ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಣ್ಣಿನ ಭಾವಕ್ಕೆ ಬಣ್ಣ

Last Updated 5 ಮಾರ್ಚ್ 2012, 19:30 IST
ಅಕ್ಷರ ಗಾತ್ರ

ಖ್ಯಾತ ಕಲಾವಿದರಾದ ದಿಲೀಪ್ ಕುಮಾರ್ ಕಾಳೆ, ಮಾಧುರಿ ಕಾಳೆ, ಜಿ.ಎಸ್.ಸುಜಿತ್ ಕುಮಾರ್ ಮಂಡ್ಯ ಹಾಗೂ ಎಸ್.ಸತ್ಯನಾರಾಯಣ ಅವರ ಇತ್ತೀಚಿನ ಕಲಾಕೃತಿಗಳು ಚಿತ್ರಕಲಾ ಪರಿಷತ್‌ನಲ್ಲಿ ಮಾರ್ಚ್ 7ರವರೆಗೆ ಪ್ರದರ್ಶನಗೊಳ್ಳಲಿವೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಕಂಡು ಬರುವ ಹಾಲಕ್ಕಿ ಗೌಡರು ತುಂಬಾ ಅಪರೂಪದ ಜನಾಂಗ. ಇವರ ಜೀನವ ರೀತಿ, ಸಂಸ್ಕೃತಿ, ಕಸುಬುದಾರಿಕೆ ಇವೆಲ್ಲವೂ ಭಿನ್ನ. ಹಾಲಕ್ಕಿ ಮಹಿಳೆಯರ ಜೀವನ ಕ್ರಮ ಕೂಡ ವಿಶಿಷ್ಟವಾದುದು.

ಗುಡ್ಡಗಾಡಿನಲ್ಲಿ ವಾಸ ಮಾಡುವ ಹಾಲಕ್ಕಿ ಗೌಡ ಜನಾಂಗ ಪ್ರಕೃತಿಯ ಮಕ್ಕಳು. ಇವರಿಗಗೆ ಇನ್ನೂ ನಗರದ ಆಮಿಷಗಳು ತಟ್ಟಿಲ್ಲ. ಹಾಗಾಗಿ ಈ ಜನರಲ್ಲಿ ಇಂದಿಗೂ ಮಾನವ ಸಹಜ ಸಂಬಂಧಗಳು ಗಟ್ಟಿಯಾಗಿ ಉಳಿದುಕೊಂಡಿವೆ.

ತಮ್ಮ ಆಹಾರವನ್ನು ತಾವೇ ಸಂಪಾದಿಸಿ ಕೊಂಡು ಉಂಡು ಜೀವನ ನಡೆಸುತ್ತಾರೆ. ಹಣ್ಣು, ಕೋಳಿ, ಮೀನು ಮಾರಿಕೊಂಡು ಜೀವನ ಸಾಗಿಸುವ ಈ ಜನರದ್ದು ಸಂತೃಪ್ತ ಬದುಕು. ಕಲಾವಿದ ದಿಲೀಪ್ ಅವರು ಹಾಲಕ್ಕಿ ಗೌಡ ಮಹಿಳೆಯರ ಜೀವನಕ್ಕೆ ತಮ್ಮ ಕುಂಚದ ಮೂಲಕ ರಂಗು ತುಂಬಿದ್ದಾರೆ.

ಹಾಲಕ್ಕಿ ಜನರ ಜೀವನ ಕ್ರಮದಂತೆ ಅವರ ವೇಷಭೂಷಣ ಕೂಡ ಆಕರ್ಷಕವಾದದ್ದು. ಬುಡಕಟ್ಟು ಸಂಪ್ರದಾಯವನ್ನು ಬಿಂಬಿಸುವ ಇವರ ವೇಷಗಳೆಲ್ಲವಕ್ಕೂ ನಿಸರ್ಗವೇ ವಸ್ತುಗಳನ್ನು ಪೂರೈಸುತ್ತದೆ.

ಕಿವಿಯೋಲೆ, ಕುಚ್ಚು, ಮೂಗುನತ್ತು, ಆಭರಣಗಳೆಲ್ಲವೂ ಇಂದಿನ ವಸ್ತ್ರವಿನ್ಯಾಸಕರಿಗೆ ನೆಚ್ಚಿನ ಡಿಸೈನ್. ಹೀಗೆ ದಿಲೀಪ್ ಅವರು ಹಾಲಕ್ಕಿ ಗೌಡ ಜನಾಂಗದ ಮಹಿಳೆಯರನ್ನು ವಸ್ತುವಾಗಿಟ್ಟುಕೊಂಡು ಸುಮಾರು 60 ಕಲಾಕೃತಿಗಳನ್ನು ರಚಿಸಿದ್ದಾರೆ.

ಇವರ ಕಲಾಕೃತಿಗಳಲ್ಲಿ ಹಾಲಕ್ಕಿ ಜನಾಂಗದ ವೈಶಿಷ್ಟ್ಯಗಳು ಝರಿಯಾಗಿ ಹರಿದಿವೆ.
ಕಲಾವಿದೆ ಮಾಧುರಿ ಕಾಳೆ ಅವರು ಹೆಣ್ಣಿನ ಮುಗ್ಧ ಭಾವನೆಗಳನ್ನು ಮನಸ್ಸಿನಲ್ಲಿಟ್ಟುಕೊಂಡು 20 ಕಲಾಕೃತಿಗಳನ್ನು ರಚಿಸಿದ್ದಾರೆ.

ಇವರ ಎಲ್ಲ ಕಲಾಕೃತಿಗಳು ಹೆಣ್ಣಿನ ಆಂತರಿಕ ಭಾವಗಳಿಗೆ ಸಂಬಂಧಿಸಿದವು. ಇವರ ಕಲಾಕೃತಿಯಲ್ಲಿ ಹೆಣ್ಣಿನ ಮನಸ್ಸಿನಲ್ಲಿ ಮೂಡುವ ನವಿರು ಭಾವಗಳು, ಆಕೆಯ ಮುಗ್ಧತೆ, ವಾಂಛೆಗಳು ಕಲಾರಸಿಕರಿಗೆ ನೋಡಿದಾಕ್ಷಣ ಇಷ್ಟವಾಗುತ್ತವೆ.

ಇವರ `ಎ ಗರ್ಲ್ ಇನ್ ಲಿಲ್ಲಿ ಪಾಂಡ್~ ಕಲಾಕೃತಿ ನೋಡಿದಾಕ್ಷಣ ಸೆಳೆವ ಗುಣ ಹೊಂದಿದೆ. ಹರೆಯಕ್ಕೆ ಬಂದ ಯುವತಿಯೊಬ್ಬಳು ತುಂಬಾ ಮುಗ್ಧೆ. ಆಕೆಗೆ ಕಮಲದ ಹೂಗಳೆಂದರೆ ಪಂಚಪ್ರಾಣ.

ಕೊಳದಲ್ಲಿ ನಗು ನಗುತ್ತಾ ನಿಂತಿರುವ ಸಾವಿರಾರು ಹೂಗಳನ್ನು ನೋಡಿ ಆಕೆಯ ಬಯಕೆಯ ಕಟ್ಟೆ ಒಡೆಯುತ್ತದೆ. ಆಗ ಆಕೆ ಕೊಳಕ್ಕಿಳಿದು ಒಂದೊಂದೇ ಹೂವನ್ನು ಕಿತ್ತು ಕೈಯಲ್ಲಿಡಿದುಕೊಂಡ ಮತ್ತೆ ಹೂವಿನತ್ತ ಆಸೆಗಣ್ಣು ಬೀರುವ ಆಕೆಯ ನೋಟ, ನಿಲುವು ತುಂಬಾ ಆಕರ್ಷಕವಾಗಿ ಮೂಡಿಬಂದಿದೆ.

ಕಲಾವಿದ ಎಸ್.ಸತ್ಯನಾರಾಯಣ ಅವರ ನಾಡಿನ ಜನಪ್ರಿಯ ದೇವಾಲಯಗಳನ್ನು ತಮ್ಮ ಕುಂಚದಲ್ಲಿ ನವಿರಾಗಿ ಮೂಡಿಸಿದ್ದಾರೆ. ತಲಕಾಡಿನಲ್ಲಿರುವ ಎಲ್ಲ ದೇವಾಲಯದಲ್ಲೂ ಕಲೆ ಇದೆ. ಈ ಕಲೆಯನ್ನು ತಮ್ಮ ಕಲಾಕೃತಿಯಲ್ಲಿ ಪಡಿಯಚ್ಚುಗೊಳಿಸಿರುವ ಅಗ್ಗಳಿಕೆ ಇವರಿಗೆ ಸಲ್ಲುತ್ತದೆ.

ಹಾಗೆಯೇ ಟಿ.ನರಸೀಪುರ ಬಳಿ ಇರುವ ಸಂಗಮ ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿದೆ. ಅಲಹಾಬಾದ್‌ನಲ್ಲಿ ನಡೆವ ಕುಂಭಮೇಳದಲ್ಲಿ ಕುಂಭಸ್ನಾನ ಮಾಡುವ ಸಲುವಾಗಿ ಲಕ್ಷಾಂತರ ಮಂದಿ ನಾಗಸಾಧು, ಸಂತರು, ಭಕ್ತರು ಬರುತ್ತಾರೆ.
 
ಹಾಗೆಯೇ ಇಲ್ಲಿನ ಸಂಗಮಕ್ಕೂ ಕೂಡ ವಿಶೇಷ ಶಕ್ತಿಯಿದೆ. ಅಪಾರ ಜನರ ನಂಬಿಕೆ ಇದೆ. ಇಲ್ಲಿ ನಡೆವ ಉತ್ಸವದಲ್ಲಿ ಸಂಗಮ ಸ್ನಾನ ಮಾಡಲು ಸಾವಿರಾರು ಜನರು ಬರುತ್ತಾರೆ.

ಇವರ `ಸಂಗಮ ಸ್ನಾನ~ ಕಲಾಕೃತಿ ಜನರ ದೈವೀಕ ನಂಬಿಕೆಗೆ ಕನ್ನಡಿ ಹಿಡಿಯುತ್ತದೆ. ಹೆಣ್ಣು ಮಕ್ಕಳು ಸಂಗಮದಲ್ಲಿ ಸ್ನಾನ ಮಾಡುತ್ತಿರುವ ದೃಶ್ಯ ಸಹಜವಾಗಿ ಮೂಡಿ ಬಂದಿದೆ. ಕಲಾವಿದ ಸುಜಿತ್ ಕುಮಾರ್ ಅವರ ಕಲಾಕೃತಿಗಳು ಮನಸೆಳೆಯುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT