ಭಾನುವಾರ, ಜೂನ್ 13, 2021
26 °C

ಹೆಚ್ಚುತ್ತಿದೆ ಬಿಸಿಲ ಧಗೆ; 800 ಅಡಿಗೆ ಕುಸಿದ ಜಿಲ್ಲೆಯ ಅಂತರ್ಜಲ

ಪ್ರಜಾವಾಣಿ ವಿಶೇಷ ವರದಿ Updated:

ಅಕ್ಷರ ಗಾತ್ರ : | |

ತುಮಕೂರು: ಇನ್ನೂ ಏಪ್ರಿಲ್ ತಿಂಗಳೇ ಬಂದಿಲ್ಲ. ಆಗಲೇ ಕಲ್ಪತರು ನಾಡಿನ ರೈತರ ಮುಖ ಕಳಾಹೀನವಾಗತೊಡಗಿವೆ. ಫೆಬ್ರುವರಿ ತಿಂಗಳಿಂದಲೇ ಹೆಚ್ಚುತ್ತಾ ಸಾಗಿದ ಬಿಸಿಲ ಧಗೆ ಮಾರ್ಚ್ ಮೊದಲ ವಾರದಲ್ಲೇ ಮತ್ತಷ್ಟೂ ಪ್ರಖರವಾಗಿರುವುದು ರೈತರು ಭಯ ಬೀಳಲು ಕಾರಣವಾಗಿದೆ.`ಯುಗಾದಿಗೆ ಮುಂಚೆಯೇ ಇಂತಹ ಬಿಸಿಲು ನೋಡಿದರೆ ಭಯವಾಗುತ್ತಿದೆ. ತೋಟ-ತುಡಿಕೆ ಉಳಿಸಿಕೊಳ್ಳುವುದು ಹೇಗೆ ಎಂಬ ಚಿಂತೆ ಕಾಡುತ್ತಿದೆ. ಈಗಾಗಲೇ ಕೊಳವೆ ಬಾವಿಗಳಲ್ಲಿ ನೀರು ಕಡಿಮೆಯಾಗ ತೊಡಗಿದೆ. ವಿದ್ಯುತ್ ಸಮಸ್ಯೆಯೂ ಹೆಚ್ಚುತ್ತಿದೆ. ನೀರು ಹಾಯಿಸಿದ ಮರುದಿನವೇ ಭೂಮಿ ಒಣಗಿರುತ್ತದೆ. ತೆಂಗಿನ ತೋಟಗಳಿಗೆ ಕಾಲಿಟ್ಟರೆ ಸಾಕು ಒಣಗಿದ ಗರಿ ನೋಡಿ ಮನಸ್ಸು ಭಾರವಾಗುತ್ತದೆ~ ಎನ್ನುತ್ತಾರೆ ಗುಬ್ಬಿ ತಾಲ್ಲೂಕು ಚಿಣ್ಣನಾಯಕನಪಾಳ್ಯದ ರೈತ ರಾಮಕೃಷ್ಣೇಗೌಡ.ತುರುವೇಕೆರೆ, ತಿಪಟೂರು, ಗುಬ್ಬಿ ತಾಲ್ಲೂಕಿನ ಹೇಮಾವತಿ ನೀರು ಹರಿಯುವ ಕೆಲವು ಹೋಬಳಿಗಳನ್ನು ಹೊರತುಪಡಿಸಿದರೆ ಜಿಲ್ಲೆಯ ಉಳಿದೆಡೆ ಅಂಥ ಆಶಾದಾಯಕ ವಾತಾವರಣ ಇಲ್ಲ. ಮಾರ್ಚ್ ಕೊನೆ ವೇಳೆಗಾದರೂ ಮಳೆ ಬರದಿದ್ದರೆ ಜಿಲ್ಲೆ ತೋಟಗಾರಿಕೆ ಮೇಲೆ ಅಗಾಧ ಪರಿಣಾಮ ಬೀರಲಿದೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಪ್ರಸಾದ್.ಜಿಲ್ಲೆಯಲ್ಲಿ ತೆಂಗು, ಅಡಿಕೆ ಪ್ರಧಾನ ಬೆಳೆ. ತೆಂಗು ತೋಟ ಸದ್ಯಕ್ಕೆ ಒಣಗುವ ಸ್ಥಿತಿ ತಲುಪಿಲ್ಲ. ಆದರೆ ಒಣ ಪ್ರದೇಶದಲ್ಲಿರುವ ಅಡಿಕೆ ತೋಟ ಒಣಗುತ್ತಿವೆ. ಏಪ್ರಿಲ್ ಮೊದಲ ವಾರದಲ್ಲಿ ಮಳೆ ಬಾರದಿದ್ದರೆ ಸಾಕಷ್ಟು ಅನಾಹುತ ಆಗಲಿದೆ. ನೂರಾರು ಹೆಕ್ಟೇರ್ ಪ್ರದೇಶದ ತೋಟ ಒಣಗುವ ಸಂಭವವಿದೆ ಎಂದು ತೋಟಗಾರಿಕೆ ಇಲಾಖೆ ಮೂಲಗಳು ತಿಳಿಸಿವೆ.ಕುಣಿಗಲ್ ಸುತ್ತಮುತ್ತ, ಅಮೃತೂರು ಹೋಬಳಿ ಹೊರತುಪಡಿಸಿದರೆ ಉಳಿದ ಕಡೆ ಅಂತರ್ಜಲ ಕುಸಿಯತೊಡಗಿದೆ. ತೋಟಗಾರಿಕೆ ಹೆಚ್ಚಿರುವ ಗುಬ್ಬಿ ತಾಲ್ಲೂಕಿನ ಕೆ.ಜಿ.ಟೆಂಪಲ್, ಸಿ.ಎಸ್.ಪುರ ಹೋಬಳಿ ವ್ಯಾಪ್ತಿಯಲ್ಲಿ ನೂರಾರು ಕೊಳವೆ ಬಾವಿಗಳಲ್ಲಿ ನೀರು ಕಡಿಮೆಯಾಗಿದೆ. ರೈತರು ಕೊಳವೆ ಬಾವಿಗಳನ್ನು ಮತ್ತಷ್ಟು ಆಳಕ್ಕೆ ಕೊರೆಸುತ್ತಿದ್ದಾರೆ.ಇಡೀ ಜಿಲ್ಲೆ ಬರಕ್ಕೆ ತುತ್ತಾಗಿದ್ದರೂ ಜಿಲ್ಲಾಡಳಿತ, ಸರ್ಕಾರ ಕೇವಲ ಕುಡಿಯುವ ನೀರಿನ ಸಮಸ್ಯೆಯನ್ನಷ್ಟೇ ಕೇಂದ್ರೀಕರಿಸಿಕೊಂಡು ಕೆಲಸ ಮಾಡುತ್ತಿದೆ. ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಲಕ್ಷಾಂತರ ರೂಪಾಯಿ ಹಣ ಬಿಡುಗಡೆ ಮಾಡಿದೆ. ಆದರೆ ಜಿಲ್ಲೆಯ ಜೀವನಾಡಿಯಾಗಿರುವ ತೋಟಗಾರಿಕೆ ಉಳಿಸಿಕೊಳ್ಳುವ ಸಂಬಂಧ ಈವರೆಗೂ ಸಣ್ಣ ಪ್ರಯತ್ನವನ್ನೂ ಜಿಲ್ಲಾಡಳಿತ ಮಾಡಿಲ್ಲ.ಕನಿಷ್ಠ ಇರುವ ನೀರಿನ ಸದ್ಬಳಕೆ, ಬೇಸಿಗೆ ತಾಪದಿಂದ ತೋಟಗಾರಿಕೆ ಉಳಿಸಿಕೊಳ್ಳುವ ಮಾರ್ಗೋಪಾಯಗಳ ಕುರಿತು ಕೂಡ ಸಲಹೆ, ಚರ್ಚೆಯೂ ಕೇಳಿ ಬಂದಿಲ್ಲ. ಜಿಲ್ಲಾಡಳಿತಕ್ಕೆ ರೈತರು ಕಣ್ಣಿಗೆ ಕಾಣುತ್ತಿಲ್ಲವೇ ಎಂಬುದು ರೈತರ ಪ್ರಶ್ನೆಯಾಗಿದೆ.ತುಮಕೂರು ಸುತ್ತಮುತ್ತಲ ಪ್ರದೇಶದಲ್ಲಿ ಅಂತರ್ಜಲ 600 ಅಡಿ ಆಳಕ್ಕೆ ಕುಸಿಯತೊಡಗಿದೆ. ಮಧುಗಿರಿ, ಶಿರಾ, ಚಿಕ್ಕನಾಯಕನಹಳ್ಳಿ, ಕೊರಟಗೆರೆ ಮುಂತಾದ ಕಡೆ 700-800 ಅಡಿ ಆಳಕ್ಕೆ ಕೊರೆದರೂ ನೀರೇ ಸಿಗುತ್ತಿಲ್ಲ. ಗುಬ್ಬಿ, ತುಮಕೂರು ತಾಲ್ಲೂಕಿನಲ್ಲಿ 600 ಅಡಿ ಆಳಕ್ಕೆ ಅಲ್ಪ ಪ್ರಮಾಣದ ಅಂತರ್ಜಲ ಸಿಗುತ್ತಿದೆ. ಆದರೆ ಬೇಸಿಗೆಯ ಝಳ ನೋಡಿದರೆ ಕೊಳವೆ ಬಾವಿ `ಆಯಸ್ಸು~ ತೀರಾ ಕಡಿಮೆ ಎಂಬ ಮಾತುಗಳು ರೈತ ಸಮೂಹದಲ್ಲಿ ಕೇಳಿ ಬರತೊಡಗಿದೆ.ಅಂತರ್ಜಲ ಕುಸಿತದೊಂದಿಗೆ ಕೊಳವೆಬಾವಿ ವೆಚ್ಚ ಕೂಡ ಏರ ತೊಡಗಿರುವುದು ರೈತರನ್ನು ಸಾಲಗಾರರನ್ನಾಗಿ ಮಾಡುತ್ತಿದೆ. ಈ ಮೊದಲು 250-300 ಅಡಿ ಆಳದಲ್ಲಿ ನೀರು ಸಿಗುತ್ತಿತ್ತು. ಆದರೀಗ  500 ಅಡಿ ಮೇಲ್ಪಟ್ಟು ನೀರು ಸಿಗುತ್ತಿರುವುದರಿಂದ ಕೊಳವೆ ಬಾವಿ ವೆಚ್ಚಕೂಡ ಆಕಾಶ ಮುಟ್ಟತೊಡಗಿದೆ. ಆಳ ಹೋದಂತೆಲ್ಲ 7.5 ಎಚ್‌ಪಿಯಿಂದ 10 ಎಚ್‌ಪಿ ಸಾಮರ್ಥ್ಯದ ಮೋಟರ್ ಬೇಕಾಗುತ್ತಿದೆ. ಪೈಪ್, ಕೇಬಲ್ ವೆಚ್ಚ ಕೂಡ ಹೆಚ್ಚಾಗುತ್ತದೆ.ಈ ಮೊದಲು ರೂ. 50 ಸಾವಿರ ವೆಚ್ಚದಲ್ಲಿ ಒಂದು ಕೊಳವೆಬಾವಿ ಕೊರೆಸಬಹುದಿತ್ತು. ಆದರೀಗ ಲಕ್ಷ ರೂಪಾಯಿಗೂ ಹೆಚ್ಚು ವೆಚ್ಚ ತಗುಲುತ್ತದೆ. ತೋಟ ಒಣಗುವುದನ್ನು ನೋಡಲಾರದೇ ಸಾಲ ಮಾಡಿ, ಚಿನ್ನಾಭರಣ ಅಡವಿಟ್ಟು ಕೊಳವೆ ಬಾವಿ ಕೊರೆಸುವ ರೈತರ ಸಂಖ್ಯೆ ಹೆಚ್ಚ ತೊಡಗಿದೆ ಎನ್ನುತ್ತಾರೆ ಜಿಲ್ಲಾ ಪಂಚಾಯಿತಿ ಸದಸ್ಯ ವೈ.ಎಚ್.ಹುಚ್ಚಯ್ಯ.`15-20 ದಿನ ಕಾದರೂ ಬೋರ್‌ವೆಲ್ ಲಾರಿಗಳು ಸಿಗುತ್ತಿಲ್ಲ. ಬೇಸಿಗೆಯನ್ನೇ ನೆಪವಾಗಿಟ್ಟುಕೊಂಡು ಬೋರ್‌ವೆಲ್ ಲಾರಿಗಳ ಮಾಲೀಕರು ಅಡಿ ಕೊರೆಯಲು 68 ರೂಪಾಯಿ ಮಾಡಿದ್ದಾರೆ. ಆದರೂ ವಿಧಿ ಇಲ್ಲ. ಕೊಳವೆಬಾವಿ ತೋಡಿಸಿ ತೋಟ ಉಳಿಸಿಕೊಳ್ಳಬೇಕಾಗುತ್ತದೆ~ ಎಂದು ಕುಣಿಗಲ್ ತಾಲ್ಲೂಕಿನ ಕುಂದೂರು ಗ್ರಾಮದ ರಮೇಶ್ ಪ್ರತಿಕ್ರಿಯಿಸಿದರು.`ಶಿರಾದ ದಾಳಿಂಬೆ ತೋಟಗಳು ಶೇ 60ರಷ್ಟು ಭಾಗ ರೋಗ ಬಾಧೆಯಿಂದ ಒಣಗಿ ಹೋಗಿದ್ದವು. ಈಗ ಬೇಸಿಗೆಗೆ ಉಳಿದ ತೋಟ ನೀರಿಲ್ಲದೆ ಒಣಗುತ್ತಿವೆ. ಶಿರಾ ತಾಲ್ಲೂಕಿನ ಕೆಲ ಭಾಗಗಳಲ್ಲಿ 700 ಅಡಿ ಕೊರೆದರೂ ಹನಿ ನೀರು ಸಿಗುತ್ತಿಲ್ಲ~ ಎಂದು ರಾಷ್ಟ್ರೀಯ ದಾಳಿಂಬೆ ಬೆಳೆಗಾರರ ಸಂಘದ ನಿರ್ದೇಶಕ ಶಿವಕುಮಾರ್ ಆತಂಕ ತೋಡಿಕೊಂಡರು.

ಆಳ ನೀರು ಬೆಳೆಗೆ ಮಾರಕ

400 ಅಡಿಗಿಂತ ಕೆಳಗೆ ಸಿಗುವ ನೀರು ತೋಟಗಾರಿಕೆಗೆ ಮಾರಕವಾಗುತ್ತದೆ. ಅಂತರ್ಜಲ ಕುಸಿದಿರುವುದು ಆತಂಕಕಾರಿ ಎಂದು ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಪ್ರಸಾದ್ ಹೇಳಿದರು.ಅಂತರ್ಜಲ ಆಳಕ್ಕೆ ಕುಸಿದಂತೆಲ್ಲ ನೀರಿನ ಲವಣಾಂಶ ಹೆಚ್ಚುತ್ತಾ ಹೋಗುತ್ತದೆ. ಈ ನೀರು ತೆಂಗು, ಅಡಿಕೆ ತೋಟಗಳಿಗೆ ಅಷ್ಟೇನು ಮಾರಕವಲ್ಲ. ಆದರೂ ಇಳುವರಿ, ಮಣ್ಣಿನ ಫಲವತ್ತತೆ ಮೇಲೆ ಪರಿಣಾಮ ಬೀರುತ್ತದೆ.ಉಳಿದ ತೋಟಗಾರಿಕಾ ಬೆಳೆಗಳ ಬೆಳವಣಿಗೆ ಕುಂಠಿತವಾಗುವುದರ ಜೊತೆಗೆ ಉತ್ತಮ ಇಳುವರಿ ಸಿಗುವುದಿಲ್ಲ ಎನ್ನುತ್ತಾರೆ.ಜಿಲ್ಲೆಯ ಎಲ್ಲ ಕೆರೆಗಳಿಗೆ ಹೇಮಾವತಿ ನೀರಿನ ಸಂಪರ್ಕ ಕಲ್ಪಿಸಿದರೆ ಅಂತರ್ಜಲ ಹೆಚ್ಚಬಹುದು. ಕಾಡುತ್ತಿರುವ ನೀರಿನ ಸಮಸ್ಯೆಗೆ ಮಳೆ ಬರಬೇಕು ಅಥವಾ ನದಿ ನೀರು ಜೋಡಣೆಯೊಂದೇ ಉತ್ತರ ಎಂದೂ ಅವರು ಹೇಳಿದರು.ಹನಿ ನೀರಾವರಿಗೆ ಬೇಡಿಕೆ

ಹನಿ ನೀರಾವರಿ ಪದ್ಧತಿಗೆ ಆಸಕ್ತಿ ತೋರದ ತೋಟಗಾರರು ಅಂತರ್ಜಲ ಮಟ್ಟ ಕುಸಿದ ಕಾರಣ ಹನಿ ನೀರಾವರಿಗೆ ಮುಗಿ ಬೀಳತೊಡಗಿದ್ದಾರೆ. ಹನಿ ನೀರಾವರಿಗೆ ಸರ್ಕಾರದಿಂದ ಶೇ 75ರಷ್ಟು ಸಬ್ಸಿಡಿ ನೀಡಲಾಗುತ್ತಿದೆ. ಸಬ್ಸಿಡಿ ಇರುವುದು ರೈತರ ಪಾಲಿಗೆ ಸ್ವಲ್ಪ ನಿರಾಳ. ಪ್ರತಿ ತಾಲ್ಲೂಕಿನಲ್ಲೂ ಹನಿ ನೀರಾವರಿಗೆ ಸಬ್ಸಿಡಿ ಬಯಸಿ ತೋಟಗಾರಿಕಾ ಇಲಾಖೆಗೆ ನೂರಾರು ಅರ್ಜಿಗಳು ಬರತೊಡಗಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.