‘ಪ್ರಾಣಿ ಪಕ್ಷಿಗಳಿಗೂ ನೀರಿಲ್ಲ’

ಗುಡಿಬಂಡೆ: ಇಲ್ಲಿನ ನರಸಿಂಹ ದೇವರ ಬೆಟ್ಟಕ್ಕೆ ಶಾಪ ತಟ್ಟಿದಂತಿದೆ. ಬೇಸಿಗೆ ಪ್ರಖರವಾಗುತ್ತಿದ್ದಂತೆ ಹನಿ ನೀರಿಗೂ ತತ್ವಾರವಾಗುತ್ತಿದೆ, ಬೆಟ್ಟವನ್ನೇ ಆಶ್ರಯಿಸಿದ ಜಿಂಕೆ, ಕೃಷ್ಣಮೃಗ, ನವಿಲು, ಮೊಲ, ನರಿ, ಕಾಡುಹಂದಿ, ಮುಂಗುಸಿ ಜತೆಗೆ ಅಪರೂಪ ಎರಲಡ್ಡು ಪಕ್ಷಿ ನೀರು, ಆಹಾರವಿಲ್ಲದೆ ಬಸವಳಿಯುತ್ತಿವೆ. ಕಾಡು ಬರಡಾಗುತ್ತಿದೆ.
ಗುಡಿಬಂಡೆ ಪಟ್ಟಣದ ಉತ್ತರ ದಿಕ್ಕಿಗೆ 8 ಕಿಲೋ ಮೀಟರ್ ದೂರದಲ್ಲಿ ಇರುವ ನರಸಿಂಹದೇವರ ಬೆಟ್ಟ 5ನೇ ಬ್ಲಾಕ್, ಮೀಸಲು ಅರಣ್ಯ ಪ್ರದೇಶಕ್ಕೆ ಬೆಳಿಗ್ಗೆಯೇ ಹೊರಟರೆ ನವಿಲುಗಳು ಕೇಕೆ, ರಾತ್ರಿ ವೇಳೆ ನರಿಗಳು ಊಳಿಡುವುದು, ಚಂಗನೆ ನೆಗೆಯುವ ಜಿಂಕೆಗಳು ಕಾಣುತ್ತಿದ್ದವು, ಕೇಳುತ್ತಿದ್ದವು. ಈಗ ಅಲ್ಲಿನ ಪರಿಸ್ಥಿತಿಯೇ ಭಿನ್ನವಾಗಿದೆ.
ಅಂದಹಾಗೆ, ಇಲ್ಲಿನ ಸಾವಿರಾರು ಎಕರೆ ಕಾಡಿನ ವ್ಯಾಪ್ತಿಯಲ್ಲಿ ಜಿಂಕೆಗಳು ವಾಸವಾಗಿವೆ. ಕಾಡಿನ ಸುತ್ತಲೂ ಕಂದಕ ಮಾಡಲಾಗಿದೆ. ಹೀಗಾಗಿ ಇಲ್ಲಿರುವ ವನ್ಯಜೀವಿಗಳು ಮೇವು, ನೀರು ಅರಸಿ ಕಾಡಿನ ಹೊರಗೆ ಹೋಗಲು ಸಾಧ್ಯವಿಲ್ಲ. ಇತ್ತೀಚೆಗೆ ಜಿಂಕೆಗಳಿಗೆ ನೀರು ಒದಗಿಸಲು ಅರಣ್ಯ ಇಲಾಖೆ ಕೂಡ ವಿಫಲವಾಗಿದೆ. ಆದ್ದರಿಂದಲೇ ಆ ಪ್ರಾಣಿಗಳ ಸ್ಥಿತಿ ಬಗ್ಗೆ ಆತಂಕವಾಗುತ್ತದೆ ಎನ್ನುತ್ತಾರೆ ಪರಿಸರ ಪ್ರೇಮಿ ಇಂದ್ರಕುಮಾರ್ ಸಿಂಗ್ .
‘ಆಹಾರದ ಕೊರತೆಯಿಂದಲೇ ಹಲವು ಜಿಂಕೆಗಳು ಸಾವನ್ನಪ್ಪಿವೆ’ ಎನ್ನುತ್ತಾರೆ ಇಲ್ಲಿನ ದನಗಾಹಿಗಳು.
‘ಕಳೆದ ತಿಂಗಳು ಕಾಡಿಗೆ ಬೆಂಕಿ ಹೊತ್ತಿಕೊಂಡಿದ್ದರಿಂದ ಗರಿಕೆಯೂ ಚಿಗುರಿಲ್ಲ. ಇದರಿಂದ ಮೇವು ಇಲ್ಲವಾಗಿದೆ. ಇಲ್ಲಿದ್ದ ಸಾಕಷ್ಟು ನೀರಿನ ಹೊಂಡಗಳು ಒಣಗಿ ಹೋಗಿವೆ.
ಇನ್ನು ಪ್ರಾಣಿ, ಪಕ್ಷಿಗಳು ಗತಿ ಏನು’ ಎಂದು ಪ್ರಾಣಿ ದಯಾ ಸಂಘದ ಹಾಗೂ ಪರಿಸರ ಸಂರಕ್ಷಣಾ ವೇದಿಕೆಯ ಗುಂಪುಮರದ ಆನಂದ್ ಆತಂಕ ವ್ಯಕ್ತಪಡಿಸುತ್ತಾರೆ.
ಕೆರೆ, -ಕಟ್ಟೆಗಳು ಅಭಿವೃದ್ಧಿ ಕಾಣುತ್ತಿಲ್ಲ. ಅಂತರ್ಜಲ ಮರುಪೂರಣ ಇಲ್ಲದೆ ಎಲ್ಲೆಂದರಲ್ಲಿ ಭೂಮಿ ಬಗೆದು ನೀರು ತೆಗೆದ ಪರಿಣಾಮ ಅಂರ್ತಜಲ ಕುಸಿದಿದೆ.
ಬೇಸಿಗೆಯಲ್ಲಿ ಪ್ರಾಣಿಗಳಿಗೆ ಆಹಾರ ಹಾಗೂ ನೀರಿನ ಮೂಲವಾಗಿದ್ದ ತೋಟ ಪಟ್ಟಿಗಳು, ನದಿಗಳು, ಹಳ್ಳಕೊಳ್ಳಗಳಲ್ಲಿ ನೀರಿಲ್ಲದಿರುವುದು, ನಗರ ಪ್ರದೇಶದ ವಿಸ್ತರಣೆ, ಅರಣ್ಯ ಒತ್ತುವರಿ ಪ್ರಾಣಿಗಳ ಪಾಲಿಗೆ ಉರುಳಾಗಿವೆ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.
ಜಿಂಕೆ ಹಾಗೂ ಕಷ್ಣಮೃಗಳಿಗೆ ಸಜ್ಜೆ, ನವಣೆ, ಸಾಮೆ, ಜೋಳ, ರಾಗಿ, ಹಸಿರು ಹುಲ್ಲು ಮೂಲ ಆಹಾರ. ಇದಕ್ಕೆ ವ್ಯವಸ್ಥೆ ಆಗಬೇಕು. ಜತೆಗೆ ಅರಣ್ಯ ಇಲಾಖೆ ಅರಣ್ಯ ಪ್ರದೇಶಗಳಲ್ಲಿ ಅಲ್ಲಲ್ಲಿ ಗುಂಡಿ ನಿರ್ಮಿಸಿ, ಪ್ರಾಣಿ, ಪಕ್ಷಿಗಳಿಗೆ ಸದಾ ನೀರು ದೊರೆಯುವಂತೆ ಕ್ರಮ ಕೈಗೊಳ್ಳಬೇಕಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.