ಸೋಮವಾರ, ಜನವರಿ 20, 2020
20 °C

‘ಪ್ರೇಕ್ಷಕನಿಗೆ ಇಷ್ಟವಾದ ಚಿತ್ರಗಳ ನಿರ್ಮಾಣ ಅಗತ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪ್ರೇಕ್ಷಕರು ಯಾವ ರೀತಿಯ ಚಿತ್ರಗಳನ್ನು ವೀಕ್ಷಿಸಲು ಬಯಸುತ್ತಾರೆ ಎಂದು ನಿರ್ದೇಶಕರು ಹಾಗೂ ನಿರ್ಮಾಪಕರು ಅರಿಯಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಕೆ.ಆರ್. ನಿರಂಜನ್ ಅಭಿಪ್ರಾಯಪಟ್ಟರು.ವಾರ್ತಾ ಇಲಾಖೆ, ಕರ್ನಾಟಕ ಚಲನಚಿತ್ರ ಅಕಾಡೆಮಿ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಸಂಯುಕ್ತಾಶ್ರಯದಲ್ಲಿ ಸೋಮವಾರ ವಾರ್ತಾ ಇಲಾಖೆಯ ಸಭಾಂಗಣದಲ್ಲಿ  ನಡೆದ ‘ಚಿತ್ರಗಳಲ್ಲಿ ಡಿಜಿಟಲ್ ಸೆಟ್ಸ್’ ವಿಷಯ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು. ಚಿತ್ರ ನಿರ್ಮಾಪಕರು ಮತ್ತು ನಿರ್ದೇಶಕರು ಪ್ರೇಕ್ಷಕನ ಅಭಿರುಚಿ ಹಾಗೂ ಇಚ್ಛೆಗೆ ತಕ್ಕಂತೆ ಚಿತ್ರಗಳನ್ನು ನಿರ್ಮಿಸಬೇಕು. ಈ ನಿಟ್ಟಿನಲ್ಲಿ ಚಿತ್ರಗಳನ್ನು ನಿರ್ಮಿಸಲು ಅಗತ್ಯವಾದ ತಂತ್ರಜ್ಞಾನ ಹಾಗೂ ಬದಲಾವಣೆಗಳನ್ನು ಮಾಡಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು. ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಜಾಗತಿಕ ಮಟ್ಟದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಕನ್ನಡ ಚಿತ್ರೋದ್ಯಮ ಅಳವಡಿಸಿಕೊಳ್ಳುವ ಪ್ರಯತ್ನ ಮಾಡಬೇಕು. ಇದರಿಂದ ಚಿತ್ರೋದ್ಯಮದ ಅಭಿವೃದ್ಧಿಯ ಜತೆಗೆ ಪ್ರೇಕ್ಷಕರನ್ನು ಸೆಳೆಯಲು ಅನುಕೂಲವಾಗುತ್ತದೆ ಎಂದರು. ಅಭಿವೃದ್ಧಿ ಪಥದತ್ತ ಸಾಗುತ್ತಿರುವ ಕನ್ನಡ ಚಿತ್ರೋದ್ಯಮದಲ್ಲಿ ಬದಲಾವಣೆ ಯ ಬಿರುಗಾಳಿ ಬೀಸುತ್ತಿದೆ. ಈ ಹಿನ್ನೆಲೆ ಯಲ್ಲಿ ಮತ್ತಷ್ಟು ಅಭಿವೃದ್ಧಿ ಸಾಧಿಸಲು ಡಿಜಿಟಲ್ ತಂತ್ರಜ್ಞಾನದ ಸೆಟ್‌ಗಳನ್ನು ಹೆಚ್ಚಾಗಿ ಬಳಕೆ ಮಾಡಿಕೊಳ್ಳಬೇಕು. ಇದರಿಂದ ಆರ್ಥಿಕ ಹೊರೆಯೂ ಕಡಿಮೆಯಾಗುತ್ತದೆ ಎಂದು ಸಲಹೆ ನೀಡಿದರು.ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಚ್‌.ಡಿ.ಗಂಗರಾಜು ಮಾತನಾಡಿ, ‘ಪ್ರಸ್ತುತ ಡಿಜಿಟಲ್ ಯುಗ ನಡೆಯುತ್ತಿದ್ದು, ದೇಶದಲ್ಲಿ ೭೦ ಕೋಟಿ ಮಂದಿ ಮೊಬೈಲ್ ಬಳಕೆ ಮಾಡುತ್ತಿದ್ದಾರೆ. ಇಂತಹ ಕಾಲದಲ್ಲೂ ಡಿಜಿಟಲ್ ತಂತ್ರಜ್ಞಾನದ ಸೆಟ್‌ಗಳನ್ನು ಚಲನಚಿತ್ರಗಳಲ್ಲಿ ಬಳಸಿಕೊಳ್ಳದಿದ್ದರೆ ಮೂರ್ಖರಾಗುತ್ತೇವೆ. ಹೀಗಾಗಿಯೇ ಇನ್ನಾದರೂ ಪ್ರಯೋಗಾತ್ಮಕ ಡಿಜಿಟಲ್ ಸೆಟ್‌ಗಳನ್ನು ಬಳಕೆ ಮಾಡಿಕೊಳ್ಳಬೇಕು’ ಎಂದು ಹೇಳಿದರು.ಎರಡು ವರ್ಷಗಳ ಹಿಂದೆ ಕನ್ನಡ ಚಿತ್ರೋದ್ಯಮಕ್ಕೆ ಕೆಟ್ಟ ಹೆಸರಿತ್ತು. ಆದರೆ ಈಗ ಆ ಹಣೆಪಟ್ಟಿಗೆ ವಿರುದ್ಧವಾಗಿ ಚಿತ್ರೋದ್ಯಮ ಬೆಳೆಯುತ್ತಿದೆ. 12 ರಿಂದ 15 ಅತ್ಯುತ್ತಮ ಚಿತ್ರಗಳು ತೆರೆಕಂಡು ಯಶಸ್ಸು ಸಾಧಿಸಿವೆ ಎಂದು ವಾರ್ತಾ ಇಲಾಖೆ ನಿರ್ದೇಶಕ ಎನ್.ಆರ್. ವಿಶುಕುಮಾರ್ ಹೇಳಿದರು.ಕಾರ್ಯಕ್ರಮದ ಮಧ್ಯದಲ್ಲಿ ವಿಎಫ್‌ಎಕ್ಸ್ ವಿನ್ಯಾಸಗಾರ ರುದ್ರೇಶ್ ಅವರು ವಿಎಫ್‌ಎಕ್ಸ್ ತಂತ್ರಜ್ಞಾನದ ಸಹಕಾರದಿಂದ ಡಿಜಿಟಲ್ ಸೆಟ್‌ಗಳನ್ನು ಸೃಷ್ಟಿಸುವ ಮತ್ತು ಡಿಜಿಟಲ್‌ ತಂತ್ರಜ್ಞಾನ ಬೆಳೆದು ಬಂದ ಹಾದಿಯ ಬಗ್ಗೆ ಮಾಹಿತಿ ನೀಡಿದರು. ಇತ್ತೀಚೆಗೆ ವಿಎಫ್‌ಎಕ್ಸ್ ತಂತ್ರಜ್ಞಾನದಿಂದ ಡಿಜಿಟಲ್ ಸೆಟ್ ಬಳಕೆ ಮಾಡಿ ಪ್ರೇಕ್ಷಕರನ್ನು ಮೋಡಿ ಮಾಡಿದ್ದ ಚಲನಚಿತ್ರಗಳ ರಹಸ್ಯವನ್ನು ದೃಶ್ಯಗಳ ಮೂಲಕ ತೆರೆಯ ಮೇಲೆ ಮೂಡಿಸಿದರು.ಛಾಯಾಗ್ರಾಹಕ ಅಶೋಕ್ ಕಶ್ಯಪ್, ನಿರ್ದೇಶಕರಾದ ಪವನ್‌ಕುಮಾರ್, ಬಿ.ಎಸ್‌.ಲಿಂಗದೇವರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)