ಮಂಗಳವಾರ, ಜೂಲೈ 7, 2020
28 °C
ನಾದದ ಬೆನ್ನೇರಿ...

‘ನಾದ ತರಂಗಿಣಿ’ಯ ಸಂಗೀತದ ಶಿಸ್ತು

– ಉಮಾ ಅನಂತ್ Updated:

ಅಕ್ಷರ ಗಾತ್ರ : | |

ಅಕಾಡೆಮಿಕ್‌ ಆಗಿ ಸಂಗೀತ ಕಲಿತಾಗಲೇ ಮಕ್ಕಳಲ್ಲಿ ‘ಸಂಗೀತದ ಶಿಸ್ತು’ ಬೆಳೆಯಲು ಸಾಧ್ಯ ಎಂಬ ನಂಬಿಕೆಗೆ ಬದ್ಧವಾಗಿರುವ ಸಂಸ್ಥೆ ಬಸವೇಶ್ವರನಗರದ ನಾದತರಂಗಿಣಿ. ಪಿಟೀಲು ಕಲಿಕೆಗೆ ಪ್ರಾಧಾನ್ಯವಿದ್ದರೂ ಹಾಡುಗಾರಿಕೆಗೂ ಸಾಕಷ್ಟು ವಿದ್ಯಾರ್ಥಿಗಳಿದ್ದಾರೆ.

ಪಿಟೀಲಿಗೆ ಸಹೃದಯರನ್ನು ಸೆಳೆಯುವ ಮಾಂತ್ರಿಕ ಶಕ್ತಿಯಿದೆ. ಸೋಲೊ ಅಥವಾ ಪಕ್ಕವಾದ್ಯವಾಗಿ ನುಡಿಸಬಹುದಾದ ಜನಪ್ರಿಯ ವಾದ್ಯವಿದು. ಪಿಟೀಲು ತನಿ, ಸಂಗೀತದಲ್ಲಿ ಎಲ್ಲರೂ ಇಷ್ಟಪಡುವ ಒಂದು ವಿಶಿಷ್ಟ ಪ್ರಕಾರ. ಪಿಟೀಲನ್ನು ಪ್ರಧಾನ ವಾದ್ಯವಾಗಿ ಕಲಿಸುವ ಶಾಲೆಗಳ ಪೈಕಿ ಬಸವೇಶ್ವರ ನಗರದ ‘ನಾದ ತರಂಗಿಣಿ’ ಸಂಗೀತ ಶಾಲೆ ಪ್ರಮುಖವಾದದ್ದು. ಹಾಗಂತ ಇಲ್ಲಿ ಹಾಡುಗಾರಿಕೆಯನ್ನು ಹೇಳಿಕೊಡುವುದಿಲ್ಲವೆಂದಲ್ಲ. ಸಾಕಷ್ಟು ವಿದ್ಯಾರ್ಥಿಗಳು ವಾದನದೊಂದಿಗೆ ಗಾಯನವನ್ನೂ ಕಲಿಯುತ್ತಿದ್ದಾರೆ.

ನಾದ ತರಂಗಿಣಿ ಸಂಗೀತ ಶಾಲೆ ಕಳೆದ 20 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದರೂ ಅಧಿಕೃತವಾಗಿ ಆರಂಭವಾದದ್ದು 2005ರಲ್ಲಿ. ಪ್ರಸ್ತುತ 50 ಮಕ್ಕಳು ಕರ್ನಾಟಕ ಸಂಗೀತ, ಸುಗಮ ಸಂಗೀತ, ಪಿಟೀಲು ಕಲಿಯುತ್ತಿದ್ದಾರೆ. ಜತೆಗೆ ಕೀಬೋರ್ಡ್‌, ಪಿಟೀಲು, ಹಾರ್ಮೋನಿಯಂ, ಪಿಯಾನೊ, ತಬಲಾ ತರಗತಿಗಳಲ್ಲಿ ಐದರಿಂದ 70 ವರ್ಷದವರೆಗಿನ ಶಿಷ್ಯವರ್ಗವನ್ನು ಕಾಣಬಹುದು.ವಿದ್ವಾನ್‌ ಬಳ್ಳಾರಿ ಸುರೇಶ್‌ ಸಂಸ್ಥೆಯ ಮುಖ್ಯಸ್ಥರು. ವಿದುಷಿ ವನಿತಾ ಸಂಗೀತ, ಪಿಟೀಲಿನ ಜತೆಗೆ ಶ್ಲೋಕ, ಭಗವದ್ಗೀತೆ ಹಾಗೂ ಭಕ್ತಿಗೀತೆಗಳನ್ನು ಹೇಳಿಕೊಡುತ್ತಾರೆ. ಸರ್ಕಾರ ನಡೆಸುವ ಸಂಗೀತ ಪರೀಕ್ಷೆಗಳಲ್ಲಿ ನಾದ ತರಂಗಿಣಿಯ ವಿದ್ಯಾರ್ಥಿಗಳು ಅತ್ಯುತ್ತಮ ಅಂಕ ಗಳಿಸಿ ಉತ್ತೀರ್ಣರಾಗಿದ್ದಾರೆ.ವರ್ಷಕ್ಕೊಮ್ಮೆ ನಾದ ತರಂಗಿಣಿ ನಡೆಸುವ ವಾರ್ಷಿಕೋತ್ಸವ ಸಂಸ್ಥೆಯ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ಉತ್ತಮ ವೇದಿಕೆಯಾಗುತ್ತದೆ. ಪುರಂದರ ದಾಸರು, ತ್ಯಾಗರಾಜರ ಮುತ್ತುಸ್ವಾಮಿ ದೀಕ್ಷಿತರು ಮತ್ತು ಮುತ್ತಯ್ಯ ಭಾಗವತರ ಆರಾಧನೋತ್ಸವಗಳಲ್ಲದೆ ರಾಮನವಮಿ, ಗಣೇಶೋತ್ಸವಗಳನ್ನೂ ಸಂಸ್ಥೆ ಪ್ರತೀ ವರ್ಷ ನಡೆಸುತ್ತದೆ.

ನಾದ ತರಂಗಿಣಿ, ಅಕಾಡೆಮಿಕ್‌ ಸಂಗೀತ ಕಲಿಕೆಗೆ ಹೆಸರಾದ ಸಂಸ್ಥೆ. ಸರ್ಟಿಫಿಕೇಟ್‌ ಕೋರ್ಸ್‌ಗಳು, ಆರು ತಿಂಗಳು, ಒಂದು ವರ್ಷ, ಎರಡು ವರ್ಷಗಳ ಕೋರ್ಸ್‌ಗಳನ್ನೂ ಆಯ್ಕೆ ಮಾಡಿಕೊಳ್ಳಬಹುದು. ಇದು ಸಂಗೀತ ಶಾಲೆಯ ವಿಶೇಷ. ‘ಸಂಗೀತವನ್ನು ಅಕಾಡೆಮಿಕ್‌ ಆಗಿ ಅಭ್ಯಾಸ ಮಾಡುವುದರಿಂದ ಮಕ್ಕಳಲ್ಲಿ ‘ಸಂಗೀತದ ಶಿಸ್ತು’ ಬೆಳೆಯುತ್ತದೆ. ಶಿಸ್ತುಬದ್ಧವಾಗಿ ಕಲಿತರೆ ಉತ್ತಮ ಸಂಗೀತಗಾರರಾಗಲು ಸಾಧ್ಯ ಎಂಬುದು ನಮ್ಮ ನಂಬಿಕೆ’ ಎನ್ನುತ್ತಾರೆ ವಿದ್ವಾನ್‌ ಸುರೇಶ್‌.ಹಲವು ಕಾರ್ಯಕ್ರಮ

ನಾದ ತರಂಗಿಣಿ ಸಂಗೀತ ಸಂಸ್ಥೆ ಪ್ರತಿವರ್ಷವೂ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ‘ಷೋಡಶ ಗಣಪತಿ ವೈಭವಂ’ ಎಂಬ ಹೆಸರಿನಡಿ ಗಣೇಶನ ಕೀರ್ತನೆಗಳನ್ನು ಆರಿಸಿಕೊಂಡು ವಿವಿಧ ಕಲಾವಿದರ ಸಹಕಾರದೊಂದಿಗೆ ವೇದಿಕೆಯಲ್ಲಿ ಪ್ರಸ್ತುತಪಡಿಸಿದ್ದು ಸಂಗೀತ ವಲಯದಲ್ಲಿ ಸಾಕಷ್ಟು ಹೆಸರು ಗಳಿಸಿದೆ. ಜತೆಗೆ ತ್ಯಾಗರಾಜರ ದಿವ್ಯನಾಮ ಸಂಕೀರ್ತನೆಗಳು, ಶ್ರೀ ಕ್ಷೇತ್ರ ಗುರುಗುಹಾಂಜಲಿ-ಮುತ್ತುಸ್ವಾಮಿ ದೀಕ್ಷಿತರ, ಕನಕದಾಸರು, ಪುರಂದರದಾಸರು, ತ್ಯಾಗರಾಜರ ಕೀರ್ತನೆಗಳನ್ನು ಸಂಸ್ಥೆಯಲ್ಲಿ ಹಾಡಲಾಗುತ್ತದೆ. ಇದರಿಂದ ಮಕ್ಕಳಿಗೆ ಸಂಗೀತದಲ್ಲಿ ಹೆಚ್ಚಿನ ಜ್ಞಾನ ಬರಲು ಸಹಕಾರಿಯಾಗುತ್ತದೆ.ಈ ಸಂಗೀತ ಸಂಸ್ಥೆಯ ಕಳೆದ ಮೂರು ವರ್ಷಗಳಿಂದ, ನಾಡಿನ ಹಿರಿಯ ಕಲಾವಿದರೊಬ್ಬರಿಗೆ ‘ನಾದ ಕಲಾವಾರಿಧಿ’ ಎಂಬ ಬಿರುದು ನೀಡಿ ಗೌರವಿಸುತ್ತಿದೆ. ಈವರೆಗೆ ಗಾಯನದಲ್ಲಿ ವಿದ್ವಾನ್ ಶಂಕರ ನಾಯಕ, ಕೊಳಲಿನಲ್ಲಿ ಬಿ.ಜಿ ಶ್ರೀನಿವಾಸ ಹಾಗೂ ವಿದ್ವಾನ್‌ ಆರ್. ಪರಮಶಿವನ್ ಈ ಬಿರುದಿಗೆ ಪಾತ್ರರಾಗಿದ್ದಾರೆ. ಸಂಗೀತದ ಹಿರಿಯ ವಿದ್ವಾಂಸರನ್ನು ಸಹ ಸನ್ಮಾನಿಸಲಾಗಿದೆ.ಮನೆಯೇ ಮೊದಲ ಶಾಲೆ

ವಿದ್ವಾನ್‌ ಬಿ. ಸುರೇಶ್‌ ಅವರಿಗೆ ಮನೆಯೇ ಮೊದಲ ಪಾಠ ಶಾಲೆ. ತಂದೆ ಕೆ. ರಾಧಾಕೃಷ್ಣ ಹಾಗೂ ತಾಯಿ ಸುಂದರಮ್ಮ ಅವರ ಬಳಿ ಸಂಗೀತದ ಆರಂಭಿಕ ಶಿಕ್ಷಣ ಪಡೆದರು. ಎಳೆಯ ವಯಸ್ಸಿನಲ್ಲೇ ಪಿಟೀಲು ನಾದಕ್ಕೆ ಮಾರು ಹೋಗಿ, ವಿದುಷಿ ಬಿ.ವಿ ಸುಭದ್ರಾಬಾಯಿ ಅವರಲ್ಲಿ ಪಿಟೀಲಿನ ಅಭ್ಯಾಸ ಮುಂದುವರಿಸಿದರು. ಇದರಲ್ಲಿ ಸೀನಿಯರ್ ಗ್ರೇಡ್ ಪರೀಕ್ಷೆಯನ್ನು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದರು.ಓದಿದ್ದು ಬಿ.ಎಸ್ಸಿ ಹಾಗೂ ಸಿ.ಪಿ.ಎಡ್ ಪದವಿ. ಆದರೂ ಬದುಕಿಗಾಗಿ ಆಯ್ದುಕೊಂಡದ್ದು ಸಂಗೀತವನ್ನು. ಪಿಟೀಲಿನಲ್ಲಿ ಹೆಚ್ಚಿನ ಸಾಧನೆ ಮಾಡಬೇಕು ಎಂಬ ಉದ್ದೇಶದಿಂದ ಬಳ್ಳಾರಿಯಿಂದ ಬೆಂಗಳೂರಿಗೆ ಬಂದು ಸಂಗೀತ ‌ಕಲಾರತ್ನ ಪ್ರೊ. ಎಚ್.ವಿ. ಕೃಷ್ಣಮೂರ್ತಿ ಅವರಲ್ಲಿ ಸತತವಾಗಿ ಪಿಟೀಲು ಅಭ್ಯಾಸ ಮಾಡಿ ವಿದ್ವತ್‌ ಪರೀಕ್ಷೆಯನ್ನೂ ಪಾಸಾದರು. ಬಸವೇಶ್ವರ ನಗರದಲ್ಲಿರುವ ಎಸ್.ಕಡಾಂಬಿ ವಿದ್ಯಾಕೇಂದ್ರ ಸಂಗೀತ ಶಿಕ್ಷಕರಾಗಿ ಕಳೆದ 20 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಇವರು ಈಗಾಗಲೇ ಅನೇಕ ಕಛೇರಿ ನೀಡಿ ಸಂಗೀತ ಕ್ಷೇತ್ರದಲ್ಲಿ ಭದ್ರವಾಗಿ ನೆಲೆ ನಿಂತರು.ಪಿಟೀಲಿನ ಜತೆಗೆ ಸೇಲಂ ಪಿ. ಸುಂದರೇಶನ್ರವರ ಬಳಿ ಗಾಯನವನ್ನು, ಅನಂತ ಭಾಗವತ ಅವರ ಬಳಿ ಹಿಂದೂಸ್ತಾನಿ ಗಾಯನವನ್ನು ಕಲಿತವರು. ಸಂಗೀತ ಕಲಿಯುವ ವಿದ್ಯಾರ್ಥಿಗಳಿಗಾಗಿಯೇ ಸಂಗೀತ ಪಠ್ಯವನ್ನು ಒಳಗೊಂಡ ‘ಸುನಾದ ಪ್ರಕಾಶಿನಿ’ ಎಂಬ ಪುಸ್ತಕ ಹೊರತಂದಿದ್ದಾರೆ. ತ್ಯಾಗರಾಜರ ಸಂಕ್ಷಿಪ್ತ ಜೀವನ ಚರಿತ್ರೆಯನ್ನು ಬರೆದಿದ್ದಾರೆ.

ವಿಳಾಸ: ವಿದ್ವಾನ್‌ ಬಳ್ಳಾರಿ ಸುರೇಶ್‌, ನಾದ ತರಂಗಿಣಿ ಸಂಗೀತ ಶಾಲೆ, ನಂ. 738, 10ನೇ ಮುಖ್ಯರಸ್ತೆ, ಮೂರನೇ ಹಂತ, ಮೂರನೇ ಬ್ಲಾಕ್‌, ಬಸವೇಶ್ವರನಗರ, ಬೆಂಗಳೂರು-79.

080-2323 0665/ 94486 73596.ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.