ಶುಕ್ರವಾರ, ಜೂಲೈ 10, 2020
28 °C

ಹೊಸ ವರುಷದ ಸಂಕಲ್ಪ...

ಡಾ. ಕೆ.ಎಸ್. ಪವಿತ್ರ Updated:

ಅಕ್ಷರ ಗಾತ್ರ : | |ಹೊ ಸ ವರುಷದ ಸಂಭ್ರಮಾಚರಣೆಯನ್ನು ನಮ್ಮದಾಗಿಸಿಕೊಂಡು ಬಹು ವರುಷಗಳೇ ಕಳೆದಿವೆ. ಅದ್ದೂರಿಯಾಗಿ  ಹೊಸ ವರುಷದ ಆರಂಭವನ್ನೇನೋ ಮಾಡುತ್ತೇವೆ. ಆದರೆ ನಂತರ? ಕುಡಿದು, ಕುಣಿದು ಕುಪ್ಪಳಿಸಿ ಹೊಸ ವರ್ಷವನ್ನು ಸ್ವಾಗತಿಸಿದರಷ್ಟೇ ಸಾಕೆ? ಹೊಸ ವರ್ಷ ಹರ್ಷದಾಯಕವಾದ ಹಳೆ ವರ್ಷವಾಗಬೇಕಾದರೆ ಹೊಸ ವರ್ಷದ ಮೊದಲ ದಿನ ಕೆಲವು  ‘ಆರೋಗ್ಯಕರ’ ಆಚರಣೆಗಳನ್ನು ನಮ್ಮದಾಗಿಸಿಕೊಳ್ಳಬೇಕು.ಜಗತ್ತಿನಾದ್ಯಂತ ಈ ಹೊಸ ವರ್ಷದ ದಿನ ಹೊಸ ನಿರ್ಣಯಗಳನ್ನು ಜನ ಮಾಡಿದರೂ, ಹೆಚ್ಚಿನ ಜನ 2 ತಿಂಗಳುಗಳ ಒಳಗೆ ಅವನ್ನು ಮರೆತು ಬಿಡುತ್ತಾರೆ !  ಹೆಚ್ಚಿನ ಜನ ಮತ್ತೆ ಮತ್ತೆ ಕೈಗೊಳ್ಳುವ ನಿರ್ಣಯಗಳು ಎಂದಿನಂತೆ ವ್ಯಾಯಾಮ, ಸಿಗರೇಟು ಬಿಡುವುದು, ಇವುಗಳ ಬಗ್ಗೆ ಸಂಬಂಧಪಟ್ಟವು. ಹಳೆಯದನ್ನು, ಈಗಾಗಲೇ ಇರುವ ಒಂದು ಅಭ್ಯಾಸವನ್ನು  (ಹೆಚ್ಚಿನ ಸಮಯ ದುರಭ್ಯಾಸ) ಬಿಡುವ ನಿರ್ಣಯದ ಬದಲು ಹೊಸದನ್ನು ರೂಢಿ ಮಾಡಿಕೊಳ್ಳುವ ನಿರ್ಣಯ ಹಲವರದ್ದು.ಯಾವುದೇ ಆರೋಗ್ಯಕ್ಕೆ ಸಂಬಂಧಪಟ್ಟ ದೀರ್ಘಕಾಲಿಕ ಅಭ್ಯಾಸದ ನಿರ್ಣಯಗಳಿಗೆ ಹೊಸ ವರ್ಷದ ದಿನ ಸಕಾಲವೇ. ಆದರೆ ಸರಿಯಾದ ಮಾನಸಿಕ ಸಿದ್ಧತೆ, ಶ್ರದ್ಧೆ, ಈ ನಿರ್ಣಯಕ್ಕೆ ಅಗತ್ಯ.ಸಿಗರೇಟು ಬಿಡುವುದಿರಲಿ, ವ್ಯಾಯಾಮ ನಿಯಮಿತವಾಗಿ ಮಾಡುವುದಿರಲಿ, ಮದ್ಯವ್ಯಸನ ಬಿಡುವುದಾಗಿ, ಕೋಪ ಕಡಿಮೆ ಮಾಡಿಕೊಳ್ಳುವುದಾಗಲಿ, ಸರಿಯಾದ ಸಮಯ ನಿರ್ವಹಣೆಯಾಗಲಿ ಈ ಕೆಳಗಿನ ಸೂತ್ರಗಳನ್ನನುಸರಿಸಿದರೆ ಸುಲಭ ಸಾಧ್ಯ.*ವಾಸ್ತವಿಕತೆಯ ನೆಲೆಯಲ್ಲಿ ನಿರ್ಣಯ ಮಾಡುವುದು- ಸಾಧಿಸಬಹುದಾದ ಸುಲಭವಾದ ಗುರಿಗಳನ್ನು ಹಾಕಿಕೊಳ್ಳುವುದು. (ಮಕ್ಕಳ ಮೇಲೆ ಕೂಗುವುದೇ ಇಲ್ಲ, ಕೋಪಗೊಳ್ಳುವುದೇ ಇಲ್ಲ ಎನ್ನುವುದಕ್ಕಿಂತ ದಿನಕ್ಕೆ ಒಂದು ಸಲಕ್ಕಿಂತ ಹೆಚ್ಚು ಕೂಗುವುದಿಲ್ಲ ಎನ್ನುವುದು ಲೇಸು.)*ಹೊಸ ವರ್ಷದ ದಿನವೇ ಯೋಜನೆ ಮಾಡದೆ, ಕನಿಷ್ಟ ಒಂದು ವಾರ ಮುನ್ನವೇ ಇದರ ಬಗ್ಗೆ ಯೋಚಿಸಿ ತಕ್ಕ ಸಿದ್ಧತೆ ಮಾಡಿಕೊಳ್ಳುವುದು. (‘ನ್ಯೂ ಇಯರ್ ಪಾರ್ಟಿ’  ಸಿದ್ಧತೆಯ ಜೊತೆಗೆ!)* ಯೋಜನೆಯನ್ನು ಹಂತ ಹಂತವಾಗಿ ಗುರುತಿಸಿಕೊಳ್ಳುವುದು. ಉದಾಹರಣೆಗೆ ವ್ಯಾಯಾಮವನ್ನು ಈ ಹಿಂದೆ ಯಾವ ಕಾರಣಕ್ಕಾಗಿ ಮಾಡಲಾಗಿಲ್ಲ ಎಂದು ಗುರುತಿಸಿ ಈ ಬಾರಿ ಆ ತೊಂದರೆ ಯುಂಟಾಗದಂತೆ ಯೋಚಿಸುವುದು.*ನಿಮ್ಮ ನಿರ್ಣಯವನ್ನು ಗುಟ್ಟಾಗಿಡದೆ ಎಲ್ಲರ ಬಳಿ ಹಂಚಿಕೊಳ್ಳುವುದು. ನೀವು ಮಾಡದಿದ್ದಾಗ ನಿಮಗೆ ಅದನ್ನು ನೆನಪಿಸಿ, ನೀವು ಮಾಡುವಂತೆ ಪ್ರೋಇದು ಸಹಾಯಕ. ಹಾಗೆಯೇ ಇತರರು ನಿಮ್ಮಿಂದ ಸ್ಪೂರ್ತಿ ಪಡೆಯಲೂ ಇದು ಕಾರಣವಾಗಬಹುದು.*ನೀವು ತಿಂಗಳುಗಳ ಕಾಲ ಸರಿಯಾಗಿ ನಿರ್ಣಯವನ್ನು ಪಾಲಿಸಿದಾಗ ನಿಮಗೇ ನೀವು ಬಹುಮಾನ ಕೊಟ್ಟುಕೊಳ್ಳುವುದು.*ಪ್ರಗತಿಯ ಚಿಕ್ಕ ಚಿಕ್ಕ ಗುರುತುಗಳ ಪ್ರಮುಖ ಹಂತಗಳು. 5 ಕೆ.ಜಿ. ತೂಕ ಕಳೆದುಕೊಳ್ಳುವ ನಿರ್ಣಯಕ್ಕೆ  ಬದಲು ಅರ್ಧ ಕೆ.ಜಿ. ಕಳೆದುಕೊಂಡು ಮುನ್ನಡೆಯುವ ಹಂತ ಸಹಾಯಕ.* ಅತಿ ಪರಿಪೂರ್ಣತೆ ತೊಂದರೆಯನ್ನುಂಟು ಮಾಡಬಹುದು.  ಪ್ರತಿ ದಿನವೂ ಹೊಸ ದಿನ, ಆ ದಿನದ ನನ್ನ ಕರ್ತವ್ಯ-ನಿರ್ಣಯಗಳನ್ನು ಸಾಧ್ಯವಿದ್ದಷ್ಟು ಅಚ್ಚುಕಟ್ಟಾಗಿ ಮಾಡುತ್ತೇನೆ ಎಂದುಕೊಂಡು ಮಾಡುವುದು ಸೂಕ್ತ.* ಯಾವುದೇ ಚಟುವಟಿಕೆ ಸತತ ಮಾಡುವುದು  ಉದಾ: ವ್ಯಾಯಾಮ ಅಭ್ಯಾಸವಾಗಿ ಬದಲಾಗಲು ಕನಿಷ್ಟ 21 ದಿನಗಳು ಬೇಕು. ಅದು ನಿಮ್ಮ ವ್ಯಕ್ತಿತ್ವದ ಒಂದು ಭಾಗವಾಗಲು 6 ತಿಂಗಳುಗಳು ಸಾಕು. ಅಂದರೆ ಈ ಕಾಲದ ನಂತರ ನೀವು ಪ್ರಯತ್ನಪೂರ್ವಕವಾಗಿ ಅದೊಂದು ಕೆಲಸವಾಗಿ ಮಾಡಲ್ಪಡುವ ಮನೋಭಾವ ಹೋಗಿ, ಅದು ನಿಮ್ಮ ದೈನಂದಿನ ಜೀವನದ ಭಾಗವಾಗಿಬಿಡುತ್ತದೆ (ನಾವು ದಿನನಿತ್ಯ ಸ್ನಾನ ಮಾಡುವ ಹಾಗೆ).* ಹಾಗೊಮ್ಮೆ ಜಗತ್ತಿನ ಹೆಚ್ಚಿನ ಜನರಂತೆ ಫೆಬ್ರುವರಿ ತಿಂಗಳಿನ ಹತ್ತಿರ ನಿಮ್ಮ ನಿರ್ಣಯ ಕರಗಿ ಮಾಯವಾಗಿ ಬಿಟ್ಟಿದ್ದರೆ, ಹೆದರದೆ, ಉತ್ಸಾಹ ಕುಂದದೇ, ಮತ್ತೊಂದು ಹೊಸ ವರ್ಷಕ್ಕಾಗಿ ಕಾಯದೆ, ಮತ್ತೊಂದು ದಿನದಂದು ಮತ್ತೆ ನಿರ್ಣಯ ಕೈಗೊಂಡು ಪ್ರಯತ್ನ ಆರಂಭಿಸಿ.ಆರೋಗ್ಯಕ್ಕಾಗಿ ಹೊಸ ವರ್ಷದ ಮೊದಲ ದಿನದಂದು ನಾವು-ನೀವು ಕೈಗೊಂಡು ಪಾಲಿಸಿ ಕಾಯ್ದುಕೊಳ್ಳಬಹುದಾದ ನಿರ್ಣಯಗಳ ಉದಾಹರಣೆಗಳು ಈ ಕೆಳಗಿನಂತಿವೆ:*ಹೊಸ ವರ್ಷದ ಮುನ್ನಾ ದಿನದ ಆರೋಗ್ಯಕರ ಆಚರಣೆ. ಮದ್ಯಪಾನದಿಂದ ದೂರವಿದ್ದು, ಅತಿಯಾದ ರಭಸ-ವೇಗದ ವಾಹನ ಚಾಲನೆ ಮಾಡದೆ, ಮನರಂಜನಾ ರೀತಿಯಲ್ಲಿ ಸ್ನೇಹಿತರೊಡಗೂಡಿ ಆಚರಣೆ.* ವ್ಯಾಯಾಮ, ಪ್ರತಿದಿನ ನಡಿಗೆ, ನಿಯಮಿತ ವೇಳೆಯಲ್ಲಿ.* ಕೋಪವನ್ನು ಆದಷ್ಟು ಕಡಿಮೆ ಮಾಡುವುದು, ಕೋಪವನ್ನು ಸರಿಯಾದ ರೀತಿಯಲ್ಲಿ ವ್ಯಕ್ತಪಡಿಸುತ್ತೇನೆ ಎಂಬ ಪ್ರತಿಜ್ಞೆ.* ಮಕ್ಕಳಿಗೆ ಹೊಡೆಯುವುದಿಲ್ಲ ಎಂಬ ನಿರ್ಣಯ.*ಬೇರೆಯವರ ಮೇಲೆ ಪತಿ/ಪತ್ನಿ ಕೈ ಎತ್ತುವುದಿಲ್ಲ ಎಂಬ ನಿರ್ಧಾರ.* ಮದ್ಯ ವ್ಯಸನ-ಧೂಮಪಾನಗಳನ್ನು ತ್ಯಜಿಸುತ್ತೇನೆ ಎಂಬ ನಿರ್ಣಯ. ಜೊತೆಗೆ ಹೊಸ ವರ್ಷದ ಮುನ್ನಾದಿನವೇ ಅವುಗಳಿಂದ ದೂರವಿರುವುದು.* ಬೇರೆಯವರಿಗೆ ನೋವಾಗುವಂತೆ ಚುಚ್ಚುಮಾತು-ವ್ಯಂಗ್ಯೋಕ್ತಿಗಳನ್ನು ನುಡಿಯುವುದಿಲ್ಲ ಎಂಬ ನಿರ್ಣಯ.* ಬೇರೆಯವರು ಚುಚ್ಚುಮಾತು ಮಾತನಾಡಿದಾಗ ಅದರ ಬಗ್ಗೆಯೇ ದಿನಗಟ್ಟಲೆ ಚಿಂತಿಸುವುದನ್ನು ಬಿಟ್ಟು, ಮನಸ್ಸನ್ನು ನಿಯಂತ್ರಿಸಿ ಬೇಗ ಸಹಜಸ್ಥಿತಿಗೆ ಮರಳುತ್ತೇನೆ ಎಂಬ ನಿರ್ಣಯ.* ಸರಿಯಾದ ಸಮಯಕ್ಕೆ ಆಹಾರ ಸೇವನೆ ಮಾಡುತ್ತೇನೆ ಎಂಬ ಪ್ರತಿಜ್ಞೆ (9 ಗಂಟೆಯ ಒಳಗೆ ಬೆಳಗ್ಗಿನ ತಿಂಡಿ, ಮಧ್ಯಾಹ್ನ 2ರ ಒಳಗೆ ಊಟ, ರಾತ್ರಿ 9 ಗಂಟೆಯ ಒಳಗೆ ರಾತ್ರಿಯ ಊಟ).*ಆರೋಗ್ಯದ ಸಮಸ್ಯೆಗಳಿದ್ದಾಗ ಮುಂದೂಡದೇ ಅಥವಾ ತಾನೇ ಔಷಧಿಗಳನ್ನು ತೆಗೆದುಕೊಂಡು ತಾತ್ಕಾಲಿಕ ಶಮನ ಮಾಡಿಕೊಳ್ಳದೇ ಧೈರ್ಯವಾಗಿ ಸೂಕ್ತ ವೈದ್ಯರನ್ನು ಕಾಣುತ್ತೇನೆ ಎಂಬ ನಿರ್ಧಾರ.*ಕುಟುಂಬದವರೊಡನೆ ಕನಿಷ್ಠ ಅರ್ಧ ಗಂಟೆ ಪ್ರತಿದಿನ ಕಳೆಯುತ್ತೇನೆ ಎಂಬ ಪ್ರತಿಜ್ಞೆ.ಈ ಮೇಲಿನ ನಿರ್ಣಯಗಳನ್ನು ಕನಿಷ್ಠ ಒಂದನ್ನು, ಅಥವಾ ಈಗಾಗಲೇ ಇವುಗಳನ್ನು ಪಾಲಿಸುತ್ತಿದ್ದಲ್ಲಿ ಮಾನಸಿಕ-ದೈಹಿಕ- ಸಾಮಾಜಿಕ ಆರೋಗ್ಯಕ್ಕೆ ಸಂಬಂಧಪಟ್ಟ ಯಾವುದಾದರೊಂದನ್ನು ನಿಮ್ಮದಾಗಿಸಿಕೊಳ್ಳಿ.ನಿಮ್ಮ ಹೊಸ ವರುಷದ ನಿರ್ಣಯ ಸಫಲವಾಗಲಿ

ಹೊಸ ವರುಷ ಆರೋಗ್ಯದಾಯಕವಾಗಿರಲಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.