ಸೋಮವಾರ, ಮಾರ್ಚ್ 8, 2021
19 °C

ಹೊಸತನದ ಹುಡುಕಾಟದಲ್ಲಿ

ಸುರೇಖಾ ಹೆಗಡೆ Updated:

ಅಕ್ಷರ ಗಾತ್ರ : | |

ಹೊಸತನದ ಹುಡುಕಾಟದಲ್ಲಿ

ಪಾಶ್ಚಾತ್ಯ ಮನಸ್ಥಿತಿಗಳನ್ನು ಅರ್ಥೈಸಿಕೊಂಡು ದಿರಿಸುಗಳನ್ನು ವಿನ್ಯಾಸಗೊಳಿಸುವುದು ಸವಾಲಿನ ವಿಷಯ. ಆದರೆ ಆ ಸವಾಲುಗಳನ್ನು ಗೆದ್ದ ಭಾರತ ಮೂಲದ ವಿನ್ಯಾಸಕಿ ಮಿಶೆಲ್‌ ಸಾಲಿನ್ಸ್‌ ಇತ್ತೀಚೆಗೆ ಭಾರತೀಯ ಮನಸ್ಥಿತಿಗೆ ಸರಿಹೊಂದುವಂಥ ದಿರಿಸು ವಿನ್ಯಾಸ ಮಾಡುವ ಮನಸ್ಸು ಮಾಡಿದ್ದಾರೆ. ಬೆಳೆದಿದ್ದೆಲ್ಲಾ ವಿದೇಶದಲ್ಲೇ ಆದರೂ ಅವರಿಗೆ ಸೀರೆ ಉಡುವುದು ಎಂದರೆ ತುಂಬಾ ಇಷ್ಟವಂತೆ.ಫ್ಯಾಷನ್‌ ಲೋಕದತ್ತ ಆಕರ್ಷಿತರಾಗಿದ್ದು ಹೇಗೆ?

ಮೊದಲಿನಿಂದಲೂ ಫ್ಯಾಷನ್‌ ಲೋಕದತ್ತ ಅಭಿರುಚಿ ಇತ್ತು. ವೃತ್ತಿಯಲ್ಲಿ ನಾನು ಒಳಾಂಗಣ ವಿನ್ಯಾಸಕಿ. ಚಿಕ್ಕಂದಿನಿಂದಲೂ ಇನ್ನೊಬ್ಬರನ್ನು ಅಲಂಕರಿಸುವುದು ಎಂದರೆ ತುಂಬಾ ಇಷ್ಟ. ಎಲ್ಲಾ ಚಿಕ್ಕಮಕ್ಕಳಂತೆ ನಾನೂ ಬೊಂಬೆಗಳಿಗೆ ಉಡುಗೆ ತೊಡಿಸುತ್ತಿದ್ದೆ. ಇದೇ ವ್ಯಾಮೋಹದಿಂದ ವಿನ್ಯಾಸಕಿಯಾದೆ. ಈ ಅಭಿರುಚಿಯಿಂದಾಗಿ ಅಪ್ಪನ ಜೇಬಿಗೆ ಚೆನ್ನಾಗಿಯೇ ಕತ್ತರಿ ಹಾಕಿದ್ದೇನೆ. ಆದರೆ ಅದರಲ್ಲೂ ನನಗೊಂದು ಖುಷಿ ಇದೆ. ಸಾಧಿಸಿದ ಸಮಾಧಾನವಿದೆ.ನಿಮಗೆ ಯಾರು ಸ್ಫೂರ್ತಿ?

ಅಪ್ಪ ಕೈಗಾರಿಕೋದ್ಯಮಿ. ಅಮ್ಮ ಗೃಹಿಣಿ. ಅಭಿರುಚಿಗಳ ಬೆನ್ನಟ್ಟಿ ಹೋಗುವ ಮನಸ್ಥಿತಿ ಬೆಳೆದಿದ್ದು ಅಪ್ಪನಿಂದ. ಸ್ಟೈಲ್‌ ವಿಷಯದಲ್ಲಿ ಅಮ್ಮ ಸ್ಫೂರ್ತಿ. ಅದಕ್ಕಿಂತಲೂ ಹೆಚ್ಚಾಗಿ ನನ್ನ ಬದುಕೇ ನನಗೆ ಹೊಸತನ್ನು ಕಂಡುಕೊಳ್ಳಲು ಸಹಕಾರಿಯಾಗಿದೆ.ಪಾಶ್ಚಾತ್ಯ ಹಾಗೂ ದೇಸಿ ಫ್ಯಾಷನ್‌ ಟ್ರೆಂಡ್‌ ಏನು?

ನಾನು ಮೊದಲು ಅಮೆರಿಕದಲ್ಲಿ ನನ್ನ ಸಂಗ್ರಹಗಳನ್ನು ಪರಿಚಯಿಸಿದೆ. ಕೆಲವು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದೇನೆ. ಫ್ಯಾಷನ್‌ಗೆ ಸಂಬಂಧಿಸಿದ ಷೋಗಳು, ವಿಚಾರ ಸಂಕಿರಣಗಳು ಇಲ್ಲಿ ನಡೆಯುತ್ತಲೇ ಇರುತ್ತವೆ. ಇತ್ತೀಚೆಗೆ ದೇಸಿ ಮಾರುಕಟ್ಟೆಯಲ್ಲೂ ಅನೇಕ ಬದಲಾವಣೆಗಳಾಗುತ್ತಿವೆ. ಹೊಸದನ್ನು ತಮ್ಮದಾಗಿಸಿಕೊಳ್ಳುವ ಮನಸ್ಥಿತಿ ಬೆಳೆಯುತ್ತಿದೆ. ಫ್ಯಾಷನ್‌ ಟ್ರೆಂಡ್‌ ಕುರಿತಂತೆ ಗೂಗಲ್‌ನಲ್ಲಿ, ನಿಯತಕಾಲಿಕೆಗಳಲ್ಲಿ ಸಾಕಷ್ಟು ವಿಷಯಗಳು ಬರುತ್ತವೆ. ಅದೇ ಟ್ರೆಂಡ್‌ಗಳನ್ನು ನಾವು ನಮ್ಮದಾಗಿಸಿಕೊಳ್ಳಲು ತುಂಬಾ ಸಮಯ ಬೇಕೆಂದು ನನಗನಿಸುವುದಿಲ್ಲ.ಭಾರತೀಯರಿಗೆ ಯಾವ ರೀತಿಯ ದಿರಿಸು ಹೆಚ್ಚು ಇಷ್ಟ?

ನಾನು ಹುಟ್ಟಿ ಬೆಳೆದಿದ್ದು, ಹಾಗೂ ಹೆಚ್ಚಿನ ನಂಟು ಇರುವುದು ಅಮೆರಿಕದಲ್ಲೇ ಆದರೂ ಸೀರೆ ಧರಿಸುವುದು ನನಗೆ ತುಂಬ ಇಷ್ಟ. ಭಾರತೀಯ ಮನಸ್ಥಿತಿಯೇ ಹಾಗೆ. ಸಂಪ್ರದಾಯದ ಶ್ರೀಮಂತ ಸಂಸ್ಕೃತಿ ಇರುವ ಭಾರತೀಯರು ಸಾಂಪ್ರದಾಯಿಕ ಕಾರ್ಯಕ್ರಮಗಳಲ್ಲಿ ಸೀರೆಗಳನ್ನೇ ಉಡಲು ಬಯಸುತ್ತಾರೆ. ಕಳೆದ ಹಲವು ತಿಂಗಳಿಂದ ಭಾರತೀಯ ಮಾರುಕಟ್ಟೆಯ ಬಗ್ಗೆ ತಿಳಿದುಕೊಳ್ಳುತ್ತಿದ್ದೇನೆ. ನಾನು ಗಮನಿಸಿದಂತೆ ಮದುವೆಯಂಥ ಕಾರ್ಯಕ್ರಮಗಳಿಗೆ ಪಾಶ್ಚಾತ್ಯ ಸೋಗು ಇರುವ ಭಾರತೀಯ ಉಡುಗೆಗಳನ್ನು ಧರಿಸಲು ಹೆಚ್ಚಿನವರು ಇಷ್ಟಪಡುತ್ತಾರೆ.ಭಾರತೀಯರಿಗೆ ವಿಭಿನ್ನವಾದ ಯಾವ ವಿನ್ಯಾಸ ನೀಡಲು ನಿರ್ಧರಿಸಿದ್ದೀರಿ?

ಭಾರತೀಯರ ಮನಸ್ಥಿತಿ ಹಾಗೂ ಫ್ಯಾಷನ್‌ ಪರಿಕಲ್ಪನೆಯನ್ನು ನಾನು ಬದಲಿಸುವ ಆಸಕ್ತಿ ಹೊಂದಿಲ್ಲ. ಆದರೆ ನಾನು ವಿನ್ಯಾಸಗೊಳಿಸಿದ ಉಡುಗೆ ತೊಟ್ಟಾಗ ಅವರು ಚೆನ್ನಾಗಿ ಕಾಣಬೇಕು. ಕೇವಲ ಸೆಕ್ಸಿಯಾಗಿ ಕಾಣುವಂತೆ ಮಾಡುವುದು ನನ್ನ ಉದ್ದೇಶವಲ್ಲ. ಆಧುನಿಕತೆಯ ರಂಗು ದಿರಿಸಿನಲ್ಲಿರಬೇಕು. ಸಂಪ್ರದಾಯವನ್ನೂ ನಾನು ಮರೆಯಲಾರೆ.ವಿದೇಶಿಯರಿಗಾಗಿ ಹೆಚ್ಚು ವಿನ್ಯಾಸ ಮಾಡಿರುವ ನೀವು ಭಾರತೀಯರಿಗಾಗಿ ವಿನ್ಯಾಸದಲ್ಲಿ ಯಾವ ಬದಲಾವಣೆಯನ್ನು ರೂಢಿಸಿಕೊಳ್ಳಬೇಕೆಂದಿದ್ದೀರಿ?

ಸಾಂಸ್ಕೃತಿಕವಾಗಿ ಶ್ರೀಮಂತವಾದ ದೇಶ ಇದಾಗಿರುವುದರಿಂದ ಜಾಗರೂಕತೆಯಿಂದ ವಸ್ತ್ರ ವಿನ್ಯಾಸ ಮಾಡಬೇಕಾಗುತ್ತದೆ. ದಿರಿಸಿನ ಕತ್ತಿನ ವಿನ್ಯಾಸ, ಆಂಗಿಕವಾಗಿ ಹೊಂದುವಂತೆ ಮಾಡಲು ಕೆಲವು ಬದಲಾವಣೆಗಳನ್ನು ನಾವು ಮಾಡಿಕೊಳ್ಳಲೇಬೇಕಲ್ಲ. ಅಮೆರಿಕನ್ನರಿಗಾಗಿ ವಸ್ತ್ರ ವಿನ್ಯಾಸ ಮಾಡುವಾಗ ಕೆಲವು ವಿಷಯಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಕಿಲ್ಲ. ಆದರೆ ಅಲ್ಲಿಯ ವಿನ್ಯಾಸ ಸೂತ್ರವನ್ನು ಇಲ್ಲಿ ಅಳವಡಿಸುವುದು ಅಸಾಧ್ಯ.ಈ ಕ್ಷೇತ್ರದಲ್ಲಿ ಸ್ಪರ್ಧೆ ಹೇಗಿದೆ?

ಕ್ರಿಯಾಶೀಲತೆ ಇರುವ ಪ್ರತಿ ವಿನ್ಯಾಸಕನಿಗೂ ಇಲ್ಲಿ ಸ್ಥಾನವಿದೆ, ಅವಕಾಶವಿದೆ.ಬೇರೆ ವಿನ್ಯಾಸಕರಿಗಿಂತ ನೀವು ಹೇಗೆ ಭಿನ್ನ?

ಮಹಿಳಾ ಸಂವೇದನೆಗೆ ಸಂಬಂಧಿಸಿದಂತೆ ನನ್ನ ಕಲ್ಪನೆಗಳು ಭಿನ್ನ ಎಂದೆನಿಸುತ್ತದೆ. ಮಹಿಳೆಯರು ಧರಿಸುವ ಉಡುಗೆ ಸೆಕ್ಸಿಯಾಗಿರಬೇಕು ಎಂಬುದು ಎಂದಿಗೂ ನನ್ನ ಉದ್ದೇಶವಲ್ಲ. ಆದರೆ ಸಮಕಾಲೀನ ಮನಸ್ಥಿತಿಗೆ ಒಪ್ಪುವಂತೆ ಆಧುನಿಕ ಉಡುಗೆಗಳನ್ನು ಅವರಿಗಾಗಿ ನೀಡಬೇಕೆನ್ನುವ ಮನಸ್ಥಿತಿ ನನ್ನದು.ಕಿರಿಯರಿಗೆ ಸಲಹೆ?

ಫ್ಯಾಷನ್‌ ಕ್ಷೇತ್ರದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಅಚಲ ಛಲ ನಿಮ್ಮಲ್ಲಿದ್ದರೆ ಮಾತ್ರ ಈ ಕ್ಷೇತ್ರದಲ್ಲಿ ಮುಂದುವರೆಯಿರಿ. ಇಲ್ಲವಾದಲ್ಲಿ ಸುಮ್ಮನೆ ತಂದೆತಾಯಿಯರ ಜೇಬಿಗೆ ಕತ್ತರಿ ಹಾಕಬೇಡಿ. ನಿಮ್ಮ ಅಭಿರುಚಿಯ ಕ್ಷೇತ್ರದತ್ತ ಈಗಲೇ ವಾಲಿಬಿಡಿ.ಪ್ರತಿ ಬಾರಿಯೂ ವಿಭಿನ್ನ ವಿನ್ಯಾಸ ನೀಡುವುದು ಹೇಗೆ ಸಾಧ್ಯವಾಗುತ್ತದೆ?

ಬದುಕು ನಿಜವಾಗಲೂ ಸ್ಫೂರ್ತಿ ನೀಡುತ್ತದೆ. ನಾನು ನೋಡುವ ಅನುಭವಿಸುವ ಚಿಕ್ಕ ಚಿಕ್ಕ ವಿಷಯಗಳಲ್ಲೂ ನನಗೆ ವಿನ್ಯಾಸ ಗೋಚರಿಸುತ್ತದೆ. ಅದೂ ಅಲ್ಲದೆ ಬೇರೆ ಬೇರೆ ಪ್ರದೇಶಗಳಿಗೆ ಪ್ರಯಾಣಿಸುವುದರಿಂದ ನಮ್ಮ ಕಲ್ಪನೆಗಳು ಶ್ರೀಮಂತಗೊಳ್ಳುತ್ತವೆ. ವಿವಿಧ ಸ್ಥಳಗಳನ್ನು ನೋಡಿದಾಗ ಅಲ್ಲಿಯ ಸಂಸ್ಕೃತಿ, ವಿನ್ಯಾಸಗಳ ಬಗ್ಗೆ ಹೊಸ ಹೊಳಹು ಮೂಡುತ್ತದೆ.ಬೆಂಗಳೂರಿನ ಬಗ್ಗೆ ನಿಮ್ಮ ಅಭಿಪ್ರಾಯ?

ಕಳೆದ ಏಳು ವರ್ಷದಿಂದ ನಾನು ಇಲ್ಲಿದ್ದೇನೆ. ಬೆಂಗಳೂರು ನನಗೆ ಅವಕಾಶಗಳನ್ನು ತೆರೆದಿಟ್ಟ ನೆಚ್ಚಿನ ಸ್ಥಳ. ಅನೇಕ ಉತ್ತಮ ಸ್ನೇಹಿತರು ನನಗೆ ಸಿಕ್ಕಿದ್ದಾರೆ. ಅದೂ ಅಲ್ಲದೆ ನನ್ನ ಗ್ರಾಹಕರು ತುಂಬಾ ಬುದ್ಧಿವಂತರು. ವಿವಾಹ ಮಹೋತ್ಸವಗಳಿಗೂ ನಾನು ದಿರಿಸು ವಿನ್ಯಾಸಗೊಳಿಸಿದ್ದಿದೆ. ಕ್ರಿಯಾಶೀಲತೆಗೆ ಹೆಚ್ಚು ಅವಕಾಶ ಇರುವ ನಗರ ಇದು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.