ಮಂಗಳವಾರ, ಜನವರಿ 21, 2020
18 °C

‘ನರಭಕ್ಷಕ’ ಖಚಿತತೆಗೆ ಪರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಬಂಡೀಪುರ ಹುಲಿ ಯೋಜನೆ ವ್ಯಾಪ್ತಿಯ ಕಾರೆಕಟ್ಟೆ ಅರಣ್ಯ ಪ್ರದೇಶ­ದಲ್ಲಿ ಗುರುವಾರ ಸೆರೆ ಹಿಡಿದಿರುವ ಹುಲಿಯು ನರಭಕ್ಷಕವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಅದರ ಮಲ, ಮೂತ್ರ, ರಕ್ತ ಮುಂತಾ­ದವುಗಳ ಸರಣಿ ಪರೀಕ್ಷೆ ಪ್ರಕ್ರಿಯೆ ಆರಂಭವಾಗಿದೆ. ಇಲ್ಲಿನ ಚಾಮರಾಜೇಂದ್ರ ಮೃಗಾ­ಲ­ಯಕ್ಕೆ ಗುರುವಾರ ರಾತ್ರಿ ಹುಲಿಯನ್ನು ತಂದ ನಂತರದ ಎರಡು ದಿನಗಳವರೆಗೆ ಸಂಗ್ರಹಿಸಿದ ಮಲ, ಮೂತ್ರ  ಮತ್ತು ರಕ್ತವನ್ನು  ಹೈದರಾ­ಬಾದ್‌­ನಲ್ಲಿರುವ ಪ್ರಯೋಗಾಲಯಕ್ಕೆ ರವಾನಿಸ­ಲಾಗು­ವುದು.

ಮಲಮೂತ್ರ­ದ­ಲ್ಲಿನ ಡಿಎನ್‌ಎ ಆಧರಿಸಿ ಇದು ನರಭಕ್ಷಕ ಹುಲಿ ಹೌದೇ ಅಲ್ಲವೇ ಎಂಬು­ದನ್ನು ನಿರ್ಧರಿಸಬಹು­ದಾಗಿದೆ. ಮಲ ಮೂತ್ರದಲ್ಲಿ ಮಾನವ ಡಿಎನ್ಎ ಪತ್ತೆಯಾದರೆ ಮಾತ್ರ ಅದು ನರಭಕ್ಷಕವಾಗಿರುತ್ತದೆ ಎಂದು ಹುಲಿ ಆರೈಕೆ ನಿರ್ವಹಿಸುತ್ತಿರುವ ಮೃಗಾಲ­ಯದ ಪಶುವೈದ್ಯ ಡಾ.ಪ್ರಶಾಂತ್‌ ತಿಳಿಸಿದ್ದಾರೆ.ಹುಲಿಯ ಎಡಭಾಗದ ಗಲ್ಲ, ಹೊಟ್ಟೆ ಕೆಳಭಾಗದಲ್ಲಿ ಮುಳ್ಳು­ಹಂದಿ ಮುಳ್ಳುಗಳು ಚುಚ್ಚಿಕೊಂಡಿವೆ ಮತ್ತು ಬಲಗಾಲಿನ ಪಾದ ಗಾಯಗೊಂಡಿದೆ. ಹುಲಿಯ ದವಡೆಗಳು ಸವೆದಿವೆ. ಹುಲಿ ನಿತ್ರಾಣಗೊಂಡಿದೆ. ಬಾಯಿಗೆ ಮುಳ್ಳು ಹೊಕ್ಕಿರುವುದ­ರಿಂದ ಮತ್ತು ದವಡೆ ಸವೆದಿರುವುದರಿಂದ ಅದಕ್ಕೆ ಆಹಾರ ಜಗಿಯಲು ಕಷ್ಟವಾಗಿದೆ. ಶುಕ್ರವಾರ ಮಧ್ಯಾಹ್ನ ಹಂದಿ ಮಾಂಸ ನೀಡ­-ಲಾ­ಗಿದ್ದು, ಅದನ್ನು ತಿಂದಿದೆ. ಹುಲಿ ಚೇತ­ರಿಸಿ­ಕೊಳ್ಳಲು ಒಂದೆರಡು ದಿನ­ಗಳು ಬೇಕಾಗಲಿದೆ ಎಂದು  ಹೇಳಿದ್ದಾರೆ.ಹುಲಿಯ ಚಲನವಲನಗಳನ್ನು ಗಮ­ನಿ­ಸಲಾಗುತ್ತಿದೆ.ಅರಿವಳಿಕೆ ಚುಚ್ಚು­ಮದ್ದಿನ ಪ್ರಭಾವ ಇಳಿದ ನಂತರ ಎಚ್ಚೆತ್ತ ಹುಲಿಯು ಗುರುವಾರ ರಾತ್ರಿ 11 ಗಂಟೆ ವೇಳೆಗೆ ಮೃಗಾಲಯದ ಕೋಣೆಯ ಸಂಕೋಲೆ­ಯಿಂದ ತಪ್ಪಿಸಿ­ಕೊಳ್ಳಲು ಹೋರಾಟ ನಡೆಸಿತ್ತು. ಕೋಣೆಯ ಬಾಗಿಲಿಗೆ ಅಳವಡಿಸಿರುವ ಕಬ್ಬಿಣದ ಕಂಬಿಗಳನ್ನು ಹಲ್ಲಿನಿಂದ ಕಚ್ಚಿದ್ದು, ಎರಡು ಹಲ್ಲುಗಳು ತುಂಡಾಗಿವೆ. ಕಂಬಿಗಳನ್ನು ಮುರಿಯಲು ಪ್ರಯತ್ನಿಸಿ, ಒಂದೆರಡನ್ನು ಕೊಂಚ ಬಾಗಿಸಿದೆ. ಕೋಣೆಯೊಳಗಿನ ನೆಲಹಾಸಿನ ಸಿಮೆಂಟ್‌ ಅನ್ನು ಉಗುರಿನಿಂದ ಕೆರೆದಿದೆ.ಬಂಡೀಪುರ ಅರಣ್ಯದಲ್ಲಿ ಸ್ವತಂತ್ರವಾಗಿ ಓಡಾಡಿಕೊಂಡಿದ್ದ ಕಾಡಿನ ‘ಅನಭಿಷಿಕ್ತ ದೊರೆ’ಗೆ ಸೆರೆವಾಸ, ಮೃಗಾಲಯ ವಾತಾವರಣ ಹೊಸದಾಗಿರುವುದರಿಂದ ನಿಧಾನವಾಗಿ ಹೊಂದಿಕೊಳ್ಳುತ್ತಿದೆ. ಆರ್ಭಟ ಕಡಿಮೆಯಾಗಿದೆ. ಅದು ಆರೋಗ್ಯವಾಗಿದೆ. ಈಗ 10 ವರ್ಷ ವಯಸ್ಸಿನ ಆಸುಪಾಸಿನಲ್ಲಿದೆ ಎಂದಷ್ಟೇ ಹೇಳಬಹುದಾಗಿದೆ. ವೈದ್ಯರು ಈ ಹುಲಿಯ ಬಾಯಿಯಲ್ಲಿನ ಹಲ್ಲುಗಳ ಸಂಖ್ಯೆ, ದವಡೆ ಸವೆತ ಪರೀಕ್ಷಿಸಿ ವರದಿ ನೀಡಿದ ನಂತರ ಅದರ ನಿಖರ ವಯಸ್ಸು ತಿಳಿಯಲಿದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ. ರವಿ ತಿಳಿಸಿದ್ದಾರೆ.ನ. 26ರಂದು ಎಚ್‌.ಡಿ. ಕೋಟೆ ತಾಲ್ಲೂಕಿನ ಬಂಡೀಪುರ ಕಾಡಿನಂಚಿನ ನಡಹಾಡಿಯಲ್ಲಿ ಬಸವರಾಜು, 29ರಂದು ಸೀಗೆವಾಡಿ ಹಾಡಿಯಲ್ಲಿ ಚೆಲುವ, ಡಿ.3ರಂದು ಚಿಕ್ಕಬರಗಿ ಗ್ರಾಮದ ಬಸಪ್ಪ ಎಂಬುವವರು ಹುಲಿ ಬಾಯಿಗೆ ಆಹಾರವಾಗಿದ್ದರು. ಹುಲಿಯು ಬಸಪ್ಪ ಅವರ ರುಂಡಮುಂಡಗಳನ್ನು ಬೇರ್ಪಡಿಸಿ ಮಾಂಸ  ಭಕ್ಷಿಸಿತ್ತು. ಮೃಗಾಲಯದ ಪ್ರಾಣಿ ಪಾಲಕರು ಈ ಹುಲಿಗೆ ಪ್ರೀತಿಯಿಂದ ‘ಶಿವ’ ಎಂದು ಕರೆಯುತ್ತಿದ್ದಾರೆ. ಕೂಗಿದ ತಕ್ಷಣವೇ ಪ್ರಾಣಿಗೆ ತನ್ನನ್ನು ಯಾರೋ ಕೂಗುತ್ತಿದ್ದಾರೆ ಎಂಬ ಅರಿವು ಮೂಡಲಿ ಎಂಬ ಕಾರಣಕ್ಕೆ ಪ್ರಾಣಿ ಪಾಲಕರು ಮೃಗಾಲಯಗಳಲ್ಲಿ ಹೆಸರು ಹಿಡಿದು ಕೂಗುವ ಪರಿಪಾಠ ಇದೆ.

ಪ್ರತಿಕ್ರಿಯಿಸಿ (+)