ಶುಕ್ರವಾರ, ಜನವರಿ 17, 2020
20 °C

‘ಜೆಎನ್ಎಂಸಿ ಗುಣಮಟ್ಟ ಇತರರಿಗೆ ಮಾದರಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ಜವಾಹರಲಾಲ್‌ ನೆಹರೂ  ವೈದ್ಯಕೀಯ ಮಹಾವಿದ್ಯಾಲಯದಲ್ಲಿ ತರಬೇತಿ ಪಡೆದ ವೈದ್ಯರು ಪ್ರಪಂಚದ ಯಾವುದೇ ವೈದ್ಯರಿಗೆ ಸರಿಸಾಟಿಯಾಗಿ ಹಾಗೂ ವೃತ್ತಿಯಲ್ಲೂ ಅದ್ಭುತವಾದ ಸಾಧನೆ ಮಾಡಿದ್ದಾರೆ’ ಎಂದು ಕರ್ನಾಟಕ ಮಾನಸಿಕ ಕಾರ್ಯಪಡೆಯ ಅಧ್ಯಕ್ಷ  ಡಾ. ಅಶೋಕ ಪೈ ಹೇಳಿದರು.ಕೆಎಲ್‌ಇ ಸಂಸ್ಥೆಯ ಜವಾಹರಲಾಲ್‌ ನೆಹರೂ ವೈದ್ಯಕೀಯ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಪುನರ್ ಮಿಲನ ಕಾರ್ಯ­ಕ್ರಮವನ್ನು, ಇದೇ ಕಾಲೇಜಿನ ಪ್ರಥಮ ತಂಡದ ವಿದ್ಯಾರ್ಥಿಯೂ ಆಗಿರುವ ಡಾ. ಪೈ ಅವರು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.

ಜೆಎನ್‌ಎಂಸಿ ವಿದ್ಯಾರ್ಥಿಗಳನ್ನು ಪ್ರಪಂಚದಾ­ದ್ಯಂತ ಕಾಣಬಹುದಾಗಿದ್ದು, ಅವರೆಲ್ಲರೂ ವಿದ್ಯಾ­ಲ­ಯದ ಹಿರಿಮೆ- ಗರಿಮೆಯನ್ನು ಹೆಚ್ಚಿಸಿ­ದ್ದಾರೆ. ಸುವರ್ಣ ಸಂಭ್ರಮದ ವರ್ಷವ­ನ್ನಾಚರಿಸುತ್ತಿರುವ ಸಂಸ್ಥೆಯು ಸಮಾಜ ಪರ ಕಳಕಳಿ ವಹಿಸಿ ಗ್ರಾಮೀಣ ಸಮುದಾಯಕ್ಕೆ ಸೇವೆ ಸಲ್ಲಿಸುತ್ತಿ­ರುವುದು ಶ್ಲಾಘನೀಯ ಎಂದ ಅವರು, ತಮಗೆ ಕಥೆ, ಕಾದಂಬರಿ, ನಾಟಕ ಮತ್ತು ಸಾಮಾಜಿಕ ಕಾರ್ಯಚಟುವಟಿಕೆಗಳಿಗೆ ಪ್ರೇರಣೆ ನೀಡಿದ ಸ್ಥಳ ಈ ಕಾಲೇಜು ಎಂದು ಹೆಮ್ಮೆಯಿಂದ ಹೇಳಿದರು.ಒತ್ತಡ, ಖಿನ್ನತೆ, ಮದ್ಯವ್ಯಸನ ಹೆಚ್ಚುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ಪೈ, ಆರೋಗ್ಯಯುತ ಸಮಾಜ ನಿರ್ಮಾಣ ದೃಷ್ಟಿಯಲ್ಲಿಟ್ಟುಕೊಂಡು ರಾಜ್ಯ ಸರ್ಕಾರ 30 ಜಿಲ್ಲೆಗಳಲ್ಲಿ 60 ಹಾಸಿಗೆಗಳ ಮಾನಸಿಕ ಸ್ವಾಸ್ಥ್ಯ ಕೇಂದ್ರ ಹಾಗೂ 10 ವ್ಯಸನ ಮುಕ್ತಿ ಕೇಂದ್ರಗಳನ್ನು ಸ್ಥಾಪಿಸಲು ನಿರ್ಧರಿದೆ. ಈ ಯೋಜನೆಯ ರೂಪುರೇಷೆಗಳನ್ನು ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಗಮನಕ್ಕೂ ತರಲಾಗಿದೆ ಎಂದು ತಿಳಿಸಿದರು.‘ಹಳೆಯ ವಿದ್ಯಾರ್ಥಿಗಳು ವಿದ್ಯಾಸಂಸ್ಥೆಯ ರಾಯಭಾರಿಗಳಿದ್ದಂತೆ. ಅವರು ವಿದ್ಯಾ ಸಂಸ್ಥೆಯ ಜೊತೆಗೆ ಒಳ್ಳೆಯ ನಿಕಟ ಸಂಬಂಧ ಹೊಂದಿರುವದು ಸಂತೋಷ ಉಂಟುಮಾಡಿದೆ’ ಎಂದು ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯಾ­ಧ್ಯಕ್ಷ ಹಾಗೂ ಸಂಸದ ಡಾ. ಪ್ರಭಾಕರ ಕೋರೆ ಹೇಳಿದರು.ದೂರದ ಹಾಗೂ ಹೊರ ದೇಶದಿಂದ ಬಂದ ವೈದ್ಯರು ಸೇವೆಯನ್ನು ಕೊಂಡಾಡಿದ ಕೋರೆ, ಜೆಎನ್‌ಎಂಸಿ ಗ್ರಾಮೀಣ ಸಮುದಾಯದ ಆರೋಗ್ಯ ಸುಧಾರಣೆಯತ್ತ ಗಮನ ನೀಡಿದೆ. ರೋಗಗಳು ಹರಡದಂತೆ ಮುನ್ನೆಚ್ಚರಿಕೆ ಕ್ರಮ, ಆರೋಗ್ಯದ ಕುರಿತು ಶಿಕ್ಷಣ ಹಾಗೂ ಆರೋಗ್ಯ ತಪಾಸಣಾ ಶಿಬಿರಗಳನ್ನು ಏರ್ಪಡಿಸಲಾಗುತ್ತಿದೆ ಎಂದು ತಿಳಿಸಿದರು.  ವೈದ್ಯಕೀಯ ಶಿಕ್ಷಣ ವಿಭಾಗವು ಅಮೆರಿಕದ ಶಿಕಾಗೋ ವಿಶ್ವವಿದ್ಯಾಲಯದ ಜೊತೆ ಒಡಂಬಡಿಕೆ ಮಾಡಿಕೊಂಡು ವೈದ್ಯಕೀಯ ಶಿಕ್ಷಣ ಗುಣಮಟ್ಟದ ಸುಧಾರಣೆ ಹಾಗೂ ತಂತ್ರಜ್ಞಾನದ ಮೂಲಕ ಶಿಕ್ಷಣ ನೀಡುವ ನಿಟ್ಟಿನಲ್ಲಿ ಶ್ರಮವಹಿಸುತ್ತಿದೆ ಎಂದರು.ಡಾ. ಎಸ್.ಜಿ.ದೇಸಾಯಿ, ಡಾ. ಎಚ್.ಬಿ. ರಾಜಶೇಖರ, ಡಾ. ಸಿ.ಕೆ.ಕೊಕಾಟೆ, ಡಾ. ವಿ.ಡಿ. ಪಾಟೀಲ, ಡಾ. ಅಜೀತ ಕುಲಕರ್ಣಿ, ಡಾ. ಎಂ.ಡಿ. ದೀಕ್ಷಿತ, ಡಾ. ವಿ.ಎ.ಕೋಟಿವಾಲೆ ಉಪಸ್ಥಿತ­ರಿದ್ದರು. 2000 ಹಳೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಡಾ. ಎ.ಎಸ್.ಗೋಧಿ ಸ್ವಾಗತಿಸಿದರು. ಡಾ. ಎನ್.ಎಸ್.ಮಹಾಂತಶೆಟ್ಟಿ ವಂದಿಸಿದರು.

ಪ್ರತಿಕ್ರಿಯಿಸಿ (+)