ಶುಕ್ರವಾರ, ಮೇ 20, 2022
19 °C

ಹೋರಾಟ, ಹಾರಾಟಕ್ಕೆ ಜನಪ್ರತಿನಿಧಿಗಳ ಬೇಸರ.ಜಿಲ್ಲೆಗೆ ಬಜೆಟ್ ಕೊಡುಗೆ ನಿರಾಶಾದಾಯಕ.

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಜಿಲ್ಲೆಗೆ ಮಹತ್ವದ ಯೋಜನೆಗಳಾಗಲೀ ಅನುದಾನ ವಾಗಲಿ ಬಿಡುಗಡೆಯಾಗಲೇ ಇಲ್ಲ!.ಹೀಗೆಂದು ಜಿಲ್ಲೆಯ ಜನತೆ ಬೇಸರ ವ್ಯಕ್ತಪಡಿಸಿದ್ದಾರೆ. ಜನಪ್ರತಿನಿಧಿಗಳು ಮೌನಕ್ಕೆ ಶರಣಾಗಿದ್ದಾರೆ.ಜಗಳೂರು ತಾಲ್ಲೂಕಿನಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ-13ನ್ನು ಎನ್‌ಎಚ್-19ಗೆ ಒಳಪಡಿಸಿ ಅಭಿವೃದ್ಧಿ, ಹರಿಹರ ಭೈರನಪಾದ ಏತ ನೀರಾವರಿ ಯೋಜನೆಗೆ ಅಸ್ತು, ಬೀರೂರು-ದಾವಣಗೆರೆ ರೈಲುಮಾರ್ಗ ` 150 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಬಿಟ್ಟರೆ ಹೇಳಿಕೊಳ್ಳುವಂಥ ಯೋಜನೆಗಳು ಜಾರಿಗೆ ಬಂದಿಲ್ಲ. ಮೆಕ್ಕೆಜೋಳ ಸಂಸ್ಕರಣಾ ಘಟಕ, ಮೂಲ ಸೌಕರ್ಯ ಅಭಿವೃದ್ಧಿ, ಜವಳಿ ಪಾರ್ಕ್, ಸೂಳೆಕೆರೆಗೆ ತುಂಗಭದ್ರಾ ನೀರು ಪೂರೈಕೆ, ಕಾಲುವೆಗಳ ಅಕ್ರಮ ಪಂಪ್‌ಸೆಟ್ ತೆರವು ಇತ್ಯಾದಿ ಸಂಬಂಧಪಟ್ಟಂತೆ ಪ್ರಸಕ್ತ ಬಜೆಟ್‌ನಲ್ಲಿ ಸರ್ಕಾರ ಚಕಾರ ಎತ್ತಿಲ್ಲ ಎಂದು ಜಿಲ್ಲೆಯ ವಿವಿಧ ಸಂಘಟನೆಗಳ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಕೃಷ್ಣಾ ಮೇಲ್ದಂಡೆ ‘ಬಿ’ ಸ್ಕೀಂ ಅಡಿ 177 ಟಿಎಂಸಿ ನೀರು ನಾವು ಬಳಸಬಹುದು. ಅದರಂತೆ ತುಂಗಭದ್ರಾ ನದಿ ನೀರನ್ನು ಸೂಳೆಕೆರೆಗೆ ಪೂರೈಸುವ ಮಹತ್ವಾಕಾಂಕ್ಷಿ ಯೋಜನೆ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪವಿಲ್ಲ. ಕಬ್ಬು ಬೆಲೆ ನಿರ್ಧರಿಸುವ, ರೈತರ ಹಿತಾಸಕ್ತಿಗೆ ಸಂಬಂಧಪಟ್ಟಂತೆ ರಾಜ್ಯ ಸಲಹಾ ಸಮಿತಿ ಕಾಯ್ದೆ ಜಾರಿಗೊಳಿಸಲು ಮನಸ್ಸು ಮಾಡಿಲ್ಲ.

 

ಮೆಕ್ಕೆಜೋಳ ಸಂಸ್ಕರಣಾ ಘಟಕ ಕೇವಲ ಮುಖ್ಯಮಂತ್ರಿಯವರ ಜಿಲ್ಲೆ ಎಂಬ ಕಾರಣಕ್ಕೆ ಶಿವಮೊಗ್ಗಕ್ಕೆ ಹೋಗಿದೆ. ಆದರೆ, ಬೆಳೆ ಹೆಚ್ಚು ಪ್ರಮಾಣದಲ್ಲಿ ಇರುವುದು ಇಲ್ಲಿಯೇ. ಒಟ್ಟಿನಲ್ಲಿ ಜಿಲ್ಲೆಯ ರೈತರ ಧ್ವನಿ ಸರ್ಕಾರಕ್ಕೆ ಕೇಳಲೇ ಇಲ್ಲ ಎಂದು  ಕಬ್ಬು ಬೆಳೆಗಾರರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ತೇಜಸ್ವಿ ಪಟೇಲ್ ಬೇಸರ ವ್ಯಕ್ತಪಡಿಸಿದರು.ಹೊಸ ಭರವಸೆ ಇಲ್ಲ

ಶಿಕ್ಷಣಕ್ಕೆ ಸಂಬಂಧಿಸಿದಂತೆ ದಾವಣಗೆರೆ ವಿವಿಗೆ ` 100 ಕೋಟಿ ಅನುದಾನ ಕೊಡಬೇಕಿತ್ತು. ಅದೂ ಇಲ್ಲ. ಹೀಗಾದರೆ ಹೊಸ ವಿವಿ ಅಭಿವೃದ್ಧಿ ಹೊಂದುವುದು ಹೇಗೆ? ಕೃಷಿ, ಮೂಲ ಸೌಕರ್ಯ ಅಭಿವೃದ್ಧಿ, ಹೊಸ ಕೈಗಾರಿಕೆಗಳ ಸ್ಥಾಪನೆಗೆ ಸಂಬಂಧಿಸಿದ ಯಾವುದೇ ಹೊಸ ಭರವಸೆ ಈ ಬಜೆಟ್‌ನಲ್ಲಿ ಇಲ್ಲ. ಜನಪ್ರತಿನಿಧಿಗಳೂ ಈ ಬಗ್ಗೆ ಒತ್ತಡ ತಂದಿಲ್ಲ ಎಂದು ಹುಬ್ಬಳಿ ನೈಋತ್ಯ ರೈಲ್ವೆ ಪ್ರಯಾಣಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಂ.ಎಸ್.ಕೆ. ಶಾಸ್ತ್ರಿ ವಿಷಾದಿಸಿದರು.ಹಸಿರು ಶಾಲು ಹಿಡಿದುಕೊಂಡು ‘ರಕ್ತವನ್ನಾದರೂ ಕೊಡುತ್ತೇವೆ ಭೂಮಿ ಕೊಡುವುದಿಲ್ಲ’ ಎಂದು ಮೊಂಡುವಾದ ಮಾಡುವ ಕೆಲವು ಹಿತಾಸಕ್ತಿಗಳೂ ಇದಕ್ಕೆ ಕಾರಣ ಎಂದು ಶಾಸ್ತ್ರಿ ದೂರಿದರು.ನಾವ್ಯಾಕೆ ಕೆಟ್ಟವರಾಗಬೇಕು?

ಯಾವುದೇ ಯೋಜನೆ ತರಲಿ. ಅದಕ್ಕೊಂದಿಷ್ಟು ಹೋರಾಟ, ಪ್ರತಿಭಟನೆ, ಗಲಾಟೆಗಳನ್ನು ಕಂಡು ನಾವೂ ರೋಸಿಹೋಗಿದ್ದೇವೆ. ದಿನಾಲೂ ಪ್ರತಿಕೃತಿ ದಹನ, ಪ್ರತಿಭಟನೆಗಳನ್ನು ಮಾಧ್ಯಮಗಳಲ್ಲಿ ನೋಡಿದ ನಮ್ಮ ಸಂಪುಟ ಸಹೋದ್ಯೋಗಿಗಳೂ ಜಿಲ್ಲೆಯ ಬಗ್ಗೆ ಬೇಸರ ಹೊಂದಿದ್ದಾರೆ. ಅದಕ್ಕಾಗಿ ನಾವೇ ಹೊಸ ಯೋಜನೆಗಳನ್ನು ಬೇಡ ಎನ್ನುತ್ತೇವೆ. ಮೆಕ್ಕೆಜೋಳ ಸಂಸ್ಕರಣಾ ಘಟಕ ಶಿವಮೊಗ್ಗಕ್ಕೆ ಹೋಗಲಿ. ಯಾರಾದರೂ ಸಜ್ಜನರು ಇರುವ ಕಡೆ ಹೊಸ ಪ್ರಯತ್ನಗಳು ನಡೆಯಲಿ. ಇಲ್ಲಿ ಪ್ರತಿಯೊಂದಕ್ಕೂ ವಿರೋಧ ಕಟ್ಟಿಕೊಂಡು ನಾವು ಯಾಕೆ ಕೆಟ್ಟವರಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ರವೀಂದ್ರನಾಥ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.ಕೃಷಿಪೂರಕ ಉದ್ದಿಮೆಗಳು ಬರಲು ನಾವು ಅಡ್ಡಿಪಡಿಸಿಲ್ಲ. ಜವಳಿ ಪಾರ್ಕ್ ಮಾಡಲು ಜಮೀನು ಸ್ವಾಧೀನಪಡಿಸಿಕೊಂಡರು. ಇನ್ನೂ ಆರಂಭ ಮಾಡಿದ್ದಾರೆಯೇ? ರಸ್ತೆ, ಮೂಲ ಸೌಕರ್ಯ ಅಭಿವೃದ್ಧಿಗೆ ರೈತರು ಅಡ್ಡಿಪಡಿಸಿದ್ದಾರೆಯೇ ಎಂದು ತೇಜಸ್ವಿ ಪಟೇಲ್ ಪ್ರಶ್ನಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.