ಶನಿವಾರ, ಏಪ್ರಿಲ್ 10, 2021
32 °C

ಹೆಗ್ಗಾರು ಘಟ್ಟದ ಸೆರಗಲ್ಲಿ ಅರಳಿದ `ಬಾಂಡ್ಯ-ಕುಕ್ಕೆ'

ಪ್ರಜಾವಾಣಿ ವಾರ್ತೆ / ಶಿವಾನಂದ ಕರ್ಕಿ Updated:

ಅಕ್ಷರ ಗಾತ್ರ : | |

ಹೆಗ್ಗಾರು ಘಟ್ಟದ ಸೆರಗಲ್ಲಿ ಅರಳಿದ `ಬಾಂಡ್ಯ-ಕುಕ್ಕೆ'

ತೀರ್ಥಹಳ್ಳಿ ತಾಲ್ಲೂಕು ಹೆಗ್ಗಾರು ಘಟ್ಟದ ಅಂಚಿಗೆ ಹೊಂದಿಕೊಂಡಂತಿರುವ ಬಾಂಡ್ಯ-ಕುಕ್ಕೆ ಗ್ರಾಮ ಪಂಚಾಯ್ತಿ ಹಲವು ವಿಶೇಷಗಳನ್ನು ತನ್ನ ಒಡಲಲ್ಲಿ ಹುದುಗಿಸಿಟ್ಟುಕೊಂಡಿದೆ. ಗ್ರಾಮ ದೇವತೆಗಳ ಆರಾಧನೆ, ಕೃಷಿ ಬದುಕಿನೊಂದಿಗಿನ ಜೀವನ ಇಲ್ಲಿಯ ಜನರದ್ದು. ಎಲ್ಲಿ ನೋಡಿದರೂ ಹಸಿರುಹೊದ್ದ ಅಡಿಕೆ ತೋಟಗಳು. ತೆನೆ ತೂಗುವ ಬತ್ತದ ಗದ್ದೆಗಳು. ದೇವರಬನ, ನಾಗರ ಬನಗಳು, ಹಡ್ಡೆ(ರಕ್ಷಿತಾರಣ್ಯ ಪ್ರದೇಶ) ಗ್ರಾಮ ಪಂಚಾಯ್ತಿಯ ಉದ್ದಗಲಕ್ಕೂ ಸಿಗುತ್ತವೆ.ಐದು ಸಾವಿರ ಜನಸಂಖ್ಯೆ ಹೊಂದಿರುವ ಪಂಚಾಯ್ತಿ ವ್ಯಾಪ್ತಿಯಲ್ಲಿ ಒಕ್ಕಲಿಗರು, ಈಡಿಗರು, ಬಿಲ್ಲವರು, ಮುಸ್ಲಿಮರು, ಹೆಳವರು, ಗಿರಿಜನರು ಸೇರಿದಂತೆ ಲಿಂಗಾಯತ ಸಮುದಾಯದ ಜನರು ಇಲ್ಲಿದ್ದಾರೆ. ಭೂ ಮಾಲೀಕರಿಗಿಂತ ಕೃಷಿ  ಕಾರ್ಮಿಕರೇ ಹೆಚ್ಚಾಗಿ ಕಂಡುಬರುತ್ತಾರೆ.10 ಮಂದಿ ಸದಸ್ಯ ಬಲದ ಗ್ರಾಮ ಪಂಚಾಯ್ತಿಯಲ್ಲಿ ಅರ್ಧದಷ್ಟು ಸದಸ್ಯರು ಮಹಿಳೆಯರಿದ್ದಾರೆ. ಕುಕ್ಕೆ ಬಾಂಡ್ಯ, ಹೊಸಬೀಡು ದಾನಸಾಲೆ, ತನಿಕಲ್ಲು, ಮರಹಳ್ಳಿ ಕ್ಷೇತ್ರಗಳಿವೆ. ತನಿಕಲ್ಲಿನಲ್ಲಿ ಪ್ರೌಢಶಾಲೆ, ಬಿಸಿಲಮನೆಯಲ್ಲಿ ಪಶುವೈದ್ಯ ಪ್ರಾಥಮಿಕ ಆರೋಗ್ಯ ಘಟಕ, 8 ಪ್ರಾಥಮಿಕ ಶಾಲೆಗಳು ಹಾಗೂ ಎಲ್ಲ ಹಳ್ಳಿಗಳಲ್ಲಿ ಅಂಗನವಾಡಿ ಕೇಂದ್ರಗಳಿವೆ.ಸ್ಥಳನಾಮ

ದಕ್ಷಿಣ ಕನ್ನಡದಿಂದ ವಲಸೆ ಬಂದ ಕುಟುಂಬವೊಂದು ತಮ್ಮ ಊರಿನ ಹೆಸರು `ಬಾಂಡ್ಯ'ಎನ್ನುವುದನ್ನು ಈ ಊರಿಗೆ ಇಟ್ಟಿದೆ. ಅದಕ್ಕೆ ಹೊಂದಿಕೆಯಾಗಿರುವ `ಕುಕ್ಕೆ' ಎಂಬ ಊರು ಒಟ್ಟಿಗೆ ಸೇರಿಕೊಂಡಿದೆ ಎಂದು ಇಲ್ಲಿನ ಹಿರಿಯರು ಹೇಳುತ್ತಾರೆ.   ಬಹಳ ಹಿಂದಿನ ಕಾಲದಲ್ಲಿಯೇ ಬಂದು ನೆಲೆಸಿರುವ ಬಾಂಡ್ಯ ಕುಟುಂಬದವರು ಭೂಮಾಲೀಕರಾಗಿದ್ದು, ನಂತರ ಭೂ ಸುಧಾರಣಾ ಕಾನೂನು ಜಾರಿಗೆ ಬಂದ ನಂತರ ಉಳುಮೆ ಮಾಡುವವರಿಗೆ ಭೂಮಿಯನ್ನು ನೀಡಿದರು ಎಂದು ಹೇಳುತ್ತಾರೆ.ಗ್ರಾಮ ಮಂಚಾಯ್ತಿಯ ಬಹುತೇಕ ಭಾಗಗಳು ಅಡಿಕೆ ತೋಟಗಳಾಗಿ ಕಂಗೊಳಿಸುತ್ತಿವೆ. ಗದ್ದೆಗಳಲ್ಲಿ ಬತ್ತ ಬೆಳೆಯಲಾಗುತ್ತದೆ. ಮಳೆಯಾಶ್ರಿತ ಬೆಳೆಗೆ ಮಾತ್ರ ಬತ್ತ ಸೀಮಿತಗೊಂಡಿದೆ. ಸರಾಸರಿ ಈ ಪ್ರದೇಶದಲ್ಲಿ 10 ಸಾವಿರ ಕ್ವಿಂಟಲ್‌ಗಿಂತಲೂ ಹೆಚ್ಚು ಅಡಿಕೆ ಬೆಳೆಯಲಾಗುತ್ತದೆ.  ಖುಷ್ಕಿ, ಹಕ್ಕಲು ಬಯಲು ಪ್ರದೇಶಗಳೆಲ್ಲ ಅಡಿಕೆ ತೋಟಗಳಾಗಿ ಪರಿವರ್ತನೆಗೊಳ್ಳುತ್ತಿವೆ.ಈಗೀಗ ರಬ್ಬರ್ ಬೆಳೆಗಳ ಕಡೆಗೆ ರೈತರು ಹೆಚ್ಚು ಆಸಕ್ತಿ ವಹಿಸಿದ್ದಾರೆ. ಶುಂಠಿ, ಕಾಳುಮೆಣಸು, ಬಾಳೆ, ಕೊಕೊ ಉಪ ಬೆಳೆಗಳು ಇಲ್ಲಿ ಕಂಡುಬರುತ್ತದೆ. ಹಳ್ಳ, ತೊರೆಗಳು, ಕೃಷಿ ಹೊಂಡಗಳು ಸೇರಿದಂತೆ ಬೋರ್‌ವೆಲ್‌ಗಳ ಮೂಲಕ ನೀರನ್ನು ಆಶ್ರಯಿಸಿದ್ದಾರೆ.ಪ್ರಗತಿಪರ ಕೃಷಿಕರು

ಕೃಷಿಯಲ್ಲಿ ಹೊಸ ಸಾಧ್ಯತೆ ಕಂಡುಕೊಳ್ಳುವ ರೈತರು ಇಲ್ಲಿ ಸಿಗುತ್ತಾರೆ. ಅಡಿಕೆ ಬೆಳೆಯ ಬೆಲೆಯ ಏರಿಳಿತ, ಕಾಡುವ ರೋಗ, ನಿರ್ವಹಣೆಯ ವ್ಯಚ್ಚ , ಕೃಷಿ ಕಾರ್ಮಿಕರ ಕೊರತೆ ಮುಂತಾದ ಸಮಸ್ಯೆಗಳಿಗೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಶ್ರೀಗಂಧವನ್ನು ಬೆಳೆಯುವ ಮೂಲಕ ಗರಗೇಶ್ವರ ಮಂಜಪ್ಪಗೌಡ ಹಾಗೂ ಅವರ ಮಕ್ಕಳು ಗಮನ ಸೆಳೆಯುತ್ತಾರೆ.ಪಂಚಾಯ್ತಿ ವ್ಯಾಪ್ತಿಯ ಹಳ್ಳಿಗಳಿಗೆ ಕುಡಿಯುವ ನೀರಿನ ಯೋಜನೆಯ ಮೂಲಕ ನೀರು ಸರಬರಾಜು ಮಾಡಲಾಗಿದೆ. ಗ್ರಾಮಾರಣ್ಯ ಸಮಿತಿ ಕಾರ್ಯ ನಿರ್ವಹಿಸುತ್ತಿದೆ. ಹಳ್ಳಿಗಳಿಗೆ ರಸ್ತೆ ಸಂಪರ್ಕ ಪೂರ್ಣಗೊಂಡಿಲ್ಲ. ಮಣ್ಣಿನ ರಸ್ತೆಗಳು, ಜಲ್ಲಿ ರಸ್ತೆಗಳಿಗೆ ಮಾತ್ರ ಸೀಮಿತಗೊಂಡಿದೆ. ಕುಕ್ಕೆಯಿಂದ ಸಾಲೇಜನಗಲ್ಲು, ಗಂಟೆಜನಗಲ್ಲು ಮುಂತಾದ ಹಳ್ಳಿಗಳಿಗೆ ಡಾಂಬರು ರಸ್ತೆ ಇದೆ.ಪಂಚಾಯ್ತಿಗೆ ಸಂಪನ್ಮೂಲ ಕೊರತೆ ಇದೆ. ವಾರ್ಷಿಕ ್ಙ 80 ಸಾವಿರದಷ್ಟು ಮಾತ್ರ ಕಂದಾಯದ ಮೂಲಕ ಆದಾಯ ಲಭ್ಯವಿದೆ. ಕಳೆದ ಮೂರು ವರ್ಷದಿಂದ ಇಲ್ಲಿವರೆಗೆ ್ಙ 15 ಲಕ್ಷದಷ್ಟು ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಗ್ರಾಮ ಪಂಚಾಯ್ತಿ ಆಡಳಿತಕ್ಕೆ ಬಂದಿದೆ.`ನಿರ್ಮಲ ಗ್ರಾಮ' ಪುರಸ್ಕಾರ ಗ್ರಾಮ ಪಂಚಾಯ್ತಿಗೆ 2009ರಲ್ಲಿ ಬಂದಿದೆ. ಶಾಸಕ ಕಿಮ್ಮನೆ ರತ್ನಾಕರ್ ಅವರ ಸಹಕಾರದಿಂದಾಗಿ ಹೊಸಬೀಡು ಗ್ರಾಮವನ್ನು ಸುವರ್ಣ ಗ್ರಾಮದ ವ್ಯಾಪ್ತಿಗೆ ಸೇರಿಸಲಾಗಿದೆ. ಈಗಾಗಲೇ ಈ ಗ್ರಾಮದ ಅಭಿವೃದ್ಧಿಗೆ ್ಙ 24.27 ಲಕ್ಷ ಬಿಡುಗಡೆಯಾಗಿದೆ ಎಂದು ಗ್ರಾಮ ಪಂಚಾಯ್ತಿ ಅಧ್ಯಕ್ಷ ಟಿ.ಎಚ್. ಸೈಯದ್ ಹೇಳುತ್ತಾರೆ.ದೇವಸ್ಥಾನಗಳ ಊರು

ಕುಕ್ಕೆಯಲ್ಲಿ ರಂಗನಾಥ ಸ್ವಾಮಿ ದೇವಸ್ಥಾನವಿದೆ. ತಾಲ್ಲೂಕಿನಲ್ಲಿ ಈ ಬಗೆಯ ದೇವಸ್ಥಾನ ಬೇರೆಡೆ ಇಲ್ಲ ಎಂಬ ಮಾಹಿತಿ ಸಿಗುತ್ತದೆ. ಸಮಕಾನಿಯಲ್ಲಿ ದುರ್ಗಾ ಪರಮೇಶ್ವರಿ ಅಮ್ಮನವರ ದೇವಸ್ಥಾನ, ದಾನಸಾಲೆಯಲ್ಲಿ ಈಶ್ವರ ದೇವಸ್ಥಾನ, ಗೊರಕೋಡಿನಲ್ಲಿ ವೀರಭದ್ರ ದೇವಸ್ಥಾನ, ಬೆಜ್ಜವಳ್ಳಿ-ಸಮಕಾನಿಯಲ್ಲಿ ವ್ಯವಸ್ಥಿತ ಮಸೀದಿ ಗಮನಸೆಳೆಯುತ್ತವೆ.

ಸಮಕಾನಿ ದೊಂಬರ ಹಬ್ಬದ ಕೇಂದ್ರಸ್ಥಾನವಾಗಿದೆ. ತಾಲ್ಲೂಕಿನ ವಿವಿಧ ಗ್ರಾಮಗಳ ಗ್ರಾಮ ದೇವತೆ ಕುಮಾರರಾಮನ ಉತ್ಸವಕ್ಕೆ ಇಲ್ಲಿನ ಸಂಪ್ರದಾಯಸ್ಥರು ಚಾಲನೆ ನೀಡುತ್ತಾರೆ.ಗ್ರಾಮ ಪಂಚಾಯ್ತಿ ಅಧ್ಯಕ್ಷನಾಗಿ 2 ವರ್ಷ 4 ತಿಂಗಳು ಪೂರೈಸಿದ್ದೇನೆ. ಸಾಕಷ್ಟು ಸಮಸ್ಯೆಗಳಿದ್ದರೂ ಅಭಿವೃದ್ದಿಗೆ ಹೆಚ್ಚು ಒತ್ತು ನೀಡಲಾಗಿದೆ. ಸಹ ಸದಸ್ಯರ ಸಹಕಾರದಿಂದ ಸಮಸ್ಯೆಗಳ ಕುರಿತು ಚರ್ಚಿಸಿ ಆದ್ಯತೆಯ ಮೇಲೆ ಕೆಲಸ ಮಾಡಲಾಗಿದೆ.  ಅಲ್ಲಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಕೊಳವೆ ಬಾವಿಗಳು ವಿಫಲವಾಗುತ್ತಿವೆ. ಪಂಚಾಯ್ತಿಗೆ ಸರ್ಕಾರದ ಅನುದಾನದ ಹೊರತಾಗಿ ಇತರೆ ಆದಾಯ ಇಲ್ಲ. ಆಶ್ರಯ ಫಲಾನುಭವಿಗಳಿಗೆ ಹಕ್ಕುಪತ್ರ ಇಲ್ಲದೇ ಇರುವುದರಿಂದ ಮನೆಗಳನ್ನು ನೀಡಲಾಗಿಲ್ಲ ಎಂಬ ಕೊರಗಿದೆ. ಗ್ರಾಮಸ್ಥರ ಸಹಕಾರದಿಂದ ಉತ್ತಮ ಆಡಳಿತ ನೀಡಿದ ತೃಪ್ತಿ ಇದೆ ಎಂದು ಗ್ರಾಮ ಪಂಚಾಯ್ತಿ ಅಧ್ಯಕ್ಷ ಟಿ.ಎಚ್. ಸೈಯದ್ ಹೇಳುತ್ತಾರೆ.ಗ್ರಾಮ ಪಂಚಾಯ್ತಿಗೆ ಸಂಪನ್ಮೂಲದ ಕೊರತೆ ಇದೆ. ಆಗಬೇಕಾದ ಕೆಲಸಗಳು ಸಾಕಷ್ಟಿವೆ. ಸರ್ಕಾರಗಳು ಗ್ರಾಮಾಂತರ ಪ್ರದೇಶಗಳನ್ನು ಕಡೆಗಣಿಸಿವೆ. ನಗರಗಳಿಗೆ ನೀಡುವ ಸೌಕರ್ಯವನ್ನು ಹಳ್ಳಿಗಳಿಗೆ ನೀಡುತ್ತಿಲ್ಲ. ಗ್ರಾಮ ಪಂಚಾಯ್ತಿಗಳಿಗೆ ಚೈತನ್ಯ ನೀಡುವ ಕೆಲಸವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಾಡಬೇಕು. ಹಳ್ಳಿಗಳು ಉಳಿದರೆ ದೇಶ ಉಳಿಯುತ್ತದೆ. ಇರುವ ಅನುದಾನದಲ್ಲಿ ಸಮರ್ಪಕ ಕೆಲಸ ಕಾರ್ಯಗಳು ಆಗಿವೆ ಎಂದು ಗ್ರಾಮ ಪಂಚಾಯ್ತಿ ಸದಸ್ಯ ಎಸ್.ಟಿ. ದೇವರಾಜ್ ಹೇಳುತ್ತಾರೆ.

ಇದ್ದುದ್ದರಲ್ಲಿ ಒಳ್ಳೆಯ ಆಡಳಿತ ನೀಡಲಾಗಿದೆ. ರಸ್ತೆ, ಮೋರಿ, ಕುಡಿಯುವ ನೀರು, ಬೀದಿದೀಪಗಳನ್ನು ಪಂಚಾಯ್ತಿ ಆಡಳಿತ ಸಮರ್ಪಕವಾಗಿ ನಿರ್ವಹಿಸಿದೆ. ಆಗಬೇಕಾದ ಕೆಲಸಗಳು ಬಹಳಷ್ಟಿವೆ ಎಂದು ಗ್ರಾಮಸ್ಥ ತಾರಾನಾಥ್ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.ಗ್ರಾಮದ ಹಿರಿಮೆ ಹೆಚ್ಚಿಸಿದ ಮಹನೀಯರು: ಅಂತರರಾಷ್ಟ್ರೀಯ ಓಟಗಾರ್ತಿ ಇ.ಬಿ. ಶೈಲಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಈಚಲುಕೊಪ್ಪದವರು.ಹೊಸಬೀಡಿನ ಎಚ್.ಆರ್. ಕೃಷ್ಣಮೂರ್ತಿ ಅರ್ಥಶಾಸ್ತ್ರದಲ್ಲಿ ಹಲವು ಪುಸ್ತಕಗಳನ್ನು ರಚಿಸಿದ್ದಾರೆ. ವಿವಿಧ ವಿಶ್ವವಿದ್ಯಾಲಯಗಳಲ್ಲಿ ಅವರ ಬರಹ ಪಠ್ಯಗಳಾಗಿವೆ. ಸಮಾಜವಾದಿ ಹೋರಾಟಗಾರ ತನಿಕಲ್ಲು ಕೇಶವೇಗೌಡ ಅವರು ಊರಿನ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಆರ್ಥಿಕ ನೆರವು ನೀಡಿದ್ದಾರೆ.ದಾನಸಾಲೆ ಡಿ.ಸಿ. ಶ್ರೀಧರ್ ಐಎಎಸ್ ಅಧಿಕಾರಿ ಆಗಿ ಕಾರ್ಯ ನಿರ್ವಹಿಸುತಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಜೆ.ಎಲ್. ಪದ್ಮನಾಭ್, ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಅಶೋಕಮೂರ್ತಿ, ನಾಟಿವೈದ್ಯರಾದ ಬಸರುವಾನಿ ಹೂವನಾಯ್ಕ, ಗೊರಕೋಡಿನ ಶೇಷನಾಯ್ಕರು ಗ್ರಾಮದ ಹಿರಿಮೆ ಹೆಚ್ಚಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.