ಶುಕ್ರವಾರ, ಜನವರಿ 24, 2020
16 °C

‘ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿಕೊಳ್ಳಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಲಮಟ್ಟಿ: ‘ಮಕ್ಕಳಿಗೆ ಕೇಳಿದ್ದನ್ನೆಲ್ಲ  ಕೊಡಿಸುತ್ತ ಹೋಗಬೇಡಿ, ಅವರಿಗೆ ನಿಮ್ಮ ಮನೆಯ ಸಂಪೂರ್ಣ ವ್ಯವಹಾರ ಗೊತ್ತಾಗಲಿ, ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿಕೊಳ್ಳಿ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ  ಸಂಗಮೇಶ ಹಳಿಂಗಳಿ ಪಾಲಕರಿಗೆ ಕಿವಿ ಮಾತು ಹೇಳಿದರು.

ಆಲಮಟ್ಟಿಯ ಮಂಜಪ್ಪ ಹರ್ಡೇಕರ ಸಭಾಭವನದಲ್ಲಿ  ಈಚೆಗೆ ನಡೆದ ನಿಡಗುಂದಿ ವಲಯದ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳ ಪಾಲಕರ ಸಮಾವೇಶದಲ್ಲಿ ಅವರು ಮಾತನಾಡಿದರು.

ಮಗು ಶಾಲೆಯಿಂದ ಬಂದ ತಕ್ಷಣ, ಶಾಲೆಯಲ್ಲಿ ನಡೆದ ಕಲಿಕೆಯ ಬಗ್ಗೆ ಸ್ವಲ್ಪವಾದರೂ ಕೇಳಿ, ಆ ವಿಷಯದ ಬಗ್ಗೆ ನಿಮಗೆ ಗೊತ್ತಿಲ್ಲದಿದ್ದರೂ ಕೇಳಿ, ಇದರಿಂದ ಮಕ್ಕಳ ಮನಸ್ಸಿನಲ್ಲಿ ಬದಲಾವಣೆಯಾಗುತ್ತದೆ  ಎಂದರು.

ಶಾಲೆಗೆ ಬಂದ ಪಾಲಕರಲ್ಲಿ ಶಿಕ್ಷಕರು ಮಕ್ಕಳ ಅವಗುಣವನ್ನು ಹೇಳದೇ, ಹೆಚ್ಚಾಗಿ ಒಳ್ಳೆಯ ಅಂಶಗಳನ್ನೇ ಹೇಳಿ ಎಂದರು. ತಮ್ಮ ಬಾಲ್ಯದ ಜೀವನದಲ್ಲಿ ಅನುಭವಿಸಿದ ಅಂಶಗಳನ್ನು ಹೇಳಿದ ಡಿಡಿಪಿಐ ಕೆಲ ಕಾಲ ಭಾವುಕರಾದರು. ಜಿಲ್ಲೆಯಾದ್ಯಂತ ಈ ವರ್ಷ ನಕಲು ಮುಕ್ತ ಎಸ್.ಎಸ್.ಎಲ್.ಸಿ. ಪರೀಕ್ಷೆ ನಡೆಸಲಾಗುವುದು, ಅದರಲ್ಲಿಯೂ ಬಸವನಬಾಗೇವಾಡಿ ತಾಲ್ಲೂಕನ್ನು ಸಂಪೂರ್ಣ ನಕಲು ಮುಕ್ತ ಪರೀಕ್ಷೆ ನಡೆಸಲು ಮಾದರಿ ತಾಲ್ಲೂಕಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಮಹಿಳಾ ವಿಶ್ವವಿದ್ಯಾಲಯದ ಶಿಕ್ಷಣ ವಿಭಾಗದ ಪ್ರಾಧ್ಯಾಪಕ ಡಾ ಬಸವರಾಜ ಲಕ್ಕಣ್ಣವರ ಮಾತನಾಡಿ,  ಮಕ್ಕಳಲ್ಲಿನ ಋಣಾತ್ಮಕ ಅಂಶಗಳನ್ನು ಬಿಟ್ಟು, ಧನಾತ್ಮಕ ಗುಣಗಳನ್ನು ಬೆಳೆಸಿಕೊಳ್ಳುವ ವಾತಾವರಣ ನಿರ್ಮಿಸಿ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಎಚ್. ನಾಗೂರ ಮಾತನಾಡಿದರು. ಪಾಲಕ ರಾದ ಝಾಕೀರಹುಸೇನ ಶೇಖರ ಸೇರಿ ದಂತೆ ವಿವಿಧ ಪಾಲಕರು ಸಮಾವೇಶದ ಅಭಿಪ್ರಾಯವನ್ನು ಮಂಡಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಎಚ್. ನಾಗೂರ ಬರೆದ “ಯಾರು ಉತ್ತಮ ಪಾಲಕರು” ಎಂಬ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು. ಈ ಪತ್ರಿಕೆ ಯನ್ನು ಎಲ್ಲಾ ಪಾಲಕರಿಗೂ ನೀಡಲಾ ಯಿತು.

ಪ್ರಾಚಾರ್ಯ ಸುರೇಶಗೌಡ ಪಾಟೀಲ, ಮುಖ್ಯ ಶಿಕ್ಷಕ ಎಂ.ಬಿ. ಮಮ ದಾಪುರ ಮಾತನಾಡಿದರು. ವೇದಿಕೆಯ ಮೇಲೆ ನಿಡಗುಂದಿ ವಲಯ ವ್ಯಾಪ್ತಿಯ ವಿವಿಧ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರಾದ ದ ಬಿ.ಎನ್. ಗುಣದಾಳ, ಜಿ.ಆರ್. ದೊಡಮನಿ, ಎಲ್.ಬಿ. ಭಜಂತ್ರಿ, ರಮಣ ಚೌಧರಿ, ಎಂ.ಬಿ. ಮುಲ್ಲಾ, ಎಸ್.ಬಿ. ಹತ್ತರಕಿಹಾಳ, ಎನ್.ಎಸ್. ಬಿರಾದಾರ, ಉಮೇಶ ಹಿರೇಮಠ, ಜಿ.ಆರ್. ಜಾಲೋಜಿ ಹಾಜರಿದ್ದರು.

ಪ್ರತಿಕ್ರಿಯಿಸಿ (+)