ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಣ್ಣು ಭ್ರೂಣ ಹತ್ಯೆ

ನಿಮಗಿದು ತಿಳಿದಿರಲಿ
Last Updated 4 ಜುಲೈ 2014, 19:30 IST
ಅಕ್ಷರ ಗಾತ್ರ

ಇಂದು ಸಮಾಜದಲ್ಲಿ ಮಹಿಳೆಯ ಮೇಲೆ ನಡೆಯುತ್ತಿರುವ ದೌರ್ಜನ್ಯಗಳಿಗೆ ನೂರು ಮುಖಗಳು. ಪ್ರತಿಯೊಂದು ಕ್ಷೇತ್ರದಲ್ಲಿಯೂ ಮಹಿಳೆಯ ಮೇಲೆ ಒಂದಲ್ಲ ಒಂದು ರೀತಿಯ ದೌರ್ಜನ್ಯ ನಡೆಯುತ್ತಲೇ ಇದೆ. ಹೆಣ್ಣು ಭ್ರೂಣ ಹತ್ಯೆ ಹೆಣ್ಣಿನ ಅಸ್ತಿತ್ವಕ್ಕೇ ಕೊಡಲಿ ಪೆಟ್ಟು ಹಾಕುವಂಥದ್ದು. ಹೆಣ್ಣು ಮಗು ಬೇಡ ಅಥವಾ ಅವಳು ಕುಟುಂಬಕ್ಕೆ ಹೊರೆ ಎಂದು ಭಾವಿಸಲು ಅನೇಕ ಕಾರಣಗಳು. ಈ ದೌರ್ಜನ್ಯಕ್ಕೆ ಮುಖ್ಯ ಕಾರಣ ವರದಕ್ಷಿಣೆಯ ಪಿಡುಗು. ಹೆಣ್ಣು ಮಗಳ ವಿವಾಹ ಮಾಡಲು ಅತಿ ಹೆಚ್ಚು ವೆಚ್ಚವಾಗುತ್ತದೆ, ಅವಳ ಮದುವೆಗೆ ವರದಕ್ಷಿಣೆ ಹೊಂದಿಸಬೇಕಾಗುತ್ತದೆ ಎಂಬವು ಸಾಮಾಜಿಕ ಕಾರಣಗಳು.

ಗಂಡು ಮಕ್ಕಳು ಮಾತ್ರ ತಮಗೆ ಹಾಗೂ ತಮ್ಮ ಪಿತೃಗಳಿಗೆ ಮೋಕ್ಷ ದೊರಕಿಸಿ ಕೊಡುತ್ತಾರೆ ಎಂಬುದು ಧಾರ್ಮಿಕ ಕಾರಣ. ಗಂಡು ಮಗುವಾದರೆ ಆಸ್ತಿ ಕುಟುಂಬದಲ್ಲಿಯೇ ಉಳಿಯುತ್ತದೆ ಎಂಬುದು ವ್ಯಾವಹಾರಿಕ ಕಾರಣ. ತಾನು ಅನುಭವಿಸಿದ್ದನ್ನು ತನ್ನ ಮಗಳೂ ಅನುಭವಿಸುವುದು ಬೇಡ ಎಂದು ಬಯಸುವ ತಾಯಿಯ ಯೋಚನೆಯ ಹಿಂದಿರುವ ಕಾರಣ ಹೆಣ್ಣಿನ ಬಗ್ಗೆ ಸಮಾಜಕ್ಕೆ ಇರುವ ಕ್ರೌರ್ಯ.
ಈ ಕಾರಣಗಳಿಂದಾಗಿ ಹೆಣ್ಣು ಮಗುವನ್ನು ಅದರ ಭ್ರೂಣಾವಸ್ಥೆಯಲ್ಲಿಯೇ ಹಿಸುಕಿ ಹಾಕಲಾಗುತ್ತಿದೆ. ಹೆಣ್ಣು ಭ್ರೂಣ ಹತ್ಯೆಯಿಂದ ಮುಂದೆ ಉಂಟಾಗಬಹುದಾದ ಸಮಸ್ಯೆಗಳ ಬಗ್ಗೆ ಆಲೋಚಿಸಬೇಕು. ಆಗ ಹೆಣ್ಣು ಮಗುವಿನ ಬಗ್ಗೆ ಇರುವ ಧೋರಣೆ ಬದಲಾಗುವುದು. ಮೊದಲನೆಯದಾಗಿ-ಸ್ತ್ರೀಯರ ಸಂಖ್ಯೆ ಕಡಿಮೆಯಾಗುವುದರಿಂದ ಸಾಮಾಜಿಕ ಸಮತೋಲನ ಏರುಪೇರಾಗುತ್ತದೆ.

*ವಿವಾಹವಾಗಲು ಹುಡುಗಿಯರು ಸಿಗದೆ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತವೆ.
*ಸಮಾಜದ ಕಾನೂನು ಸುವ್ಯವಸ್ಥೆ ಹದಗೆಡುತ್ತದೆ.
*ಸ್ತ್ರೀಯರಿಗಿರುವ ಸಾಮಾಜಿಕ ಭದ್ರತೆ ಕುಸಿಯುತ್ತದೆ.
*ಸಮಾಜದಲ್ಲಿ ಅಭದ್ರತೆ ಉಂಟಾಗುತ್ತದೆ.

ಹೆಣ್ಣು ಮಗುವನ್ನು ಗಂಡು ಮಗುವಿನಂತೆ ಬೆಳೆಸಿ-ಶಿಕ್ಷಣ ನೀಡಿ-ಆರ್ಥಿಕವಾಗಿ ಸ್ವಾವಲಂಬಿಯನ್ನಾಗಿಸಿ, ವರದಕ್ಷಿಣೆ ಪದ್ಧತಿಯನ್ನು ಧಿಕ್ಕರಿಸಿ, ಗಂಡು ಮಗುವಿನ ಹಂಬಲಕ್ಕೆ ಹೆಣ್ಣು ಮಗುವನ್ನು ಬಲಿ ಕೊಡಬೇಡಿ, ಗಂಡು ಮಗು ಬೇಕೆಂದಲ್ಲಿ ಅನಾಥ ಗಂಡು ಮಗುವನ್ನು ದತ್ತು ಪಡೆದು ಒಂದು ಅನಾಥ ಮಗುವಿಗೆ ಬಾಳು ಕೊಡಿ, ಈಗ ಹೆಣ್ಣು ಮಕ್ಕಳಿಗೂ ಆಸ್ತಿಯಲ್ಲಿ ಪಾಲಿದೆ. ಹಾಗಾಗಿ ಗಂಡು ಮಗುವಿಂದ ಮಾತ್ರ ಆಸ್ತಿ ಕುಟುಂಬದಲ್ಲಿಯೇ ಉಳಿಯುತ್ತದೆಂಬ ಭ್ರಮೆ ಬೇಡ.

ಹೆಚ್ಚುತ್ತಿರುವ ಹೆಣ್ಣು ಭ್ರೂಣ ಹತ್ಯೆಯನ್ನು ತಡೆಯಲು, ಗರ್ಭ ಧಾರಣಾ ಮತ್ತು ಪ್ರಸವ ಪೂರ್ವ ರೋಗ ನಿದಾನ ತಂತ್ರಗಳ (ಲಿಂಗ ಆಯ್ಕೆ ನಿಷೇಧ)ಅಧಿನಿಯಮ,1994 ಜಾರಿಯಲ್ಲಿದೆ. ಮಗು ಗರ್ಭದಲ್ಲಿರುವಾಗಲೇ ಅದಕ್ಕೆ ಇರುವ ರೋಗವನ್ನು ಪತ್ತೆ ಹಚ್ಚುವ ತಂತ್ರಜ್ಞಾನ ಒಂದು ಅದ್ಭುತ ವೈಜ್ಞಾನಿಕ ಆವಿಷ್ಕಾರ. ಆದರೆ ಈ ವೈಜ್ಞಾನಿಕ ತಂತ್ರಜ್ಞಾನವನ್ನು ಮಗುವಿನ ಲಿಂಗ ಪತ್ತೆಗೆ ಬಳಸುವುದು ಅಕ್ಷಮ್ಯ. ಈ ತಂತ್ರಜ್ಞಾನ ಬಳಸಿ ಮಾಡುವ ಪರೀಕ್ಷೆಯಿಂದ ಗರ್ಭದಲ್ಲಿರುವ ಮಗು ಗಂಡೋ ಹೆಣ್ಣೋ ಎಂಬುದು ಪತ್ತೆಯಾಗುತ್ತದೆ.

ಭ್ರೂಣ ಹೆಣ್ಣು ಮಗುವಿನದೆಂದು ತಿಳಿದು ಬಂದರೆ ಅದು ಹುಟ್ಟದಂತೆ ಗರ್ಭಪಾತ ಮಾಡಿಸಿಕೊಳ್ಳುವುದು ಅವ್ಯಾಹತವಾಗಿ ನಡೆದಿದೆ. ಇಂಥ ಗರ್ಭಪಾತ ಮಾಡುವುದು ಈ ಕಾನೂನಿನ ಪ್ರಕಾರ ಅಪರಾಧ. ಈ ಕಾನೂನಿನ ಉದ್ದೇಶ ವೈಜ್ಞಾನಿಕ ತಂತ್ರಗಳು ಲಿಂಗ ಪತ್ತೆಗಾಗಿ
ದುರ್ಬಳಕೆಯಾಗದಂತೆ ತಡೆಯುವುದು. ಹಾಗೆ ದುರ್ಬಳಕೆಯಾಗುತ್ತಿರುವುದನ್ನು ಪತ್ತೆ ಮಾಡಲು ಕಾರ್ಯವಿಧಾನವನ್ನು ರೂಪಿಸುವುದು ಮತ್ತು ಅದಕ್ಕೆ ಶಿಕ್ಷೆ ವಿಧಿಸುವುದು, ಆ ಮೂಲಕ ಹೆಣ್ಣು ಭ್ರೂಣ ಹತ್ಯೆಯನ್ನು ತಡೆಗಟ್ಟುವುದು ಈ ಕಾನೂನಿನ ಉದ್ದೇಶ.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT