ಶನಿವಾರ, ಜನವರಿ 18, 2020
21 °C

‘ರೈತರ ನೆರವಿಗೆ ಸರ್ಕಾರ ಮುಂದಾಗಲಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವಲಗುಂದ: ‘ನಮ್ಮ ದೇಶದಲ್ಲಿ ಗೊಂಬೆ, ಪಾದರಕ್ಷೆ ಉತ್ಪಾದಕರೂ ಇಂತಿಷ್ಟೇ ಬೆಲೆ ಎಂದು ನಿಗದಿ ಪಡಿಸಿ ಮಾರಾಟ ಮಾಡುತ್ತಾರೆ. ಆದರೆ ದೇಶದ ಬೆನ್ನೆಲೆಬಾಗಿರುವ ರೈತನಿಗೆ ತಾನು ಬೆಳೆದ ಬೆಳೆಗೆ ಬೆಲೆ ನಿಗದಿ­ಪಡಿಸುವ ಅಧಿಕಾರ ಇಲ್ಲದಿರುವುದು ಯಾವ ನ್ಯಾಯ’ ಎಂದು ಗವಿಮಠದ ಬಸವಲಿಂಗ ಸ್ವಾಮೀಜಿ ಪ್ರಶ್ನಿಸಿದರು.ಅವರು ಈಚೆಗೆ ಇಲ್ಲಿಯ ಎಪಿಎಂಸಿ ಆವರಣದಲ್ಲಿ ಬೆಂಬಲ ಬೆಲೆ ಯೋಜನೆಯಡಿ ಗೋವಿನ ಜೋಳ ಖರೀದಿ ಕೇಂದ್ರದ ಉದ್ಘಾಟನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ಗೋವಿನ ಜೋಳಕ್ಕೆ ಕ್ವಿಂಟಲ್‌ಗೆ ₨1310 ನಿಗದಿಪಡಿಸಿರುವುದು ಕನಿಷ್ಠ ಬೆಲೆಯಾಗಿದೆ. ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರ ಬೆಂಬಲ ಬೆಲೆ ಹೆಚ್ಚಿಸಿ ಪ್ರೋತ್ಸಾಹಿಸಬೇಕು ಎಂದು ಅವರು ಒತ್ತಾಯಿಸಿದರು.ಖರೀದಿ ಕೇಂದ್ರವನ್ನು ಉದ್ಘಾಟಿಸಿದ ಶಾಸಕ ಎನ್.ಎಚ್.ಕೋನರಡ್ಡಿ ‘ಬೆಳ­ಗಾವಿ­­ಯಲ್ಲಿ ನಡೆದ ಅಧಿವೇಶನದಲ್ಲಿ ಬೆಂಬಲ ಬೆಲೆ ಹೆಚ್ಚಿಸುವಂತೆ ಒತ್ತಾಯಿಸಿ­ದ್ದೇನೆ. ಪಕ್ಷಾತೀತವಾಗಿ ಎಲ್ಲರೂ ಹೋರಾಟ ಮಾಡಿದಾಗ ಮಾತ್ರ ಒತ್ತಡ ಹೇರಲು ಸಾಧ್ಯ’ ಎಂದರು.ಅಧ್ಯಕ್ಷತೆ ವಹಿಸಿದ್ದ ಎಪಿಎಂಸಿ ಅಧ್ಯಕ್ಷ ಎ.ಎಸ್.ಬಾಗಿ ‘ಬೆಂಬಲ ಬೆಲೆಯನ್ನು ಘೋಷಣೆ ಮಾಡಿರುವುದು ಕೇಂದ್ರ ಸರ್ಕಾರ. ರಾಜ್ಯ ಸರ್ಕಾರ ಜೋಳ ಖರೀದಿಗೆ ಬೆಂಬಲ ಬೆಲೆ ನೀಡಿದಂತೆ ಗೋವಿನಜೋಳಕ್ಕೂ ಬೆಲೆ ನಿಗದಿಪಡಿಸಬೇಕು’ ಎಂದು ಒತ್ತಾಯಿಸಿದರು. ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಸ್.­ಪಾಟೀಲ, ಪಿಎಲ್ ಡಿ  ಬ್ಯಾಂಕ್ ಅಧ್ಯಕ್ಷ ದೇಸಾಯಿಗೌಡ ಪಾಟೀಲ ಮಾತನಾಡಿ, ಸರ್ಕಾರ ಬೆಂಬಲ ಬೆಲೆಯಲ್ಲಿ ಒಬ್ಬ ರೈತನಿಂದ ಕೇವಲ 25 ಕ್ವಿಂಟಲ್ ಬೆಳೆ ಮಾತ್ರ ಖರೀದಿಸಿದರೆ ಉಳಿದ ಫಸಲನ್ನು ಮಾರಾಟ ಮಾಡುವುದಾದರೂ ಎಲ್ಲಿ? ಪ್ರತಿ ರೈತನಿಂದ ಕನಿಷ್ಠ 100 ಕ್ವಿಂಟಲ್ ಖರೀದಿಸಬೇಕು’ ಎಂದು ಆಗ್ರಹಿಸಿದರು. ಪ್ರಕಾಶ ಅಂಗಡಿ ಸ್ವಾಗತಿಸಿದರು. ಸುನಿಲ ಗೊಡಬೋಲೆ ನಿರೂಪಿಸಿದರು. ಸುಧಾ ಬಂಡಿ ವಂದಿಸಿದರು.

ಪ್ರತಿಕ್ರಿಯಿಸಿ (+)