ಶುಕ್ರವಾರ, ಜನವರಿ 17, 2020
22 °C

‘ಕಸ್ತೂರಿ ರಂಗನ್‌ ವರದಿ ವಿರುದ್ಧ ಹೋರಾಟ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ಜಿಲ್ಲೆಯ ಜನರನ್ನು ಒಕ್ಕಲೆಬ್ಬಿಸುವ ಹುನ್ನಾರ ಹೊಂದಿರುವ ಕಸ್ತೂರಿ ರಂಗನ್ ವರದಿಯನ್ನು ಅನುಷ್ಠಾನಗೊಳಿಸಲು ಯಾವುದೇ ಕಾರಣಕ್ಕೂ ಬಿಜೆಪಿ ಅವಕಾಶ ಕೊಡುವುದಿಲ್ಲ. ಇದಕ್ಕಾಗಿ ಜಿಲ್ಲೆಯಾದ್ಯಂತ ಹೋರಾಟ ರೂಪಿಸಲಾಗುವುದು ಎಂದು ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ತಿಳಿಸಿದರು.ನಗರದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಜಿಲ್ಲೆಯ ಜನರನ್ನು ಒಕ್ಕಲೆಬ್ಬಿಸಲು ಪ್ರಯತ್ನಿಸಲಾಗುತ್ತಿದೆ. ಇವರಿಗೆ ಪುನರ್‌ವಸತಿ ಕಲ್ಪಿಸುವ ನೆಪದಲ್ಲಿ ಅರಣ್ಯ ಅಧಿಕಾರಿಗಳು ₨ 1000 ಕೋಟಿ ಹಣವನ್ನು ಲಪಟಾಯಿಸಲು ಪ್ರಯತ್ನ ನಡೆಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.ಪಶ್ಚಿಮ ಘಟ್ಟ ವ್ಯಾಪ್ತಿಯ ಆರು ರಾಜ್ಯಗಳ ಅಭಿಪ್ರಾಯವನ್ನು ಆಲಿಸದೇ ವರದಿಯನ್ನು ಜಾರಿಗೆ ತರಲು ಹೊರಟಿರುವ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಅವರು ಹೇಳಿದರು.ಕಲ್ಲು ಕ್ವಾರಿ ಮಾಡಬಾರದು, ಮರಳು ತೆಗೆಯಬಾರದು ಹಾಗೂ ಕಾಫಿ ಪಲ್ಪಿಂಗ್‌ ಬಾರದೆಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ಇದು ಜಾರಿಯಾದರೆ ಕೊಡಗಿನಲ್ಲಿ ರಸ್ತೆ ಮಾಡಲಾಗುವುದಿಲ್ಲ, ಯಾವುದೇ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದಿಲ್ಲ ಎಂದರು.ಈ ಭಾಗದ ಸಂಸದರು ವರದಿ ವಿಚಾರವಾಗಿ ಇದುವರೆಗೆ ಯಾವುದೇ ಚಕಾರವನ್ನು ಎತ್ತಿಲ್ಲ. ಲೋಕಸಭಾ ಅಧಿವೇಶನದಲ್ಲಿ ವರದಿಯ ವಿರುದ್ಧ ಏಕೆ ಧ್ವನಿ ಎತ್ತಿಲ್ಲ? ಈ ಭಾಗದ ಜನರ ಅಭಿಪ್ರಾಯವನ್ನು ಕೇಂದ್ರ ಸರ್ಕಾರಕ್ಕೆ ತಿಳಿಸುವ ಕೆಲಸವನ್ನು ಅವರು ಏಕೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.ವರದಿಯ ವಿರುದ್ಧ ನಾವು ವಿಧಾನಸಭೆಯ ಒಳಗೆ ಹಾಗೂ ಹೊರಗೆ ಹೋರಾಟ ಮಾಡುತ್ತೇವೆ. ವರದಿಯ ಹಾನಿಕಾರಕ ಅಂಶಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತೇವೆ ಎಂದರು.ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್‌ ಮಾತನಾಡಿ, ‘ಈ ಭಾಗದ ಜನರಿಗೆ ಮರಣ ಶಾಸನವಾಗಿರುವ ಕಸ್ತೂರಿ ರಂಗನ್‌ ವರದಿಯನ್ನು ಅನುಷ್ಠಾನಗೊಳಿಸದಂತೆ ತಡೆಯದಿದ್ದರೆ ಸಂಸದರು ರಾಜೀನಾಮೆ ನೀಡಲಿ’ ಎಂದು ಸವಾಲು ಹಾಕಿದರು. ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಸುಜಾ ಕುಶಾಲಪ್ಪ, ಪ್ರಧಾನ ಕಾರ್ಯದರ್ಶಿ ಮನು ಮುತ್ತಪ್ಪ ಇದ್ದರು.‘ವರದಿ ಸಾಹಿತ್ಯ ಸಮ್ಮೇಳನದಲ್ಲಿ ಚರ್ಚೆಯಾಗಲಿ’

ಮಡಿಕೇರಿ: ಪಶ್ಚಿಮ ಘಟ್ಟ ಸಂರಕ್ಷಣೆ ಕುರಿತು ಕಸ್ತೂರಿ ರಂಗನ್‌ ಸಮಿತಿಯು ನೀಡಿರುವ ವರದಿ ಬಗ್ಗೆ ಜನವರಿಯಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಚರ್ಚೆ ನಡೆಯಲಿ ಎಂದು ಸಂಸದ ಎಚ್‌.ವಿಶ್ವನಾಥ್‌ ಹೇಳಿದರು.

ನಗರದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾವಿರಾರು ಸಂಖ್ಯೆಯಲ್ಲಿ ಜನರು ಸೇರುವ ಈ ಸಮ್ಮೇಳನದಲ್ಲಿ ವಿಷಯ ತಜ್ಞರು ತಮ್ಮ ಅಭಿಪ್ರಾಯವನ್ನು ಮಂಡಿಸಲಿ. ಸಾರ್ವಜನಿಕವಾಗಿ ವರದಿಯ ಪೂರಕ ಹಾಗೂ ನಕಾರಾತ್ಮಕ ಅಂಶಗಳ ಬಗ್ಗೆ ಚರ್ಚೆಯಾಗಲಿ ಎಂದು ಅವರು ಆಶಿಸಿದರು.  ಕಸ್ತೂರಿ ರಂಗನ್‌ ಸಮಿತಿಯ ವರದಿಯಲ್ಲಿರುವ ಪೂರಕ ಹಾಗೂ ನಕಾರಾತ್ಮಕ ಅಂಶಗಳ ಬಗ್ಗೆ ವಿಸ್ತೃತವಾಗಿ ಚರ್ಚೆಯಾಗಬೇಕು. ಜನರಜೀವನದ ಮೇಲೆ ವ್ಯತಿರಿಕ್ತವಾಗಿ ಪರಿಣಾಮ ಬೀರುವ ಅಂಶಗಳನ್ನು ಕೈಬಿಡಬೇಕಾಗಿದೆ ಎಂದರು.  ವರದಿಯ ಬಗ್ಗೆ ವಿಸ್ತೃತವಾಗಿ ಚರ್ಚಿಸಲು ರಾಜ್ಯ ಸರ್ಕಾರ ಸಿದ್ಧವಿದೆ. ಸ್ಥಳೀಯ ಜನರ ಅಭಿಪ್ರಾಯ ಕ್ರೋಢೀಕರಿಸಿದ ನಂತರವೇ ಮುಂದಿನ ಕ್ರಮಕೈಗೊಳ್ಳಲಾಗುವುದೆಂದು ಅರಣ್ಯ ಸಚಿವ ರಮಾನಾಥ್‌ ರೈ ಅವರು ತಮಗೆ ಭರವಸೆ ನೀಡಿದ್ದಾರೆ ಎಂದು ವಿಶ್ವನಾಥ್‌ ಹೇಳಿದರು.ಸಚಿವರನ್ನು ಭೇಟಿ ಮಾಡುವ ಸಮಯದಲ್ಲಿ ಜಿಲ್ಲೆಯ ಶಾಸಕರನ್ನು ಹಾಗೂ ಪ್ರಮುಖ ಸಂಘ–ಸಂಸ್ಥೆಗಳ ಪ್ರತಿನಿಧಿಗಳನ್ನು ಆಹ್ವಾನಿಸಿದ್ದೇವು. ಆದರೆ, ಇದರಲ್ಲಿ ಕೆಲವು ಸಂಘ–ಸಂಸ್ಥೆಗಳ ಪ್ರಮುಖರು ಮಾತ್ರ ನಮ್ಮೊಂದಿಗೆ ಬಂದರು ಎಂದು ಅವರು ತಿಳಿಸಿದರು.ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಬಿ.ಟಿ. ಪ್ರದೀಪ್‌, ಮಾಜಿ ಸಚಿವೆ ಸುಮಾ ವಸಂತ್‌, ಮಡಿಕೇರಿ ನಗರ ಘಟಕದ ಅಧ್ಯಕ್ಷ ಹಾರೂನ್‌, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಯಾಕೂಬ್‌ ಇದ್ದರು.

ಪ್ರತಿಕ್ರಿಯಿಸಿ (+)