ಶುಕ್ರವಾರ, ಏಪ್ರಿಲ್ 23, 2021
22 °C

ಹೊಸದಾರಿಯಲ್ಲಿ ಧರ್ಮ

ಎಚ್.ಎಸ್.ರೋಹಿಣಿ Updated:

ಅಕ್ಷರ ಗಾತ್ರ : | |

`ಕಣ್ ಕಣ್ಣ ಸಲಿಗೆ...~ ಹಾಡಿನ ಹುಡುಗ ಎಂದೇ ಗುರುತಿಸಿಕೊಳ್ಳುವ ಸ್ಫುರದ್ರೂಪಿ ನಟ ಧರ್ಮ ಕೀರ್ತಿರಾಜ್. ಇತ್ತೀಚೆಗೆ (ಜು.7) ಅವರು ತಮ್ಮ 28ನೇ ವರ್ಷದ ಬರ್ತ್‌ಡೇ ಆಚರಿಸಿಕೊಂಡು ತಾಜಾ ಮೂಡಿನಲ್ಲಿದ್ದಾರೆ. ಬರುವ ಆಗಸ್ಟ್‌ನಲ್ಲಿ ಚಿತ್ರವೊಂದನ್ನು ಒಪ್ಪಿಕೊಳ್ಳುವ ಸಾಧ್ಯತೆ ಇದೆ.ಖಳನಟರ ಪುತ್ರರಿಗೆ ಅವಕಾಶ ಕೊಡಬೇಕೆಂಬ ಉದ್ದೇಶದಿಂದ ನಟ ದರ್ಶನ್, ನಿರ್ದೇಶಕ ದಿನಕರ್ ರೂಪಿಸಿದ ಸಿನಿಮಾ `ನವಗ್ರಹ~. ಅದರಲ್ಲಿ ಖಳ ನಟ ಕೀರ್ತಿರಾಜ್ ಪುತ್ರ ಧರ್ಮ ಅವರನ್ನು ಅವಕಾಶ ಹುಡುಕಿ ಬಂತು. ಚಿತ್ರದ `ಕಣ್ ಕಣ್ಣ ಸಲಿಗೆ...~  ಹಾಡೂ ಜನಪ್ರಿಯವಾಯಿತು. ಅದರಿಂದ `ಒಲವೇ ವಿಸ್ಮಯ~ ಎಂಬ ಸಿನಿಮಾದಲ್ಲಿ ನಾಯಕನಾಗುವ ಅವಕಾಶ ಸಿಕ್ಕಿತು.

 

ಅದು ವಿಫಲವಾದ ನಂತರ ಅವಕಾಶಗಳು ಕಡಿಮೆಯಾದವು. ಅದೇ ಸಮಯದಲ್ಲಿ ಧರ್ಮ ಅವರಿಗೂ ಬದಲಾವಣೆ ಬೇಕು ಎನಿಸಿತು.ಇದೀಗ ಮಾಸ್ ಪ್ರೇಕ್ಷಕರಿಗೆ ಇಷ್ಟವಾಗುವ ಪಾತ್ರಗಳಲ್ಲಿ ಮಿಂಚುವಾಸೆ ಅವರದು. ಅದಕ್ಕಾಗಿ ಜಿಮ್‌ನಲ್ಲಿ ಬೆವರು ಹರಿಸುತ್ತಿದ್ದಾರೆ. ಜೊತೆಗೆ ಫೈಟ್ ಮತ್ತು ನೃತ್ಯದ ತರಬೇತಿಗಳನ್ನು ನಿಯಮಿತವಾಗಿ ಪಡೆಯುತ್ತಿದ್ದಾರೆ. ನಟನೆಯಲ್ಲಿಯೂ ಸುಧಾರಿಸಿಕೊಳ್ಳಬೇಕು ಎನಿಸಿದೆ.ಇದೆಲ್ಲಕ್ಕಿಂತ ಮುಂಚೆ `ಅವಕಾಶ ಸಿಗಲಿ ಬಿಡಲಿ, ಸಿನಿಮಾ ಹಿಟ್ ಆಗಲೀ ಫ್ಲಾಪ್ ಆಗಲೀ ಒಳ್ಳೆಯ ಹುಡುಗ ಎನಿಸಿಕೊಳ್ಳಬೇಕು. ನಡವಳಿಕೆಯಿಂದ ಗೌರವ ಗಳಿಸಿಕೊಳ್ಳಬೇಕು~ ಎಂದು ತಂದೆ ಹೇಳಿದ ಕಿವಿಮಾತನ್ನು ಪಾಲಿಸುವ ಹುಮ್ಮಸ್ಸಿದೆ. ಸಿನಿಮಾಗಳನ್ನು ನೋಡಿ ಕಲಿಯುತ್ತಾ ತಮ್ಮನ್ನು ತಿದ್ದಿ ತೀಡಿಕೊಳ್ಳುವ ಕೆಲಸದಲ್ಲಿ ನಿರತರಾಗಿರುವ ಧರ್ಮ ಮುಂದೆ ಒಳ್ಳೆಯ ದಿನಗಳು ಬರಲಿವೆ ಎಂಬ ವಿಶ್ವಾಸದಲ್ಲಿದ್ದಾರೆ.

`ಕಾಲೇಜು ದಿನಗಳಲ್ಲಿ ಕ್ರೀಡೆಯ ಕಡೆಗೆ ಹೆಚ್ಚು ಮನಸ್ಸಿತ್ತು. ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಟೆನಿಸ್ ಆಟದಲ್ಲಿ ಸ್ಪರ್ಧಿಸಿದ್ದೆ. ಕ್ರೀಡೆಯಲ್ಲಿ ಬದುಕು ಕಟ್ಟಿಕೊಳ್ಳುವುದು ತುಂಬಾ ಖರ್ಚಿನ ಬಾಬತ್ತು ಎನಿಸಿತು. ಅದೇ ವೇಳೆಗೆ ಅನಿರೀಕ್ಷಿತವಾಗಿ ನವಗ್ರಹ ಚಿತ್ರದ ಅವಕಾಶ ಬಂತು~ ಎಂದು ನೆನಪಿಸಿಕೊಳ್ಳುತ್ತಾರೆ ಧರ್ಮ.`ಆಕ್ಷನ್ ಮತ್ತು ಲವ್‌ಸ್ಟೋರಿ ಬೆರೆತಿರುವ ಚಿತ್ರ ಮಾಡುವ ಮನಸ್ಸಿದೆ~ ಎನ್ನುವ ಅವರಿಗೆ ತಂದೆಯಂತೆ ನೆಗೆಟಿವ್ ಪಾತ್ರ ನಿರ್ವಹಿಸಲೂ ಆಸೆ ಇದೆ. ಆದರೆ ಅದು ತಮಗೆ ಹೊಂದಿಕೆಯಾಗುತ್ತದೋ ಇಲ್ಲವೋ ಎಂಬ ಅಳುಕಿದೆ. ಅದರಿಂದ ನಾಯಕನಾಗಿ ನೆಲೆ ನಿಂತ ನಂತರ ಅಂಥ ಪಾತ್ರಗಳನ್ನು ಪ್ರಯೋಗ ಮಾಡುವ ದೂರದೃಷ್ಟಿ ಅವರದು.

`ಇಂದಿಗೂ ನನ್ನನ್ನು ನವಗ್ರಹ ಚಿತ್ರದ ಹಾಡಿನಿಂದಲೇ ಗುರುತಿಸುತ್ತಾರೆ.

 

ದರ್ಶನ್ ಅವರಂಥ ಜನಪ್ರಿಯ ನಟರೊಂದಿಗೆ ನಟಿಸಿದ್ದರಿಂದ ಜನ ಆ ಸಿನಿಮಾ ನೋಡಿದರು. ನನಗೆ ಒಂದು ಸುಂದರ ಹಾಡೂ ಸಿಕ್ಕಿತ್ತು~ ಎನ್ನುವ ಅವರು ಕೆಲವೊಮ್ಮೆ ನಿರಾಶರಾಗುವುದೂ ಇದೆಯಂತೆ.`ಅವಕಾಶಗಳ ಬಗ್ಗೆ ಕೆಲವೊಮ್ಮೆ ತೀರಾ ಬೇಸರವಾಗುತ್ತದೆ. ಆಗ ನನ್ನ ತಂದೆ ತಮ್ಮ ಹಳೆಯ ಅನುಭವಗಳನ್ನು ಹೇಳುತ್ತಾ ನನ್ನಲ್ಲಿ ಆತ್ಮವಿಶ್ವಾಸ ತುಂಬುತ್ತಾರೆ~ ಎಂದು ಮುಕ್ತವಾಗಿ ಮನಬಿಚ್ಚುವ ಧರ್ಮ ತಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ಜಯ ಸಿಕ್ಕೇ ಸಿಗುತ್ತದೆಂಬ ವಿಶ್ವಾಸ ಹೊಂದಿದ್ದಾರೆ.ಅಂದಹಾಗೆ ಬಿಡುವಿನ ವೇಳೆಯಲ್ಲಿ ಕುದುರೆ ಸವಾರಿ, ಬೈಕ್ ಸವಾರಿ ಮಾಡುವ ಧರ್ಮ ಬೈಕ್ ಮತ್ತು ಕಾರ್‌ನಲ್ಲಿ ಮೈಸೂರು, ಊಟಿ ಕಡೆಗೆ ಹೋಗುವುದನ್ನು ತುಂಬಾ ಇಷ್ಟಪಡುತ್ತಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.