ಬುಧವಾರ, ಜನವರಿ 29, 2020
27 °C

‘ಪರ್ಯಾಯ ರಾಜಕಾರಣ ಅನಿವಾರ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಗರಿಬೊಮ್ಮನಹಳ್ಳಿ: ಚುನಾವಣಾ ಪೂರ್ವದ ಒಳ ಒಪ್ಪಂದಗಳೇ ಇಂದಿನ ಭ್ರಷ್ಠ ರಾಜಕೀಯಕ್ಕೆ ಕಾರಣವಾಗಿದೆ. ಜನರ ಬದಲಾಗಿ ಬಂಡವಾಳಶಾಹಿಗಳು ರಾಜಕೀಯವನ್ನು ನಿಯಂತ್ರಿಸುತ್ತಿದ್ದಾರೆ. ಶ್ರಮಿಕ ಹಾಗೂ ರೈತ ವರ್ಗ ಹೆಚ್ಚಿನ ಬೆಂಬಲ ನೀಡಿದರೆ ದೇಶದಲ್ಲಿ ಪರ್ಯಾಯ ರಾಜಕಾರಣ ವ್ಯವಸ್ಥೆ­ಯನ್ನು ಸೃಷ್ಟಿಸಲು ಸಾಧ್ಯವಾಗುತ್ತದೆ ಎಂದು ಸಿಪಿಐ(ಎಂ) ರಾಜ್ಯ ಕಾರ್ಯಕಾರಿ ಮಂಡಳಿ ಸದಸ್ಯ ಜಿ.ಎನ್‌. ನಾಗರಾಜ್‌ ಪ್ರತಿಪಾದಿಸಿದರು.ಜ್ಯೋತಿಬಸು ಜನ್ಮ ಶತಮಾ­ನೋತ್ಸವದ ನಿಮಿತ್ತ ಪಕ್ಷದ ಜಿಲ್ಲಾ ಸಮಿತಿ ಭಾನುವಾರ ಪಟ್ಟಣದ ಗುರುಭವನದಲ್ಲಿ ಏರ್ಪಡಿಸಿದ್ದ ಪಕ್ಷದ ಕಾರ್ಯಕರ್ತರ ಜಿಲ್ಲಾ ಮಟ್ಟದ ಅಧ್ಯಯನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಸ್ವಾತಂತ್ರ್ಯಾ­ನಂತರ ದೇಶದ ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಯನ್ನು ಹಾಗೆಯೇ ಉಳಿಸಿ­ಕೊಂಡು ಬಂದಿರುವ ರಾಜಕೀಯ ಪಕ್ಷಗಳಿಗೆ ಪರ್ಯಾಯವಾಗಿ ಒಂದು ಜನಪರ ರಾಜಕಾರಣ ಸೃಷ್ಟಿ ಇಂದಿನ ಅಗತ್ಯವಾಗಿದೆ ಎಂದರು.ಕೇಂದ್ರದಲ್ಲಿ ಕಾಂಗ್ರೆಸ್‌ ಪಕ್ಷ ವಿರಾಟ್‌ ಭ್ರಷ್ಠಾಚಾರದಲ್ಲಿ ತೊಡಗಿಕೊಂಡಿದ್ದರೆ, ರಾಜ್ಯದಲ್ಲಿ ಬಿಜೆಪಿ ಬ್ರಹ್ಮಾಂಡ ಭ್ರಷ್ಠಾಚಾರ ನಡೆಸಿದೆ ಎಂದು ವಾಗ್ದಾಳಿ ನಡೆಸಿದ ಅವರು, ಕಾಂಗ್ರೆಸ್‌ ಬದಲಿಗೆ ಬಿಜೆಪಿಗೆ ಹಾಗೆಯೇ ಬಿಜೆಪಿ ಬದಲಿಗೆ ಕಾಂಗ್ರೆಸ್‌ಗೆ ಅಧಿಕಾರ ನೀಡುವುದು ಪರ್ಯಾಯ ರಾಜಕಾರಣ ಅಲ್ಲ. ಪಕ್ಷ ಮತ್ತು ವ್ಯಕ್ತಿ ಪರಿಗಣಿಸದೆ ನೀತಿ ಮತ್ತು ಸಿದ್ಧಾಂತಗಳು ಆಯ್ಕೆಗೆ ಪರ್ಯಾಯ­ವಾಗಬೇಕು ಎಂದು ವಿಶ್ಲೇಷಿಸಿದರು.‘ಮತದಾನ ಮಾಡಿದರೆ ಮುಗಿದು ಹೋಯಿತು ಎನ್ನುವ ಮೂಲಕ ನಾವೆಲ್ಲಾ ರಾಜಕೀಯ ಮತ್ತು ರಾಜ­ಕಾರಣಿಗಳ ಬಗೆಗೆ ಸದಾ ಸಿನಿಕರಾಗಿರುವ ಪರಿಣಾಮವಾಗಿ  ಯಾವುದೇ ಪಕ್ಷ­ವಿರಲಿ ಟಿಕೆಟ್‌ಗಾಗಿ ಪೈಪೋಟಿ ನಡೆ­ಯುತ್ತದೆ. ಆಯ್ಕೆಯಾ­ಗುತ್ತಿದ್ದಂತೆ ಹಣ ಮಾಡುವುದಕ್ಕೆ ಸ್ಪರ್ಧೆ ನಡೆಯುತ್ತದೆ. ಸೇವೆಯಿಂದ ಜನಪ್ರತಿ­ನಿಧಿ­ಗಳು ದೂರ ಉಳಿಯುತ್ತಾರೆ. ಇಂತಹ ಅಪಾಯಕಾರಿ ಸ್ಥಿತ್ಯಂತರಕ್ಕೆ ನಾವೇ ಕಾರಣರು ಎಂದು ಸ್ಪಷ್ಟಪಡಿಸಿದರು.ಯೋಜನೆಗಳ ನೀಲನಕ್ಷೆ ಸಹಿತ ಅನುಷ್ಠಾನ ಮತ್ತು ಕಾಮಗಾರಿಗಳ ಉಸ್ತುವಾರಿ ಜನರು ನಿರ್ಧರಿಸುವಂತಾ­ದರೆ ಪರ್ಯಾಯ ರಾಜಕಾರಣದ ಕನಸು ಸಾಕಾರಗೊಳ್ಳುವ ಜೊತೆಗೆ ಹಿಂಬಾಲಕರ ಮತ್ತು ಬಂಡವಾಳ­ಶಾಹಿಗಳ ರಾಜಕಾರಣ ಕೊನೆಗೊ­ಳ್ಳುತ್ತದೆ ಎಂದು ತಿಳಿಸಿದರು.ಜಿಲ್ಲಾ ಕಾರ್ಯದರ್ಶಿ ಆರ್‌.ಎಸ್‌. ಬಸವರಾಜ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಹಿತಿ ಹುರುಕಡ್ಲಿ ಶಿವಕುಮಾರ್‌ ಅಧ್ಯಕ್ಷತೆ ವಹಿಸಿದ್ದರು. ಎಸ್‌.ಸತ್ಯಬಾಬು, ನಾಗರತ್ನಮ್ಮ, ತಿಪ್ಪಯ್ಯ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)