ಶನಿವಾರ, ಮಾರ್ಚ್ 6, 2021
21 °C

‘ಮೌನ ಸತ್ಯಾಗ್ರಹಿ’ಯಿಂದ ನಾಮಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಮೌನ ಸತ್ಯಾಗ್ರಹಿ’ಯಿಂದ ನಾಮಪತ್ರ

ಬೆಂಗಳೂರು: ಕುಡಿಯುವ ನೀರನ್ನು ಮಾರಾಟ ಮಾಡುವುದನ್ನು ವಿರೋಧಿಸುತ್ತಾ ಬಂದಿರುವ ಆಂಬ್ರೋಸ್‌ ಡಿಮೆಲ್ಲೊ ಹೆಬ್ಬಾಳ ಉಪಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಬಾಟಲಿ ನೀರಿನ ಮಾರಾಟ ನಿಲ್ಲಿಸಬೇಕು ಎಂದು ಆಗ್ರಹಿಸಿ ಸತ್ಯಾಗ್ರಹ ನಡೆಸುತ್ತಿರುವ ಅವರು ಮಾತನಾಡುವುದನ್ನು ನಿಲ್ಲಿಸಿದ್ದಾರೆ. ಕನ್ನಡ ಎಂ.ಎ. ಪದವೀಧರರಾಗಿರುವ ಅವರ ಮೌನ ಸತ್ಯಾಗ್ರಹ ಕಳೆದ 11 ವರ್ಷಗಳಿಂದ ಮುಂದುವರಿದಿದೆ.  ಅವರ ಸಂವಹನ ಏನಿದ್ದರೂ ಅಕ್ಷರದ ರೂಪದಲ್ಲಿ. ಕೈಯಲ್ಲಿ ಒಂದು ಸ್ಲೇಟ್‌ ಹಿಡಿದುಕೊಂಡಿರುವ ಅವರು ನೀರಿನಿಂದ ಅಕ್ಷರ ಬರೆಯುವ ಮೂಲಕ ಹೇಳಬೇಕಾದುದನ್ನು ತಲುಪಿಸುತ್ತಾರೆ. ಜನ ಅವರನ್ನು ‘ಅಮೃತ್‌’ ಎಂದೂ ಕರೆಯುತ್ತಾರಂತೆ.ಆಂಬ್ರೋಸ್‌ ಅವರು ಚುನಾವಣೆಗೆ ಸ್ಪರ್ಧಿಸುತ್ತಿರುವುದು ಇದೇ ಮೊದಲಲ್ಲ. 2014ರ ಲೋಕಸಭಾ ಚುನಾವಣೆಯಲ್ಲೂ ಅವರು ಬೆಂಗಳೂರು ಸೆಂಟ್ರಲ್‌ ಕ್ಷೇತ್ರದಿಂದ ಸ್ಪರ್ಧಿಸಿದ್ದರು.  ಆಗ ಪ್ರಧಾನಿ ಮೋದಿ ಅವರ ಕ್ಷೇತ್ರ ವಾರಾಣಸಿಯಿಂದಲೂ ಅವರು ನಾಮಪತ್ರ ಸಲ್ಲಿಸಿದ್ದರು. ಆದರೆ, ಅಲ್ಲಿ ನಾಮಪತ್ರ ತಿರಸ್ಕೃತಗೊಂಡಿತ್ತು.  2013ರ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಪೇಟೆ ಕ್ಷೇತ್ರದಿಂದ ಸ್ಪರ್ಧಿಸಿದ್ದರು. 2015ರ ಬಿಬಿಎಂಪಿ ಚುನಾವಣೆಯಲ್ಲಿ ಅವರು ಸುಧಾಮನಗರ ವಾರ್ಡ್‌ನಿಂದ ಸ್ಪರ್ಧಿಸಿ 37 ಮತಗಳನ್ನು ಪಡೆದಿದ್ದರು. ‘ಗೆಲ್ಲಬೇಕೆಂಬ ಕಾರಣಕ್ಕೆ ನಾನು ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ಕುಡಿಯುವ ನೀರು ಮಾರಾಟದ ಸರಕು ಅಲ್ಲ ಎಂದು ಜನ ಜಾಗೃತಿ ಮೂಡಿಸುವುದು ನನ್ನ ಉದ್ದೇಶ’ ಎನ್ನುತ್ತಾರೆ  ಆಂಬ್ರೋಸ್‌.‘ಬೆಂಗಳೂರು ನಗರವೊಂದರಲ್ಲೇ ನಿತ್ಯ 20 ಲಕ್ಷ ಕುಡಿಯುವ ನೀರಿನ ಬಾಟಲಿಗಳು ಮಾರಾಟ ಆಗುತ್ತವೆ. ಬಹು ರಾಷ್ಟ್ರೀಯ ಕಂಪೆನಿಗಳು ಇಲ್ಲಿನ ನೀರನ್ನೇ  ಬಳಸಿ, ನಮಗೆ ಅದನ್ನೇ ಮಾರಾಟ ಮಾಡಿ ಕೋಟ್ಯಂತರ ರೂಪಾಯಿ ಲಾಭ ಮಾಡಿಕೊಳ್ಳುತ್ತಿವೆ. ಇದನ್ನು  ರಾಜಕಾರಣಿಗಳಿಗೆ ಅರ್ಥ ಮಾಡಿಸಬೇಕಿದೆ’ ಎಂದು ಅವರು ತಿಳಿಸಿದರು.‘ಸಂಜೆವರೆಗೆ ಉಪವಾಸ ಇರುತ್ತೇನೆ. ನಿತ್ಯ ಒಪ್ಪೊತ್ತಿನ ಊಟ ಮಾತ್ರ ಮಾಡುತ್ತೇನೆ. ಆರೋಗ್ಯವಂತ ವ್ಯಕ್ತಿಗೆ ಒಪ್ಪೊತ್ತಿನ ಊಟ ಸಾಕಾಗುತ್ತದೆ. ದಿನಕ್ಕೊಂದು ಶೌಚಾಲಯ ಶುಚಿಗೊಳಿಸುತ್ತೇನೆ. ಶೌಚಾಲಯದ ನಲ್ಲಿ  ನೀರನ್ನು ಕುಡಿಯುವ ಮೂಲಕ ಉಪವಾಸ ಅಂತ್ಯಗೊಳಿಸುತ್ತೇನೆ’ ಎಂದು ಅವರು ತಿಳಿಸಿದರು.‘ಪ್ರಗತಿಪರ ಚಳವಳಿಗಳಲ್ಲಿ ಭಾಗವಹಿಸುವುದನ್ನು ಹವ್ಯಾಸವನ್ನಾಗಿ ಮಾಡಿಕೊಂಡಿದ್ದೇನೆ.  ಮಹಾತ್ಮ ಗಾಂಧಿ, ಬಿ.ಆರ್‌. ಅಂಬೇಡ್ಕರ್‌, ಸ್ವಾಮಿ ವಿವೇಕಾನಂದ ಅವರ ಕೃತಿಗಳನ್ನು ಮಾರಾಟ ಮಾಡುವುದರಿಂದ ಬರುವ ಹಣದಲ್ಲಿ ಜೀವನ ನಡೆಸುತ್ತಿದ್ದೇನೆ. ಒಂದಿಷ್ಟು ಹಣವನ್ನು ಚುನಾವಣೆಗೆ ಸ್ಪರ್ಧಿಸುವ ಸಲುವಾಗಿ ಕೂಡಿಡುತ್ತೇನೆ.  ನನ್ನ ಬಳಿ ₹11 ಸಾವಿರ ಸಂಗ್ರಹವಾಗಿತ್ತು. ಈ ಪೈಕಿ 10 ಸಾವಿರ ರೂಪಾಯಿಯನ್ನು ಠೇವಣಿ ಕಟ್ಟಿದ್ದೇನೆ’ ಎಂದು  ವಿವರಿಸಿದರು.‘ಫುಟ್‌ಪಾತ್‌ನಲ್ಲಿ, ಪ್ರಗತಿಪರ ಸಂಘಟನೆಗಳ ಕಚೇರಿ ಬಳಿ ಅಥವಾ ರೈಲ್ವೆ ನಿಲ್ದಾಣದಲ್ಲಿ ನನ್ನ ವಾಸ. ಈ ಹಿಂದೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಸಂದರ್ಭದಲ್ಲಿ ಮತದಾರರ ಗುರುತಿನ ಚೀಟಿ ಮಾಡಿಸಿಕೊಂಡಿದ್ದೇನೆ’ ಎಂದರು. ‘ಅನೇಕ ವರ್ಷಗಳಿಂದ ಶೌಚಾಲಯದ ನಲ್ಲಿ ನೀರನ್ನು ಕುಡಿಯುತ್ತಿದ್ದರೂ ನನಗೆ ಕಾಯಿಲೆ ಬಂದಿಲ್ಲ. ಕುಡಿಯುವ ನೀರಿನ  ವಿಚಾರದಲ್ಲಿ ದೊಡ್ಡ ಮಟ್ಟದ ರಾಜಕೀಯ ನಡೆಯುತ್ತಿದೆ’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.