ಶನಿವಾರ, ಜೂನ್ 19, 2021
26 °C

‘ಚುನಾವಣೆ ಅಲ್ಲ; ಧರ್ಮಯುದ್ಧ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ‘ಇದು ಕೇವಲ ಲೋಕಸಭಾ ಕ್ಷೇತ್ರಕ್ಕೆ ನಡೆಯುತ್ತಿರುವ ಚುನಾವಣೆಯಲ್ಲ. ಇದು ಧರ್ಮ ಯುದ್ಧ. ಇದರಲ್ಲಿ ಬಿಜೆಪಿ ಗೆಲ್ಲಲೇ ಬೇಕು. ಈ ಬಾರಿ ನರೇಂದ್ರ ಮೋದಿ ನೇತೃತ್ವದಲ್ಲಿ ಪಕ್ಷ ಕೇಂದ್ರದಲ್ಲಿ ಸ್ವಂತ ಸರ್ಕಾರ ರಚಿಸಲಿದೆ’ ಎಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಂತಕುಮಾರ್‌ ಹೆಗಡೆ ಹೇಳಿದರು.ಇಲ್ಲಿನ ದೈವಜ್ಞ ಸಭಾಭವನದಲ್ಲಿ ಗುರುವಾರ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ  ಅವರು ಮಾತನಾಡಿ ದರು. ‘ದೇಶದಲ್ಲಿ ಭ್ರಷ್ಟಾಚಾರಕ್ಕೆ ಮುಕ್ತಿ ಬೇಕಿದೆ. ಹೀಗಾಗಿ ಈ ಚುನಾ ವಣೆ ಯುಗ ಪರಿವರ್ತನೆಯ ಕ್ಷಣ. ಅದಕ್ಕಾಗಿ ಎಲ್ಲರೂ ಒಂದಾಗಿ ನರೇಂದ್ರ ಮೋದಿ ಅವರನ್ನು ಬೆಂಬಲಿಸಬೇಕು’ ಎಂದರು.‘ದೇಶದಲ್ಲಿ ಕಾಂಗ್ರೆಸ್‌ ಹುಟ್ಟಿದ್ದೇ ಬ್ರಿಟಿಷರ ಬೂಟ್‌ ಪಾಲೀಶ್‌ ಮಾಡಲು. ಗಾಂಧೀಜಿ, ಸುಭಾಷ ಚಂದ್ರ ಬೋಸ್‌ ಅವರಿಂದಾಗಿ ಅದು ಸ್ವಾತಂತ್ರ್ಯ ಹೋರಾಟದ ಕಡೆ ತಿರು ಗಿತು. ಆದರೆ, ಈಗ ಮತ್ತೆ ಮೂಲ ಸ್ವಭಾವಕ್ಕೆ ಬಂದಿದ್ದು, ಬ್ರಿಟಿಷರಿಗೆ ಸಲಾಂ ಹೊಡೆಯುತ್ತಿದೆ. ಇದರಿಂದ ಭಾರತಕ್ಕೆ ಮತ್ತೊಮ್ಮೆ ಗುಲಾಮಿತನ ಬರುವ ಲಕ್ಷಣ ಇದೆ. ಹೀಗಾಗಿ ದೇಶಕ್ಕೆ ಬಿಜೆಪಿ ಆಡಳಿತ ಅನಿವಾರ್ಯವಾಗಿದೆ’ ಎಂದರು.‘ಅಷ್ಟಕ್ಕೂ ಕಾಂಗ್ರೆಸ್ ನಾಯಕರಿಗೆ ಧಮ್‌ ಇದ್ದರೆ ಗಾಂಧಿ ಕುಟುಂಬವನ್ನು ಬಿಟ್ಟು, ಬೇರೆಯವರು ನಾಯಕ ರಾಗಲಿ.  ವಿದೇಶಿಗರೊಂದಿಗೆ ಇರುವ ಕಾಂಗ್ರೆಸ್‌ಗೆ ನನ್ನ ಧಿಕ್ಕಾರ’ ಎಂದು ಹರಿಹಾಯ್ದರು.‘ಅಭಿವೃದ್ಧಿ ಬಗ್ಗೆ ಮಾತನಾಡುವ ಆರ್‌.ವಿ. ದೇಶಪಾಂಡೆ ಅವರು, ಧಮ್‌ ಇದ್ದರೆ ಲೋಕಸಭೆ ಚುನಾವಣೆಗೆ ಜಿಲ್ಲೆಯಿಂದ ಸ್ಪರ್ಧಿಸಬೇಕಿತ್ತು.  ರಾಜಕೀಯದಲ್ಲಿ ದೇಶಪಾಂಡೆ ಅವರದ್ದು 36 ವರ್ಷದ ಅನುಭವ, ನನ್ನದು 18 ವರ್ಷದ ಅನುಭವ. ತಾಕತ್ತು ಇದ್ದರೆ ಅವರು, ನನ್ನೊಂದಿಗೆ ಮುಕ್ತ ಚರ್ಚೆಗೆ ಬರಲಿ. ಜಿಲ್ಲೆಯಲ್ಲಿ ಅಭಿವೃದ್ಧಿ ಮಾಡಿದವರು ಯಾರು ಎಂಬುದನ್ನು ತೋರಿಸುತ್ತೇನೆ’ ಎಂದು ಸವಾಲು ಹಾಕಿದರು.ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ‘ಬಿಜೆಪಿ ಈಗಾಗಲೇ ಮಾನಸಿಕವಾಗಿ ಗೆದ್ದಿದೆ. ಇನ್ನೇನಿದ್ದರೂ ತಾಂತ್ರಿಕ ಕೆಲಸಗಳು ಮಾತ್ರ. ಅದಕ್ಕಾಗಿ ಪಕ್ಷದ ಕಾರ್ಯಕರ್ತರೆಲ್ಲರೂ ಪ್ರತಿ ಬೂತ್‌ ಮಟ್ಟದಲ್ಲಿ ಹೆಚ್ಚಿನ ಮತ ತರುವ ಗುರಿ ಇಟ್ಟುಕೊಂಡು ಕೆಲಸ ಮಾಡಬೇಕು’ ಎಂದು ಹೇಳಿದರು.ಮಗನಿಗೆ ಹುಡುಗಿ ಕೊಡಿ!

‘ಕಾಂಗ್ರೆಸ್‌ ಅಭ್ಯರ್ಥಿ ಪ್ರಶಾಂತ ದೇಶಪಾಂಡೆ ಬಗ್ಗೆ ನನಗೆ ಕನಿಕರ ಹಾಗೂ ಬೇಸರ ಆಗುತ್ತಿದೆ. ಮದುವೆ ಮಾಡುವಾಗ ಯಾರಿಗಾದರೂ ಹೆಣ್ಣು ಕೊಡಬೇಕು ಅಂದರೆ ಹುಡುಗನನ್ನು ನೋಡಿ ಕೊಡುತ್ತಾರೆ. ಆದರೆ, ಇಲ್ಲಿ ಆರ್‌.ವಿ. ದೇಶಪಾಂಡೆ ಪರಿಸ್ಥಿತಿ ಹೇಗಿದೆ ಅಂದರೆ, ಮಗನ ಮದುವೆ ಮಾಡಬೇಕು. ನನ್ನ ನೋಡಿ ಹುಡುಗಿ ಕೊಡಿ ಎನ್ನುವ ಹಾಗಿದೆ’ ಎಂದು ಲೇವಡಿ ಮಾಡಿದರು.

ಈ ಚುನಾವಣೆ ಅನಂತಕುಮಾರ್‌ ಹೆಗಡೆ ಹಾಗೂ ಪ್ರಶಾಂತ ದೇಶಪಾಂಡೆ ನಡುವಿನ ಸಂಘರ್ಷ ಅಲ್ಲ. ಇದು ಸೈದ್ಧಾಂತಿಕ ಸಂಘರ್ಷ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.