ಶುಕ್ರವಾರ, ಜೂನ್ 18, 2021
24 °C
ಚರ್ಚೆ

‘ಕೊಟ್ಟಿಗೆಯಲ್ಲಿ ಕಟ್ಟು’ ಅಂದವರು ಯಾರು?

ವಿ.ಎನ್. ರಾಜಶೇಖರ್,ಅಧ್ಯಕ್ಷರು,ಎಐಡಿಎಸ್‌ಒ,ಕರ್ನಾಟಕ ರಾಜ್ಯ ಸಮಿತಿ Updated:

ಅಕ್ಷರ ಗಾತ್ರ : | |

‘ಪ್ರೌಢಶಾಲಾ ಮಕ್ಕಳಿಗೆ ಸರ್ಕಾರದಿಂದಲೇ ಮನುಸ್ಮೃತಿ’ ವಿಶೇಷ ವರದಿಗೆ (ಫೆ. 26) ಸಂಬಂಧಿಸಿದಂತೆ ಡಾ.ಬಿ.ವಿ. ವಸಂತಕುಮಾರ್‌ ಅವರು,  ‘ಎತ್ತು ಈತು ಅಂದ್ರೆ ಕೊಟ್ಟಿಗೆಯಲ್ಲಿ ಕಟ್ಟು ಅಂದ್ರಂತೆ’ ಎಂಬ ಶೀರ್ಷಿಕೆ­­ಯಡಿ  (ಪ್ರ.ವಾ. ಅಭಿಮತ ಪುಟದ ಚರ್ಚೆ ಅಂಕಣ, ಮಾ. 11) ನೀಡಿರುವ ಪ್ರತಿಕ್ರಿಯೆ ವಿರೋಧಾ­ಭಾಸಗಳಿಂದ ಕೂಡಿದೆ.  ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್‌ಒ)  ಕುರಿತು ಸತ್ಯಾಂಶ ತಿರುಚಿ, ಟೀಕೆ ಮಾಡಿದ್ದಾರೆ.‘ಭಗವದ್ಗೀತೆಯಲ್ಲಿ ಏನಿದೆ?’ ಎಂಬ ಪುಸ್ತಕವನ್ನು ಎಐಡಿಎ­ಸ್‌ಒ ಪ್ರಕಟಿಸಿದೆ ಮತ್ತು ಆ ಕೃತಿ ಆಯ್ಕೆ ವಿರುದ್ಧವೇ ಸಂಘ­­­ಟನೆ ಹೋರಾಡಿದೆ ಎಂಬ ಟೀಕೆ ಬಾಲಿಶ­ವಾದುದು.   ಈ ಹೆಸರಿನ ಪುಸ್ತಕವನ್ನು ಎಐಡಿಎಸ್‌ಒ  ಪ್ರಕ­ಟಿ­ಸಿಲ್ಲ ಮತ್ತು ಅದರ ವಿರುದ್ಧ ಪ್ರತಿಭಟನೆಯನ್ನೂ ನಡೆಸಿಲ್ಲ.ಪ್ರೊ.ಹಂಪಣ್ಣ ನೇತೃತ್ವದ ಸಮಿತಿ ಆಯ್ಕೆ ಮಾಡಿರುವ ಕೆಲವು ಪುಸ್ತಕಗಳು ಮಕ್ಕಳಲ್ಲಿ ಅತಾರ್ಕಿಕ ಧಾರ್ಮಿಕ ಮನೋಭಾವ ಮತ್ತು ಅಂಧಶ್ರದ್ಧೆಯನ್ನು ಬೆಳೆಸುವ ಅಪಾಯದ ಕುರಿತು ಪ್ರಕಟವಾದ ಪತ್ರಿಕಾ ವರದಿಗಳಿಗೆ ಪ್ರತಿಕ್ರಿಯೆಯಾಗಿ ಎಐಡಿಎಸ್‌ಒ, ಮೈಸೂರು ಸೇರಿದಂತೆ ರಾಜ್ಯದೆಲ್ಲೆಡೆ ತನ್ನ ಹೇಳಿಕೆಯನ್ನು ನೀಡಿತ್ತು. ಆದರೆ, ಎಲ್ಲೂ ಹೋರಾಟ ನಡೆಸಿಲ್ಲ. ಸಮಿತಿ ಆಯ್ಕೆ ಮಾಡಿದ ಎಲ್ಲ ಪುಸ್ತಕಗಳೂ ಕೋಮುವಾದಿ ಎಂಬುದೂ ನಮ್ಮ ನಿಲುವಲ್ಲ.ಆದ್ದರಿಂದ ಇಂತಹ ಆರೋಪವನ್ನು ಮಾಡುವ ಮುನ್ನ ಲೇಖಕರು ಸತ್ಯಾಂಶವನ್ನು ಪರೀಕ್ಷಿಸದೇ ಇರುವುದನ್ನು ನೋಡಿದರೆ ‘ಎತ್ತು ಈತು ಅಂದ್ರೆ’ ಎಂಬ ಗಾದೆ ಅವರಿಗೇ ಅನ್ವಯವಾಗುತ್ತದೆ. ವಸಂತಕುಮಾರ್  ಶಿಫಾರಸು ಮಾಡುವ ಆತ್ಮ, ಬ್ರಹ್ಮ, ಶಾಕ್ತ ಪಂಥ, ಸಾಂಖ್ಯ ದರ್ಶನ ಇತ್ಯಾದಿ ವಿಷಯಗಳ ಕುರಿತು ಆಳವಾದ ಅಧ್ಯಯನ ನಡೆಸಿದ ಗ್ರಂಥಗಳು ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಗೆ ಉಪ­ಯೋಗ­ವಾದರೂ ಆಗಬಹುದೇ ವಿನಾ ಪ್ರೌಢಶಾಲಾ ವಿದ್ಯಾರ್ಥಿಗಳಿಗಲ್ಲ.  ಆದರೆ ಇಂತಹ ಕೃತಿಗಳನ್ನು ಶಾಲಾ ಗ್ರಂಥಾಲಯಕ್ಕೆ ಆಯ್ಕೆ ಮಾಡಿರುವುದು ಏಕೆ?ಎಐಡಿಎಸ್‌ಒ ಯಾವುದೇ ಪುಸ್ತಕ ಪ್ರಕಾಶನ ಸಂಸ್ಥೆಯೊಂದಿಗೆ ಸಂಬಂಧ ಹೊಂದಿಲ್ಲ ಮತ್ತು ಆಯ್ಕೆಗಾಗಿ ಯಾವುದೇ ಪುಸ್ತಕವನ್ನು ಸಲ್ಲಿಸಿಲ್ಲ. ಹೀಗಾಗಿ ವ್ಯಾಪಾರಿ ಕಾರಣದಿಂದ ವಿರೋಧ ಮಾಡಲಾಗುತ್ತಿದೆ ಎಂಬ ಆರೋಪ ನಮಗೆ ಅನ್ವಯಿಸದು.  ಆದರೆ, ಒಬ್ಬರೇ ಪ್ರಕಾಶಕರು ವಿವಿಧ ಹೆಸರಲ್ಲಿ ನೀಡಿದ ೪೯ ಪುಸ್ತಕಗಳನ್ನು ಆಯ್ಕೆ ಮಾಡಿರುವುದು ಮತ್ತು ಇತರ ಅವ್ಯವಹಾರಗಳ ಬಗ್ಗೆ ಸೂಕ್ತ ತನಿಖೆ ಆಗಬೇಕು ಎಂದು ಎಐಡಿಎಸ್‌ಒ ನೀಡಿದ ಹೇಳಿಕೆಗೆ ವಸಂತಕುಮಾರ್  ಇಷ್ಟೊಂದು ವಿಚಲಿತರಾಗಿದ್ದೇಕೆ? ‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ಪಟ್ಟಿಯಲ್ಲಿದ್ದ ೨೬ ಪುಸ್ತಕಗಳಲ್ಲಿ ಕೇವಲ 2–3 ಕೃತಿಗಳನ್ನು ಅವರು ಸಮರ್ಥಿಸಿದ್ದಾರೆ. ಉಳಿದ ಪುಸ್ತಕಗಳ ಬಗ್ಗೆ ಅವರ ನಿಲುವೇನು?ನಮ್ಮ ದೇಶದ ಶಿಕ್ಷಣವು ವೈಜ್ಞಾನಿಕ ಹಾಗೂ ಧರ್ಮನಿರಪೇಕ್ಷ ಆಗಿರಬೇಕು ಎಂಬುದು ಎಐಡಿಎಸ್‌ಒ ನಿಲುವು. ಶಾಲೆಗಳಿಗೆ ಆಯ್ಕೆಯಾದ ಪುಸ್ತಕಗಳು ಈ ಆಶಯ­ಗಳಿಗೆ ಮಾರಕವಾಗಿದ್ದು ಅವುಗಳನ್ನು ಪ್ರೌಢಶಾಲೆ­ಗಳ ಗ್ರಂಥಾಲಯಗಳಿಗೆ ವಿತರಿಸುವ ನಿರ್ಧಾರ ಹಿಂಪಡೆಯ­ಬೇಕು ಎಂಬುದು ನಮ್ಮ ಆಗ್ರಹ. ಅದಕ್ಕೆ ಈಗಲೂ ಬದ್ಧ.ಸರ್ಕಾರ ಯಾವ ಪಕ್ಷದ್ದೇ ಆದರೂ, ಶಿಕ್ಷಣದ ನೈಜ ಆಶಯಗಳಿಗೆ ಧಕ್ಕೆ ತರುವಂತಹ ನೀತಿಗಳನ್ನು ಜಾರಿ ಮಾಡಿದರೆ ಎಐಡಿಎಸ್‌ಒ ದನಿ ಎತ್ತುತ್ತದೆ. ತತ್ವಬದ್ಧ ಹೋರಾಟವನ್ನು ಸರ್ಕಾರದ ‘ಬಣ್ಣ’ ನೋಡಿ ತೀರ್ಮಾನಿಸುವ ಪೂರ್ವಗ್ರಹ ಎಐಡಿಎಸ್‌ಒಗೆ ಇಲ್ಲ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.