ಶನಿವಾರ, ಮಾರ್ಚ್ 6, 2021
19 °C

‘ಮತಗಟ್ಟೆಗಳನ್ನು ಬಿಜೆಪಿಮಯ ಮಾಡಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಮತಗಟ್ಟೆಗಳನ್ನು ಬಿಜೆಪಿಮಯ ಮಾಡಿ’

ಜಮಖಂಡಿ: ‘ಚೀನಾ ಮತ್ತು ಪಾಕಿಸ್ತಾನ ದೇಶಗಳಿಗೆ ಪಾಠ ಕಲಿಸಲು, ಭಯೋತ್ಪಾದನೆ, ಭ್ರಷ್ಟಾಚಾರ ಹಾಗೂ ಬಡತನ ನಿರ್ಮೂಲನೆಗಾಗಿ ನರೇಂದ್ರ ಮೋದಿ ಅವರನ್ನು ದೇಶದ ಪ್ರಧಾನಿಯನ್ನಾಗಿ ಮಾಡಲು ಬರುವ ಲೋಕಸಭಾ ಚುನಾವಣೆಯ ಎಲ್ಲ ಮತಗಟ್ಟೆಗಳನ್ನು ಬಿಜೆಪಿಮಯ ಮಾಡಬೇಕು’ ಎಂದು ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಕಾರ್ಯಕರ್ತರಿಗೆ ಕರೆ ಕೊಟ್ಟರು.ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಜಮಖಂಡಿ ವಿಧಾನಸಭೆ ಮತಕ್ಷೇತ್ರ ಮಟ್ಟದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.‘ಪ್ರಜಾತಂತ್ರ ವ್ಯವಸ್ಥೆಯ ಚುನಾವಣೆ ಎಂಬ ಯುದ್ಧದಲ್ಲಿ ವಿಚಾರಗಳ, ತತ್ವ ಪ್ರತಿಪಾದನೆ ಮತ್ತು ಮಂಡನೆಯ ಜೊತೆಗೆ ಖಂಡನೆ ಕೂಡ ನಡೆಯಬೇಕು. ಮನಸ್ಸುಗಳನ್ನು ಗೆದ್ದು ಮತಗಳನ್ನಾಗಿ ಪರಿವರ್ತಿಸುವ ಯುದ್ಧ ಬಿಜೆಪಿ ಕಾರ್ಯಕರ್ತರಿಂದ ನಡೆಯಬೇಕು’ ಎಂದರು.ಬಾಗಲಕೋಟೆ ಲೋಕಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಸಂಸದ ಪಿ.ಸಿ. ಗದ್ದಿಗೌಡರ, ‘ಬಿಜೆಪಿ ಮುಸ್ಲಿಂ ವಿರೋಧಿಯಲ್ಲ. ನರೇಂದ್ರ ಮೋದಿ ಮುಖ್ಯಮಂತ್ರಿ ಆಗಿರುವ ಗುಜರಾತನಲ್ಲಿ ಅಥವಾ ಅಟಲ ಬಿಹಾರಿ ವಾಜಪೇಯಿ ಪ್ರಧಾನಿ ಆಗಿದ್ದ ಅವಧಿಯಲ್ಲಿ ದೇಶದಲ್ಲಿ ಹಿಂದೂ–ಮುಸ್ಲಿಂ ಗಲಭೆಗಳು ನಡೆದಿಲ್ಲ’ ಎಂದು ಪ್ರತಿಪಾದಿಸಿದರು.ಮಾಜಿ ಸಚಿವ ಮುರುಗೇಶ ನಿರಾಣಿ, ‘ಜೈ ಜವಾನ,ಜೈ ಕಿಸಾನ ಜೊತೆಗೆ ಜೈ ವಿಜ್ಞಾನ ಸೇರಿಸಿರುವ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ದೇಶದ ಪ್ರಧಾನಿಯನ್ನಾಗಿ ಮಾಡಲು ಬಿಜೆಪಿ ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.ವಿಧಾನ ಪರಿಷತ್‌ ಸದಸ್ಯ ನಾರಾಯಣಸಾ ಭಾಂಡಗೆ, ‘ಈ ಹಿಂದೆ ನಡೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದಿಂದ ಬಿಜೆಪಿ ಸೋಲಲಿಲ್ಲ. ಬದಲಾಗಿ ನಮ್ಮಿಂದ ನಾವೇ ಸೋತಿದ್ದೇವೆ. ಸೋತವರಿಗೆ ಹಾಗೂ ಸೋಲಿಸಿದವರಿಗೆ ಈಗ ಬುದ್ಧಿ ಬಂದಿದೆ. ಹಿಂದೆ ಮಾಡಿದ ತಪ್ಪುಗಳನ್ನು ಮುಂದೆ ಮಾಡುವುದಿಲ್ಲ’ ಎಂದರು.ವಿಧಾನ ಪರಿಷತ್‌ ಸದಸ್ಯ ಜಿ.ಎಸ್‌. ನ್ಯಾಮಗೌಡ, ‘ಗುಜರಾತ್‌ ಮುಖ್ಯಮಂತ್ರಿ, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಪರವಾಗಿ ಜಮ್ಮು–ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಎದ್ದಿರುವ ಅಲೆಯಲ್ಲಿ ಕೊಚ್ಚಿ ಹೋಗುವ ಭಯದಿಂದ ಪಕ್ಷದ ಟಿಕೆಟ್‌ ಸಿಕ್ಕರೂ ಕಾಂಗ್ರೆಸ್‌ ನಾಯಕರು ಚುನಾವಣೆಯಲ್ಲಿ ಸ್ಪರ್ಧಿಸಲು ಹಿಂದೇಟು ಹಾಕುತ್ತಿದ್ದಾರೆ. ಕಾಂಗ್ರೆಸ್ಸಿಗರು ಆಗಲೇ ಸೋಲನ್ನು ಒಪ್ಪಿಕೊಂಡಿದ್ದಾರೆ’ ಎಂದರು.ತೇರದಾಳ ಮಾಜಿ ಶಾಸಕ ಸಿದ್ದು ಸವದಿ, ಜೆಡಿಎಸ್‌ ತೊರೆದು ಬಿಜೆಪಿ ಸೇರ್ಪಡೆ ಆಗಿರುವ ಬಿ.ಎಸ್‌. ಸಿಂಧೂರ ಮಾತನಾಡಿದರು. ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ರಾಜುಗೌಡ ಪಾಟೀಲ, ಬಿಜೆಪಿ ನಗರ ಮಂಡಲ ಅಧ್ಯಕ್ಷೆ ವಿಜಯಲಕ್ಷ್ಮಿ ಉಕಮನಾಳ, ಎಂ.ಎಂ. ಹಟ್ಟಿ, ಉಮೇಶ ಮಹಾಬಳಶೆಟ್ಟಿ, ಸುರೇಶಗೌಡ ಪಾಟೀಲ, ಟಿ.ಎ. ಬಿರಾದಾರ, ಎಂ.ಬಿ. ನ್ಯಾಮಗೌಡ, ಸುರೇಶ ಬಾಡಗಿ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ದುರ್ಗವ್ವ ಗುಡೆನ್ನವರ, ಗುರುಪಾದ ಮೆಂಡಿಗೇರಿ, ಮಹಾಂತೇಶ ಕೋಳಕಾರ, ಪಿ.ಟಿ. ಪಾಟೀಲ ಮತ್ತಿತರರಿದ್ದರು.ಬಿಜೆಪಿ ಸೇರ್ಪಡೆ: ಜೆಡಿಎಸ್‌ ತೊರೆದು ಬಿಜೆಪಿ ಸೇರ್ಪಡೆ ಆದ ಬಿ.ಎಸ್‌. ಸಿಂಧೂರ, ವಕೀಲ ಸುರೇಶ ಬಾಡಗಿ, ಮಹಾಬಲ ಸದಲಗಿ ಸೇರಿದಂತೆ ನೂರಾರು ಮಂದಿ ವಿವಿಧ ರಾಜಕೀಯ ಪಕ್ಷಗಳನ್ನು ತೊರೆದು ಬಿಜೆಪಿ ಸೇರ್ಪೆಡೆಯಾದರು. ಪಕ್ಷದ ಚಿನ್ಹೆವುಳ್ಳ ಕೊರಳು ಪಟ್ಟಿ, ಪಕ್ಷದ ಧ್ವಜ ಹಾಗೂ ಪುಷ್ಪ ನೀಡಿ ಎಲ್ಲರನ್ನು ಸಂಸದ ಪಿ.ಸಿ. ಗದ್ದಿಗೌಡರ ಬಿಜೆಪಿಗೆ ಬರಮಾಡಿಕೊಂಡರು.ಡಾ.ಅಜಯ ಕುಲಲರ್ಣಿ ವಂದೇ ಮಾತರಂ ಗೀತೆ ಹಾಡಿದರು. ಡಾ.ಸುಖದೇವ ಶರ್ಮಾ ಸ್ವಾಗತಿಸಿದರು. ನಗರಸಭೆ ಸದಸ್ಯ ಶ್ರೀನಿವಾಸ ಅಪರಂಜಿ ನಿರೂಪಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.