‘ಆಧಾರ್’ ಮಾದರಿಯಲ್ಲಿ ರೇಷನ್ ಕಾರ್ಡ್!

ಬೆಂಗಳೂರು: ಪಾಸ್ಪೋರ್ಟ್ ಮಾದರಿಯಲ್ಲಿ ಇನ್ನು ಮುಂದೆ ರೇಷನ್ ಕಾರ್ಡ್ ಕೂಡಾ ತ್ವರಿತ ಅಂಚೆ (ಸ್ಪೀಡ್ ಪೋಸ್ಟ್) ಮೂಲಕ ಮನೆ ಬಾಗಿಲಿಗೇ ಬರಲಿದೆ!
ಅಷ್ಟೇ ಅಲ್ಲ, ರೇಷನ್ ಕಾರ್ಡ್ ಮಾಡಿಸಲು ಅಲೆದಾಡಬೇಕಿಲ್ಲ; ಆಧಾರ್ ಸಂಖ್ಯೆ ಇದ್ದರೆ ಸಾಕು. ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿದರೆ ನಿಗದಿತ ಅವಧಿಯಲ್ಲಿ ಆಧಾರ್ ಕಾರ್ಡ್ ಮಾದರಿಯಲ್ಲಿ ಮುದ್ರಣಗೊಂಡು ಕೈ ಸೇರಲಿದೆ.
ದೇಶದ ಶೇ 50ರಷ್ಟು ಆಧಾರ್ ಕಾರ್ಡ್ಗಳನ್ನು ಮುದ್ರಿಸಿಕೊಡುವ ಮಣಿಪಾಲ ಪ್ರಿಂಟಿಂಗ್ ಪ್ರೆಸ್ಗೆ ರೇಷನ್ ಕಾರ್ಡ್ ಮುದ್ರಿಸುವ ಗುತ್ತಿಗೆಯನ್ನು ಆಹಾರ ಇಲಾಖೆ ಈಗಾಗಲೇ ನೀಡಿದೆ.
ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಇಲಾಖೆಯ ಕಾರ್ಯದರ್ಶಿ ಹರ್ಷ ಗುಪ್ತ, ‘ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸುವ ಪರಿಪಾಟಲು ಮತ್ತು ಸಲ್ಲಿಸಿದ ಬಳಿಕ ಯಾವಾಗ ಸಿಗಬಹುದು ಎಂದು ಅಲೆದಾಡುವ ಸಮಸ್ಯೆಗೆ ಪರಿಹಾರವಾಗಿ ಈ ಹೊಸ ವ್ಯವಸ್ಥೆಯನ್ನು ಇಲಾಖೆ ಅಳವಡಿಸಿಕೊಂಡಿದೆ’ ಎಂದರು.
‘ಪಡಿತರ ಚೀಟಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಆಧಾರ್ ಸಂಖ್ಯೆ ಇದ್ದರೆ ಸಾಕು. ಸಲ್ಲಿಕೆಯಾದ ಅರ್ಜಿಗಳನ್ನು ಆಹಾರ ನಿರೀಕ್ಷಕರು ಡೌನ್ಲೋಡ್ ಮಾಡಿ, ಅರ್ಜಿದಾರರ ಮನೆಗೆ ಭೇಟಿ ನೀಡಿ ಪರಿಶೀಲಿಸಿ ದೃಢೀಕರಿಸುತ್ತಾರೆ. ವೆಬ್ ಸಾಫ್ಟ್ವೇರ್ನಲ್ಲಿರುವ ದೃಢೀಕೃತ ಅರ್ಜಿಯನ್ನು ಪ್ರಿಂಟಿಂಗ್ ಪ್ರೆಸ್ನಲ್ಲಿ ಡೌನ್ಲೋಡ್ ಮಾಡಿ ಮುದ್ರಿಸಲಾಗುವುದು. ಮುದ್ರಣಾಲಯ ಸಂಸ್ಥೆಯೇ ಕಾರ್ಡ್ನ್ನು ಲಕೋಟೆಯಲ್ಲಿ ತುಂಬಿ ಪೋಸ್ಟ್ ಮಾಡಲಿದೆ’ ಎಂದರು.
‘ಆಧಾರ್ ಕಾರ್ಡ್ನಂತೆ ರೇಷನ್ ಕಾರ್ಡ್ನಲ್ಲೂ ಎರಡು ಭಾಗಗಳು ಇರಲಿದೆ. ಕೆಳಭಾಗವನ್ನು ಪ್ರತ್ಯೇಕಿಸಿ ಇಟ್ಟುಕೊಳ್ಳಬಹುದು. ಕಾರ್ಡ್ನ ಕೆಳಭಾಗದಲ್ಲಿ ಕುಟುಂಬ ಮುಖ್ಯಸ್ಥರ ಭಾವಚಿತ್ರ, ವಯಸ್ಸು, ವಿಳಾಸ, ಕುಟುಂಬದಲ್ಲಿರುವ ಒಟ್ಟು ಸದಸ್ಯರ ಸಂಖ್ಯೆಯನ್ನು ನಮೂದಿಸಲಾಗುತ್ತದೆ. ಮೇಲಿನ ಭಾಗದಲ್ಲಿ ಕುಟುಂಬದ ಗರಿಷ್ಠ ನಾಲ್ವರು ಸದಸ್ಯರ ಭಾವಚಿತ್ರ, ವಯಸ್ಸು, ವಿಳಾಸ ಇರಲಿದೆ. ನಾಲ್ಕಕ್ಕಿಂತ ಹೆಚ್ಚು ಸದಸ್ಯರಿದ್ದರೆ ಆ ಸದಸ್ಯರ ಹೆಸರನ್ನು ಮಾತ್ರ ನಮೂದಿಸಲಾಗುವುದು. ಕಾರ್ಡ್ನಲ್ಲಿರುವ ‘ಕ್ಯೂ ಆರ್ ಕೋಡ್’ (ಕ್ವಿಕ್ ರೆಸ್ಪಾನ್ಸ್ ಕೋಡ್) ಸ್ಕ್ಯಾನ್ ಮಾಡಿದರೆ ಇಲಾಖೆಯ ವೆಬ್ಸೈಟ್ನಲ್ಲಿ ಕುಟುಂಬ ಸದಸ್ಯರ ಸಮಗ್ರ ಮಾಹಿತಿ ನೋಡಬಹುದು’ ಎಂದರು.
‘ತ್ವರಿತ ಅಂಚೆಯಲ್ಲಿರುವ ವಿಶೇಷ ವ್ಯವಸ್ಥೆಯಡಿ ಸಂಬಂಧಿಸಿದ ವ್ಯಕ್ತಿಗೆ ನೇರವಾಗಿ ಕಾರ್ಡ್ ತಲುಪಿಸಲಾಗುವುದು. ಮುದ್ರಣಾಲಯದಿಂದಲೇ ಕಾರ್ಡ್ಗಳು ರವಾನೆಯಾಗಲಿದ್ದು ಈ ಮಾಹಿತಿಯನ್ನು ಇಲಾಖೆಯಲ್ಲಿ ಪರಿಶೀಲಿಸುವ ವ್ಯವಸ್ಥೆಯೂ ಇದೆ. ಅರ್ಜಿ ಸಲ್ಲಿಸಿದ 15 ದಿನಗಳಲ್ಲಿ ರೇಷನ್ ಕಾರ್ಡ್ ಮನೆಗೇ ತಲುಪಿಲಿದೆ’ ಎಂದು ವಿವರಿಸಿದರು.
‘ಮೊದಲ ಹಂತದಲ್ಲಿ ಎಪಿಎಲ್ ಕಾರ್ಡ್ಗಳನ್ನು ಅಂಚೆಯಲ್ಲಿ ವಿತರಿಸಲಾಗುವುದು. ಈ ಕಾರಣಕ್ಕೆ ‘ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ (ಕೆಟಿಪಿಟಿ) ಕಾಯ್ದೆ’ಯಲ್ಲಿರುವ ವಿನಾಯಿತಿಯಡಿ ಮೂರು ತಿಂಗಳ ಅವಧಿಗೆ ಕಾರ್ಡ್ ಮುದ್ರಿಸುವ ಗುತ್ತಿಗೆಯನ್ನು ಮಣಿಪಾಲ ಪ್ರಿಂಟಿಂಗ್ ಪ್ರೆಸ್ಗೆ ನೀಡಲಾಗಿದೆ. ಪ್ರತೀ ಆಧಾರ್ ಕಾರ್ಡ್ ಮುದ್ರಿಸಲು ನಿಗದಿಪಡಿಸಿದ ದರದಲ್ಲಿ (₹ 1.71) ರೇಷನ್ ಕಾರ್ಡ್ನ್ನೂ ಮಣಿಪಾಲ ಸಂಸ್ಥೆ ಮುದ್ರಿಸಿ ನೀಡಲಿದೆ. ಈ ಕುರಿತು ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ’ ಎಂದರು.
‘ಕಾರ್ಡ್ಗೆ ತಗಲುವ ವೆಚ್ಚವನ್ನು ಅಂಚೆಯವನ ಬಳಿ ಗ್ರಾಹಕರು ನೀಡಬೇಕು. ತ್ವರಿತ ಅಂಚೆಗೆ ತಗಲುವ ವೆಚ್ಚ ಕಡಿತಗೊಳಿಸಿ ಉಳಿದ ಹಣವನ್ನು ಅಂಚೆ ಇಲಾಖೆ ಆಹಾರ ಇಲಾಖೆಗೆ ಜಮಾ ಮಾಡಲಿದೆ. ಎಪಿಎಲ್ ಕಾರ್ಡ್ಗೆ ₹ 100 ನಿಗದಿಪಡಿಸಲಾಗಿದೆ. ಬಿಪಿಎಲ್ ಕಾರ್ಡ್ಗೆ ಇನ್ನೂ ಹಣ ನಿಗದಿಪಡಿಸಿಲ್ಲ’ ಎಂದು ಅವರು ಮಾಹಿತಿ ನೀಡಿದರು.
‘ಎಪಿಎಲ್ ಕಾರ್ಡ್ಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಸ್ವ ದೃಢೀರಿಸಿದ ಆಧಾರದಲ್ಲಿ ಅದನ್ನು ಸಾಮಾನ್ಯ ಪೇಪರ್ನಲ್ಲಿ ಮುದ್ರಿಸಿ ನ್ಯಾಯಬೆಲೆ ಅಂಗಡಿಗಳಿಂದ ರೇಷನ್ ಪಡೆದುಕೊಳ್ಳಬಹುದು. 15 ದಿನಗಳ ಒಳಗೆ ಆಹಾರ ನಿರೀಕ್ಷಕರು ಅರ್ಜಿದಾರನ ಮನೆಗೆ ತೆರಳಿ, ದಾಖಲೆಗಳನ್ನು ಪರಿಶೀಲಿಸಿ ಕಾರ್ಡ್ ಮುದ್ರಣಕ್ಕೆ ಮಂಜೂರಾತಿ ನೀಡಲಿದ್ದಾರೆ. ಸದ್ಯ, ರಾಜ್ಯದಲ್ಲಿ 10 ಲಕ್ಷ ಬಿಪಿಎಲ್ ಕಾರ್ಡ್ ವಿತರಣೆ ಬಾಕಿ ಇವೆ. ಈ ಪೈಕಿ ಶೇ 70ರಷ್ಟು ಅರ್ಜಿಗಳು ಸಲ್ಲಿಕೆಯಾಗಿ ಎಂಟು ತಿಂಗಳು ಕಳೆದಿದೆ. 3 ಲಕ್ಷ ಎಪಿಎಲ್ ಕಾರ್ಡ್ಗಳೂ ವಿತರಣೆ ಆಗಬೇಕಿದೆ’ ಎಂದರು.
‘ರೇಷನ್ ಕಾರ್ಡ್ ವಿತರಣೆಯನ್ನೂ ಸಕಾಲ ವ್ಯಾಪ್ತಿಗೆ ತರಲು ಉದ್ದೇಶಿಸಲಾಗಿದೆ. ಆಹಾರ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಸಲ್ಲಿಕೆಯಾದ ಅರ್ಜಿಗಳನ್ನು ಪರಿಶೀಲಿಸಲು ನಗರ ಪ್ರದೇಶಗಳಲ್ಲಿ ಕಂದಾಯ ಮತ್ತು ಆರೋಗ್ಯ ನಿರೀಕ್ಷಕರನ್ನು ಹಾಗೂ ಹಳ್ಳಿಗಳಲ್ಲಿ ಗ್ರಾಮ ಪಂಚಾಯ್ತಿ ಅಧಿಕಾರಿಗಳು ( ಪಿಡಿಓ) ಮತ್ತು ಕಾರ್ಯದರ್ಶಿಗಳ ನೆರವು ಪಡೆಯಲು ಉದ್ದೇಶಿಸಲಾಗಿದೆ’ ಎಂದೂ ಅವರು ತಿಳಿಸಿದರು.
ಆಧಾರ್ ಕಾರ್ಡ್, ಡ್ರೈವಿಂಗ್ ಲೈಸನ್ಸ್ ರೀತಿಯಲ್ಲಿ ರೇಷನ್ ಕಾರ್ಡ್ ಅನ್ನೂ ಇನ್ನು ಮುಂದೆ ಕಿಸೆಯಲ್ಲಿ ಇಟ್ಟುಕೊಳ್ಳಬಹುದು. ಸದ್ಯದಲ್ಲೆ ರೇಷನ್ ಕಾರ್ಡ್ ವಿತರಣೆಯನ್ನು ಸಕಾಲ ಯೋಜನೆ ವ್ಯಾಪ್ತಿಗೆ ತರಲಾಗುವುದು
ಹರ್ಷ ಗುಪ್ತ
ಕಾರ್ಯದರ್ಶಿ, ಆಹಾರ ಇಲಾಖೆ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.