ಸೋಮವಾರ, ಜೂನ್ 14, 2021
28 °C

‘ರಾಷ್ಟ್ರೀಯ ಪಕ್ಷ ದುರ್ಬಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಕಳೆದ ಎರಡು ದಶಕಗಳ ಅವಧಿಯಲ್ಲಿ ದೇಶದ ರಾಜಕೀಯ ನುಡಿಗಟ್ಟು ಸಂಪೂರ್ಣ ಬದಲಾಗಿದ್ದು, ಪ್ರಾದೇಶಿಕ ಪಕ್ಷಗಳ ಬೆಂಬಲವಿಲ್ಲದೆ ರಾಷ್ಟ್ರೀಯ ಪಕ್ಷಗಳು ಕೇಂದ್ರದಲ್ಲಿ ಸರ್ಕಾರ ರಚಿಸುವುದು ಅಸಾಧ್ಯ’ ಎಂದು ಹೈದರಾಬಾದ್‌ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಕೆ.ಕೆ.ಕೈಲಾಶ್‌ ಹೇಳಿದರು.ಜೈನ್‌ ವಿಶ್ವವಿದ್ಯಾಲಯದ ಸಮಾಜ ವಿಜ್ಞಾನ ಹಾಗೂ ಶಿಕ್ಷಣ ಸಂಶೋಧನಾ ಕೇಂದ್ರದ ವತಿಯಿಂದ ಏರ್ಪಡಿಸಿರುವ ಕಾರ್ಯಾಗಾರದಲ್ಲಿ ಗುರುವಾರ ಅವರು, ‘ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳ ಆಧಾರಿತ ಪಕ್ಷಗಳು’ ವಿಷಯವಾಗಿ ಪ್ರಬಂಧ ಮಂಡಿಸಿದರು.‘ಸಮ್ಮಿಶ್ರ ಸರ್ಕಾರದ ಕುರಿತ ಇದುವರೆಗಿನ ಅಧ್ಯಯನಗಳು ಅವುಗಳ ರಚನೆ ಮತ್ತು ವಿಸರ್ಜನೆ ಸುತ್ತಲೇ ಗಿರಕಿ ಹೊಡೆದಿವೆ. ವಾಸ್ತವವಾಗಿ ಅವು ಹೇಗೆ ಕಾರ್ಯ ನಿರ್ವಹಿಸುತ್ತವೆ ಎನ್ನುವ ಸಂಗತಿ ಮೇಲೆ ಬೆಳಕು ಚೆಲ್ಲುವಂತಹ ಪ್ರಯತ್ನಗಳು ಆಗಿಲ್ಲ’ ಎಂದು ಅವರು ಅಭಿಪ್ರಾಯಪಟ್ಟರು.‘ದೇಶ ಸಫಲವಾದ ಸಮ್ಮಿಶ್ರ ಸರ್ಕಾರಗಳನ್ನು ಕಂಡಿರುವ ಈ ಹೊತ್ತಿನಲ್ಲಿ ಹಿಂದಿರುಗಿ ನೋಡಿದರೆ ರಾಷ್ಟ್ರೀಯ ಪಕ್ಷಗಳಿಗಿಂತ ಪ್ರಾದೇಶಿಕ ಪಕ್ಷಗಳೇ ಬಲಿಷ್ಠವಾಗುತ್ತಾ ಹೊರ­ಟಿದ್ದು ಎದ್ದು ಕಾಣುತ್ತಿದೆ. ತಮ್ಮ ಬೇಡಿಕೆ­ಯನ್ನು ಈಡೇರಿಸಿಕೊಳ್ಳಲು ಯಶಸ್ವಿಯಾಗುವ ಪ್ರಾದೇಶಿಕ ಪಕ್ಷ­ಗಳು, ಸರ್ಕಾರವನ್ನು ದಿಕ್ಕು ತಪ್ಪಿಸುವ ಅಪಾಯವೂ ಇದೆ’ ಎಂದು ಆತಂಕ ವ್ಯಕ್ತಪಡಿಸಿದರು.‘ಚುನಾವಣಾ ಪೂರ್ವದಲ್ಲಿ ಸೀಟುಗಳಿಗಾಗಿ ಪಟ್ಟು ಹಿಡಿಯುವುದು, ಚುನಾವಣಾ ಬಳಿಕ ಸಂಪುಟದ ಹುದ್ದೆ­ಗಳಿಗೆ ಬೇಡಿಕೆ ಇಡುವುದು ಪ್ರಾದೇಶಿಕ ಪಕ್ಷಗಳಿಗೆ ಚಾಳಿಯಾಗಿ­ಬಿಟ್ಟಿದೆ’ ಎಂದು ತಿಳಿಸಿದರು. ‘ಸರ್ಕಾರ ನಡೆಸುವವರು ಎಲ್ಲ ಕುದುರೆಗಳೂ ಒಂದೇ ದಿಕ್ಕಿನಲ್ಲಿ ಓಡುತ್ತಿವೆ ಎನ್ನುವುದನ್ನು ಕ್ಷಣ–ಕ್ಷಣಕ್ಕೂ ಖಾತ್ರಿ ಮಾಡಿಕೊಳ್ಳುವ ಅನಿವಾರ್ಯತೆ ಇದೆ’ ಎಂದು ವಿಶ್ಲೇಷಿಸಿದರು.ಸಣ್ಣ ಪಕ್ಷಗಳ ವಿಷಯವಾಗಿ ಪ್ರಬಂಧ ಮಂಡಿಸಿದ ಡಾ. ಕೆ.ಸಿ. ಸೂರಿ, ‘ದೇಶದ ರಾಜಕೀಯ ವ್ಯವಸ್ಥೆ ಮೇಲೆ ಭೌಗೋಳಿಕ ವಾತಾವರಣ ದಟ್ಟ ಪ್ರಭಾವ ಬೀರುತ್ತದೆ. ಆದ್ದರಿಂದಲೇ ಸಣ್ಣ ಪಕ್ಷಗಳಿಗೆ ಮಹತ್ವದ ಸ್ಥಾನವಿದೆ’ ಎಂದು ಪ್ರತಿಪಾದಿಸಿದರು. ‘ತಮಿಳುನಾಡಿನಲ್ಲಿ ಶೇ 66ರಷ್ಟು ಮತಗಳನ್ನು ಪ್ರಾದೇಶಿಕ ಪಕ್ಷಗಳೇ ಪಡೆಯುತ್ತಿವೆ. ಆಂಧ್ರ ಪ್ರದೇಶದಲ್ಲಿ ಈ ಪ್ರಮಾಣ ಶೇ 32ರಷ್ಟಿದ್ದರೆ, ಕರ್ನಾಟಕ­ದಲ್ಲಿ ಶೇ 20ರಷ್ಟು ಮತಗಳು ಪ್ರಾದೇಶಿಕ ಪಕ್ಷಗಳ ಪಾಲಾಗುತ್ತಿವೆ. ಈ ಮತ ಹಂಚಿಕೆಯೇ ಸಣ್ಣ ಪಕ್ಷಗಳ ಮಹತ್ವವನ್ನು ಸಾರುತ್ತದೆ’ ಎಂದು ಹೇಳಿದರು.ನವದೆಹಲಿಯ ಸಾರ್ವಜನಿಕ ವ್ಯವಹಾರ­ಗಳ ಕೇಂದ್ರದ ಸಂಶೋಧಕ ಡಾ. ಅಜಯ್‌ ಮೆಹ್ರಾ, ‘ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಕೇವಲ 14 ರಾಜ್ಯ­ಗಳ ಉದಯವಾಗಿತ್ತು. ಆಗ ರಾಷ್ಟ್ರೀಯ ಪಕ್ಷದ್ದೇ (ಕಾಂಗ್ರೆಸ್‌) ಪಾರುಪತ್ಯ­ವಾಗಿತ್ತು. ಈಗ ರಾಜ್ಯಗಳ ಸಂಖ್ಯೆ 29ಕ್ಕೆ ಏರಿದೆ. ಇನ್ನೂ ಹಲವು ರಾಜ್ಯಗಳ ಸ್ಥಾಪನೆಗೆ ಬೇಡಿಕೆ ಇದ್ದು, ಅವುಗಳ ಸಂಖ್ಯೆ 50ಕ್ಕೆ ತಲುಪುವ ಸಾಧ್ಯತೆಯೂ ಇದೆ. ರಾಜ್ಯಗಳ ಸಂಖ್ಯೆ ಹೆಚ್ಚಿದಷ್ಟೂ ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯ ಹೆಚ್ಚುತ್ತಾ ಹೋಗುತ್ತದೆ’ ಎಂದು ವಿಶ್ಲೇಷಿಸಿದರು.‘ರಾಷ್ಟ್ರೀಯ ಪಕ್ಷವೆಂದರೆ ದೇಶದ ಎಲ್ಲ ರಾಜ್ಯಗಳಲ್ಲೂ ಅಸ್ತಿತ್ವ ಹೊಂದಿರ­ಬೇಕು. ಇಲ್ಲವೆ ಮೂರನೇ ಎರಡರಷ್ಟು ಸೀಟುಗಳನ್ನಾದರೂ ಗೆದ್ದಿರಬೇಕು. ಆ ಅರ್ಥದಲ್ಲಿ ದೇಶದಲ್ಲಿ ಈಗ ಯಾವ ರಾಷ್ಟ್ರೀಯ ಪಕ್ಷವೂ ಇಲ್ಲ’ ಎಂದು ಹೇಳಿದರು. ‘ನಾಯಕತ್ವದ ವೈಷಮ್ಯ, ಕುಟುಂಬ ರಾಜಕಾರಣದಂತಹ ಕ್ಷುಲ್ಲಕ ಕಾರಣಗಳಿಗೂ ಪಕ್ಷಗಳು ಹುಟ್ಟುತ್ತಿದ್ದು, ಏಕವ್ಯಕ್ತಿ ನಾಯಕನನ್ನು ಹೊಂದಿದ ಪಕ್ಷಗಳು ಪ್ರಜಾಪ್ರಭುತ್ವ ವ್ಯವಸ್ಥೆಗೆ ಹೆಚ್ಚು ಅಪಾಯಕಾರಿ’ ಎಂದು ಮೆಹ್ರಾ ಅಭಿಪ್ರಾಯಪಟ್ಟರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.