ಮಂಗಳವಾರ, ಮೇ 24, 2022
27 °C

ಹೆಸರಘಟ್ಟ ಬಳಿ ಚಿತ್ರನಗರಿಗೆ ಶೀಘ್ರ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಹೆಸರಘಟ್ಟ ಬಳಿ ಸುಮಾರು 300 ಎಕರೆ ವಿಸ್ತೀರ್ಣದಲ್ಲಿ ಹೈದರಾಬಾದ್‌ನ ರಾಮೋಜಿ ಫಿಲಂ ಸಿಟಿಗಿಂತ ಉತ್ಕೃಷ್ಟವಾದ ಚಿತ್ರನಗರಿಯನ್ನು ನಿರ್ಮಿಸುವುದಕ್ಕೆ ಶೀಘ್ರ ಚಾಲನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಶುಕ್ರವಾರ ಇಲ್ಲಿ ಹೇಳಿದರು.ನಗರದ ಕಂಠೀರವ ಸ್ಟುಡಿಯೊ ಆವರಣದಲ್ಲಿ ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ನೂತನ ಚಿತ್ರೀಕರಣ ಫ್ಲೋರ್ ಉದ್ಘಾಟಿಸಿ ಅವರು ಮಾತನಾಡಿದರು.`ಖಾಸಗಿ ಸಹಭಾಗಿತ್ವದಲ್ಲಿ ಚಿತ್ರನಗರಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಇನ್ನೆರಡು ತಿಂಗಳಲ್ಲಿ ವಿವರವಾದ ಯೋಜನಾ ವರದಿ ಲಭ್ಯವಾಗಲಿದೆ. ಆನಂತರ ಚಿತ್ರ ನಗರಿ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು~ ಎಂದು ಮುಖ್ಯಮಂತ್ರಿ ಸದಾನಂದ ಗೌಡ ಅವರು ತಿಳಿಸಿದರು.`ಚಿತ್ರರಂಗ ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗ. ಇಂತಹ ಉದ್ಯಮದ ಬೆಳವಣಿಗೆಗೆ ಎಲ್ಲ ರೀತಿಯ ನೆರವು-ಸಹಕಾರ ನೀಡಲು ಸರ್ಕಾರ ಬದ್ಧವಾಗಿದೆ~ ಎಂದು ಅವರು ಭರವಸೆ ನೀಡಿದರು.`ಕಂಠೀರವ ಸ್ಟುಡಿಯೋ ಬಳಿ ವರನಟ ಡಾ.ರಾಜ್‌ಕುಮಾರ್ ಸ್ಮಾರಕ ನಿರ್ಮಾಣದ ಮೊದಲನೇ ಹಂತದ ಯೋಜನೆ ಬಹುತೇಕ ಹಂತದಲ್ಲಿದ್ದು, ಶೀಘ್ರ ಲೋಕಾರ್ಪಣೆ ಮಾಡಲಾಗುವುದು. ಅಂತೆಯೇ ನಟ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೂ ಒತ್ತು ನೀಡಲಾಗುವುದು~ ಎಂದರು.`ಕನ್ನಡ ಚಿತ್ರೋದ್ಯಮಕ್ಕೆ ಸರ್ಕಾರ ಎಲ್ಲ ರೀತಿಯ ಉತ್ತೇಜನ ನೀಡುತ್ತಿದೆ. ಅಂತರರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವ ನಡೆಸಲು ಸರ್ಕಾರ ಐದು ಕೋಟಿ ರೂಪಾಯಿ ಅನುದಾನ ನೀಡಿತ್ತು. ಅಂತೆಯೇ, ಅಂತರರಾಷ್ಟ್ರೀಯ ಮಕ್ಕಳ ಚಲನಚಿತ್ರ ಪ್ರಶಸ್ತಿ ಮೊತ್ತವನ್ನು ಎರಡು ಪಟ್ಟು ಹೆಚ್ಚಿಸಲಾಗಿದೆ. ಒಟ್ಟಾರೆ ಕನ್ನಡ ಚಿತ್ರರಂಗದ ಸರ್ವಾಂಗೀಣ ಅಭಿವೃದ್ಧಿಗಾಗಿ ಇನ್ನು ಮುಂದೆಯೂ ಹೆಚ್ಚಿನ ಒತ್ತು ನೀಡಲಾಗುವುದು~ ಎಂದು ಅವರು ಇದೇ ಸಂದರ್ಭದಲ್ಲಿ ಆಶ್ವಾಸನೆ ನೀಡಿದರು.ಕಂಠೀರವ ಸ್ಟುಡಿಯೋದ ವ್ಯವಸ್ಥಾಪಕ ನಿರ್ದೇಶಕ ಹಾಗೂ ವಾರ್ತಾ ಇಲಾಖೆಯ ನಿರ್ದೇಶಕ ಎನ್. ಆರ್. ವಿಶುಕುಮಾರ್ ಅವರು ಮಾತನಾಡಿ, `ಬಿ.ಎಸ್.        ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗ್ದ್ದಿದಾಗ ಕಂಠೀರವ ಸ್ಟುಡಿಯೋದ ಬೆಳವಣಿಗೆಗಾಗಿ ಐದು ಕೋಟಿ ರೂಪಾಯಿಗಳನ್ನು ಬಜೆಟ್‌ನಲ್ಲಿ ಪ್ರಕಟಿಸಿದ್ದರು. ಅದರಲ್ಲಿ ಬಿಡುಗಡೆ ಮಾಡಿದ ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ಚಿತ್ರೀಕರಣ ಫ್ಲೋರ್ ನಿರ್ಮಿಸಲಾಗಿದೆ~ ಎಂದರು.`ಈ ವರ್ಷದ ಬಜೆಟ್‌ನಲ್ಲಿಯೂ ಕಂಠೀರವ ಸ್ಟುಡಿಯೋಗೆ ಸರ್ಕಾರ 2 ಕೋಟಿ ರೂಪಾಯಿಗಳನ್ನು ಒದಗಿಸಿದ್ದು, ಅದನ್ನು ಚಿತ್ರೋದ್ಯಮಕ್ಕೆ ಪೂರಕವಾದ ಮೂಲಭೂತ ಸೌಕರ‌್ಯಗಳಿಗಾಗಿ ಬಳಕೆ ಮಾಡಲಾಗುವುದು~ ಎಂದರು.

ಗೃಹ ಹಾಗೂ ಸಾರಿಗೆ ಸಚಿವ ಆರ್. ಅಶೋಕ, ಕಂಠೀರವ ಸ್ಟುಡಿಯೋ ಅಧ್ಯಕ್ಷ ರುದ್ರೇಶ್ ಅವರು             ಮಾತನಾಡಿದರು.ಸಚಿವರಾದ ವಿ. ಸೋಮಣ್ಣ, ಎಂ.ಪಿ. ರೇಣುಕಾಚಾರ್ಯ, ಎ. ನಾರಾಯಣಸ್ವಾಮಿ, ಕರ್ನಾಟಕ ರಾಜ್ಯ ಚಲನಚಿತ್ರ ಅಕಾಡೆಮಿ ಅಧ್ಯಕ್ಷೆ ತಾರಾ ಅನುರಾಧ, ನಟಿಯರಾದ ಭಾರತಿ ವಿಷ್ಣುವರ್ಧನ್, ಸುಧಾರಾಣಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೆ.ವಿ. ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಸಾ.ರಾ. ಗೋವಿಂದು, ನಟರಾದ ಅಶೋಕ್, ಗಣೇಶ್ ಮತ್ತಿತರರು   ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.