ಮಂಗಳವಾರ, ಜೂನ್ 15, 2021
21 °C

‘ತೋಳ್ಬಲ, ಹಣ ಬಲದಿಂದ ಅಧಿಕಾರಕ್ಕೆ ಬರುವವರನ್ನು ತಡೆಯಿರಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ‘ಲೋಕಸಭೆ ಚುನಾವಣೆಯಲ್ಲಿ ಕೇವಲ ಹಣ ಬಲ ಹಾಗೂ ತೋಳು ಬಲದಿಂದ ಅಧಿಕಾರಕ್ಕೆ ಬರುವ ವ್ಯಕ್ತಿಗಳನ್ನು ತಡೆದು ಉತ್ತಮ ಆಡಳಿತ ನೀಡುವವರನ್ನು ಆಯ್ಕೆ ಮಾಡಬೇಕು ಎಂಬ ಮನೋಭಾವ ಮತದಾರರಲ್ಲಿ ಬರಬೇಕಾಗಿದೆ’ ಎಂದು ಕೇಂದ್ರ ಚುನಾವಣಾ ಆಯೋಗದ ಮತದಾರರ ಜಾಗೃತಿ ವೀಕ್ಷಕ ವೈ.ಕೆ.ಬವೇಜಾ ಹೇಳಿದರು.ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ವತಿಯಿಂದ ಮಂಗಳವಾರ ಇಲ್ಲಿನ ಡಾ.ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಮತ ಶಕ್ತಿಯೇ ಜನ ಶಕ್ತಿ ಎಂಬ ಜಾಗೃತಿ ಅಭಿಯಾನ ಜಿಲ್ಲಾಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರೂ ಮತ ಚಲಾವಣೆ ಮಾಡುವುದು ಅವರ ಹಕ್ಕಾಗಿದೆ. ಆ ಹಕ್ಕಿನ ಮೂಲಕ ಉತ್ತಮ ಜನಪರ ಕಾಳಜಿಯುಳ್ಳ ಸರ್ಕಾರವನ್ನು ಅಧಿಕಾರಕ್ಕೆ ತರಲು ಲೋಕಸಭೆ ಚುನಾವಣೆ ವೇದಿಕೆಯಾಗಲಿದೆ. ಭಾರತದಲ್ಲಿ ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಸುವ ಮೂಲಕ ಪ್ರತಿಯೊಬ್ಬ ಅರ್ಹ ಮತದಾರರು ಸ್ವಯಂ ಸ್ಪೂರ್ತಿಯಿಂದ ಚುನಾವಣೆಗಳಲ್ಲಿ ಪಾಲ್ಗೊಳ್ಳು­ವಂತೆ ಸ್ವೀಪ್ ಸಮಿತಿ ಜಾಗೃತಿ ಮೂಡಿಸುತ್ತಿದೆ. ಆದ್ದರಿಂದ ನಾಗರಿಕರು ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ಸ್ವಯಂ ಸ್ಪೂರ್ತಿಯಿಂದ ಮತ ಹಾಕಬೇಕು. ಒಳ್ಳೆಯ ಚಾರಿತ್ರ್ಯವುಳ್ಳ ವ್ಯಕ್ತಿಯನ್ನು ಗುರುತಿಸಿ ಆಯ್ಕೆ ಮಾಡಿ, ಸದೃಢ ದೇಶವನ್ನು ನಿರ್ಮಾಣ ಮಾಡುವ ಪಣ ತೊಡಬೇಕು’ ಎಂದರು.ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ರಮಣದೀಪ ಚೌಧರಿ ಮಾತನಾಡಿ, ‘ಭಾರತ ದೊಡ್ಡ ಸಂವಿಧಾನ ಹೊಂದಿರುವ ಎರಡನೇ ದೇಶವಾಗಿದೆ. ಅಲ್ಲದೇ ಇಲ್ಲಿ ಮತದಾನ ಮಾಡುವ ಹಕ್ಕು ಎಲ್ಲರಿಗೂ ಇದೆ. ಆದರೆ, ಈ ಹಕ್ಕುನ್ನು ಯಾರೂ ಸದುಪಯೋಗಪಡಿಸಿಕೊ­ಳ್ಳುತ್ತಿಲ್ಲ. ಇದೂವರೆಗೆ ಕೆಲವರು ಮತದಾನ ಪಟ್ಟಿಯಲ್ಲಿ ತಮ್ಮ ಹೆಸರನ್ನೇ ನೋಂದಾವಣೆ ಮಾಡಿಲ್ಲ. ವಿಶೇಷವಾಗಿ ಮಹಿಳೆಯರು ಈ ಮತದಾನದತ್ತ ಹೆಚ್ಚು ಆಸಕ್ತಿ ವಹಿಸಬೇಕಿದೆ. ಈ ನಿಟ್ಟಿನಲ್ಲಿ ಸ್ವೀಪ್‌ ಸಮಿತಿ ವಿವಿಧ ರೀತಿಯಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳು­ತ್ತಿದ್ದು, ಪ್ರಮುಖವಾಗಿ ಶಾಲಾ ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲಾಗುತ್ತಿದೆ’ ಎಂದರು.ಅಧ್ಯಕ್ಷತೆ ವಹಿಸಿದ್ದ ಸ್ಪೀಪ್‌ ಸಮಿತಿ ಜಿಲ್ಲಾ ಅಧ್ಯಕ್ಷ ಹಾಗೂ ಜಿ.ಪಂ.ಸಿಇಓ ಪಿ.ಎ.ಮೇಘಣ್ಣ­ವರ, ‘ಇಲ್ಲಿಯವರೆಗಿನ ಎಲ್ಲ ಚುನಾವಣೆಗಳಲ್ಲಿ ಮತದಾನ ಪ್ರಮಾಣವನ್ನು ಅವಲೋಕಿಸಿದಾಗ ಸುಶಿಕ್ಷಿತರು ಹಾಗೂ ಪ್ರಜ್ಞಾವಂತರೇ ಮತದಾನದಿಂದ ದೂರ ಉಳಿದಿರುವುದು ಕಂಡು ಬಂದಿದೆ. ಧಾರವಾಡ ಲೋಕಸಭಾ ಕ್ಷೇತ್ರವನ್ನು ನೋಡಿದಾಗ ಹುಬ್ಬಳ್ಳಿ- ಧಾರವಾಡ ಶಹರ ಭಾಗವು ಎಲ್ಲ ಚುನಾವಣೆಗಳಲ್ಲಿ ಅತೀ ಕಡಿಮೆ ಪ್ರತಿಶತ ಮತ ಚಲಾವಣೆಯಾಗಿದ್ದು ಕಂಡುಬಂದಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಈ ಭಾಗಗಳಲ್ಲಿ ಹೆಚ್ಚಿನ ಮತದಾನವಾಗುವಂತೆ ನಾಗರಿಕರಿಗೆ ತಿಳಿವಳಿಕೆ ನೀಡುವ ಕಾರ್ಯವನ್ನು ಹಮ್ಮಿಕೊಂಡಿದೆ. ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಕುಂದಗೋಳ ಹಾಗೂ ನವಲಗುಂದ ಕ್ಷೇತ್ರಗಳಲ್ಲಿ ಶೇ 60 ರಷ್ಟು ಗರಿಷ್ಠ ಮತದಾನವಾಗಿತ್ತು. ಆದರೆ, ಈ ಬಾರಿ ಶೇ 80ಕ್ಕೂ ಹೆಚ್ಚು ಮತದಾನ ಮಾಡುವ ಗುರಿ ಹೊಂದಿ­ದ್ದೇವೆ. ಕಲಘಟಗಿ ವಿಧಾನಸಭಾ ಕ್ಷೇತ್ರ­ದಲ್ಲಿ ಲಿಂಗಾನುಪಾತದ ವ್ಯತ್ಯಾಸ ತುಂಬ ಕಂಡು­ಬರುತ್ತಿದ್ದು, ಇದನ್ನು ಸರಿಪಡಿಸುವ ಬಗ್ಗೆ ಅಲ್ಲಿನ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಹಮ್ಮಿ­ಕೊಂಡಿದ್ದೇವೆ. ಸದ್ಯ ಜಿಲ್ಲಾ ಮಟ್ಟದ ಸ್ವೀಪ್ ಸಮಿತಿ­ಯನ್ನು ಮತದಾನದ ಜಾಗೃತಿಗಾಗಿ ನೇಮಿಸಿ­ಕೊಂಡು ಬೂತ್‌ ಮಟ್ಟದಿಂದಲೇ ಜನತೆ­ಯಲ್ಲಿ ಮತದಾನದ ಹಕ್ಕಿನ ಬಗ್ಗೆ ತಿಳಿವಳಿಕೆ ನೀಡಲಾಗುತ್ತಿದೆ’ ಎಂದರು.ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಧ್ಯಾಪಕ ಪ್ರೊ.ಆರ್‌.ವಿ.ಹೊರಡಿ ವಿಶೇಷ ಉಪನ್ಯಾಸ ನೀಡಿದರು. ವಾರ್ತಾ ಇಲಾಖೆ ವಾರ್ತಾಧಿಕಾರಿ ಸಿ.ಪಿ.ಮಾಯಾಚಾರಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ.ಬಿ.ಕೆ.ಎಸ್‌. ವರ್ಧನ್‌ ಇದ್ದರು. ಗುರು­ಮೂರ್ತಿ ಯರಗಂಬಳಿಮಠ ನಿರೂಪಿಸಿದರು. ಅಲ್ಲದೇ ಇದೇ ಸಂದರ್ಭದಲ್ಲಿ, ಅಂಚೆ ಇಲಾಖೆ­ಯಿಂದ ಲಕೋಟೆಯನ್ನು ಖರೀದಿಸುವ ಗ್ರಾಹಕ­ರಿಗೆ, ಲಕೋಟೆಗಳ ಮೇಲೆ ಕಡ್ಡಾಯವಾಗಿ ಮತ­ದಾನ ಮಾಡಬೇಕು ಎಂಬ ಸಂದೇಶ ಸಾರುವ ಮುದ್ರೆಗಳನ್ನು ಒತ್ತಿ ಕೊಡಬೇಕು ಎಂದು ಅಂಚೆ ಇಲಾಖೆ ಅಧಿಕಾರಿಗಳಿಗೆ ಮುದ್ರೆಗಳನ್ನು ನೀಡ­ಲಾಯಿತು. ನಂತರ ವಿವಿಧ ಕಲಾ ತಂಡಗಳಿಂದ ಮತದಾನದ ಕುರಿತು ಜಾಗೃತಿ ಮೂಡಿಸುವ ಕಿರು ನಾಟಕಗಳು ಪ್ರದರ್ಶನಗೊಂಡವು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.