ಮಂಗಳವಾರ, ಜೂನ್ 22, 2021
23 °C

‘ರಾಜಕಾರಣಿಗಳಿಗೆ ಎಲ್ಲಿದೆ ವಿಶ್ರಾಂತಿ’ ಎಂದ ಧರಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ಇಲ್ಲಿನ ಗುರುನಾನಕ್ ನಗರದ ಮನೆಯೊಂದರ ಮುಂದೆ ಹತ್ತಾರು ಕಾರುಗಳು ನಿಂತಿದ್ದವು. ಆ ಪ್ರದೇಶದಲ್ಲಿ ಸಂಸದ ಧರ್ಮಸಿಂಗ್‌ ಅವರ ಮನೆ ಯಾವುದು ಎಂದು ಕೇಳುವ ಪ್ರಮೇಯವೇ ಬರಲಿಲ್ಲ.ಮನೆಯ ಹಜಾರದ ಮಧ್ಯ ಧರ್ಮ­ಸಿಂಗ್ ಕುಳಿತಿದ್ದರು. ಅವರ ಹಿಂದೆ ಪತ್ನಿ ಪ್ರಭಾವತಿ ಇದ್ದರು. ಉಳಿದಂತೆ ಕಾಂಗ್ರೆಸ್‌ ಪಕ್ಷದ ಮುಖಂಡರು, ಕಾರ್ಯ­ಕರ್ತರು ಇದ್ದರು. ಒಬ್ಬರು ಬುದ್ಧ, ಬಸವೇಶ್ವರ, ಅಂಬೇಡ್ಕರ್‌ ಕುರಿತು ‘ಭಾಷಣ’ ಮಾತ­ನಾಡು­ತ್ತಿದ್ದರು. ಧರ್ಮಸಿಂಗ್‌ ಕಣ್ಣು ಮುಚ್ಚಿ ಕೇಳಿಸಿ­ಕೊಳ್ಳುತ್ತಿದ್ದರು.ಇದೇ ರೀತಿ ಐದಾರು ನಿಮಿಷ ನಡೆಯಿತು. ಆ ಮೇಲೆ ‘ನೀವು ಇನ್ನು ಹೊರಡಿ’ ಎನ್ನುವಂತೆ ಅವರನ್ನು ಧರ್ಮ­ಸಿಂಗ್ ನೋಡಿ­ದರು. ಕ್ಷಣಾರ್ಧದಲ್ಲಿ ಇಡೀ ಹಜಾರ ಖಾಲಿ ಆಯಿತು. ‘ಪ್ರಜಾವಾಣಿ’ಯೊಂದಿಗೆ ಮಾತುಕತೆ ಆರಂಭವಾಯಿತು. 

ರಾಜಕೀಯ ಸಾಕು, ವಿಶ್ರಾಂತಿ ಪಡೆಯ­ಬೇಕು ಎಂದು ನಿಮಗೆ ಎಂದಾದರೂ ಅನಿಸಿತ್ತೇ?

36 ವರ್ಷ ಸತತವಾಗಿ ಶಾಸಕನಾಗಿದ್ದೆ. ಇದು ನನ್ನ ಮೂರನೇ ಲೋಕಸಭಾ ಚುನಾವಣೆ. ಈ ಬಾರಿ ಸ್ಪರ್ಧಿಸುವ ಆಸೆ ಇರಲಿಲ್ಲ. ಪಕ್ಷ ಸ್ಪರ್ಧಿಸಬೇಕು ಎಂದು ಆದೇಶ ನೀಡಿತು. ಕಣದಲ್ಲಿದ್ದೇನೆ. ರಾಜಕಾರಣಿಗಳಿಗೆ ಎಂಥ ವಿಶ್ರಾಂತಿ?ಇದು ನಿಮ್ಮ ಕೊನೆಯ ಚುನಾವಣೆ ಆಗಬಹುದೇ?

ಹೌದು. ನನಗೀಗ 76 ವರ್ಷ. ಆದ್ದರಿಂದ ಇದೇ ಕೊನೆ ಚುನಾವಣೆ. (ಪಕ್ಕದಲ್ಲಿದ್ದವರೊಬ್ಬರು ನೀವು ಹೀಗೆ ಹೇಳಬೇಡಿ ಎಂದು ಆಕ್ಷೇಪ ವ್ಯಕ್ತ­ಪಡಿಸಿದರು). ನೀನು ಸುಮ್ಮನೆ ಇರಪ್ಪ. ಮುಂದಿನ ಚುನಾವಣೆ ತನಕ ಬದುಕಿ­ದ್ದರೆ, ನನಗೆ 88 ವರ್ಷವಾಗುತ್ತದೆ.ಜೇವರ್ಗಿಯಲ್ಲಿ ನಡೆದ ಸಮಾರಂಭ­ದಲ್ಲಿ ಅತ್ತಿದ್ದು ಏಕೆ?

ನಾನು ಜೇವರ್ಗಿ ಕ್ಷೇತ್ರದಿಂದ ಸತತ­ 8 ಬಾರಿ ಗೆದ್ದೆ. 9 ನೇ ಬಾರಿಗೆ (2009) ರಲ್ಲಿ 28 ವೋಟುಗಳಿಂದ ಸೋತೆ. ಇದೇ ಕ್ಷೇತ್ರದಿಂದ ಗೆದ್ದು ಮುಖ್ಯಮಂತ್ರಿಯೂ ಆಗಿದ್ದೆ. ಅಂಥ ಕ್ಷೇತ್ರವನ್ನು ಬಿಟ್ಟು ಬೀದರ್‌ಗೆ ಹೋಗುವಾಗ ದುಃಖ­ವಾಯ್ತ. ಅತ್ತುಬಿಟ್ಟೆ.

ರಾಜಕಾರಣಿಗಳು ಎದ್ದು ನಡೆದಾಡಲು ಸಾಧ್ಯವಾಗದೇ ಇದ್ದರೂ, ಚುನಾವಣೆ ಬಂತೆಂದರೆ ಲವಲವಿಕೆಯಿಂದ ಓಡಾಡು­ತ್ತಾರೆ. ಚುನಾವಣೆ ರಾಜಕಾರಣಿಗಳಿಗೆಟಾನಿಕ್‌ ರೀತಿ ಕೆಲಸ ಮಾಡುತ್ತದಾ?

(ಏನು ಹೇಳಬೇಕು ತೋಚದೇ ಸ್ವಲ್ಪ ಹೊತ್ತು ಯೋಚಿ­­ಸಿ) ‘ಇರುತ್ತದೆ’.ವಂಶ ಪಾರಂಪರ್ಯ ರಾಜಕಾರಣ ಸರಿಯೇ?

(ತುಂಬಾ ಯೋಚಿಸಿದ ನಂತರ) ಜವಾಹರಲಾಲ್‌ ನೆಹರೂ, ಇಂದಿರಾ­ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಎಲ್ಲರೂ ದೇಶಕ್ಕಾಗಿ ಅಪಾರ ಕೊಡುಗೆ ನೀಡಿದ್ದಾರೆ. ಮಾರ್ಗದರ್ಶನ ಮಾಡಿದ್ದಾರೆ. (ಮಧ್ಯದಲ್ಲೇ ತಡೆದು ರಾಜಕಾರಣಿಗಳು ತಮ್ಮ ಮಕ್ಕಳನ್ನು ಉತ್ತರಾಧಿಕಾರಿ ಮಾಡುವ ಬಗ್ಗೆ ಎಂದು ಗಮನ ಸೆಳೆದಾಗ ‘ಅದು ಇದೆ’ ಎಂದಷ್ಟೇ ಹೇಳಿ ಸುಮ್ಮನಾದರು.ನೀವು ಮೋದಿ ಅಲೆ ಇಲ್ಲ ಎನ್ನುತ್ತೀರಿ ಎನ್ನುವುದು ಗೊತ್ತು. ಹಾಗಿದ್ದರೆ ಕರ್ನಾ­ಟಕದಲ್ಲಿ ಯಾರ ಅಲೆ ಇದೆ?

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಲೆ ಇದೆ. ಯಾವುದೇ ರಾಜಕೀಯ ಪಕ್ಷ­ವಾಗಲಿ ಚುನಾವಣೆ ವೇಳೆ ಜನರಿಗೆ ಭರವಸೆಗಳನ್ನು ನೀಡುತ್ತವೆ. ಅಧಿಕಾರಕ್ಕೆ ಬಂದ ಪಕ್ಷ ಅವುಗಳನ್ನು ಅನುಷ್ಠಾನಕ್ಕೆ ತರಬೇಕು. ಸಿದ್ದರಾಮಯ್ಯ­ನವರು ಪ್ರಣಾ­ಳಿ­ಕೆಯಂತೆ ಜನಪರ ಕಾರ್ಯ­ಕ್ರಮಗಳನ್ನು ಅನುಷ್ಠಾನ­­ಗೊಳಿಸಿದ ಧೈರ್ಯವಂತ ಮುಖ್ಯಮಂತ್ರಿ. ಸಿದ್ದ­ರಾಮಯ್ಯ ಮೋದಿ­ಗಿಂತ ಚೆನ್ನಾಗಿ ಕೆಲಸ ಮಾಡಿದ್ದಾರೆ.ಯಡಿಯೂರಪ್ಪ ಮುಖ್ಯಮಂತ್ರಿ­ಯಾ­ಗಿ­ದ್ದಾಗ ಅಭಿವೃದ್ಧಿ ಮಂತ್ರ ಜಪಿಸು­ತ್ತಿ­ದ್ದರು. ಅವರ ಅವಧಿಯಲ್ಲಿ ರಾಜ್ಯದಲ್ಲಿ ಏನು ಅಭಿವೃದ್ಧಿಯಾಗಿದೆ? ಬಿಜೆಪಿ ಯಾವ ಮುಖ ಹೊತ್ತುಕೊಂಡು ಮತ ಕೇಳುತ್ತದೆ. ಅವರದೇ ಪಕ್ಷದಲ್ಲಿನ ಒಳ­ಜಗಳದಿಂದ ಯಡಿಯೂರಪ್ಪನವ­ರನ್ನು ಜೈಲಿಗೆ ಕಳುಹಿಸಲಾಯಿತು. ನಂತರ ಪದ­ಚ್ಯುತಿಗೊಳಿಸ­ಲಾಯಿತು. ಅವರೇ ಈಗ ಯಡಿಯೂ­ರಪ್ಪ­ನವರ ಜತೆ ಕೈ ಜೋಡಿ­ಸಿದ್ದಾರೆ. ಅನಂತ­ಕುಮಾರ್‌ ಗೆಲ್ಲಲು ವೋಟ್‌ ಬೇಕು. ಅದಕ್ಕೆ ಯಡಿಯೂ­ರಪ್ಪ ಅವರನ್ನು ಬಿಜೆಪಿಗೆ ಕರೆತಂದಿದ್ದಾರೆ.ಜಾತಿ, ಹಣಬಲ, ತೋಳ್ಬಲ, ಹೊಂದಾ­ಣಿಕೆ ಇಲ್ಲದೇ ರಾಜಕಾರಣ ಮಾಡಲು ಸಾಧ್ಯವೇ ಇಲ್ಲವೆ?

ಇಡೀ ದೇಶದ ರಾಜಕೀಯ ಜಾತಿ ಆಧಾರದ ಮೇಲೆ ನಿಂತಿದೆ. ಜಾತಿಗಳ ಜನಸಂಖ್ಯೆಯ ಆಧಾರದ ಮೇಲೆ ರಾಜ­ಕೀಯ ಪಕ್ಷಗಳು ಟಿಕೆಟ್ ಕೊಡುವುದು ನಿಜ. ಗುಲ್ಬರ್ಗ ಜಿಲ್ಲೆ ಜೇವರ್ಗಿ ಕ್ಷೇತ್ರ­ದಲ್ಲಿ ಸತತವಾಗಿ 36 ವರ್ಷ ಶಾಸಕನಾಗಿ ಆಯ್ಕೆಯಾದೆ. ಸಚಿವ, ಸಂಸದ ಅಲ್ಲದೇ ಮುಖ್ಯಮಂತ್ರಿಯೂ ಆದೆ. ಜೇವರ್ಗಿ ಕ್ಷೇತ್ರದಲ್ಲಿ ನನ್ನ ಜನಾಂಗದ್ದು ಇರುವುದು ನಮ್ಮದು ಒಂದೇ ಮನೆ. ಬೀದರ್ ಲೋಕ­ಸಭಾ ಕ್ಷೇತ್ರದಲ್ಲೂ ನನ್ನ ಜನಾಂಗದವರು ಇಲ್ಲ.1980 ರಲ್ಲಿ ಕೇರಳದ ಸಿ.ಎಂ.ಸ್ಟೀಫನ್ ಗಾಗಿ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಂದರ್ಭ ಸಿ.ಎಂ.ಸ್ಟೀಫನ್‌ ಅವರು ವಿ.ಕೆ.ಕೃಷ್ಣನ್‌ ನಂತರದಲ್ಲಿ ಕಾಂಗ್ರೆಸ್‌ ಕಂಡ ಅತ್ಯುತ್ತಮ ವಾಗ್ಮಿ. ಇವರು ಆ ಚುನಾವಣೆಯಲ್ಲಿ ದಕ್ಷಿಣ ದೆಹಲಿಯಲ್ಲಿ ವಾಜಪೇಯಿ ವಿರುದ್ಧ ಸೋತರು. ಆದರೆ ಇಂದಿರಾ ಮೇಡಂ ಹಾಗೂ ಸಂಜಯ್‌ ಗಾಂಧಿ ಅವರಿಗೆ ಸ್ಟೀಫನ್‌ ಸಂಸತ್‌ನಲ್ಲಿ ಇರಬೇಕು ಎನ್ನುವ ಉದ್ದೇಶವಿತ್ತು. ಈ ಕಾರಣಕ್ಕಾಗಿ ನನ್ನಿಂದ ರಾಜೀನಾಮೆ ಕೊಡಿಸಿದರು. ನಂತರ ಗುಂಡೂರಾವ್‌ ನನ್ನನ್ನು ಸಚಿವ­ನನ್ನಾಗಿ ಮಾಡಿದರು.ನಿಮ್ಮ ಸುದೀರ್ಘ ರಾಜಕೀಯ ಅನುಭವ­ದಲ್ಲಿ ಹೇಳಿ, ಕಾಂಗ್ರೆಸ್‌ ಎಷ್ಟು ಸ್ಥಾನ ಗೆಲ್ಲಬಹುದು?

18 ರಿಂದ 20 ಸ್ಥಾನ ಗೆಲ್ಲುತ್ತೇವೆ. ಉತ್ಪ್ರೇಕ್ಷೆ ಇಲ್ಲ. ಹೈದರಾಬಾದ್‌ ಕರ್ನಾಟ­ಕ­ದಲ್ಲಿ ನಾನು ಮತ್ತು ಖರ್ಗೆ ಅವರು ಸೇರಿ 371 ಕಲಂ ಜಾರಿಗೊಳಿಸಿ­ದೆವು. 40 ವರ್ಷದಿಂದ ಹೋರಾಟ ನಡೆದರೂ ವಿಶೇಷ ಸ್ಥಾನಮಾನ ದೊರೆತಿರಲಿಲ್ಲ. ಜನರಿಗೆ ಸಂದೇಶ ಹೋಗಿದೆ. ವಿಶೇಷ ಸ್ಥಾನಮಾನದಿಂದ ಇಂದೇ ಫಲ ಸಿಗಬೇಕು ಅಂತಿಲ್ಲ. ಭವಿಷ್ಯದಲ್ಲಿ ಹೆಚ್ಚು ಅನುಕೂಲ­ವಾಗುತ್ತದೆ. ಇದರಲ್ಲಿ ಅನುಮಾನವೇ ಬೇಡ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.