ಶನಿವಾರ, ಫೆಬ್ರವರಿ 27, 2021
19 °C

‘ಈಗಿನ ನಟರಿಗೆ ವ್ಯಾಕರಣ, ಉಚ್ಚಾರಣೆ ಗೊತ್ತಿಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಈಗಿನ ನಟರಿಗೆ ವ್ಯಾಕರಣ, ಉಚ್ಚಾರಣೆ ಗೊತ್ತಿಲ್ಲ’

ಬೆಂಗಳೂರು: ‘ಇಪ್ಪತ್ತನೇ ಶತಮಾನದ ಕನ್ನಡ ಚಲನಚಿತ್ರಗಳಲ್ಲಿದ್ದ ಪ್ರೌಢಿಮೆ, ಹಿರಿಮೆ–ಗರಿಮೆ ಈಗ ಉಳಿದಿಲ್ಲ. ಶ್ರವಣಕ್ಕೆ ಯೋಗ್ಯವಲ್ಲದ ಹಾಡುಗಳು, ಸಂಭಾಷಣೆಗಳನ್ನು ಬರೆಯಲಾಗುತ್ತಿದೆ’ ಎಂದು ಹಿರಿಯ ನಟ ರಾಜೇಶ್‌ ಬೇಸರ ವ್ಯಕ್ತಪಡಿಸಿದರು.ಸುಂದರ ಪ್ರಕಾಶನ ಹಾಗೂ ಸುಂದರ ಸಾಹಿತ್ಯ ಆಶ್ರಯದಲ್ಲಿ ಭಾನುವಾರ ನಗರದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ‘ಮುಂಬೈ ಸಿನಿಮಾ 100++’ (ಸಂಪಾದಕ: ಗೌರಿ ಸುಂದರ್‌), ‘ಐಜಿಪಿ ಸಾಹೇಬರ ಸೀನಿಯರ್‌ ಪಿಎ ಹಾಗೂ ಇತರ ಮೋಜಿನ ಪ್ರಸಂಗಗಳು’ (ಲೇಖಕ: ಡಿ.ವಿ. ಗುರುಪ್ರಸಾದ್‌), ‘ಕೊಡಗೇಹಳ್ಳಿಯಿಂದ ಕ್ಯಾಲಿಫೋರ್ನಿಯಾದವರೆಗೆ’ ಹಾಗೂ ‘ಸಂಪತ್‌ ಮತ್ತು ಇತರ ಕತೆಗಳು’ (ಲೇಖಕಿ: ಜಾನಕಿ ಶ್ರೀನಿವಾಸ್‌) ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.‘ಡಾ.ರಾಜ್‌ಕುಮಾರ್‌, ಕಲ್ಯಾಣ್‌ ಕುಮಾರ್‌, ಉದಯ ಕುಮಾರ್‌, ನರಸಿಂಹರಾಜು, ಬಾಲಕೃಷ್ಣ, ಕೆ.ಎಸ್‌. ಅಶ್ವಥ್‌, ವಜ್ರಮುನಿ ಸೇರಿದಂತೆ ಹಲವು ನಟರು ಶುದ್ಧವಾದ ಕನ್ನಡವನ್ನು ಮಾತನಾಡುತ್ತಿದ್ದರು. ಆದರೆ, ಈಗಿನ ನಟರಿಗೆ ಮಹಾಪ್ರಾಣ, ಅಲ್ಪಪ್ರಾಣ ಎಂದರೆ ಏನೆಂಬುದು ಗೊತ್ತಿಲ್ಲ’ ಎಂದು ವಿಷಾದ ವ್ಯಕ್ತಪಡಿಸಿದರು.‘ಗೌರಿ ಶಂಕರ್‌ ಅವರು ಹಿಂದಿ ಚಿತ್ರರಂಗದ 100ಕ್ಕೂ ಹೆಚ್ಚು ನಟರ ಜೀವನ ಚರಿತ್ರೆಯನ್ನು ಸಂಕ್ಷಿಪ್ತವಾಗಿ ಮುಂಬೈ ಸಿನಿಮಾ ಕೃತಿಯಲ್ಲಿ ನೀಡಿದ್ದಾರೆ. ಆದರೆ, ದಾದಾ ಸಾಹೇಬ್‌ ಫಾಲ್ಕೆ, ನಾಸಿರುದ್ದೀನ್‌ ಷಾ, ನಾನಾ ಪಾಟೇಕರ್‌ ಸೇರಿದಂತೆ ಹಲವರ ಬಗ್ಗೆ ಮಾಹಿತಿ ನೀಡಿಲ್ಲ’ ಎಂದರು.ವಿದ್ವಾನ್‌ ಆರ್‌.ಕೆ.ಪದ್ಮನಾಭ ಮಾತನಾಡಿ, ‘ಇತ್ತೀಚಿನ ದಿನಗಳಲ್ಲಿ ಹಾಸ್ಯ ಸಾಹಿತ್ಯ ಕಡಿಮೆ ಆಗುತ್ತಿದೆ. ಒತ್ತಡದ ಜೀವನದಲ್ಲೇ ಕಳೆದು ಹೋಗುವ ಜನರಿಗೆ ಡಿ.ವಿ.ಗುರುಪ್ರಸಾದ್‌ ಅವರ ಐಜಿಪಿ ಸಾಹೇಬರ ಸೀನಿಯರ್‌ ಪಿಎ... ಕೃತಿ ಮನಸ್ಸಿಗೆ ಮುದ ನೀಡುತ್ತದೆ. ಅವರ ಬರವಣಿಗೆ ರೀತಿ, ಕ್ರಮ ಚೆನ್ನಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಸುಂದರ ಪ್ರಕಾಶನದ ಗೌರಿ ಸುಂದರ್‌ ಮಾತನಾಡಿ, ‘ಮುಂದಿನ ಡಿಸೆಂಬರ್‌ ವೇಳೆಗೆ 50 ಪುಸ್ತಕಗಳನ್ನು ಪ್ರಕಟಿಸುವ ಉದ್ದೇಶವಿದೆ. ಪ್ರಸಿದ್ಧ ಕವಿಗಳು, ಈಗಿನ ತಲೆಮಾರಿನ ಮೂವರು ಕವಿಗಳ 35 ಪದ್ಯಗಳನ್ನು ಆಯ್ಕೆ ಮಾಡಿ ತಿಂಗಳಿಗೆ ಐದಾರು ಕೃತಿಗಳನ್ನು ಪ್ರಕಟಿಸುತ್ತೇವೆ’ ಎಂದರು.

*

ಸಂಗೀತ ಪ್ರಪಂಚದಲ್ಲೂ ಹಾಸ್ಯದ ಪ್ರಸಂಗಗಳು ಸಾಕಷ್ಟು ಬರುತ್ತವೆ. ಆದರೆ, ಅದನ್ನು ಯಾರೂ ದಾಖಲು ಮಾಡುತ್ತಿಲ್ಲ

-ಆರ್‌.ಕೆ.ಪದ್ಮನಾಭ, ಕರ್ನಾಟಕ ಶಾಸ್ತ್ರೀಯ ಸಂಗೀತಗಾರ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.