ಬುಧವಾರ, ಜನವರಿ 29, 2020
28 °C

ಹೆಚ್ಚಿನ ಕ್ಷಮತೆಯ ಬ್ಯಾಕ್ಹೊ ಲೋಡರ್‌

–ರಮೇಶ ಕೆ. Updated:

ಅಕ್ಷರ ಗಾತ್ರ : | |

ಹೆಚ್ಚಿನ ಕ್ಷಮತೆಯ ಬ್ಯಾಕ್ಹೊ ಲೋಡರ್‌

ಬಸ್‌, ಟ್ರಕ್, ದಿಗ್ಗಜ ಅಶೋಕ ಲೇಲ್ಯಾಂಡ್ ನಿರ್ಮಾಣ (ಕನ್‌ಸ್ಟ್ರಕ್ಷನ್‌) ವಾಹನ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಅತ್ಯುತ್ತಮ ಮಾರುಕಟ್ಟೆ ಜಾಲವನ್ನು ಹೊಂದಿರುವ ಲೇಲ್ಯಾಂಡ್ ಬಹುಬಗೆಯ ವಾಹನಗಳ ತಯಾರಿಕೆಯಲ್ಲಿ ದಿಟ್ಟ ಹೆಜ್ಜೆಗಳನ್ನಿಡುತ್ತಿದೆ. ಇದಕ್ಕೆ ಉದಾಹರಣೆ ಇತ್ತೀಚೆಗೆ ನಿಸ್ಸಾನ್‌ ಜತೆಗೂಡಿ ಪ್ರಯಾಣಿಕ ವಾಹನ ತಯಾರಿಸಿದ್ದು. ಇದೀಗ ನಿರ್ಮಾಣ ಕಾಮಗಾರಿಗೆ ಅನುಕೂಲವಾಗುವ ಬ್ಯಾಕ್ಹೊ ಲೋಡರ್‌ (ಬಿಎಚ್ಎಲ್) ಅನ್ನು ಬಿಡುಗಡೆ ಮಾಡಿದೆ.ಅಮೆರಿಕದ ಜಾನ್‌ಡೀರ್ ಕಂಪೆನಿಯ ಜೊತೆಗೂಡಿ 2011ರಲ್ಲಿ ಬಿಎಚ್ಎಲ್ ಅನ್ನು ಪರಿಚಯಿಸಿತ್ತು. ಅದರಲ್ಲಿ ಕೆಲವು ಬದಲಾವಣೆಗಳನ್ನು ಮಾಡಿ 435 ಇ ಬಿಎಚ್‌ಎಲ್‌ ಹೆಸರಿನಲ್ಲಿ ಅನಾವರಣ ಮಾಡಿದೆ.‘ನಮ್ಮ ದೇಶದಲ್ಲಿ ಎರಡು ರೀತಿ ಗ್ರಾಹಕರಿದ್ದಾರೆ. ಅವರು ಇಂಧನ ಉಳಿತಾಯ ಹಾಗೂ ನಿರ್ವಹಣಾ ವೆಚ್ಚವನ್ನು ಗಮನಿಸಿಸುತ್ತಾರೆ. ಹಾಗಾಗಿ ಮುಖ್ಯವಾಗಿ ಇಂಧನ ಉಳಿತಾಯ ಹಾಗೂ ಕಡಿಮೆ ನಿರ್ವಹಣೆ ವೆಚ್ಚ ತಗುಲುವ 435 ಇ ಬ್ಯಾಕ್ಹೊ ಲೋಡರ್‌ ಅನ್ನು ಪರಿಚಯಿಸಿದ್ದೇವೆ. ಭಾರಿ ನಿರ್ಮಾಣ ಕೆಲಸಕ್ಕೆ ಉಪಯೋಗಿಸುವವರಿಗೆ ಬ್ಯಾಕ್ಹೊ ಲೋಡರ್‌ ಅನ್ನು ಖರೀದಿಸಲು ಸಲಹೆ ಮಾಡುತ್ತೇವೆ’ ಎಂದು ಮಾಹಿತಿ ನೀಡುತ್ತಾರೆ ಅಶೋಕ ಲೇಲ್ಯಾಂಡ್ ಜಾನ್ ಡೀರ್‌ ಕನ್‌ಸ್ಟ್ರಕ್ಷನ್‌ ಇಕ್ಯುಪ್‌ಮೆಂಟ್‌ ಕಂಪೆನಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಪಿ. ರವಿಶಂಕರ್‌.ಈ ವಾಹನದಲ್ಲಿ ಆಪರೇಟರ್‌ನ ಸುರಕ್ಷತೆಗಾಗಿ ‘ರೋಲ್‌ ಓವರ್‌ ಪ್ರೊಟೆಕ್ಷನ್‌’ ವ್ಯವಸ್ಥೆಯ ಕ್ಯಾಬಿನ್‌ ಇದೆ. ಬೆಟ್ಟ ಪ್ರದೇಶದಲ್ಲಿ ಕೆಲಸ ನಿರ್ವಹಿಸುವಾಗ ಅಕಸ್ಮಾತ್‌ ಉರುಳಿ ಕ್ಯಾಬಿನ್‌ ಕೆಳಗಾಗಿ ವಾಹನ ಬಿದ್ದರೆ ವಾಹನದ ಪೂರ್ತಿ ಭಾರವನ್ನು ತಡೆಯುವ ಸಾಮರ್ಥ್ಯವನ್ನು ಕ್ಯಾಬಿನ್‌ ಹೊಂದಿದೆ. ಅದಕ್ಕಾಗಿ ಮೇಲ್ಛಾವಣಿಯನ್ನು ಮೂರು ಪದರಗಳಲ್ಲಿ ವಿನ್ಯಾಸ ಮಾಡಲಾಗಿದೆ. ಮೇಲಿನ ಪದರ ಹೀಟ್‌ ಇನ್ಸುಲೇಷನ್‌ನಿಂದ ಮಾಡಿದ್ದು, ಅದರಡಿ ಎರಡು ಪದರಗಳನ್ನು ಹೊಂದಿವೆ.ವಾಹನದ ಮುಂದಿನ ಬಕೆಟ್‌ ಭಾರ ಎತ್ತುವಾಗ ಕಲ್ಲು ಅಥವಾ ಇನ್ನಿತರೆ ವಸ್ತುಗಳು ಕ್ಯಾಬಿನ್‌ ಮೇಲೆ ಬಿದ್ದರೆ ರಕ್ಷಣೆಗಾಗಿ ಮೂರು ಪದರಗಳನ್ನು ಅಳವಡಿಸಲಾಗಿದೆ. ಅನಿವಾರ್ಯ ಕಾರಣಗಳಿಂದ ಹ್ಯಾಂಡ್‌ ಆಪರೇಟರ್‌ ಬ್ರೇಕ್‌ ಹಾಕದೇ ವಾಹನ ಸ್ವಿಚ್‌ ಆಫ್‌ ಮಾಡಿದರೂ ಸಹ ಸ್ವಯಂಚಾಲಿತವಾಗಿ ಬ್ರೇಕ್‌ ಹಾಕಿಕೊಳ್ಳುವ ವ್ಯವಸ್ಥೆ ಇದೆ.ಹೈಡ್ರಾಲಿಕ್‌ ಸಿಲೆಂಡರ್‌ನ ಒತ್ತಡ ಹೆಚ್ಚಿಸಲಾಗಿದೆ. ಹೆಚ್ಚು ಆಳದವರೆಗೂ ಮಣ್ಣು ತೆಗೆಯುವ ಸಾಮರ್ಥ್ಯವನ್ನು ಹೊಂದಿದೆ. ಒಂದು ಮನೆ ಪಾಯವನ್ನು (ಫೌಂಡೇಷನ್‌) ಎರಡು ದಿನಗಳಲ್ಲಿ ಮುಗಿಸುವ ಸಾಮರ್ಥ್ಯ ಹೊಂದಿದೆ. ಒಂದು ವರ್ಷದಲ್ಲಿ 3 ಸಾವಿರ ಗಂಟೆ ಕೆಲಸ ಮಾಡಿದರೆ 1500 ಲೀಟರ್‌ ಡೀಸೆಲ್‌ ಉಳಿತಾಯ ಆಗಲಿದೆಯಂತೆ. ಅದಕ್ಕಾಗಿ ಲೇಲ್ಯಾಂಡ್‌ ಎಂಜಿನಿಯರ್‌ ತಂಡ ವಿಶೇಷ ತಂತ್ರಜ್ಞಾನದ ಇಂಧನ ಪಂಪ್‌ ಅಳವಡಿಸಿದೆ.ಇತರೆ ಕಂಪೆನಿಗಳ ಬ್ಯಾಕ್ಹೊ ಲೋಡರ್‌ಗೆ ಹೋಲಿಸಿದರೆ ಆಯಿಲ್‌ ಉಳಿತಾಯವು ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಾಗುತ್ತದೆ ಎಂದು ಹೇಳಿಕೊಂಡಿದೆ. ಬೇರೆ ಕಂಪೆನಿಗಳ ಬ್ಯಾಕ್ಹೊ ಲೋಡರ್‌ಗಳು ಪ್ರತಿ 250 ಗಂಟೆಗೆ ಒಮ್ಮೆ ಆಯಿಲ್‌ ಬದಲಿಸಿದರೆ, ಇದರಲ್ಲಿ 1ಸಾವಿರ ಗಂಟೆಗೊಮ್ಮೆ ಬದಲಾಯಿಸಿದರೆ ಸಾಕು. ವಾಹನದ ವೆಚ್ಚವೂ ದುಬಾರಿ ಎನಿಸುವುದಿಲ್ಲ ಎಂದು ಕಂಪೆನಿ ಹೇಳಿಕೊಂಡಿದೆ.ಜನವರಿಯಲ್ಲಿ ಮಾರುಕಟ್ಟೆ ಪ್ರವೇಶ ಮಾಡಲಿರುವ 435ಇ ಬ್ಯಾಕ್ಹೊ ಲೋಡರ್‌ ಬೆಲೆ ಇನ್ನೂ ನಿಗದಿಯಾಗಿಲ್ಲ. ಅಧಿಕ ಭೂಮಿಯನ್ನು ಹೊಂದಿದ ಶ್ರೀಮಂತ ಕೃಷಿಕರು, ಬಿಲ್ಡರ್‌ಗಳು ಹಾಗೂ ಗುತ್ತಿಗೆದಾರರಿಗೆ ಹೇಳಿ ಮಾಡಿಸಿದ ವಾಹನವಿದು ಎನ್ನುವುದು ಸಂಸ್ಥೆಯ ಅಂಬೋಣ. 

ಬ್ಯಾಕ್ಹೊ ಲೋಡರ್‌ ವಿಶೇಷ

* ರೇರ್‌ ಆಕ್ಸೆಲ್‌ ಅಸೆಂಬ್ಲಿ

* ಮ್ಯಾನುಯಲ್ ಗೇರ್‌ ಬಾಕ್ಸ್‌

* ರೋಲ್‌ ಓವರ್‌ ಪ್ರೊಟೆಕ್ಷನ್‌ ವ್ಯವಸ್ಥೆಯ ಕ್ಯಾಬಿನ್‌ 

* ಇಂಧನ ಉಳಿತಾಯ ತಂತ್ರಜ್ಞಾನ

* 1ಸಾವಿರ ಗಂಟೆ ಬಳಕೆ ನಂತರ ಪಿನ್, ಬುಶ್‌ ಬದಲಾಯಿಸಬಹುದು.

* ಹೈಡ್ರಾಲಿಕ್‌ ಬ್ರೇಕ್‌

ಪ್ರತಿಕ್ರಿಯಿಸಿ (+)