ಗುರುವಾರ , ಜೂನ್ 24, 2021
27 °C
ಎಸ್‌ಎಂಎಸ್‌ನಲ್ಲಿ ಮಾಹಿತಿ, ಅಕ್ರಮ ಹಣ ಚಲಾವಣೆಗೆ ಕಡಿವಾಣ

‘ಪ್ರಭಾವಕ್ಕೆ ಒಳಗಾಗದೆ ಕೆಲಸ ಮಾಡಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ಪ್ರಲೋಭನೆ ಹಾಗೂ ಯಾವುದೇ ಪ್ರಭಾವಕ್ಕೆ ಒಳಗಾಗದೇ  ನಿಯಮದ ಪ್ರಕಾರ ಚುನಾವಣಾ ಕರ್ತವ್ಯವನ್ನು ಚಾಚೂ ತಪ್ಪದೇ ಪಾಲಿಸುವಂತೆ ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ಅವರು ಚುನಾವಣಾ ಸಿಬ್ಬಂದಿಗೆ ಸೂಚನೆ ನೀಡಿದರು.ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧ­ವಾರ ಲೋಕಸಭಾ ಚುನಾವಣೆ  ಕುರಿತು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗಳ ಸಹಾಯಕ ಚುನಾವಣಾಧಿಕಾರಿಗಳ, ನೋಡಲ್ ಅಧಿಕಾರಿಗಳ ಮಾದರಿ ನೀತಿ ಸಂಹಿತೆ ತಂಡ, ಸಂಚಾರಿ ಜಾಗೃತ­ದಳ, ಲೆಕ್ಕ ಪತ್ರ ತಂಡಗಳು ಮತ್ತು ಚುನಾವಣಾ  ಸಿಬ್ಬಂದಿಗೆ ಏರ್ಪಡಿಸಿದ್ದ ಪೂರ್ವಭಾವಿ ತಯಾರಿ ಹಾಗೂ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ  ಮಾತನಾಡಿದರು.ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟ ಸಿಬ್ಬಂದಿ ರಜೆ ಹೋಗಬಾರದು. ಕೇಂದ್ರ ಸ್ಥಾನ ಬಿಡ­ಕೂಡದು. ಅಗತ್ಯವಿದ್ದಲ್ಲಿ ಜಿಲ್ಲಾಧಿಕಾರಿ ಅನುಮತಿ ಪಡೆಯಬೇಕು.ರಾಜಕೀಯ ಸಂಘಟನೆ ಜತೆ ನಿಕಟ ಸಂಬಂಧ ಇಟ್ಟುಕೊಳ್ಳದೇ  ಆಸಕ್ತಿಯಿಂದ ಕಾರ್ಯನಿರ್ವಹಿಸಬೇಕು.ಚುನಾವಣಾ ಸಿಬ್ಬಂದಿ ಅದರಲ್ಲೂ ವಿಶೇಷವಾಗಿ ರಾತ್ರಿ ವೇಳೆ ಮೊಬೈಲ್ ಬಂದ್‌ ಮಾಡಬಾರದು. ಯಾವುದಾದರೂ ವಿಷಯಗಳ ಕುರಿತು ಖಚಿತವಾಗಿ ಗೊತ್ತಿದ್ದರೆ ಮಾತ್ರ ಉತ್ತರಿಸಬೇಕು. ಇಲ್ಲದಿದ್ದಲ್ಲಿ ಸಂಬಂಧಿತ ಸಹಾಯಕ ಚುನಾವಣಾಧಿಕಾರಿ ಅಥವಾ ನೋಡಲ್ ಅಧಿಕಾರಿ  ಸಂಪರ್ಕಿಸಬೇಕು ಎಂದು ನಿರ್ದೇಶನ ನೀಡಿದರು.ಏನಾದರೂ ಸಮಸ್ಯೆ ಅಥವಾ ಅಕ್ರಮ  ಕಂಡು ಬಂದಲ್ಲಿ ತಕ್ಷಣ  ಚುನಾವಣಾ ಅಥವಾ ನೋಡಲ್ ಅಧಿಕಾರಿಗಳಿಗೆ ಎಸ್.ಎಂ.ಎಸ್. ಮೂಲಕ ಸಂದೇಶ ರವಾನಿಸಬೇಕು. ಸಹಾಯಕ ಚುನಾವಣಾಧಿಕಾರಿ­ಗಳು  ಮತದಾನ ಪ್ರಕ್ರಿಯೆ ಬಗ್ಗೆ ಗಮನಹರಿಸ­ಬೇಕು. ನೀತಿ ಸಂಹಿತೆ ಉಲ್ಲಂಘನೆ, ಚುನಾವಣೆ ಅಕ್ರಮ ಕುರಿತು ಪ್ರತಿ ತಾಲ್ಲೂಕಿಗೆ ಜಿಲ್ಲಾ ನೋಡಲ್ ಅಧಿಕಾರಿ ನೇಮಿಸಲಾಗಿದೆ. ಅವರಿಗೆ ಜಾಗೃತ ತಂಡಗಳು ನೇರವಾಗಿ ಸಂರ್ಪಕಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.ಅಕ್ರಮ ಹಣ ಚಲಾವಣೆ ನಿರ್ಬಂಧಿಸಲು ದೊಡ್ಡ ದೊಡ್ಡ ಸಂಸ್ಥೆ, ವ್ಯಾಪಾರ ಕೇಂದ್ರ, ಗುತ್ತಿಗೆದಾರರು, ಹೋಟೆಲ್, ಬಾರ್‌, ಗೃಹೋಪಯೋಗಿ ದೊಡ್ಡ ವ್ಯಾಪಾರ ಕೇಂದ್ರಗಳು, ಪ್ರಿಂಟಿಂಗ್ ಕೇಂದ್ರ, ಹೋಟೆಲ್, ಖಾಸಗಿ ವಾಹನ ಸಂಸ್ಥೆ ಮೇಲೆ ನಿಗಾವಹಿಸಬೇಕು. ನ್ಯಾಯಯುತ ವ್ಯವಹಾರಗಳ ಹಣ ಚಲಾವಣೆ ಹೊರತುಪಡಿಸಿ ಸಂಶಯಾಸ್ಪದ ವ್ಯವಹಾರ ಪರಿಶೀಲಿಸಬೇಕು. ಚುನಾವಣೆಗೆ ಸಂಬಂಧಿಸಿದ್ದರೆ ಜಪ್ತಿ ಮಾಡಬೇಕು. ಇಲ್ಲವಾದರೆ ಆದಾಯ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಪ್ರಸನ್ನಕುಮಾರ ತಿಳಿಸಿದರು.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೀರಣ್ಣ ತುರಮರಿ ಮಾತನಾಡಿ, ಮತದಾರರ ಪಟ್ಟಿಯಲ್ಲಿ ಇರುವವರು ತಪ್ಪದೇ ಮತ ಚಲಾಯಿಸಬೇಕು ಎನ್ನುವುದೇ ಸ್ವೀಪ್ ಕಾರ್ಯಾಚರಣೆ ಉದ್ದೇಶವಾಗಿದೆ. ತಮ್ಮ ಅಧ್ಯಕ್ಷತೆಯ ಜಿಲ್ಲಾ ಸಮಿತಿ ಅಲ್ಲದೇ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಅಧ್ಯಕ್ಷತೆಯಲ್ಲಿ ಐದು ತಾಲ್ಲೂಕುಗಳ ಸ್ವೀಪ್ ಸಮಿತಿ ರಚಿಸಲಾಗಿದೆ. ಅಲ್ಲದೇ ತಾಲ್ಲೂಕಿಗೊಂದು ಸ್ವೀಪ್ ನೋಡಲ್ ಅಧಿಕಾರಿ ನೇಮಿಸಲಾಗಿದೆ ಎಂದರು.ಈಗಾಗಲೇ ಸಭೆಯಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ 109 ಗ್ರಾ. ಪಂ., 9 ನಗರ ಪ್ರದೇಶಗಳಲ್ಲಿ ಕೈಕೊಳ್ಳಬೇಕಾದ ಕ್ರಮಗಳ ಕ್ರಿಯಾ ಯೋಜನೆ ರೂಪಿಸಿ ಅದರ ಜಾರಿಗೆ ನಿರ್ದೇಶನ ನೀಡಲಾಗಿದೆ ಎಂದರು. ಕಲಾತಂಡ, ವಿದ್ಯಾರ್ಥಿ ಸೈಕಲ್ ಜಾಥಾ, ಪ್ರಾಥಮಿಕ ವಿದ್ಯಾರ್ಥಿಗಳ ಪ್ರಭಾತ ಪೇರಿ ಆಶಾ ಅಂಗನವಾಡಿ ಕಾರ್ಯಕರ್ತೆಯರಿಂದ ಜಾಗೃತ ಜಾಥಾ, ಮಾನವ ಸರಪಳಿ ಧ್ವನಿವರ್ಧಕಗಳ ಮೂಲಕ ಹಾಗೂ ಸ್ಥಳೀಯ ಕೇಬಲ್ ಸೇರಿದಂತೆ ಮಾಧ್ಯಮಗಳ ಮೂಲಕ ಮತದಾರರ  ಜಾಗೃತಿ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.ಚುನಾವಣಾ ವೆಚ್ಚದ ನೋಡಲ್ ಅಧಿಕಾರಿ ಜಿ.ಪಂ. ಲೆಕ್ಕಾಧಿಕಾರಿ ರಾಮಪ್ಪ ಹಟ್ಟಿ, ಚುನಾವಣಾ ಎಸ್.ಎಂ.ಎಸ್ ಸಂಪರ್ಕದ ನೋಡಲ್ ಅಧಿಕಾರಿ ನಗರಾಭಿವೃದ್ಧಿ ಕೋಶದ ಉಪನಿರ್ದೇಶಕ ರಮೇಶ ದೇಸಾಯಿ ಅವರು ವಿವಿಧ ಜಾಗೃತಿ ತಂಡಗಳು, ಲೆಕ್ಕ ಪತ್ರ ಸಮಿತಿ, ಮಾಧ್ಯಮ ಪರಿಶೀಲನಾ ಸಮಿತಿಗಳ ಕಾರ್ಯ ಚಟುವಟಿಕೆಗಳ ಕುರಿತು ದೃಶ್ಯ ಶ್ರವಣದ ಸೌಲಭ್ಯದ ಮೂಲಕ ಮಾಹಿತಿ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.