ಉಪ್ಪು–ಮೆಣಸಿನೊಂದಿಗೆ ಜಜ್ಜಿ ತಿನ್ನುವ ಹುಳಿಮಾವು, ಬಾಯಿಂದ ತುಳುಕಿ ಅಂಗಿಯ ಮೇಲೆ ಕಲೆಯಾಗುಳಿದ ರಸಪುರಿ ಮಾವು, ಹಣ್ಣೇ ಹೆಣ್ಣಾದಂತೆ ಕಾಣಿಸುವ ಜಾಹೀರಾತುಗಳಲ್ಲಿನ ರಸ(ಸಿ)ಫಲ... ಮಾವು ಎಂದರೆ ಇದಿಷ್ಟೇ ಎಂದು ಹೇಳಲಾದೀತೆ? ಮೊಗೆದಷ್ಟೂ ಮಿಗುವ ‘ರಸ ಮೀಮಾಂಸೆ’ ಈ ಹಣ್ಣಿನದು. ಮನಸ್ಸಿಗೆ ತಂಪು ನೀಡುವ ಅಮ್ಮನ ನೆನಪುಗಳ ವಾತ್ಸಲ್ಯದ ಸವಿ ಮಾವಿಗೂ ಇದೆ. ಅಮ್ಮ ಪ್ರಕೃತಿಯೂ ಹೌದಲ್ಲವೇ? ಮಾವು ಕೂಡ ಪ್ರಕೃತಿಯ ಒಂದು ವಿಶಿಷ್ಟ ಮುಖ. ಮಾವಿನ ಋತು ಈಗ ಚಾಲ್ತಿಯಲ್ಲಿದೆ. ಮಾವು ಸವಿಯುತ್ತ, ನೆನಪುಗಳ ವಾಟೆ ಚೀಪುತ್ತ...

‘ಹಣ್ಣುಗಳ ರಾಜ’ ಎಂದೇ ಕರೆಯುವ ಮಾವನ್ನು ಇಷ್ಟಪಡದವರು ಯಾರಿದ್ದಾರೆ? ಭಾರತದಂಥ ವೈವಿಧ್ಯಮಯ ಸಂಸ್ಕೃತಿಯುಳ್ಳ ದೇಶದಲ್ಲಿ ಹಲವು ಧರ್ಮಗಳೊಂದಿಗೆ ಮಾವಿನೊಂದಿಗೆ ಮೇಳೈಸಿಕೊಂಡ ಹಣ್ಣು ಬೇರೊಂದಿಲ್ಲ ಎಂದರೆ ಅದು ಉತ್ಪ್ರೇಕ್ಷೆಯಲ್ಲ.

ನಿನ್ನೆ ಮೊನ್ನೆ ಬಂದು ಬೇರೂರಿದ ಹಣ್ಣುಗಳಂತೆ ಮಾವಿನ ಇತಿಹಾಸ ಸಣ್ಣದೇನೂ ಅಲ್ಲ. ನೂರಲ್ಲ, ಸಾವಿರ ಅಲ್ಲ; ಆರು ಸಾವಿರ ವರ್ಷಗಳಷ್ಟು ಇತಿಹಾಸ ಈ ‘ಹಣ್ಣುಗಳ ರಾಜ’ನದು. ಇದರ ಮೂಲ ತಾಣ ದಕ್ಷಿಣ ಏಷ್ಯಾ. ಅದರಲ್ಲೂ ಮಾವಿನ ಹಲವು ಕವಲುಗಳು ಭಾರತದಲ್ಲೇ ಜನಿಸಿದಂಥವು. ರಾಜ–ಮಹಾರಾಜರ ಕಾಲದಲ್ಲಿ ಭಾರತಕ್ಕೆ ಭೇಟಿ ನೀಡುತ್ತಿದ್ದ ವಿದೇಶಿ ಪ್ರವಾಸಿಗರ ಪುಸ್ತಕಗಳಲ್ಲಿ ಮಾವಿನ ವರ್ಣನೆಯಿದೆ. ಕ್ರಿ.ಶ. 5ನೇ ಶತಮಾನದಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಚೀನೀ ಯಾತ್ರಿಕ ಫಾಹೆನ್, ಏಳನೇ ಶತಮಾನದಲ್ಲಿ ಬಂದಿದ್ದ ಹ್ಯುಯೆನ್-ತ್ಸಾಂಗ್ ತಮ್ಮ ಪ್ರವಾಸದ ಬಗ್ಗೆ ಬರೆಯುವಾಗ ಮಾವನ್ನು ಮರೆತಿಲ್ಲ. ಇವರಷ್ಟೇ ಅಲ್ಲ; ಇಲ್ಲಿಗೆ ಬಂದಿದ್ದ ಅನೇಕ ಪ್ರವಾಸಿಗರ ಗ್ರಂಥಗಳಲ್ಲಿ ಮಾವಿನ ಹಣ್ಣಿನ ಸವಿಯನ್ನು ಉಲ್ಲೇಖಿಸದೇ ಮುಂದೆ ಸಾಗಿಲ್ಲ. ಭಾರತದಲ್ಲಿ ಸೊಂಪಾಗಿ ಬೆಳೆದಿದ್ದ ಮಾವನ್ನು ಹ್ಯುಯೆನ್ ತ್ಸಾಂಗ್ ಹೊರ ಜಗತ್ತಿಗೆ ಪರಿಚಯಿಸಿದ ಎಂಬ ಮಾತೂ ಇದೆ. ಮಹಾಕವಿ ಕಾಳಿದಾಸನೇ ಮಾವಿಗೆ ಮರುಳಾಗಿದ್ದ ಅಂದ ಮೇಲೆ ಉಳಿದವರ ಮಾತೇಕೆ?

ಅರಸರು, ಚಕ್ರವರ್ತಿಗಳಿಗೆ ಯುದ್ಧ, ರಾಜ್ಯ ವಿಸ್ತರಣೆ ಎಂದರೆ ಅದೇನೋ ಹೆಚ್ಚು ಪ್ರೀತಿ! ಆದರೆ ಮೊಘಲ್ ದೊರೆ ಅಕ್ಬರ್ಗೆ ಮಾವು ಬೆಳೆಸುವ ‘ಹುಚ್ಚು’ ಕೂಡ ಇತ್ತು. ಈಗಿನ ಬಿಹಾರದ ದರ್ಭಾಂಗ ಸಮೀಪ ವಿಶಾಲ ಜಾಗದಲ್ಲಿ ಒಂದು ಲಕ್ಷದಷ್ಟು ಸಂಖ್ಯೆಯಲ್ಲಿ ಮಾವಿನ ಮರಗಳನ್ನು ಬೆಳೆಸಿದ್ದ. ಅದಕ್ಕೆ ‘ಲಾಖ್ ಬಾಘ್’ ಎಂಬ ಹೆಸರಿಟ್ಟಿದ್ದ. ಇದರಿಂದಲೇ ಆತನಿಗೆ ಮಾವಿನ ವ್ಯಾಮೋಹ ಎಷ್ಟಿತ್ತೆಂಬುದು ಗೊತ್ತಾಗುತ್ತದೆ. ಆತನ ಕಾಲದಲ್ಲಿ ರಚನೆಯಾದ ‘ಐನ್– ಎ– ಅಕ್ಬರಿ’ ಗ್ರಂಥದಲ್ಲಿ ಮಾವಿನ ವಿಶೇಷತೆ ಬಣ್ಣಿಸಲಾಗಿದೆ. ಮಾವಿಗೆ ಕುರಿತ ಅಕ್ಬರ್–ಬೀರಬಲ್ ಕಥೆಗಳೂ ಇವೆ.

ಮಾವು ಮೋಹಿ ಟಿಪ್ಪು
‘ಮೈಸೂರು ಹುಲಿ’ ಟಿಪ್ಪು ಸುಲ್ತಾನನೇನು ಮಾವಿನ ಬಗ್ಗೆ ಕಡಿಮೆ ಪ್ರೀತಿಯುಳ್ಳವನೇ? ಆತ ಆಡಳಿತಕ್ಕೆ ಬರುವ ಹೊತ್ತಿಗಾಗಲೇ ಬೇರೆ ಬೇರೆ ದೇಶಗಳಿಗೂ ಮಾವಿನ ಹಲವು ತಳಿಗಳು ರವಾನೆಯಾಗಿ, ಅಲ್ಲಿನದೇ ಹವಾಗುಣ ಹಾಗೂ ಮಣ್ಣಿಗೆ ಹೊಂದಿಕೊಂಡು ಆ ದೇಶದ್ದೇ ತಳಿಗಳಾಗಿ ಬೆಳೆದಿದ್ದವು. ಅಲ್ಲಿಂದ ಸಸಿಗಳನ್ನು ತರಿಸಿದ ಟಿಪ್ಪು, ತನ್ನ ನೆಲದಲ್ಲಿ ನಾಟಿ ಮಾಡಿಸಿದ. ಬ್ರಿಟಿಷರು ದಾಳಿ ಮಾಡಬಹುದಾದ ದಾರಿಗಳನ್ನು ಊಹಿಸಿಕೊಂಡಿದ್ದ ಟಿಪ್ಪು ಸುಲ್ತಾನ, ಗಡಿಭಾಗದ ಅಲ್ಲಲ್ಲಿ ಸೇನಾ ತುಕಡಿ ನಿಯೋಜಿಸಿದ್ದ. ಆ ಸೈನಿಕರಿಗೆ ಜಮೀನು ಉಂಬಳಿಯಾಗಿ ಕೊಟ್ಟು, ಮಾವಿನ ತೋಪುಗಳನ್ನು ಬೆಳೆಸಲು ಸೂಚಿಸಿದ್ದ. ಅಂಥ ಕಿರು ಕಾವಲು ಪಡೆಯ ಸೈನಿಕನಾಗಿದ್ದ ಸೈಯದ್ ಘನಿ ಖಾನ್ಗೆ ಮಾವೆಂದರೆ ಬಲು ಪ್ರೀತಿ. ಆತ ಬೆಳೆಸಿದ್ದ ನೂರಕ್ಕೂ ಹೆಚ್ಚು ಮರಗಳನ್ನು, ಮರಿ ಮೊಮ್ಮಗ ಘನಿ ಖಾನ್ ಈಗಲೂ ಉಳಿಸಿಕೊಂಡು ಬಂದಿದ್ದಾರೆ. ಆ ಕಿರು ಕಾವಲು ಈಗ ‘ಕಿರುಗಾವಲು’ ಆಗಿದೆ. ಅದೀಗ ಈಗಿನ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿಗೆ ಸೇರಿದೆ.

ಚಕ್ರವರ್ತಿಗಳ ಜತೆಗಷ್ಟೇ ಈ ‘ಹಣ್ಣುಗಳ ರಾಜ’ನ ನಂಟು ಎಂದರೆ ತಪ್ಪಾದೀತು. ಸಾಮಾನ್ಯ ಮನುಷ್ಯ ಕೂಡ ಮಾವು ಕಂಡು ಮರುಳಾಗಿದ್ದಾನೆ. ಮಾವೆಂದರೆ ಆತನಿಗೂ ಬಲು ಪ್ರೀತಿ.

ಪೂರ್ವಿಕರು ಯಾವುದೇ ಫಲಾಪೇಕ್ಷೆಯಿಲ್ಲದೆ ರಸ್ತೆ ಅಕ್ಕಪಕ್ಕ ಮಾವಿನ ಸಸಿ ನೆಟ್ಟರು. ದಾರಿಯುದ್ದಕ್ಕೂ ಸಾಲುಮರವಾಗಿ ನಿಂತು ಅವರ ಮಕ್ಕಳು, ಮೊಮ್ಮಕ್ಕಳಿಗೆ ನೆರಳು–ಹಣ್ಣು ನೀಡಿದ ಖುಷಿ ಮಾವಿನ ಮರಗಳದು. ಒಂದೇ ಕಡೆ ನೂರಾರು ಸಂಖ್ಯೆಯಲ್ಲಿ ಬೆಳೆಸಿ, ತೋಪು ಮಾಡಿದ ರೈತರೂ ಇದ್ದಾರೆ. ‘ನಮ್ಮೂರು ದೇವನಹಳ್ಳಿ ಸಮೀಪ ಇಂಥದೇ ಒಂದು ತೋಪು ಇತ್ತು. ಹಗಲು ಹೊತ್ತಿನಲ್ಲೂ ಪಂಜು ಹಿಡಿದುಕೊಂಡು ಆ ಬೆಳಕಿನಲ್ಲಿ ತೋಪಿನೊಳಗೆ ಹೋಗಬೇಕಿತ್ತು. ನೆರಳು ನೆಲ ಸೋಕದಂತೆ ಅಷ್ಟೊಂದು ವಿಶಾಲವಾಗಿ ಬೆಳೆದ ಮರಗಳ ನೆನಪು ನನ್ನ ಮನದಲ್ಲಿದೆ’ ಎನ್ನುತ್ತಾರೆ ರೈತ ಶಿವನಾಪುರ ರಮೇಶ. ಅಧಿಕ ಆಹಾರ ಉತ್ಪಾದನೆ ಗುರಿಯೊಂದಿಗೆ ‘ಹಸಿರುಕ್ರಾಂತಿ’ ಬಂದಿದ್ದೇ ತಡ; ಮರಗಳ ಅವನತಿ ಶುರುವಾಯಿತು. ಲಕ್ಷಾಂತರ ಮರಗಳನ್ನು ನಿರ್ದಾಕ್ಷಿಣ್ಯವಾಗಿ ಧರೆಗೆ ಉರುಳಿಸಿ, ಅಲ್ಲಿ ಬೆಳೆ ಬೆಳೆದರು. ಮಾವಿನ ಸಂತತಿ ಕಡಿಮೆಯಾಗಲಿದೆ ಎಂಬ ಆತಂಕದಲ್ಲಿ ಮುಳುಗಿರುವಾಗಲೇ ಮತ್ತೆ ತೋಟಗಾರಿಕೆ ಹೆಸರಿನಲ್ಲಿ ಮಾವನ್ನು ಬೇಸಾಯ ಲೋಕಕ್ಕೆ ಕರೆತಂದಿದ್ದು ಅಚ್ಚರಿ ವಿಷಯ. ಸಾವಿರಾರು ವರ್ಷಗಳಿಂದ ಜನರೊಂದಿಗೆ ಬೆಳೆದುಬಂದ ಮಾವನ್ನು ಅಷ್ಟು ಸುಲಭವಾಗಿ ತೊರೆಯಲು ಆದೀತೆ?...

ಯಾಕೆಂದರೆ ಮಾವು ಬರೀ ಹಣ್ಣುಗಳನ್ನಷ್ಟೇ ಕೊಡುವುದಿಲ್ಲವಲ್ಲ! ಹಬ್ಬ–ಹರಿದಿನಗಳಲ್ಲಿ ಬಾಗಿಲಿಗೆ ತೋರಣ ಕಟ್ಟಬೇಕೆಂದರೆ ‘ಮಾವಿನೆಲೆ ತಗೊಂಡು ಬಾ’ ಅಂತ ಮಗನನ್ನು ಕಳಿಸುತ್ತಾರೆ. ಕಾಲು ಗಾಸಿಗೊಂಡರೆ, ಎಲೆ ಜಜ್ಜಿ ಹಚ್ಚಿದರೆ ಗಾಯ ಮಂಗಮಾಯ! ರಸಭರಿತ ಹಣ್ಣನ್ನು ತಿಂದು, ಸಿಪ್ಪೆ– ಓಟೆ (ಗೊಟ್ಟ) ಎಸೆಯದೇ ಅವುಗಳಿಂದಲೂ ಔಷಧಿ ತಯಾರಿಸುತ್ತಾರೆ. ಕಾಯಿಗಳಿಂದ ವರ್ಷವಿಡೀ ಬಳಸುವ ಉಪ್ಪಿನಕಾಯಿ, ಜಾಮ್, ಹೆಚ್ಚಿದ ಹೋಳುಗಳ ಬಾಳಕ, ಜೂಸ್... ಹತ್ತಾರು ತಿನಿಸು ಮಾಡುತ್ತಾರೆ. ವಯಸ್ಸಾದ ಮರಗಳನ್ನು ಮನೆಯ ಕಿಟಕಿ, ಕಂಬ, ತೊಲೆಯನ್ನಾಗಿ ಬಳಕೆ ಮಾಡಲಾಗುತ್ತದೆ. ಬೃಹತ್ ಮರಗಳನ್ನು ಕತ್ತರಿಸಿ ಹಡಗು ಮಾಡುವುದೂ ಉಂಟು. ತೀರಾ ನಿರುಪಯುಕ್ತ ತುಂಡುಗಳಿದ್ದರೆ ಉರುವಲಿಗೆ ಬಳಕೆ. ಹೀಗೆ ಆಹಾರ, ಔಷಧಿ, ಸಂಸ್ಕೃತಿ, ಸಂಪ್ರದಾಯದೊಂದಿಗೆ ಬೆಳೆದುಕೊಂಡು ಬಂದಿದ್ದು ಮಾವು. ಕಲ್ಪವೃಕ್ಷ ಎನ್ನುವುದು ಮಾವಿಗೂ ಹೊಂದುವ ಹೆಸರು.

ಸವಿದಷ್ಟೂ ವೈವಿಧ್ಯ
ಏಕತೆಯಲ್ಲೂ ವೈವಿಧ್ಯ ಎನ್ನುವಂತೆ ಮಾವಿನ ಹಣ್ಣುಗಳ ಬಣ್ಣ, ರುಚಿ, ಪರಿಮಳದಲ್ಲಿ ನಾನಾ ಬಗೆಯಿದೆ. ಸಿಹಿಯೊಂದೇ ಮಾವಿನ ಸ್ವಭಾವವಲ್ಲ. ಸಪ್ಪೆ, ಒಗರು, ಹುಳಿ ಇತ್ಯಾದಿ. ಕಿರುಗಾವಲಿನ ಸೈಯದ್ ಘನಿ ಖಾನ್ ತೋಟಕ್ಕೆ ಈ ಸಮಯದಲ್ಲಿ ಒಮ್ಮೆ ಹೋಗಬೇಕು. ಸಿಕ್ಕ ಹಣ್ಣೊಂದನ್ನು ಕಿತ್ತು ತಿನ್ನಬೇಕು. ಅದು ಸೇಬಿನ ರುಚಿ ಹೊಂದಿರಬಹುದು; ಅಥವಾ ಮೂಸಂಬಿ, ಜೀರಿಗೆ ಪರಿಮಳ ಸಿಗಬಹುದು. ‘...ಅದೆಲ್ಲ ಇಲ್ಲ. ಇದು ಸಪ್ಪೆ ಇದೆ’ ಅಂತ ದೂರಬೇಡಿ. ಅದು ಸಪ್ಪನೆಯ ಮಾವು. ಅಂದರೆ ಸಕ್ಕರೆ ಅಂಶ ತೀರಾ ಕಡಿಮೆ ಇರುವಂಥದು!
ರುಚಿಯಲ್ಲಿ ಹತ್ತಾರು ವಿಧ. ತಳಿಗಳಲ್ಲಿ ಸಾವಿರ ಬಗೆ ಮಾವಿನ ವೈಶಿಷ್ಟ್ಯ. ಬೇರೆ ಬೇರೆ ಪ್ರದೇಶಕ್ಕೆ, ಅಲ್ಲಿನ ಮಣ್ಣು–ಗಾಳಿಗೆ ಹೊಂದಿಕೊಂಡು ಬೆಳೆಯುವ ಮಾವು, ತನ್ನದೇ ಆದ ವಿಶೇಷ ಸ್ವಭಾವ ರೂಢಿಸಿಕೊಂಡಿದೆ. ಉದಾಹರಣೆಗೆ, ಉತ್ತರ ಪ್ರದೇಶದಲ್ಲಿನ ದಶೆಹರಿ ತಳಿ, ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಅಲ್ಫಾನ್ಸೊ, ಪಶ್ಚಿಮ ಬಂಗಾಳದ ಹಿಮಸಾಗರ್, ಗುಜರಾತಿನ ಕೇಸರ...

ಇತಿಹಾಸದೊಂದಿಗೆ ಹೆಣೆದುಕೊಂಡು ವರ್ತಮಾನದಲ್ಲೂ ಬೆಳೆಯುತ್ತಿರುವ ಮಾವು ಸೀಮಿತ ಜಾಗಕ್ಕೆ ಸೇರಿಲ್ಲ. ನೆಡುತೋಪು ಜನಪ್ರಿಯವಾಗುತ್ತಿರುವ ಆಧುನಿಕ ಕೃಷಿ ಪದ್ಧತಿಯಲ್ಲಿ ಆ ವಿಧಾನಕ್ಕೆ ಮಾವು ಒಗ್ಗಿಸಲಾಗಿದೆ. ಕಸಿ ಮಾಡುವ ತಂತ್ರಜ್ಞಾನ ನಿಖರ ರೂಪ ಪಡೆದಿದೆ. ಇದರಿಂದಾಗಿ, ಅಪರೂಪದ ತಳಿಗಳು ಮತ್ತೆ ಜೀವ ಪಡೆದಿವೆ. ಕೆಲವು ‘ಮಾವು ಮೋಹಿ’ಗಳು ಹಳೆಯ ತಳಿ ಮರಳಿ ತರಲು ಕಟಿಬದ್ಧರಾಗಿದ್ದಾರೆ. ಮಲೆನಾಡಿನ ‘ಮಿಡಿ ಮಾವು’ ಇನ್ನೇನು ನಿರ್ನಾಮವಾಯಿತು ಎಂಬುವಷ್ಟರಲ್ಲಿ ಮತ್ತೆ ಎದ್ದು ನಿಂತಿವೆ.

ಹಾಗೆಂದು ಹಳೆಯ ದಿನಗಳು ಮತ್ತೆ ಬರುತ್ತವೆಂದಲ್ಲ. ಸಾವಿರಗಟ್ಟಲೇ ಇದ್ದ ತಳಿಗಳ ಸಂಖ್ಯೆ ಈಗ ನೂರೋ, ಇನ್ನೂರಕ್ಕೋ ಇಳಿದಿದೆ. ಬೀದಿ ಬದಿ ಸಹಜವಾಗಿ ಬೆಳೆದು ಹಣ್ಣು–ನೆರಳಿನೊಂದಿಗೆ ಸೂಸುತ್ತಿದ್ದ ಸೊಗಡು ಕಳೆದುಹೋಗಿದೆ. ಹಳ್ಳ–ತೊರೆಗಳ ಪಕ್ಕ ಸಮೃದ್ಧವಾಗಿ ಬೆಳೆದ ನೋಟ ಮತ್ತೆ ಸಿಕ್ಕೀತೆ? ವಸಂತ ಋತು ಕಾಲಿಡುತ್ತಲೇ ಮಾವಿನ ರೆಂಬೆಯಲ್ಲಿ ಘಮ್ಮೆಂದು ಹೂವು ಅರಳುತ್ತವೆ. ಕವಲಿನ ಅಂಚಿನಲ್ಲಿ ಚಿಗುರೆಲೆ ತಿನ್ನುವ ಕೋಗಿಲೆ ಹಾಡುತ್ತದೆ. ಆದರೆ ಅದರ ಸ್ವರ ಇಂಪಾಗಿ ಕೇಳುತ್ತಿಲ್ಲವಲ್ಲ ಎಂದೆನಿಸಿದರೆ ಅದಕ್ಕೆ ಮಾವು ಹೊಣೆಯಲ್ಲ!

ರಫ್ತಿಗೆ ಕೀಟಬಾಧೆ
ಭಾರತದ ಮಾವು ಹತ್ತಾರು ದೇಶಗಳಿಗೆ ರಫ್ತಾಗುತ್ತದೆ. ಅದರಲ್ಲೂ ಅಲ್ಫಾನ್ಸೋ ಮಾವಿಗೆ ಯೂರೋಪ್ ಹಾಗೂ ಮಧ್ಯಪ್ರಾಚ್ಯದಲ್ಲಿ ಹೆಚ್ಚು ಬೇಡಿಕೆಯಿದೆ. ಮಾವಿನ ಜತೆಗೆ ಕೀಟಗಳೂ ನುಸುಳಬಹುದು ಎಂಬ ಆತಂಕದಿಂದ ಐರೋಪ್ಯ ಒಕ್ಕೂಟ ಭಾರತದ ಅಲ್ಫಾನ್ಸೊ ಮಾವಿಗೆ ಪ್ರಸಕ್ತ ಋತುವಿನಲ್ಲಿ ನಿಷೇಧ ವಿಧಿಸಿದೆ. ಇದು ಮುಂದಿನ ವರ್ಷ ಡಿ.31ರವರೆಗೆ ಜಾರಿಯಲ್ಲಿರಲಿದೆ. ಅಲ್ಫಾನ್ಸೊ ಜತೆ ಕೆಸುವು ಗಡ್ಡೆ, ಹಾಗಲಕಾಯಿ, ಬದನೆ, ಪಡವಲಕಾಯಿಗಳೂ ನಿಷೇಧಕ್ಕೆ ಒಳಗಾಗಿವೆ. ಕಳೆದ ವರ್ಷ ಆಮದು ಮಾಡಿಕೊಳ್ಳಲಾದ ಒಟ್ಟೂ ಪ್ರಮಾಣದ ಪೈಕಿ 207 ಸರಕುಗಳಲ್ಲಿದ್ದ ಈ ಹಣ್ಣು– ತರಕಾರಿಗಳಲ್ಲಿ ಕೀಟಗಳು (fruit flies) ಪತ್ತೆಯಾಗಿವೆಯಂತೆ.

ಇಂಥ ಕೀಟಗಳು ಯೂರೋಪ್ನಲ್ಲಿ ಇಲ್ಲ. ಹೀಗಾಗಿ ಇವು ಇಲ್ಲಿನ ನೆಲ ಸೇರಿ, ಬೆಳೆ ಹಾನಿ ಮಾಡಬಹುದು ಎಂಬ ಆತಂಕದ ಹಿನ್ನೆಲೆಯಲ್ಲಿ ಐರೋಪ್ಯ ಒಕ್ಕೂಟ ನಿಷೇಧ ಕ್ರಮಕ್ಕೆ ಮುಂದಾಗಿದೆ. ಈ ಕ್ರಮಕ್ಕೆ ಭಾರತ ಮಾತ್ರವಲ್ಲದೇ ಇಂಗ್ಲೆಂಡಿನಲ್ಲೂ ವಿರೋಧ ವ್ಯಕ್ತವಾಗಿದೆ. ‘ನಮ್ಮ ದೇಶದ ಜನರು ನೂರಾರು ವರ್ಷಗಳಿಂದ ಭಾರತದ ಅಲ್ಫಾನ್ಸೋ ಮಾವು ತಿನ್ನುತ್ತಿದ್ದಾರೆ. ಈವರೆಗೆ ಅಂಥ ಯಾವ ಹಾನಿಯೂ ಆಗಿಲ್ಲ’ ಎಂದು ಭಾರತ ಮೂಲದ ಬ್ರಿಟನ್ ಸಂಸದ ಕೇತ್ ವಾಜ್ ಹೇಳಿದ್ದಾರೆ.

ಪದ್ಮಶ್ರೀ ಆಮ್ ಆದ್ಮಿ
ದೆಹಲಿಯ ರಾಷ್ಟ್ರಪತಿ ಭವನದಲ್ಲಿರುವ ಮೊಘಲ್ ಉದ್ಯಾನಕ್ಕೆ ಭೇಟಿ ನೀಡುವವರ ಗಮನವನ್ನು ಹೆಚ್ಚಾಗಿ ಸೆಳೆಯುವುದು ಅಲ್ಲಿರುವ ವಿಶಿಷ್ಟ ಮಾವಿನ ಮರ. 54 ತಳಿ ಮಾವನ್ನು ಕಸಿ ಮಾಡಿರುವ ಈ ಮರ ಕೊಡುಗೆಯಾಗಿ ನಡಿದ್ದು ಹಾಜಿ ಕಲೀಮುಲ್ಲಾ ಖಾನ್.
ಲಖನೌ ಸಮೀಪದ ಮಲಿಹಾಬಾದ್ ಗ್ರಾಮದ ರೈತ ಕಲೀಮುಲ್ಲಾ, ಮಾವಿನ ಕಸಿಯಲ್ಲಿ ಅಗ್ರಗಣ್ಯ. ತಮ್ಮ ತೋಟದಲ್ಲಿರುವ ದೊಡ್ಡ ಮರವೊಂದಕ್ಕೆ 300 ತಳಿ ಮಾವನ್ನು ಕಸಿ ಮಾಡಿದ್ದಾರೆ. ಅಂದರೆ, ಒಂದೇ ಮರದಲ್ಲಿ 300 ತಳಿಯ ಹಣ್ಣು!

ಖಾನ್ ಪೂರ್ವಿಕರು ಮಾವು ಕೃಷಿ ಮಾಡುತ್ತ ಬಂದಿದ್ದಾರೆ. ‘ಅಬ್ದುಲ್ಲಾ ನರ್ಸರಿ’ಯಲ್ಲಿ ನೂರಕ್ಕೂ ಹೆಚ್ಚು ವರ್ಷಗಳ ಮಾವಿನ ಮರಗಳಿವೆ. ಅವರ ಕುಟುಂಬದ ಈಗಿನ ತಲೆಮಾರಿನ ಹಿರಿಯ ಕಲೀಮುಲ್ಲಾ, ಹಲವು ತಳಿಗಳನ್ನು ಅಭಿವೃದ್ಧಿಪಡಿಸಿ ತಮಗೆ ಖುಷಿ ಎನಿಸುವ ಹೆಸರು ಇಟ್ಟಿದ್ದಾರೆ. ಮಾವಿನ ಕಸಿ ಹಾಗೂ ಕೃಷಿಗೆ ‘ಪದ್ಮಶ್ರೀ’ ಪ್ರಶಸ್ತಿ ಪಡೆದ ಏಕೈಕ ರೈತ ಕಲೀಮುಲ್ಲಾ ಖಾನ್ ಅವರೇ ಇರಬೇಕು. ‘ಆಮ್ ಮೇರಾ ಜಾನ್’ (ಮಾವು ನನ್ನ ಜೀವ) ಎನ್ನುವ ಕಲೀಮುಲ್ಲಾ ಅವರನ್ನು ಪರಿಚಿತರು ‘ಆಮ್ ಆದ್ಮಿ’ ಎಂದೇ ಚುಡಾಯಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.