ಶನಿವಾರ, ಜೂನ್ 19, 2021
22 °C
‘ಜಾಬ್ ಕಾರ್ಡ್’ ಇಲ್ಲದ ಕೂಲಿಕಾರರು!

‘ಉದ್ಯೋಗ ಖಾತರಿ’ಯಲ್ಲಿ ಭ್ರಷ್ಟಾಚಾರ

ಪ್ರಜಾವಾಣಿ ವಾರ್ತೆ/ಮನೋಜಕುಮಾರ್‌ ಗುದ್ದಿ Updated:

ಅಕ್ಷರ ಗಾತ್ರ : | |

ಧಾರವಾಡ: ಹಳ್ಳಿಯಲ್ಲಿರುವ ಬಡವರು ಉದ್ಯೋಗ ಹುಡುಕಿಕೊಂಡು ಗೊತ್ತಿಲ್ಲದ ಮಹಾನಗರಗಳಿಗೆ ಗುಳೆ ಹೋಗು­ವುದನ್ನು ತಪ್ಪಿಸಲು ಕೇಂದ್ರ ಸರ್ಕಾರ ‘ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ’ಯನ್ನು ತಂದಿದೆ. ಆದರೆ, ಈ ಯೋಜನೆ ಊಹಿಸಲೂ ಆಗದಷ್ಟು ದುರುಪ­ಯೋಗ­ವಾಗಿದ್ದನ್ನು ನೋಡಲು ಕಲ­ಘಟಗಿ ತಾಲ್ಲೂಕಿನ ಜಿನ್ನೂರು ಗ್ರಾಮ ಪಂಚಾಯ್ತಿಗೆ ಬರಬೇಕು.ಜಿನ್ನೂರು ಪಂಚಾಯ್ತಿ ಕಚೇರಿ ಎದು­ರಿನ ಚಿಕ್ಕ ಮನೆಯಲ್ಲಿರುವ ಶಿವರುದ್ರಪ್ಪ ಸಣ್ಣಗೌಡ್ರ ಅವರ ಹೆಸರಿನಲ್ಲಿ ಪಂಚಾಯ್ತಿಯವರು ‘ಜಾಬ್‌ ಕಾರ್ಡ್‌’ ವಿತರಣೆ ಮಾಡಿದ್ದಾರೆ. ತಮ್ಮ ಹೆಸರಿನಲ್ಲಿ ಕಾರ್ಡ್‌ ಇರುವುದು ಸ್ವತಃ ಗೌಡರಿಗೇ ಗೊತ್ತಿರಲಿಲ್ಲ. ಅವರು ‘ಕೂಲಿ’ಯಿಂದ ಗಳಿಸಿದ ಹಣವನ್ನು ಬ್ಯಾಂಕ್‌ ಖಾತೆಗೆ ಹಾಕಲು ಅವರ ಮಗ ಪ್ರಭಾಕರನ ಹೆಸರಿನಲ್ಲಿ ಖಾತೆ ತೆರೆಯಲಾಗಿದೆ. ಆ ಖಾತೆಗೆ ಎಟಿಎಂ ಕಾರ್ಡನ್ನೂ ಪಡೆಯಲಾಗಿದೆ. ಆದರೆ, ಮಗ ಊರು ಬಿಟ್ಟು ಒಂದು ವರ್ಷವಾಯಿತು. ಇನ್ನೂ ವಾಪಸಾಗಿಲ್ಲ. ಗೌಡರ ಜಾಬ್‌ ಕಾರ್ಡ್‌, ಮಗನ ಬ್ಯಾಂಕ್‌ ಪಾಸ್‌ ಬುಕ್‌, ಎಟಿಎಂ ಕಾರ್ಡ್‌ ಪಂಚಾಯ್ತಿಯ ಮಾಜಿ ಅಧ್ಯಕ್ಷರೊಬ್ಬರ ಬಳಿ ಇದೆ. ಅವರೇ ಹಣವನ್ನು ಡ್ರಾ ಮಾಡಿಕೊಂಡು ಸ್ವಂತಕ್ಕೆ ಬಳಸುತ್ತಿದ್ದಾರೆ ಎಂದು ಗೌಡರು ಆರೋಪಿಸುತ್ತಾರೆ.‘ಆ ಮಾಜಿ ಚೇರ್ಮನ್‌ನ ಭಾನಗಡಿ­ಯನ್ನು ಯಾರ ಬಳಿ ಬಂದು ಹೇಳೆಂದರೂ ಹೇಳ್ತಿನಿ. ಇಂತಹ ಎಷ್ಟೋ ಕಾರ್ಡುಗಳು ಅವರ ಬಳಿ ಇವೆ. ಕಾರ್ಡುಗಳನ್ನು ಅವರೇ ತೆಗೆಸಿ, ಕೆಲಸ ಮಾಡಿಸಿದೆ ಎಂದು ಪಂಚಾಯ್ತಿಯಲ್ಲಿ ಬರೆಸಿ ಹಣ ಹೊಡೆಯುತ್ತಿದ್ದಾರೆ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.ಇನ್ನೊಂದು ಪ್ರಕರಣ ಇದಕ್ಕಿಂತ ವಿಚಿತ್ರ. ಗ್ರಾಮದ ಮಂಜುನಾಥ ನೇರ್ತಿ ಅವರಿಗೆ ಸಹಿ ಮಾಡಲು ಬರುವುದೇ ಇಲ್ಲ. ಆದರೆ, ಅವರ ಬ್ಯಾಂಕ್‌ ಖಾತೆ ಕಲಘಟಗಿಯ ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರಿನಲ್ಲಿ ಇದೆ. ‘ಪಂಚಾಯ್ತಿಯವರು ನರೇಗಾ ಹಣವನ್ನು ಬ್ಯಾಂಕ್‌ ಖಾತೆಗೆ ಜಮಾ ಮಾಡಿರುತ್ತಾರೆ’ ಎಂದು ಮಂಜುನಾಥ ಹಣ ತೆಗೆಯಲು ಹೋದರೆ, ಬ್ಯಾಂಕ್‌ ವ್ಯವಸ್ಥಾಪಕಿ ಕೂಲಿ ಹಣ ಕೊಡಲು ನಿರಾಕರಿಸುತ್ತಾರೆ.‘ನಿಮ್ಮ ಖಾತೆ ಆರಂಭವಾಗುವಾಗ ನಿಮ್ಮೊಂದಿಗೆ ಬಂದವರನ್ನು (ಆತ ಗ್ರಾಮದ ಇನ್ನೊಬ್ಬ ಪ್ರಭಾವಿ ಮುಖಂಡ) ಕರೆದುಕೊಂಡು ಬನ್ನಿ’ ಎನ್ನುತ್ತಾರೆ ವ್ಯವಸ್ಥಾಪಕಿ. ಏಕೆಂದರೆ, ಈ ಖಾತೆ ಆರಂಭವಾಗುವಾಗ ಸಹಿ ಮಾಡಿದ ವ್ಯಕ್ತಿ ಅವರೇ!ಖಾತೆದಾರನೇ ಖುದ್ದು ಎದುರಿಗೆ ಇದ್ದರೂ ಖಾತೆಯಲ್ಲಿನ ಹಣ ಕೊಡಲು ನಿರಾಕರಿಸಿದ ವ್ಯವಸ್ಥಾಪಕಿ ವಿರುದ್ಧ ಮಂಜುನಾಥ ಲೀಡ್‌ ಬ್ಯಾಂಕ್ ಮ್ಯಾನೇ­ಜರ್‌ ಬಸವರಾಜ ಹೂಗಾರ ಅವರಿಗೆ ಕಳೆದ ಮಾರ್ಚ್‌ 3ರಂದು ದೂರು ನೀಡಿದ್ದಾರೆ. ಇಲ್ಲಿಯವರೆಗೂ ವ್ಯವ­ಸ್ಥಾಪಕಿ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.ಗ್ರಾಮದ ಮಹಾದೇವಪ್ಪ ಹುಣಸಿ­ಮರದ, ಯಲ್ಲಮ್ಮ ಸುಣಗಾರ ಅವರ ಕಥೆಯೂ ಇದಕ್ಕಿಂತ ಭಿನ್ನವಿಲ್ಲ. ‘ಜಿನ್ನೂರು, ಮಲಕನಕೊಪ್ಪ, ದ್ವಾವನ­ಕೊಂಡ ಗ್ರಾಮಗಳ ವ್ಯಾಪ್ತಿ ಹೊಂದಿರುವ ಜಿನ್ನೂರು ಗ್ರಾ.ಪಂ.ನಲ್ಲಿ 1360 ‘ಜಾಬ್‌ ಕಾರ್ಡ್‌’ಗಳನ್ನು ವಿತರಿಸ­ಲಾಗಿದೆ. ಅದರಲ್ಲಿ 190 ‘ಜಾಬ್‌­ಕಾರ್ಡ್‌’ದಾರರು 100 ದಿನಗಳನ್ನು ಪೂರೈಸಿದ್ದಾರೆ. ಆದರೆ, ಇವರಲ್ಲಿ ಯಾರಿಗೂ ತಮ್ಮ ಹೆಸರಿನಲ್ಲಿ ‘ಜಾಬ್‌ ಕಾರ್ಡ್‌’ ಇದೆ ಎಂಬುದೇ ಗೊತ್ತಿಲ್ಲ!

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.