ಶುಕ್ರವಾರ, ಮೇ 7, 2021
25 °C

ಹೊಸದುರ್ಗ ತಾಲ್ಲೂಕಿನ 64 ಗ್ರಾಮಗಳಲ್ಲಿ ತೀವ್ರ ಬರದ ಛಾಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸದುರ್ಗ ತಾಲ್ಲೂಕಿನ 64 ಗ್ರಾಮಗಳಲ್ಲಿ ತೀವ್ರ ಬರದ ಛಾಯೆ

ಹೊಸದುರ್ಗ: ಮಳೆರಾಯನ ಮುನಿಸಿನಿಂದಾಗಿ ತಾಲ್ಲೂಕಿನಾದ್ಯಂತ ಬರದ ಛಾಯೆ ಆವರಿಸಿದ್ದು, ರೈತಾಪಿ ಜನರು ಸಂಕಷ್ಟ ಎದುರಿಸುವಂತಾಗಿದೆ.ಕಾಲಕಾಲಕ್ಕೆ ಸರಿಯಾಗಿ ಮಳೆಯಾಗದೇ ಬೆಳೆ ಬಾಡುತ್ತಿದೆ. ಕೆಲವೆಡೆ ಭೂಮಿಗೆ ಬಿತ್ತಿದ ಬೀಜ ಮೊಳಕೆ ಒಡೆಯದೇ ಮಣ್ಣಲ್ಲಿ ಮಣ್ಣಾಗಿ ಹೋಗಿವೆ. ನಮ್ಮ ಹೊಟ್ಟೆಪಾಡು ಹೇಗೋ ನಡೆಯುತ್ತೆ ಜಾನುವಾರುಗಳ ಗತಿಯೇನು ಎಂದು ರೈತರು ಮುಗಿಲು ನೋಡುತ್ತಿದ್ದಾರೆ.ಮಳೆ ಕೊರತೆಯಿಂದಾಗಿ  ತಾಲ್ಲೂಕಿನ ಒಟ್ಟು 225 ಗ್ರಾಮಗಳಲ್ಲಿ 64 ಗ್ರಾಮಗಳು ತೀವ್ರತರವಾದ ಬೆಳೆ ವೈಫಲ್ಯ ಎದುರಿಸುತ್ತಿವೆ. 69 ಗ್ರಾಮಗಳಲ್ಲಿ ಭಾಗಶಃ ಬೆಳೆ ಹಾನಿಹಾಗಿದ್ದರೆ 24 ಗ್ರಾಮಗಳಲ್ಲಿ ಅಲ್ಪಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ.ನಾಲ್ಕು ಹೋಬಳಿಗಳಲ್ಲಿ ಕಸಬಾ ಹೋಬಳಿಯಲ್ಲಿ ಹೆಚ್ಚು ಗ್ರಾಮಗಳು ಬೆಳೆ ವೈಫಲ್ಯ ಎದುರಿಸುತ್ತಿವೆ.

ಹೋಬಳಿಯ ಒಟ್ಟು 84 ಗ್ರಾಮಗಳಲ್ಲಿ 63 ಗ್ರಾಮಗಳು ಬರದ ಪರಿಸ್ಥಿತಿ ಎದುರಿಸುವಂತಾಗಿದೆ.33 ಗ್ರಾಮಗಳಲ್ಲಿ ತೀವ್ರ ಬೆಳೆ ಹಾನಿಯಾಗಿದ್ದರೆ 20 ಗ್ರಾಮಗಳಲ್ಲಿ ಭಾಗಶಃ  ಹಾನಿಯಂಟಾಗಿದೆ. 10 ಗ್ರಾಮಗಳಲ್ಲಿ ಅಲ್ಪ ಪ್ರಮಾಣದ ಬೆಳೆ ನಾಶವಾಗಿದೆ.ಶ್ರೀರಾಂಪುರ ಹೋಬಳಿಯಲ್ಲಿ 26 ಗ್ರಾಮಗಳ ವ್ಯಾಪ್ತಿಯಲ್ಲಿ ಬೆಳೆ ಹಾನಿಯಾಗಿದ್ದರೆ. ಮತ್ತೋಡು ಹೋಬಳಿ ವ್ಯಾಪ್ತಿಯಲ್ಲಿ 26 ಹಾಗೂ ಮಾಡದಕರೆ ಹೋಬಳಿ ವ್ಯಾಪ್ತಿಯ 28 ಗ್ರಾಮಗಳಲ್ಲಿ ಬೆಳೆ ಹಾನಿಯಾಗಿದೆ.

ವಾಡಿಕೆ ಯಂತೆ ಆಗಸ್ಟ್ ಅಂತ್ಯಕ್ಕೆ 218 ಮಿ.ಮೀ. ಮಳೆಯಾಗಬೇಕಿದ್ದು, ಪ್ರಸಕ್ತ ಸಾಲಿನಲ್ಲಿ 201 ಮಿ.ಮೀ. ಮಳೆಯಾಗಿದೆ.ಕಳೆದ ಮೂರು ತಿಂಗಳುಗಳಿಂದ ಮಳೆ ಇಲ್ಲದ ಕಾರಣ ಬಿತ್ತನೆ ಪ್ರಮಾಣವೂ ಕಡಿಮೆಯಾಗಿದೆ.  ತಾಲ್ಲೂಕಿನ ಒಟ್ಟು 60,500 ಹೆಕ್ಟೇರ್ ಪ್ರದೇಶದ ಮಳೆಯಾಶ್ರಿತ ಕೃಷಿ ಭೂಮಿಯಲ್ಲಿ 56,398 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.  4,269 ಹೆಕ್ಟೇರ್ ಕೃಷಿ ಭೂಮಿಯಲ್ಲಿ ಬಿತ್ತನೆಯೇ ಆಗಿಲ್ಲ ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡುತ್ತಾರೆ.ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಈರುಳ್ಳಿ ಬೆಳೆ ಸಂಪೂರ್ಣವಾಗಿ ಹಾಳಾಗಿದೆ. ಈರುಳ್ಳಿ ಬಿತ್ತನೆಗೆ ರೈತರು ಕಂಡವರ ಬಳಿ ಸಾಲ ಪಡೆದು ಗೊಬ್ಬರ ಬೀಜಕ್ಕೆ ಹಾಕಿದ್ದ ಲಕ್ಷಾಂತರ ರೂಪಾಯಿ ಮಣ್ಣು ಪಾಲಾಗಿದೆ. ಸಾಲ ಕೊಟ್ಟವರ ಹಣ ವಾಪಸ್ಸು ಮಾಡಲು ದಾರಿಯೇ ಕಾಣುತ್ತಿಲ್ಲ ಎನ್ನುತ್ತಾರೆ ಪೀಲಾಪುರದ ಗ್ರಾ.ಪಂ. ಸದಸ್ಯ ಸೋಮಶೇಖರ್.ತಾಲ್ಲೂಕಿನ ಪ್ರಮುಖ ಬೆಳೆ ರಾಗಿ 26,680 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಮಳೆಯ ಕೊರತೆಯಿಂದಾಗಿ  ರಾಗಿ  ಬಹುತೇಕ ಸೊರಗಿ ಹೋಗಿದೆ. ಸುಮಾರು 534 ಹೆಕ್ಟೇರ್ ಪ್ರದೇಶದಲ್ಲಿ ಸಂಪೂರ್ಣ ಹಾನಿಯಾಗಿದೆ. ಮೆಕ್ಕೆಜೋಳ, ಸಾವೆ, ನವಣೆ, ತೊಗರಿ ಇತ್ಯಾದಿ ಬೆಳೆಯೂ ಹಾನಿಗೀಡಾಗಿದೆ.ಮಳೆರಾಯನ ಮುನಿಸಿನಿಂದಾಗಿ ಜಾನುವಾರುಗಳಿಗೆ ಮೇವು ಲಭ್ಯವಿಲ್ಲದಂತಾಗಿದೆ. ಅಲ್ಲಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಅಂತರ್ಜಲ ಮಟ್ಟ ಕುಸಿಯುತ್ತಿದೆ.  ತಾಲ್ಲೂಕಿನ ಜನತೆಯ ಜೀವನಾಡಿ ವೇದಾವತಿ ಸಂಪೂರ್ಣವಾಗಿ ಬತ್ತಿಹೋಗಿದೆ. ಮಳೆ ಬಾರದೇ ಹೋದಲ್ಲಿ ಕೆಲವೇ ದಿನಗಳಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗುವ ಸಂಭವವಿದೆ ಎನ್ನುತ್ತಾರೆ ರೈತ ಮಂಜುನಾಥ್.ಮಳೆಗಾಲದಲ್ಲಿಯೇ ಇಂತಹ ವಿಷಮ ಪರಿಸ್ಥಿತಿ ಬಂದೊದಗಿದೆ. ಇನ್ನು ಮುಂಬರುವ ಬೇಸಿಗೆಯ ದಿನಗಳನ್ನು ಎದುರಿಸುವುದು ಹೇಗೆ ಎಂದು ತಾಲ್ಲೂಕಿನ ಜನತೆ ಆತಂಕದಿಂದ ದಿನಕಳೆಯುತ್ತಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.