್ಬಳ್ಳಿ: ಬದುಕಿನಲ್ಲಿ ತೃಪ್ತಿ ಎಂಬುದಿದ್ದರೆ ಬೇರೆ ಕನಸುಗಳು ಬೇಕಿಲ್ಲ. ಹೃದಯ ಶ್ರೀಮಂತಿಕೆಗಿಂತ ಮಿಗಿಲಾದ ಸಿರಿತನವಿಲ್ಲ. ಮನಸ್ಸಿನ ಸಿರಿವಂತಿಕೆ ಇಂದಿನ ಜನರಲ್ಲಿ ಅವಶ್ಯವಾಗಿದೆ ಎಂದು ವಿಜಾಪುರದ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.ಉಣಕಲ್ ಸಮೀಪದ ಶ್ರೀನಗರದಲ್ಲಿ ಸೋಮವಾರ ದ್ಯಾವಪ್ಪನವರ- ಕೊರವಿ-ಸಿದ್ನಾಳ ಶಿಕ್ಷಣ ಸಂಸ್ಥೆಯ ಚೇತನಾ ಬಿಜಿನೆಸ್ ಸ್ಕೂಲ್‌ನ ನೂತನ ಕಟ್ಟಡದ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.  ಹಸಿದವರಿಗೆ ಅನ್ನ, ಕತ್ತಲೆಯಲ್ಲಿದ್ದ ಮನಕೆ ಅನುಭಾವದ ಜ್ಯೋತಿ ಹೊತ್ತಿಸಿದವರು ಬಸವಣ್ಣ. ಹೀಗಾಗಿಯೇ ಅವರನ್ನು ಮಹಾತ್ಮ ಎನ್ನುತ್ತೇವೆ. ಜ್ಞಾನ, ಅನ್ನ ದಾಸೋಹಕ್ಕಿಂತ ಮಿಗಿಲಾದ ಧರ್ಮ ಈ ಜಗತ್ತಿನಲ್ಲಿ ಇನ್ನೊಂದಿಲ್ಲ ಎಂದು ಅವರು ನುಡಿದರು.ಅಕ್ಕಮಹಾದೇವಿಯ ವಚನ ವೊಂದನ್ನು ಉದಾಹರಿಸಿದ ಶ್ರೀಗಳು, ಈ ನೆಲದಲ್ಲಿಯೇ ಸಂಪತ್ತಿದೆ. ಆದರೆ ಅದನ್ನು ಗೊತ್ತುಮಾಡಿಕೊಳ್ಳುವ ಒಕ್ಕಲಿಗ ಬೇಕು. ನಮಗದರ ಅರಿವಿಲ್ಲದೆಯೇ ಭಿಕ್ಷುಕರಂತೆ ಬದುಕುತ್ತಿದ್ದೇವೆ ಎಂದು ಅವರು ವಿಷಾದಿಸಿದರು. ನಮ್ಮ ಮಕ್ಕಳಲ್ಲಿ ಶ್ರೇಷ್ಠ ಜ್ಞಾನಿಗಳು, ವಿಜ್ಞಾನಿಗಳು ಇದ್ದಾರೆ. ಅವರನ್ನು ಗುರುತಿಸುವ ಕಾರ್ಯವಾಗಬೇಕಿದೆ. ಈ ನಿಟ್ಟಿನಲ್ಲಿ ಶಿಕ್ಷಕರ ಪಾತ್ರ ಪ್ರಮುಖ. ಅಧ್ಯಾಪಕರ ಬದುಕೇ ಮಕ್ಕಳಿಗೆ ಜೀವನ ಪಾಠವಾಗಬೇಕು ಎಂದು ಅವರು ಆಶಿಸಿದರು.ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ಮನುಷ್ಯರು ಶಕ್ತಿ ಇದ್ದಾಗಲೇ ಸಮಾಜಕ್ಕೆ ಒಳಿತಾಗುವಂತಹ ಕಾರ್ಯ ಮಾಡಬೇಕು ಎಂದು ಆಶಿಸಿದರು. ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ದೊರೆಯಲು ಉತ್ತಮ ವಾತಾವರಣದ ನಿರ್ಮಾಣ ಅಗತ್ಯ ಎಂದ ಅವರು ಶಿಕ್ಷಣ ಸಂಸ್ಥೆಗಳಲ್ಲಿ ಗ್ರಾಮೀಣ ಹಾಗೂ ಬಡ ಕುಟುಂಬದ ವಿದ್ಯಾರ್ಥಿಗಳಿಗೂ ಅವಕಾಶ ನೀಡುವಂತೆ ಕೋರಿದರು.ಕರ್ನಾಟಕ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಡಾ. ಗುರುಲಿಂಗ ಕಾಪಸೆ ಮಾತನಾಡಿ, ವಿದ್ಯಾರ್ಥಿಗಳು ಬುದ್ಧಿ-ಭಾವವನ್ನು ಸರಿಯಾಗಿ ಬೆಳೆಸಿಕೊಂಡಲ್ಲಿ ಮಾತ್ರ ಸಮಾಜಕ್ಕೆ ಕಾಣಿಕೆ ನೀಡಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.ಹುಬ್ಬಳ್ಳಿ-ಧಾರವಾಡ ನಗರಾಭಿ ವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮೂರುಸಾವಿರಪ್ಪ ಕೊರವಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮುರಗೇಶ ಸಿದ್ನಾಳ, ಕಾರ್ಯಾಧ್ಯಕ್ಷ ಜಗದೀಶ ದ್ಯಾವಪ್ಪನವರ, ಕಾರ್ಯದರ್ಶಿ ಡಾ. ವಿಶ್ವನಾಥ ಎಂ. ಕೊರವಿ, ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಕಾಲೇಜಿನ ಪ್ರಾಧ್ಯಾಪಕರು ಸೇರಿದಂತೆ ನೂರಾರು ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.