ಮನೆಯೊಳಗೆ ಕಾಲಿಟ್ಟಂತೆ ಅರಿಶಿನದ ಘಮಲು, ಪಚ್ಚೆ ಕರ್ಪೂರದ ಗಂಧ. ಮನೆಯ ಮೇಲೆ ಕೆಂಪು, ಹಳದಿ, ಹಸಿರು, ನೀಲಿ, ಕೇಸರಿ ಬಣ್ಣಗಳ ಚಿತ್ತಾರ. ಪಕ್ಕದಲ್ಲೇ ಲೋಕಾಭಿರಾಮ ಮಾತನಾಡುತ್ತಾ ಬಣ್ಣವನ್ನು ಲಕೋಟೆಯೊಳಗೆ ತುಂಬಿಸುತ್ತಿರುವ ಮಹಿಳೆಯರು. ಅಡಿಕೆ ತೋಟ, ಸೊಪ್ಪಿನ ಬೆಟ್ಟಗಳಿಂದ ಆವೃತವಾಗಿರುವ ಶಿರಸಿಯ ಸೋಂದಾ ಸಮೀಪದ ನಂದಿಹೊಂಡ ಮನೆಯಲ್ಲಿ ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ ಮುಗಿದ ಕೂಡಲೇ ಬಣ್ಣದ ಹಬ್ಬದ ತಯಾರಿ ಶುರು.

ಅಚ್ಚಹಸುರಿನ ಸಸ್ಯರಾಶಿ ವಿವಿಧ ಬಣ್ಣಗಳ ಚಿಗುರು, ಹೂಗಳನ್ನು ಅರಳಿಸುವ ವಸಂತಕಾಲದಲ್ಲಿ ಪ್ರಕೃತಿ ಜೀವಕ್ರಿಯೆಯ ಪ್ರಮುಖ ಘಟ್ಟವನ್ನು ಪ್ರವೇಶಿಸುತ್ತದೆ. ಗುಲಾಬಿ, ಕೆಂಪು, ಕಡುಗೆಂಪು ಬಣ್ಣದ ಚಿಗುರು; ಹಳದಿ, ನೀಲಿ, ಬಿಳಿ, ಕೆಂಪು ಹೂಗಳ ಪರಿಮಳ ಎಲ್ಲೆಲ್ಲೂ ಆವರಿಸುತ್ತದೆ. ಪ್ರಕೃತಿಯೊಡಲು ವರ್ಣಮಯವಾಗುತ್ತಿರುವುದನ್ನು ಬಣ್ಣದ ಚಿತ್ತಾರದ ಮೂಲಕ ಸಂಕೇತಿಸುವ `ಹೋಳಿ ಹಬ್ಬ~ ನಮ್ಮೆದುರಿದೆ. ಧಾರ್ಮಿಕ ಆಚರಣೆಗಳಿಗಿಂತ ಸಾಮಾಜಿಕ ಸಹಚರ್ಯಕ್ಕೆ ಒತ್ತುಕೊಡುವ, ಮನಸ್ಸುಗಳನ್ನು ಹತ್ತಿರವಾಗಿಸುವ ಹೋಳಿ ಬಣ್ಣದ ಹಬ್ಬ. ಉತ್ತರ ಭಾರತದ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿರುವ ಈ ಹಬ್ಬ ಕಳೆದೊಂದು ದಶಕದಿಂದ ಕರ್ನಾಟಕದಲ್ಲೂ ಜನಪ್ರಿಯವಾಗಿದೆ.

ಹೋಳಿ ಹುಣ್ಣಿಮೆ ಬಂತೆಂದರೆ ದೊಡ್ಡವರು ಮಾರುಕಟ್ಟೆಯಲ್ಲಿ ಪೇರಿಸಿಟ್ಟ ಕಡು ಬಣ್ಣಗಳನ್ನು ಚೀಲಕ್ಕೆ ತುಂಬಿಸಿಕೊಳ್ಳುತ್ತಾರೆ. ಮಕ್ಕಳು ಬಣ್ಣದ ನೀರು ಸಿಂಪಡಿಸಲು ಪಿಚಕಾರಿ, ಊದಲು ತುತ್ತೂರಿಗಳ ಆಯ್ಕೆಯಲ್ಲಿ ಮಗ್ನ. ಹಬ್ಬಕ್ಕೆ ಇನ್ನೂ ವಾರವಿರುವಾಗಲೇ ಆರಂಭವಾಗುವ ಈ ಚಟುವಟಿಕೆ ಹಿಂದಿನ ದಿನ ಗರಿಗೆದರುತ್ತದೆ. ವಿಪರ್ಯಾಸವೆಂದರೆ ಪರಿಸರವನ್ನು ಆರಾಧಿಸುವ ಈ ಹುಣ್ಣಿಮೆಯನ್ನೂ ರಾಸಾಯನಿಕ ಬಣ್ಣಗಳು ಆವರಿಸಿವೆ. ಹಬ್ಬದ ಆಶಯವನ್ನೇ ಮರೆಸುವ ಈ ಗಾಢವರ್ಣಗಳು ಆರೋಗ್ಯಕ್ಕೂ ಹಾನಿಯನ್ನುಂಟು ಮಾಡುತ್ತವೆ. ಈ ಹಿನ್ನೆಲೆಯಲ್ಲಿ ಕಳೆದ ಕೆಲವು ವರ್ಷಗಳಿಂದ `ಸುರಕ್ಷಿತ ಹಾಗೂ ಆರೋಗ್ಯಪೂರ್ಣ ಹೋಳಿ~ ಎಂಬ ಚಳವಳಿ ದೇಶದಾದ್ಯಂತ ರೂಪುಗೊಳ್ಳುತ್ತಿದೆ. ಪುಣೆಯ `ಕಲ್ಪವೃಕ್ಷ~ ಸಮಾಜ ಸೇವಾ ಸಂಸ್ಥೆ ಮಹಾರಾಷ್ಟ್ರದಲ್ಲಿ ಪರಿಸರಸ್ನೇಹಿ ಹೋಳಿ ಹಬ್ಬದ ಪರಿಕಲ್ಪನೆಗೆ ಚಾಲನೆ ನೀಡಿತು. ಅದಕ್ಕಾಗಿ `ಇಕೋಎಕ್ಸಿಸ್ಟ್~ ಎಂಬ ನೈಸರ್ಗಿಕ ಬಣ್ಣಗಳ ಮಾರಾಟ ಜಾಲವೂ ಪ್ರಾರಂಭವಾಯಿತು. ನಂದಿಹೊಂಡದ ಮನೋರಮಾ ಜೋಶಿ ಪರಿಸರವನ್ನು ಬೆಳಗಿಸುವ ಈ ಕಾರ್ಯದಲ್ಲಿ ಕೈಜೋಡಿಸಿದ್ದು 2003ರಲ್ಲಿ. ಅಭಿವೃದ್ಧಿ ಕಾರ್ಯಕರ್ತೆ ಸುನೀತಾ ರಾವ್ ಅವರ ಒತ್ತಾಸೆಯಿಂದ ಮನೋರಮಾ ಬಣ್ಣಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡರು. `ಕಲ್ಪವೃಕ್ಷ~ ಸಂಸ್ಥೆಯ ಒಡನಾಟವಿರುವ ಸುನೀತಾ ಶಿರಸಿಯಲ್ಲಿ `ವನಸ್ತ್ರೀ~ ಎಂಬ ಸಂಘಟನೆಯನ್ನು ಹುಟ್ಟು ಹಾಕಿ ಕೈತೋಟಗಳ ಪುನರುಜ್ಜೀವನ, ಸ್ಥಳೀಯ ಆಹಾರವೈವಿಧ್ಯ ರಕ್ಷಣೆ, ನಾಟಿ ಬೀಜ ಸಂರಕ್ಷಣೆ, ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಇತ್ಯಾದಿ ಚಟುವಟಿಕೆಗಳ ಮೂಲಕ ಮಹಿಳೆಯರ ಸಬಲೀಕರಣಕ್ಕಾಗಿ ಪ್ರಯತ್ನಿಸುತ್ತಿದ್ದಾರೆ.

ಆರಂಭದಿಂದಲೂ `ವನಸ್ತ್ರೀ~ಯ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿದ್ದ ಮನೋರಮಾಗೆ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಯಲ್ಲಿ ಹೆಚ್ಚಿನ ಆಸಕ್ತಿ. ಇವರು ತಯಾರಿಸುವ ಒಣ ಬಾಳೆಹಣ್ಣು `ಸುಕೇಳಿ~ ಶಿರಸಿಯಲ್ಲಿ ಜನಪ್ರಿಯ. ಜಾಕೊಲೇಟ್ (ಹಲಸಿನ ಚಾಕೊಲೇಟ್), ಶುಂಠಿ ಮಿಠಾಯಿ, ಒಣಗಿಸಿದ ಹಲಸಿನ ಹಣ್ಣು, ಮುರುಗಲ ಹಣ್ಣು ಮುಂತಾದವು ಇವರ ಪ್ರಯೋಗಶೀಲತೆಗೆ ಕನ್ನಡಿ ಹಿಡಿಯುತ್ತವೆ.

ಮನೋರಮಾಗೆ ನೈಸರ್ಗಿಕ ಬಣ್ಣಗಳ ಮಹತ್ವ ತಿಳಿದಿತ್ತು. ಹಾಗೆಯೇ ಅದನ್ನು ತಯಾರಿಸುವ ಕಷ್ಟದ ಅರಿವೂ ಇತ್ತು. ಸಿದ್ಧ ಮಾದರಿಗಳೂ ಇರಲಿಲ್ಲ. ಇವರ ಬಣ್ಣದ ತಯಾರಿಗೆ ಸುತ್ತಲ ಸೊಪ್ಪಿನ ಬೆಟ್ಟವೇ ಸ್ಫೂರ್ತಿ, ಅಡುಗೆ ಮನೆಯೇ ಪ್ರಯೋಗಶಾಲೆ. ಕಾಡಿನ ಸೊಪ್ಪುಗಳು, ತರಕಾರಿಗಳು, ಅಡಿಕೆ ತೋಟದ ಎಡೆಬೆಳೆ ಅರಿಶಿನ ಇತ್ಯಾದಿಗಳನ್ನಿಟ್ಟುಕೊಂಡು ಪ್ರಯೋಗ ಶುರುವಾಯಿತು. ಆರಂಭದ ಒಂದು ವರ್ಷ ಬೆಟ್ಟದ ಚಿಗುರು, ಹೂ, ಎಲೆಗಳನ್ನು `ಬಣ್ಣದ ಪರೀಕ್ಷೆ~ಗೆ ಒಡ್ಡಿದರು. ಹಿತ್ತಲ ತರಕಾರಿಗಳು, ಮುರುಗಲದಂತಹ ಹಣ್ಣುಗಳು ಸರತಿಯಲ್ಲಿದ್ದವು. ಈ ಪ್ರಯೋಗದೊಂದಿಗೆ ಸಾಮಾನ್ಯ ಜ್ಞಾನ ಹಾಗೂ ಪಾರಂಪರಿಕ ತಿಳಿವನ್ನು ಬೆರೆಸಿ ಸೂಕ್ತವೆನಿಸುವ ಕೆಲವು ಎಲೆಗಳನ್ನು ಆಯ್ದುಕೊಂಡರು. ದಾಲ್ಚಿನ್ನಿ, ದಾಸವಾಳ, ತುಳಸಿ, ಲಕ್ಕಿ, ಪಾಲಕ್ ಮುಂತಾದ ಸೊಪ್ಪುಗಳು ಬಣ್ಣ, ಕೀಟನಾಶಕ, ಪರಿಮಳ ಹೀಗೆ ವಿವಿಧ ಗುಣಗಳಿಂದಾಗಿ ಬಳಕೆಯಾಗುತ್ತಿವೆ. ಹೆಚ್ಚಿನ ಬಣ್ಣಗಳ ತಯಾರಿಗೆ ಅವರ ತೋಟದಲ್ಲೇ ಬೆಳೆಯುವ ಅರಿಶಿನ ಪ್ರಮುಖ ಒಳಸುರಿ. ಮೊದಲು ಸಂಸ್ಕರಿತ ಮಣ್ಣನ್ನು ಮೂಲವಸ್ತುವಾಗಿ ಬಳಸಲು ಪ್ರಯತ್ನಿಸಿ ವಿಫಲರಾದರು. ಈಗ ಯಾವುದೇ ಬಣ್ಣವನ್ನು ಪ್ರತಿಫಲಿಸುವ ಅಕ್ಕಿಹುಡಿಯನ್ನು ಬಳಸುತ್ತಿದ್ದಾರೆ.

ಪಚ್ಚೆಕರ್ಪೂರ ಮೊದಲಾದ ಸುಗಂಧ ದ್ರವ್ಯಗಳು ಈ ಸಾವಯವ ಬಣ್ಣಗಳ ಸಂರಕ್ಷಣೆ ಮಾಡುವುದರೊಂದಿಗೆ, ಸುವಾಸನೆಯನ್ನೂ ಹರಡುತ್ತವೆ. ಪ್ರತಿ ವರ್ಷ ಉತ್ಪನ್ನದ ಗುಣಮಟ್ಟ ಹೆಚ್ಚಿಸುವಲ್ಲಿ ಶ್ರಮಿಸುವ ಮನೋರಮಾ ಎಂಟು ವರ್ಷದ ಬಳಿಕ ಈಗ ಈ ಬಗ್ಗೆ ತೃಪ್ತಿ ಇದೆ ಎನ್ನುತ್ತಾರೆ.

ಪ್ರಾರಂಭದಲ್ಲಿ 60 ಕೇಜಿ ಬಣ್ಣಕ್ಕೆ ಬೇಡಿಕೆ ಇತ್ತು. ಈ ವರ್ಷ ಐದು ಟನ್ ಬಣ್ಣ ತಯಾರಿಸಿದ್ದಾರೆ. ಈ ಚಟುವಟಿಕೆ ಸುಮಾರು 15 ಮಂದಿಗೆ ನಾಲ್ಕು ತಿಂಗಳು ಉದ್ಯೋಗವನ್ನೂ ನೀಡುತ್ತದೆ. ಕೆಲವು ಗೃಹಿಣಿಯರಿಗೆ ಇದು ಆದಾಯ ತರುವ ಚಟುವಟಿಕೆ. ಮಹಿಳಾ ಕೃಷಿ ಕಾರ್ಮಿಕರಿಗೆ ಇದು ಮನಸ್ಸಿಗೆ ಮುದ ನೀಡುವ ಕೆಲಸ. ಉರಿಬಿಸಿಲಿನಲ್ಲಿ ಮನೆಯ ಹೊರಗೆ ದುಡಿಯುವುದಕ್ಕಿಂತಲೂ, ಮನೆಯ ಆವರಣದಲ್ಲಿ ಗುಂಪಿನಲ್ಲಿ ಸೌಹಾರ್ದದಿಂದ ಕೆಲಸ ಮಾಡುವುದು ಅವರಿಗೆ ಖುಷಿ ನೀಡುತ್ತದೆ. ಅನಿವಾರ್ಯತೆಯಿರುವ ಒಂದಿಬ್ಬರು ಕೃಷಿ ಕೆಲಸ ಮುಗಿಸಿ ಸಾಯಂಕಾಲ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಾರೆ. ಇಲ್ಲಿ ನೀಡುವ ಸಂಬಳವೂ ಕೃಷಿ ಕೆಲಸಗಳಿಗೆ ಹೋಲಿಸಿದರೆ ಹೆಚ್ಚು. ಮನೋರಮಾ ಅವರಿಗೂ ಈ ಕೆಲಸ ಆರ್ಥಿಕವಾಗಿ ಸುಸ್ಥಿರವೆನಿಸಿದೆ.

ಅರಿಶಿನ ಬೇಯಿಸುವುದು, ಬಣ್ಣ ಒಣಗಿಸುವುದು ಮುಂತಾದ ಕೆಲಸಗಳನ್ನು ಮನೋರಮಾ ಹಾಗೂ ಅವರ ಪತಿ ಸೂರ್ಯನಾರಾಯಣ ಜೋಶಿ ತಾವೇ ಮಾಡುತ್ತಾರೆ. ಅರಿಶಿನ ಕತ್ತರಿಸುವುದು, ಬಣ್ಣವನ್ನು ಜಾಳಿಸುವುದು, ಪ್ಯಾಕ್ ಮಾಡುವುದು ಇವೆಲ್ಲ ಗುಂಪಿನಲ್ಲಿ ನಡೆಯುತ್ತವೆ. ಸ್ಥಳೀಯವಾಗಿ ಸಿಗದ ಕೆಲವೇ ಸಾಮಗ್ರಿಗಳನ್ನು ಅವರು ಕೊಳ್ಳುತ್ತಾರೆ.

ಎರಡು ಹಂತದಲ್ಲಿ ಬಣ್ಣವನ್ನು ಹುಡಿ ಮಾಡಬೇಕಿರುವುದರಿಂದ ಊರಿನಲ್ಲಿರುವ ಹಿಟ್ಟಿನ ಗಿರಣಿಗೆ ಇವರೇ ಪ್ರಮುಖ ಗಿರಾಕಿ. `ಈ ವರ್ಷ ದೊಡ್ಡ ಯಂತ್ರ ಕೊಳ್ಳುವ ಮೊದಲು ನಮ್ಮನ್ನು ಸಂಪರ್ಕಿಸಿಯೂ ಇದ್ದರು~ ಎನ್ನುತ್ತಾರೆ ಸೂರ್ಯನಾರಾಯಣ ಜೋಶಿ.

ಶಿರಸಿಯಲ್ಲಿ ಎರಡು ವರ್ಷಕ್ಕೊಮ್ಮೆ ಹೋಳಿಯನ್ನು ಸಂಭ್ರಮದಿಂದ ಆಚರಿಸುತ್ತಾರಾದರೂ, ಮನೋರಮಾ ಯಾವತ್ತೂ ಅದರಲ್ಲಿ ಪಾಲ್ಗೊಂಡಿಲ್ಲ. ರಾಸಾಯನಿಕ ಬಣ್ಣಗಳು ಹೋಳಿಯ ಔಚಿತ್ಯವನ್ನೇ ಮರೆಮಾಡುತ್ತವೆ ಎಂಬುದು ಅವರ ನಂಬಿಕೆ. `ಪ್ರತಿ ಹಬ್ಬವೂ ಪ್ರಕೃತಿಯೊಡನೆ ಮಿಳಿತವಾಗಿದೆ. ಇಳೆಗೆ ಮಳೆಯನ್ನು ಸ್ವಾಗತಿಸುವ ಈ ಹಬ್ಬವಂತೂ ಬಹು ವಿಶೇಷವಾದುದು~ ಎನ್ನುತ್ತಾರೆ ಮನೋರಮಾ.

`ಇಕೋಎಕ್ಸಿಸ್ಟ್~ ಅವರ ಕಾಯಂ ಕೊಳ್ಳುಗರು. ಉಳಿದಂತೆ ಸ್ಥಳೀಯವಾಗಿಯೂ ಈ ಬಣ್ಣಗಳಿಗೆ ಬೇಡಿಕೆಯಿದೆ. ರಾಸಾಯನಿಕ ಬಣ್ಣಗಳಿಂದಾಗುವ ಹಾನಿಯನ್ನು ಮನಗಂಡ ಅನೇಕರು ಇದೀಗ ಮನೋರಮಾ ಅವರನ್ನು ಸಂಪರ್ಕಿಸಿದ್ದಾರೆ. ಧಾರವಾಡ, ಬೆಂಗಳೂರು ಸೇರಿದಂತೆ ರಾಜ್ಯದ ಕೆಲ ನಗರಗಳಲ್ಲಿ ಇವರ ಉತ್ಪನ್ನಗಳು ನಿರ್ದಿಷ್ಟ ಅಂಗಡಿಗಳಲ್ಲಿ ದೊರೆಯುತ್ತವೆ. ಮನೋರಮಾ ಅವರಿಂದ ಬಣ್ಣಗಳನ್ನು ಕೊಳ್ಳುವ ಧಾರವಾಡದ ಬಾಲಬಳಗ ಶಾಲೆ ಕಳೆದ ನಾಲ್ಕು ವರ್ಷಗಳಿಂದ ಹೋಳಿಯನ್ನು ಆರೋಗ್ಯಕರವಾಗಿ ಆಚರಿಸುತ್ತಿದೆ. ಹುಬ್ಬಳ್ಳಿಯ ಕೆಲ ವಿದ್ಯಾಸಂಸ್ಥೆಗಳೂ ಕಳೆದ ವರ್ಷ ನೈಸರ್ಗಿಕ ಬಣ್ಣ ಬಳಸುವ ಮೂಲಕ ಪರಿಸರದೊಂದಿಗೆ ಗೆಳೆತನ ಸಾಧಿಸಿದ್ದಾರೆ.

ರಾಸಾಯನಿಕ ಬಣ್ಣಗಳು ನೈಸರ್ಗಿಕ ಬಣ್ಣಗಳಿಗಿಂತ ಗಾಢವರ್ಣ ಹೊಂದಿರುತ್ತದೆ. ಕಾರ್ಖಾನೆಯಲ್ಲಿ ಉತ್ಪಾದನೆಯಾಗುವುದರಿಂದ ಬೆಲೆಯೂ ಕಡಿಮೆ. ಸೀಸದಂತಹ ಅಪಾಯಕಾರಿ ಲೋಹವನ್ನು ಹೊಂದಿರುವ ಬ್ಯಾಟರಿಯ ತ್ಯಾಜ್ಯವನ್ನು ಬಣ್ಣವಾಗಿ ಬಳಸುವುದೂ ಸಾಮಾನ್ಯ. ಈ ಬಣ್ಣಗಳನ್ನು ಒಮ್ಮೆ ಹಚ್ಚಿಸಿಕೊಂಡರೆ ಆ ಬಟ್ಟೆಯನ್ನು ಮತ್ತೆ ಬಳಸಲು ಸಾಧ್ಯವಿಲ್ಲ. ಅಷ್ಟಕ್ಕೂ ಸುವಾಸಿತ ದಾಲ್ಚಿನ್ನಿ ಹಾಗೂ ಮಾರಕ ಸೀಸಕ್ಕೆ ಎತ್ತಣಿಂದೆತ್ತಲ ಹೋಲಿಕೆ? ವರ್ಷಕ್ಕೊಮ್ಮೆ ಬಳಸುವುದರಿಂದ ಏನೂ ತೊಂದರೆಯಿಲ್ಲ ಎನ್ನುವ ಭಾವನೆ ಸಹಜ. ಆದರೆ ವಾಸ್ತವ ಹಾಗಿಲ್ಲ. ಚರ್ಮಕ್ಕೆ ನೇರವಾಗಿ ಹಾನಿ ಮಾಡುವ ಇವು ಮಕ್ಕಳ ಮೇಲೆ ಬಹುಬೇಗ ಪರಿಣಾಮ ಬೀರಬಹುದು.

ದೇಹ ಹಾಗೂ ಮನಸ್ಸಿಗೆ ಹೊಸ ಉಲ್ಲಾಸ ತರುವ ಆಶಯದೊಂದಿಗೆ ಆಚರಿಸುವ ಈ ಹಬ್ಬದ ಮೂಲಕ ಪ್ರಕೃತಿಯೊಡನೆ ಹೊಸ ಬಾಂಧವ್ಯ ಬೆಸೆಯೋಣ.

ಮನೋರಮಾ ಅವರ ದೂರವಾಣಿ ಸಂಖ್ಯೆ: 9481049864

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.