ಶನಿವಾರ, ಜನವರಿ 18, 2020
26 °C

‘ರಾಜಕೀಯಕ್ಕೆ ಕೆಎಲ್‌ಇ ದುರ್ಬಳಕೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಅಧೀನದಲ್ಲಿರುವ ಜವಾಹರಲಾಲ್‌ ನೆಹರು ವೈದ್ಯಕೀಯ ಕಾಲೇಜಿನ ವಜ್ರಮಹೋತ್ಸವದ ಉದ್ಘಾಟನೆಗೆ ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಿರುವ ಕ್ರಮವನ್ನು ಖಂಡಿಸಿರುವ ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪಾಟೀಲ ಪುಟ್ಟಪ್ಪ, ‘ಪ್ರಭಾಕರ ಕೋರೆ ಅವರು ರಾಜಕೀಯಕ್ಕೋಸುಗ ಕೆ.ಎಲ್.ಇ ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳತೊಡಗಿ­ದ್ದಾರೆ’ ಎಂದು ಟೀಕಿಸಿದ್ದಾರೆ.ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಪಾಪು, ‘ಸಂಸ್ಥೆಯ ವಜ್ರ ಮಹೋತ್ಸವಕ್ಕೆ ಯಾರು ಸೂಕ್ತ ವ್ಯಕ್ತಿ ಎನ್ನುವ ವಿಷಯ ತುಂಬಾ ಮಹತ್ವದ್ದಾಗಿದೆ. ಕರ್ನಾಟಕ ರಾಜ್ಯ ಅಷ್ಟೇ ಅಲ್ಲ, ಭಾರತದ ಯಾವ ರಾಜ್ಯದಲ್ಲಿಯೂ ಇಲ್ಲದ ಮಹಾನ್ ವಿಜ್ಞಾನಿ­ಯೊಬ್ಬರು ಕರ್ನಾಟಕ­ದಲ್ಲಿ ಇದ್ದಾರೆ. ಅವರನ್ನು ಇಡೀ ಜಗತ್ತೇ ಗೌರವಿ­ಸುತ್ತದೆ. ಡಾ.­ಸಿ.ಎನ್.­ಆರ್.­­ರಾವ್ ಅವ­ರಂತಹ ವಿಜ್ಞಾನಿ ನಮ್ಮ ರಾಜ್ಯದಲ್ಲಿಯೇ ಇರುವಾಗ ಅಂಥವರನ್ನು ಈ ವಜ್ರ ಮಹೋತ್ಸವ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಹ್ವಾನಿ­ಸುವುದನ್ನು ಬಿಟ್ಟು, ಕೋರೆ ಗುಜರಾತ್‌ ಮುಖ್ಯ­ಮಂತ್ರಿ ನರೇಂದ್ರ ಮೋದಿ ಅವರನ್ನು ಆಮಂತ್ರಿಸಿ­ದ್ದಾರೆ ಎಂದು ಟೀಕಿಸದ್ದಾರೆ.‘ನಾನು ಮೋದಿ ಪರವಾಗಿಯೂ ಇಲ್ಲ, ವಿರೋಧವಾಗಿಯೂ ಇಲ್ಲ. ಮೋದಿಗೆ ನೆಹರು ಬಗ್ಗೆ ಒಳ್ಳೆಯ ಅಭಿಪ್ರಾಯ ಇಲ್ಲ. ಹೀಗಿರುವಾಗ ನೆಹರು ಹೆಸರಿನ ಮೆಡಿಕಲ್ ಕಾಲೇಜಿನ ಸಮಾರಂಭಕ್ಕೆ ಅವರನ್ನು ಆಮಂತ್ರಿಸುವುದು ಸರ್ವಥಾ ಯೋಗ್ಯ­ವಲ್ಲ. ಈ ವಿವೇಚನೆ ಪ್ರಭಾಕರ ಕೋರೆ ಅವರಿಗೆ ಇರಬೇಕಾಗಿದ್ದಿತು’ ಡಾ. ಪಾಟೀಲ್‌ ಪುಟ್ಟಪ್ಪ ತಿಳಿಸಿದ್ದಾರೆ.‘ತಮ್ಮ ಸ್ವಂತದ ರಾಜಕೀಯ ಲಾಭಕ್ಕೋಸುಗ ಕೋರೆ ಕೆ.ಎಲ್.ಇ ಸಂಸ್ಥೆಯನ್ನು ಅಡ್ಡದಾರಿಗೆ ತಿರುಗಿಸುತ್ತಿದ್ದಾರೆ. ಈ ವಜ್ರ ಮಹೋತ್ಸವವಲ್ಲದೇ ಬೇರೆ ಯಾವ ಉತ್ಸವವಿದ್ದರೂ ಅದಕ್ಕೆ ಮೋದಿ ಅವರನ್ನು ಆಹ್ವಾನಿಸಲು ನಮ್ಮ ಅಭ್ಯಂತರವೇನೂ ಇರಲಿಲ್ಲ. ಒಂದು ವಿದ್ಯಾಸಂಸ್ಥೆಗೆ ಯಾವ ರಾಜಕೀಯ ಲೇಪನವೂ ಇರಬಾರದು. ಈ ವ್ಯವಹಾರಿಕ ಸತ್ಯವನ್ನು ಕೋರೆ ಅವರು ಎಂದು ತಿಳಿದುಕೊಳ್ಳು­ತ್ತಾರೆ? ಅವರು ಮಾಡಿದ್ದು ಸರ್ವಥಾ ಯೋಗ್ಯವಲ್ಲ. ಅವರ ಕೃತಿಯು ಖಂಡನೀಯವಾಗಿದೆ’ ಎಂದು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)