ಭಾನುವಾರ, ಜನವರಿ 19, 2020
20 °C

‘ಅಡಿಕೆ ನಿಷೇಧ ಇಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಅಡಿಕೆ ನಿಷೇಧಿಸ­ಲಾಗು­ತ್ತದೆ ಎಂದು ಕೇಂದ್ರ ಎಲ್ಲಿಯೂ ಹೇಳಿಲ್ಲ. ಈ ಕುರಿತು ಕೇಂದ್ರ ಆರೋಗ್ಯ ಸಚಿವ ಗುಲಾಂ ನಬಿ ಆಜಾದ್‌ ಕೂಡ ಸ್ಪಷ್ಟಪಡಿಸಿ­ದ್ದಾರೆ’ ಎಂದು ಸಂಸದ ಜಯಪ್ರಕಾಶ ಹೆಗ್ಡೆ ಹೇಳಿದರು.ಮಲೆನಾಡು ಮಿತ್ರವೃಂದ ಬೆಂಗ­ಳೂರಿನಲ್ಲಿ ಭಾನು­ವಾರ ಆಯೋಜಿ­ಸಿದ್ದ ಸಂವಾದ ಕಾರ್ಯಕ್ರಮ­ದಲ್ಲಿ ಮಾತನಾಡಿದ ಅವರು, ‘ಅಡಿಕೆ­ಯನ್ನು ಆರೋಗ್ಯಕ್ಕೆ ಹಾನಿಕರವಾದ ವಸ್ತುಗಳ ಪಟ್ಟಿಯಲ್ಲಿ ಸೇರಿಸಲು ವೈಜ್ಞಾನಿಕ ಕಾರಣ ಇದೆಯೇ ಎಂಬು­ದನ್ನು ಪರೀಕ್ಷಿಸಲು ಸೂಚಿಸಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಕೇಂದ್ರ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಪ್ರಾಧಿ­ಕಾರಕ್ಕೆ (ಎಫ್‌ಎಸ್‌ಎಸ್‌ಎಐ) ಪತ್ರ ಬರೆದಿದೆ’ ಎಂದು ವಿವರಿಸಿದರು.ಎಫ್‌ಎಸ್‌ಎಸ್‌ಎಐ ನಿರ್ದೇಶಕಿ ಡಾ. ಸಂಧ್ಯಾ ಕಬ್ರಾ ಅವರನ್ನು ಭೇಟಿ ಮಾಡಿ, ಅಡಿಕೆ ಕ್ಯಾನ್ಸರ್‌ಗೆ ಕಾರಣ­ವಾಗುವ ಅಂಶಗಳನ್ನು ಹೊಂದಿಲ್ಲ ಎಂಬ ವೈಜ್ಞಾ­ನಿಕ ವರದಿಗಳನ್ನು ನೀಡಲಾಗುವುದು ಎಂದರು.‘ನಿಷೇಧ ಸಾಧ್ಯವಿಲ್ಲ’: ಅಡಿಕೆ ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವ ವಿಚಾರ. ಅದನ್ನು ನಿಷೇ­ಧಿಸಿ ಎಂದು ಹೇಳುವ ಅಧಿಕಾರ ಕೇಂದ್ರಕ್ಕಿಲ್ಲ. ಅಡಿಕೆ­ಯನ್ನು ನಿಷೇಧಿಸುವ ಯಾವುದೇ ಕ್ರಮ­ವನ್ನು ಕೇಂದ್ರ ಕೈಗೊಂಡಿಲ್ಲ. ತಂಬಾ­ಕನ್ನೇ ನಿಷೇಧಿಸದವರು ಅಡಿಕೆ­ಯನ್ನು ನಿಷೇಧಿಸಲಾರರು ಎಂದು ಕೆಪಿಸಿಸಿ ಉಪಾಧ್ಯಕ್ಷ ಡಾ.ಬಿ.ಎಲ್‌. ಶಂಕರ್‌ ಸ್ಪಷ್ಟನೆ ನೀಡಿದರು.ಅಡಿಕೆ ನಿಷೇಧಿಸುವ ಮಾತು ಕೇಂದ್ರದಿಂದ ಬಂದಿಲ್ಲ ಎಂಬುದು ನಿಜ. ಆದರೆ ಅಡಿಕೆಯಿಂದ ಅಪಾಯ­ವಿದೆ ಎಂದು ಹೇಳಲು ಪೂರಕ ದಾಖಲೆ ಸೃಷ್ಟಿಸುವ ಕೆಲಸ ನಡೆದಿದೆ. ಇದು ಅಪಾಯಕಾರಿ ಎಂದು ಶಾಸಕ ವೈ.ಎಸ್.ವಿ. ದತ್ತ ಹೇಳಿದರು.‘ಸಹಾಯಕ ಸಾಲಿಸಿಟರಲ್‌ ಜನ­ರಲ್‌ ಇಂದಿರಾ ಜೈಸಿಂಗ್‌ ಅವರು, ಅಡಿಕೆಯ ಹಾನಿಕಾರಕ ಅಂಶಗಳ ಬಗ್ಗೆ ಕೇಂದ್ರಕ್ಕೆ ಅರಿವಿದೆ ಎಂದು ಸುಪ್ರೀಂಕೋರ್ಟ್‌ನಲ್ಲಿ ಹೇಳಿದ್ದಾರೆ. ಇದನ್ನು ನಾವು ಗಂಭೀರವಾಗಿ ಪರಿ­ಗಣಿಸ­ಬೇಕು. ಅಡಿಕೆಯ ಪ್ರಯೋಜನ­ಗಳ ಕುರಿತೂ ಕೇಂದ್ರ ಸುಪ್ರೀಂ ಕೋರ್ಟ್‌ಗೆ ವಿವರಣೆ ನೀಡಬೇಕು’ ಎಂದು ದತ್ತ ಒತ್ತಾಯಿಸಿದರು.‘ರಾಜಕಾರಣಿಗಳು ಖಂಡಿತ ಅಡಿಕೆ ನಿಷೇಧ ಮಾಡುವುದಿಲ್ಲ. ಆದರೆ ನ್ಯಾಯಾಲಯಗಳ ಮೂಲಕ ಅದಕ್ಕೆ ಪೂರಕವಾದ ಮಾತು ಹೇಳಿಸುತ್ತಾರೆ. ಹಾಗಾಗಿ ಅಡಿಕೆಯನ್ನು ಹಿಂಬಾಗಿಲು ಅಥವಾ ಮುಂಬಾಗಿಲಿನ ಮೂಲಕ ನಿಷೇಧಿಸುವ ಭಯ ಖಂಡಿತ ಇದೆ’ ಎಂದು ಸಾಮಾಜಿಕ ಕಾರ್ಯಕರ್ತ ಕಲ್ಕುಳಿ ವಿಠಲ ಹೆಗ್ಡೆ ಆತಂಕ ವ್ಯಕ್ತಪಡಿಸಿದರು.‘ಮುನ್ನೆಚ್ಚರಿಕೆಯ ಕ್ರಮವಾಗಿ ಸುಪ್ರೀಂಕೋರ್ಟ್‌ನಲ್ಲಿ ನಾನೇ ಒಂದು ಮಧ್ಯಂತರ ಅರ್ಜಿ ಸಲ್ಲಿಸು­ತ್ತೇನೆ’ ಎಂದು ಜಯಪ್ರಕಾಶ್‌ ಹೆಗ್ಡೆ ಭರವಸೆ ನೀಡಿದರು.

ಸುಪ್ರೀಂ ಕೋರ್ಟ್‌ ಕೋರದಿ­ದ್ದರೂ, ಅಡಿಕೆ ಹಾನಿಕರ ಎಂಬ ವರದಿ­ಯನ್ನು ಕೇಂದ್ರ ಸರ್ಕಾರದ ಅಧಿಕಾರಿ­ಗಳು ಕೋರ್ಟ್‌ಗೆ ಸಲ್ಲಿಸಿದ್ದಾರೆ ಎಂದು ಕೆಪಿಸಿಸಿ ಕಿಸಾನ್‌ ಘಟಕದ ಉಪಾಧ್ಯಕ್ಷ ಸಚಿನ್‌ ಮೀಗಾ ದೂರಿದರು. ಕೃಷಿ ವಿಜ್ಞಾನಿ ಡಾ. ಪ್ರಕಾಶ್‌ ಕಮ್ಮರಡಿ ಇತರರಿದ್ದರು.

ಪ್ರತಿಕ್ರಿಯಿಸಿ (+)