ಮಂಗಳವಾರ, ಜೂನ್ 15, 2021
24 °C

‘ಆಧಾರ್‌’ ಜಾಹೀರಾತು: ನಿಲೇಕಣಿ ವಿರುದ್ಧ ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಆಧಾರ್‌’ ಕಾರ್ಡ್‌ ವಿತರಣೆಯ ಸಾಧನೆ ಬಗ್ಗೆ ಮಾಧ್ಯಮಗಳಲ್ಲಿ ಜಾಹೀರಾತು ನೀಡುತ್ತಿರುವ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಭಾವ್ಯ ಕಾಂಗ್ರೆಸ್ ಅಭ್ಯರ್ಥಿ ನಂದನ್ ನಿಲೇಕಣಿ ವಿರುದ್ಧ ಚುನಾವಣಾ ಆಯೋಗಕ್ಕೆ  ರಾಜ್ಯ ಬಿಜೆಪಿ ದೂರು ನೀಡಿದೆ.ಬಿಜೆಪಿ ವಕ್ತಾರರೂ ಆದ ವಿಧಾನ ಪರಿಷತ್‌ ಸದಸ್ಯ ಅಶ್ವತ್ಥನಾರಾಯಣ ಸೇರಿದಂತೆ ಇತರರು ಶುಕ್ರವಾರ ಸಂಜೆ ಮುಖ್ಯ ಚುನಾವಣಾಧಿಕಾರಿ ಅನಿಲ್‌ ಕುಮಾರ್‌ ಝಾ ಅವರನ್ನು ಭೇಟಿ ಮಾಡಿ ದೂರು ಸಲ್ಲಿಸಿದರು. ‘ಆಧಾರ್‌’ ಕೇಂದ್ರ ಸರ್ಕಾರದ ಯೋಜನೆ. ನಿಲೇಕಣಿ ಅದರ ಉಸ್ತುವಾರಿಯಾಗಿದ್ದರು. ನೀತಿ ಸಂಹಿತೆ ಜಾರಿಯಾದ ನಂತರ ತಮ್ಮ ಸ್ವಂತ ಸಂಸ್ಥೆ ಮೂಲಕ ಆಧಾರ್‌ ಕಾರ್ಡ್‌ ಕೊಟ್ಟವರ ಹಾಗೆ ಜಾಹೀರಾತು ನೀಡುತ್ತಿದ್ದಾರೆ. ಇದು ಸರಿಯಾದ ಕ್ರಮವಲ್ಲ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ಬಿಜೆಪಿ ಮುಖಂಡರು ಆಯೋಗವನ್ನು ಆಗ್ರಹಪಡಿಸಿದರು.‘ನಂದನ್ ನಿಲೇಕಣಿ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ’ ಎಂದೂ ಜಾಹೀರಾತಿನಲ್ಲಿ ಬರೆಯಲಾಗಿದೆ. ಸರಕಾರದ ಹಣದಿಂದ ಮಾಡಿದ ಕೆಲಸಕ್ಕೆ  ಭರವಸೆ ಕೊಡಲು ಇವರು ಯಾರು? ಸಾರ್ವಜನಿಕರ ಹಣದಿಂದ ಮಾಡಿದ ಕೆಲಸ ಇವರ ಸ್ವಂತದ್ದು ಆಗಿದ್ದು ಯಾವಾಗ’ ಎಂದೂ ದೂರಿನಲ್ಲಿ ಪ್ರಶ್ನಿಸಲಾಗಿದೆ.ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಆಗಿರುವುದು ಸ್ಪಷ್ಟವಾಗಿದೆ. ಹೀಗಾಗಿ ಅವರಿಗೆ ಆಯೋಗ ನೋಟಿಸ್ ಕೊಟ್ಟು ಅವರ ಅಭ್ಯರ್ಥಿತನವನ್ನು ಅಸಿಂಧುಗೊಳಿಸಬೇಕು. ನೀತಿ ಸಂಹಿತೆ ಜಾರಿಯಾಗುವುದಕ್ಕೆ ಮುಂಚೆ ಮತ್ತು ನಂತರ ಅವರು ಮಾಡಿರುವ ಖರ್ಚಿನ ವಿವರವನ್ನು ಬಹಿರಂಗಪಡಿಸಲು ಸೂಚಿಸಬೇಕು ಎಂದು ಬಿಜೆಪಿ ಆಗ್ರಹಪಡಿಸಿದೆ. ಮನವಿ ಪತ್ರಕ್ಕೆ  ಸಹ ವಕ್ತಾರ ವಿವೇಕರೆಡ್ಡಿ ಸೇರಿದಂತೆ ಇತರರು ಸಹಿ ಮಾಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.