ಗುರುವಾರ , ಜೂನ್ 24, 2021
23 °C

ಹೆಣ್ಣಾಗಿ ಹುಟ್ಟಿದ್ದಕ್ಕೆ ಹೆಮ್ಮೆ ಪಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ನಗರದೆಲ್ಲೆಡೆ ಮಹಿಳೆಯರು 101ನೇ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಗುರುವಾರ ಸಂಭ್ರಮದಿಂದ ಆಚರಿಸಿದರು. `ಹೆಣ್ಣಾಗಿ ಹುಟ್ಟಿದ್ದಕ್ಕೆ ಹೆಮ್ಮೆ ಪಡಿ~ ಎಂಬ ಭರಪೂರ ಸಂದೇಶಗಳು ಮೊಬೈಲ್‌ನಲ್ಲಿ ಹರಿದಾಡಿದವು. ಮಹಿಳಾ ದಿನಾಚರಣೆ ಅಂಗವಾಗಿ ಮಹಿಳೆಯರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.ಕಾಲೇಜು, ಕಚೇರಿಗಳಲ್ಲೂ ಸಂಭ್ರಮ ಕಂಡು ಬಂದಿತು. ಜೈನ್ ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯರು ಎಂದಿನಂತೆ ತರಗತಿಗೆ ತೆರಳಿದಾಗ ಆಶ್ವರ್ಯ ಕಾದಿತ್ತು. ಇತರೆ ಸಹಪಾಠಿಗಳು ಚುಡಾಯಿಸುವುದನ್ನು ಬಿಟ್ಟು, ಇದು ನಿಮ್ಮ ದಿನವೆಂದು ಪುಷ್ಪಗುಚ್ಛಗಳನ್ನು ನೀಡಿ ವಿದ್ಯಾರ್ಥಿನಿಯರನ್ನು ಗೌರವಿಸಿದರು. ಭಾರತೀಯ ಸಂಸ್ಕೃತಿಯ ದ್ಯೋತಕವಾದ ಸೀರೆಯನ್ನು ವಿದ್ಯಾರ್ಥಿನಿಯರು ತೊಟ್ಟು ಸಂಭ್ರಮಿಸುವ ಮೂಲಕ  ವಾಸವಿ ಮಹಿಳಾ ಕಾಲೇಜಿನಲ್ಲಿ ಮಹಿಳಾ ದಿನಾಚರಣೆಯನ್ನು ಆಚರಣೆ ಮಾಡಲಾಯಿತು.ಕತ್ತರಗುಪ್ಪೆ, ಜಯನಗರ 8ನೇ ಬ್ಲಾಕ್, ಕಸ್ತೂರಬಾ ರಸ್ತೆ ಸೇರಿದಂತೆ ನಗರದ ಪ್ರಮುಖ ರಸ್ತೆಯ ಸಿಗ್ನಲ್‌ಗಳಲ್ಲಿ `ಹೆಣ್ಣು ಭ್ರೂಣ ಹತ್ಯೆಯನ್ನು ತಡೆಯುವ ಮೂಲಕ ಸ್ತ್ರೀ ಸಮಾನತೆ ತಂದು ಕೊಡಿ~ ಎಂಬ ಬ್ಯಾನರ್‌ಗಳು ಕಂಡು ಬಂದವು. ಇನ್ನು ಕೆಲವು ಕಚೇರಿಗಳಲ್ಲಿ ಮಹಿಳಾ ದಿನಾಚರಣೆ ಪ್ರಯುಕ್ತ ವಿಶೇಷ ಭೋಜನ ವ್ಯವಸ್ಥೆಯನ್ನು ಮಾಡಲಾಗಿತ್ತು.ಸ್ತ್ರೀ ಸಂಕುಲದ ಸ್ವಾಭಿಮಾನ ಮತ್ತು ಸಬಲೀಕರಣವೇ ಮಹಿಳಾ ದಿನಾಚರಣೆಯ ಮೂಲ ತಿರುಳಾಗಬೇಕೆಂದು ಹಲವು ಸ್ತ್ರೀ ಸಂಘಟನೆಗಳು ಆಶಯ ವ್ಯಕ್ತಪಡಿಸಿದವು. ವಿವಿಧ ಸಂಘಟನೆಗಳು ಮಹಿಳಾ ದಿನಾಚರಣೆ ಬಗ್ಗೆ ಚರ್ಚಾ ಕಾರ್ಯಕ್ರಮಗಳನ್ನು ಆಯೋಜಿಸಿದ್ದವು.ಬೆಂಗಳೂರು ವಿಶ್ವವಿದ್ಯಾಲಯ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ನಟಿ ಶ್ರುತಿ, `ತಳವರ್ಗದ ಮಹಿಳೆಯರ ಅಭಿವೃದ್ಧಿಯೇ ನಿಜಾರ್ಥದಲ್ಲಿ ಮಹಿಳಾ ದಿನಾಚರಣೆ~ ಎಂದು ಅಭಿಪ್ರಾಯಪಟ್ಟರು.

ಕನ್ನಡ ಸಂಘರ್ಷ ಸಮಿತಿಯು ವಿವಿಧ ರಂಗದಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ `ನಿಸ್ಸೀಮ ಕನ್ನಡತಿ~ ಬಿರುದನ್ನು ನೀಡಿತು. ಕರ್ನಾಟಕ ಲೇಖಕಿಯರ ಸಂಘವು ಆಯೋಜಿಸಿದ್ದ ವಿಚಾರ ಗೋಷ್ಠಿಯಲ್ಲಿ ಆಧುನಿಕ ಕಾಲಘಟ್ಟದಲ್ಲಿ ಮಹಿಳೆ ಎದುರಿಸುತ್ತಿರುವ ಸವಾಲುಗಳ ಬಗ್ಗೆ ವಿಸ್ತ್ರೃತ ಚರ್ಚೆ ನಡೆಯಿತು. ಮಹಿಳಾ ಸ್ವಾತಂತ್ರ್ಯ ಮತ್ತು ಸಮಾನತೆ ಕೇವಲ ಪುಸ್ತಕ ಮತ್ತು ಭಾಷಣಗಳಲ್ಲಿ ಮಾತ್ರ ವ್ಯಕ್ತವಾಗುತ್ತಿರುವುದನ್ನು ಖಂಡಿಸಿದರು.ಮಹಿಳೆಯರ ಆರೋಗ್ಯ ಮತ್ತು ಯೋಗ ಕ್ಷೇಮದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಅಪೋಲೋ ಆಸ್ಪತ್ರೆಯು `ಆರೋಗ್ಯಕರ ಮಹಿಳೆಯರ ಹಬ್ಬ~ವನ್ನು ಆಯೋಜಿಸಿತ್ತು. ಮಹಿಳೆಯರಿಗೆ ಕಾಡುವ ಆರೋಗ್ಯ ಸಮಸ್ಯೆಗಳು, ಜೀವನ ಕ್ರಮ, ಸೌಂದರ್ಯದ ಕುರಿತು ಅರಿವು ಮೂಡಿಸಲಾಯಿತು. ಈ ಹಬ್ಬವನ್ನು ಸಚಿವೆ ಶೋಭಾ ಕರಂದ್ಲಾಜೆ ಉದ್ಘಾಟಿಸಿದರು.ಪೌರಕಾರ್ಮಿಕರು, ತಳ್ಳುಗಾಡಿ, ಬೀದಿ ವ್ಯಾಪಾರಿಗಳು ಸೇರಿದಂತೆ ತಳವರ್ಗದ ಬಹುತೇಕ ಮಹಿಳಾ ದಿನಾಚರಣೆಯ ಗೋಜಿಗೆ ಹೋಗದೇ ಕಾಯಕವೇ ಕೈಲಾಸವೆಂದು ಕರ್ತವ್ಯದಲ್ಲಿ ಮುಳುಗಿದ್ದರು. ಇನ್ನು ಬಹುತೇಕ ಗೃಹಿಣಿಯರು ನಗರದಲ್ಲಿ ಉಂಟಾಗಿರುವ ನೀರಿನ ಕ್ಷಾಮಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನು ಶಪಿಸುತ್ತಾ `ಇನ್ನೂ ನೀರು ಬರಲಿಲ್ಲವಾ?~ ಎಂಬ ನಿಟ್ಟುಸಿರುನೊಂದಿಗೆ ಎಂದಿನ ಕಾಯಕದಲ್ಲಿ ತೊಡಗಿಕೊಂಡರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.