ಶುಕ್ರವಾರ, ಮಾರ್ಚ್ 5, 2021
21 °C

ಹೊಲಗದ್ದೆ, ಕಟ್ಟಡಗಳಿಗೆ ಬಲಿಯಾದವು ಕೆರೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಲಗದ್ದೆ, ಕಟ್ಟಡಗಳಿಗೆ ಬಲಿಯಾದವು ಕೆರೆಗಳು

ಶಿಡ್ಲಘಟ್ಟ: `ಅರಿಶಿನ ಕೂಳಿಗೆ ಹೋಗಿ, ವರುಷದ ಕೂಳು ಬಿಟ್ಟರು' ಎಂಬ ಗಾದೆ ಮಾತಿನಂತೆ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನದ ಹಗಲುಗನಸು ಒಂದೆಡೆಯಿದ್ದರೆ, ಮತ್ತೊಂದೆಡೆ ಜಿಲ್ಲೆಯ ಪಾರಂಪರಿಕ ಜಲ ಮೂಲಗಳಾದ ಕೆರೆ ಕುಂಟೆಗಳು ನಿಧಾನವಾಗಿ ಕಣ್ಮರೆಯಾಗುತ್ತಿವೆ. ಕೆರೆ, ಕುಂಟೆ, ಬಾವಿಗಳು ಸಾಂಸ್ಕೃತಿಕ ಜೀವನ ಮಾತ್ರವೇ ಆಗಿರಲಿಲ್ಲ. ಅವುಗಳೊಂದಿಗೆ ಆರ್ಥಿಕ, ಸಾಮಾಜಿಕ ಜೀವನ ಮೌಲ್ಯಗಳೂ ಹೊಂದಿಕೊಂಡಿದ್ದವು.ಜಿಲ್ಲೆಯ ಕೆರೆ, ಕುಂಟೆ, ಬಾವಿ, ಕಲ್ಯಾಣಿಗಳನ್ನು ಸೂಕ್ಷ್ಮವಾಗಿ ನೋಡಿದರೆ, ಆಗಿನ ಜನರು ಜಲಮೂಲಗಳನ್ನು ಉಪಕರಿಸುತ್ತಿದ್ದ ಬಗೆ, ಅವುಗಳ ನಿರ್ಮಾಣದ ಹಿಂದೆ ಇದ್ದ ಮನೋಧರ್ಮ ಎಂಥದ್ದು ಎಂಬುದು ಅರಿವಿಗೆ ಬರುತ್ತದೆ. ಪ್ರಗತಿ ಹೆಸರಿನಲ್ಲಿ ಎಂಥ ಪ್ರಾಕೃತಿಕ ಸಂಪತ್ತು ಒಂದೊಂದಾಗಿ ಕಳೆದುಹೋಗುತ್ತಿವೆ ಎಂದು ಪರಿಸರವಾದಿಗಳು ಆತಂಕ ವ್ಯಕ್ತಪಡಿಸುತ್ತಾರೆ.ತಾಲ್ಲೂಕಿನಲ್ಲಿ ನದಿ ನಾಲೆಗಳು ಇರದ ಕಾರಣ ಮಳೆಗಾಲದ ನದಿಗಳು ಹರಿಯುವ ಮಾರ್ಗದಲ್ಲಿ ಆಗಿನ ಜನರು ಒಂದು ಕೆರೆಯಿಂದ ಮತ್ತೊಂದಕ್ಕೆ ಹರಿಯುವಂತೆ ಕೆರೆಗಳ ಸಾಲನ್ನೇ ನಿರ್ಮಿಸಿದ್ದರು. ದಕ್ಷಿಣ ಪೆನ್ನಾರ್, ಪಾಲಾರ್ ಮತ್ತು ಉತ್ತರ ಪೆನ್ನಾರ್ ಎಂಬ ಮಳೆಗಾಲದ ನದಿ ಕಣಿವೆಯ ಹರಿವಿನ ದೃಷ್ಟಿಯಿಟ್ಟುಕೊಂಡು ಅವರು ತಾಲ್ಲೂಕಿನಲ್ಲಿ 27 ಪ್ರಮುಖ ಕೆರೆಗಳನ್ನು ಕಟ್ಟಿಸಿದ್ದರು.ಅವುಗಳಲ್ಲಿ ಪ್ರಮುಖವಾದವು ಅಮಾನಿ ಭದ್ರನಕೆರೆ, ರಾಮಸಮುದ್ರ ಕೆರೆ, ಮಾಳಮಾಚನಹಳ್ಳಿ ಕೆರೆ, ಅಮಾನಿ ಬಲ್ಲದ ಕೆರೆ, ಅಮ್ಮನಕೆರೆ, ಗೌಡನಕೆರೆ, ಬೆಳ್ಳೂಟಿ ಕೆರೆ, ಸೋರಕಾಯಲಹಳ್ಳಿ ಕೆರೆ, ನಿಮ್ಮನವೊಡ್ಡು ದೊಡ್ಡಕೆರೆ, ತಿಮ್ಮನಾಯಕನಹಳ್ಳಿ ಅಗ್ರಹಾರ ಕೆರೆ ಮತ್ತು ತಿಮ್ಮಸಂದ್ರ ಅರಸಿಕೆರೆ. ಬಹುತೇಕ ಎಲ್ಲ ಕೆರೆಗಳು ನೂರಕ್ಕೂ ಹೆಚ್ಚು ಹೆಕ್ಟೇರ್‌ನಷ್ಟು ಅಚ್ಚುಕಟ್ಟು ಹೊಂದಿವೆ.ಆದರೆ ಈ ಎಲ್ಲ ಪ್ರಮುಖ ಕೆರೆಗಳು ಬೇರೆ ಬೇರೆ ಕಾರಣಗಳಿಂದ ಒತ್ತುವರಿಯಾಗಿವೆ. ಕೆಲವಡೆ ಕಟ್ಟಡ ನಿರ್ಮಾಣಗೊಂಡಿದ್ದರೆ, ಕೆಲ ಕಡೆ ಸ್ವಂತ ಜಮೀನು ಎಂಬಂತೆ ಬೆಳೆಗಳನ್ನು ಬೆಳೆಯಲಾಗಿದೆ. ತಮ್ಮ ಪೂರ್ವಜರು ಜಮೀನು ಖರೀದಿಸಿದ್ದಾರೆ ಎಂಬಂತೆ ಕೆರೆ ಪ್ರದೇಶವನ್ನು ಮನಸೋಇಚ್ಛೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.ಜಲಸಂಪನ್ಮೂಲ ಸದ್ಬಳಕೆಯ ದೂರದೃಷ್ಟಿಯಿಂದ ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಪತ್ನಿ ಅಲಸೂರಮ್ಮ ಪಟ್ಟಣದಲ್ಲಿ ತಮ್ಮ ಹೆಸರಿನಲ್ಲಿ ಅಮ್ಮನಕೆರೆ, ಪುತ್ರ ಶಿವನೇಗೌಡನ ಹೆಸರಿನಲ್ಲಿ ಗೌಡನಕೆರೆ ನಿರ್ಮಿಸಿದ್ದರು. ಆದರೆ ಈಗ ಅಮ್ಮನಕೆರೆ ಪ್ರದೇಶ ಹೊಲಗದ್ದೆಗಳ ಜಮೀನಾಗಿ ಮಾರ್ಪಟ್ಟಿದ್ದರೆ, ಗೌಡನಕೆರೆ ಕಳೆಗಿಡಗಳ ಆವಾಸಸ್ಥಾನವಾಗಿದೆ.

ಗೌಡನಕೆರೆ ಅಂಗಳದಲ್ಲೇ ಪುರಸಭೆಯವರು ಕೊಳವೆಬಾವಿ ಕೊರೆದು ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುತ್ತಿದ್ದಾರೆ.ಅಲ್ಲಿಯೇ ನೀರ್ಕಳೆ ಅಥವಾ ಕಳೆಗಿಡ ಎಂದು ಕರೆಯಲ್ಪಡುವ ವಿಷಕಾರಿ ಸಸ್ಯ ಬೆಳೆದಿದ್ದು, ನೀರನ್ನು ಕೊಳೆಸಿ ವಾಸನೆ ತರುತ್ತಿದೆಯಲ್ಲದೆ ಸೊಳ್ಳೆಗಳ ಲಾರ್ವಾ ಬೆಳವಣಿಗೆಗೂ ಕಾರಣವಾಗಿದೆ. ಡೆಂಗೆ, ಚಿಕುನ್‌ಗುನ್ಯಾ, ಮಲೇರಿಯಾ ಮುಂತಾದ ಸಾಂಕ್ರಾಮಿಕ ರೋಗಗಳು ಹರಡುವ ಆತಂಕ ವ್ಯಕ್ತವಾಗುತ್ತಿದೆ.ನೀರು ಇಂಗಲೆಂದು ಇರುವ ಕೆರೆಗಳಲ್ಲಿ ಹುಟ್ಟುವ ಈ ಸಸ್ಯಗಳಿಂದ ನೀರು ಆವಿಯಾಗಿ ಬಿದ್ದ ಮಳೆ ನೀರು ಅಂತರ್ಜಲ ಸೇರದೆ ಪೋಲಾಗುತ್ತಿದೆ. ನೀರು ಇನ್ನೊಂದು ಬದಿಗೆ ಹರಿದು ಹೋಗಲು ಮಾಡಿರುವ ತೂಬುಗಳು ಮುಚ್ಚಿ ಹೋಗಿ ನೀರಿನ ಹರಿವು ಕೂಡ ನಿಂತಿದೆ. ಸದಾ ನೀರಿನಿಂದ ತುಂಬಿಕೊಂಡು ಇರುತ್ತಿದ್ದ ಕೆರೆಗಳು ಈಗ ತ್ಯಾಜ್ಯಗುಂಡಿ ಸ್ವರೂಪ ಪಡೆದುಕೊಂಡಿವೆ.`ಬಹುತೇಕ ಕೆರೆಗಳಲ್ಲಿ ಹೂಳು ತುಂಬಿರುವುದರಿಂದ ನೀರು ಶೇಖರಣಾ ಪ್ರಮಾಣ ತುಂಬಾ ಕಡಿಮೆಯಾಗಿದೆ. ಅತಿಕ್ರಮಣ, ರಾಜಕೀಯ ಹಸ್ತಕ್ಷೇಪ, ನೀರು ಶೇಖರಣಾ ಅಂಗಳದಲ್ಲಿ ಸಾಗುವಳಿಗೆ ಮಂಜೂರಾತಿ, ಅಂತರ್ಜಲದ ಕುಸಿತ, ಅತಿಯಾದ ಕೊಳವೆ ಬಾವಿಗಳ ಕೊರೆಸುವಿಕೆ ಮುಂತಾದ ಕಾರಣಗಳಿಂದ ಕೆರೆಗಳು ಅಸ್ತಿತ್ವ ಕಳೆದುಕೊಳ್ಳುತ್ತಿವೆ.`ನಮ್ಮ ಪೂರ್ವಿಕರು ಕೆರೆಗಳನ್ನು ಕಟ್ಟದಿದ್ದಲ್ಲಿ, ಈ ವೇಳೆಗೆ ನಮ್ಮ ಜಿಲ್ಲೆಯ ಬಹುತೇಕ ಕೊರಕಲು ನೆಲಗಳ ಬಂಜರು ಭೂಮಿಯಾಗುತ್ತಿತ್ತು. ಅವರ ಮುಂದಾಲೋಚನೆ ಕ್ರಮದಿಂದ ಈವರೆಗೆ ಯಥೇಚ್ಛ ಅಂತರ್ಜಲ ಉಳಿಸಿ ಬಳಸಲು ಸಾಧ್ಯವಾಗಿದೆ. ಆದರೆ ಅದರ ಪ್ರಮಾಣವೂ ಕುಸಿಯತೊಡಗಿದೆ. ಕೆರೆಗಳನ್ನು ಪುನಶ್ಚೇತನಗೊಳಿಸಿ ಮಿತವರಿತು ಜಲ ಬಳಕೆ ಮಾಡಿದರೆ ಜಿಲ್ಲೆಯ ಜಲಸಂಪನ್ಮೂಲ ಊರ್ಜಿತವಾಗುತ್ತದೆ' ಎನ್ನುತ್ತಾರೆ ರೈತ ಮುಖಂಡ ಮಳ್ಳೂರು ಹರೀಶ್.ಶಿಡ್ಲಘಟ್ಟದಲ್ಲಿ 309 ಕೆರೆಗಳು!

ಶಿಡ್ಲಘಟ್ಟ:
1908ರ ಸರ್ಕಾರಿ ದಾಖಲೆಗಳ ಪ್ರಕಾರ, ತಾಲ್ಲೂಕಿನಲ್ಲಿ ಒಟ್ಟು 309 ಕೆರೆಗಳಿದ್ದವು. ಅವುಗಳಲ್ಲಿ 61 ದೊಡ್ಡ ಕೆರೆ, 248 ಸಣ್ಣ ಕೆರೆಗಳಿದ್ದವು. ಅವುಗಳಲ್ಲಿ ಸರ್ಕಾರದ್ದು 58 ದೊಡ್ಡಕೆರೆ, 185 ಸಣ್ಣಕೆರೆಗಳಿದ್ದವು. ಪ್ರತಿ 229 ಜನರಿಗೆ ಒಂದು ಕೆರೆಯಿತ್ತು. ಅಮಾನಿಭದ್ರನ ಕೆರೆ ತಾಲ್ಲೂಕಿನ ಅತ್ಯಂತ ದೊಡ್ಡ ಕೆರೆಯಾಗಿದ್ದು, 1053 ಎಕರೆ ಅಚ್ಚುಕಟ್ಟು ಪ್ರದೇಶ ಹೊಂದಿದೆ.ಜಿಲ್ಲೆಯಲ್ಲೇ ಅತಿ ಹೆಚ್ಚು ಕೆರೆ ಅಂಗಳ ಹೊಂದಿರುವ ಕೆರೆಯಿದು. 12 ಅಡಿ ಆಳ, 1,225 ಯೂನಿಟ್‌ಗಳಷ್ಟು ಪ್ರಮಾಣ ಹೊಂದಿತ್ತು. ಎರಡು ಎಕರೆ ಅಚ್ಚುಕಟ್ಟು ಪ್ರದೇಶ ಹೊಂದಿರುವ ನಾರಾಯಣದಾಸರಹಳ್ಳಿ ಅತ್ಯಂತ ಚಿಕ್ಕ ಕೆರೆ.

ತಾಲ್ಲೂಕಿನ 309 ಕೆರೆಗಳಿಂದ ಒಟ್ಟು 12,272 ಎಕರೆ ಅಚ್ಚುಕಟ್ಟ ಪ್ರದೇಶಕ್ಕೆ ನೀರಾವರಿ ಸೌಕರ್ಯ ಲಭ್ಯವಿತ್ತು.ದೊಡ್ಡಕೆರೆಗಳಿಂದ 8,875 ಎಕರೆ, ಸಣ್ಣಕೆರೆಗಳಿಂದ 2569 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯವಿತ್ತು. ತಾಲ್ಲೂಕಿನ ಸಾದಲಿ ದೇವಗಾನಹಳ್ಳಿ ಬಳಿಯಿರುವ ರಾಮಸಮುದ್ರ ಕೆರೆ ಹಲ ವೈಶಿಷ್ಟತೆಯಿಂದ ಕೂಡಿದೆ. ಹಲ ಬಾರಿ ಬರಗಾಲ ಬಂದರೂ ಈ ಕೆರೆ ಇವತ್ತಿನವರೆಗೆ ಬತ್ತಿಲ್ಲ. ಈ ಕೆರೆಯ ನೀರನ್ನು ಕೃಷಿಗೆ ಇಲ್ಲವೇ ಕುಡಿಯಲು ಸದ್ಬಳಕೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ ಇದುವರೆಗೆ ಯಾವುದೇ ಪ್ರಗತಿ ಕಂಡು ಬಂದಿಲ್ಲ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.