ಭಾನುವಾರ, ಮಾರ್ಚ್ 7, 2021
18 °C

‘ವಾಲ್ಮೀಕಿ ಯಾರು?’ ಕೃತಿ ಮುಟ್ಟುಗೋಲಿಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ವಾಲ್ಮೀಕಿ ಯಾರು?’ ಕೃತಿ ಮುಟ್ಟುಗೋಲಿಗೆ ಆಗ್ರಹ

ಹೊಸಪೇಟೆ: ಕೆ.ಎಸ್‌.ನಾರಾಯಣಾಚಾರ್ಯ ಅವರು ಬರೆದ ‘ವಾಲ್ಮೀಕಿ ಯಾರು ?’ ಕೃತಿಯಲ್ಲಿ ವಾಲ್ಮೀಕಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದವನೆಂದು ತಪ್ಪು ಮಾಹಿತಿ ನೀಡಲಾಗಿದ್ದು, ಸರ್ಕಾರ ಆ ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಒತ್ತಾಯಿಸಿ ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜವು ಮಂಗಳವಾರ ಸಂಜೆ ಪ್ರತಿಭಟನೆ ನಡೆಸಿತು. ನಗರದ ವಾಲ್ಮೀಕಿ ವೃತ್ತದಲ್ಲಿ ಪ್ರತಿಭಟಿಸಿದ ನೂರಾರು ಜನರು ನಾರಾಯಣಾಚಾರ್ಯ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.ಸಮಾಜದ ಅಧ್ಯಕ್ಷ ಗುಜ್ಜಲ ಶಿವರಾಮಪ್ಪ ಮಾತನಾಡಿ, ‘ಜಾತಿ ನಡುವೆ ವಿಷ ಬೀಜ ಬಿತ್ತುವ ಕೆಲಸವನ್ನು ನಾರಾಯಣಾಚಾರ್ಯ ಅವರು ಮಾಡಿದ್ದಾರೆ. ಹಿಂದುಳಿದ ಜಾತಿಗಳ ವಿರುದ್ಧ ಅವಹೇಳನಕಾರಿಯಾಗಿ ಬರೆಯುವುದನ್ನು ತಕ್ಷಣ ನಿಲ್ಲಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆಗೆ ಮುಂದಾಗಲಾಗುವುದು’ ಎಂದು ಎಚ್ಚರಿಸಿದರು.ಜಾಗೃತ ನಾಯಕ ಬಳಗದ ಪೂಜಾರ ದುರುಗಪ್ಪ ಮಾತನಾಡಿ, ‘ವಾಲ್ಮೀಕಿ ಯಾರು ಪುಸ್ತಕವನ್ನು ಸರ್ಕಾರ ತಕ್ಷಣ ಮುಟ್ಟುಗೋಲು ಹಾಕಿಕೊಳ್ಳಬೇಕು. ಇತಿಹಾಸವನ್ನು ತಿರುಚುವ ಕೆಲಸವನ್ನು ಹಲವು ದಿನಗಳಿಂದ ಮಾಡಿಕೊಂಡು ಬರಲಾಗುತ್ತಿದೆ. ಇಂಥ ಘಟನೆಗಳಿಗೆ ಕಡಿವಾಣ ಹಾಕಬೇಕಾದರೆ ಈ ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಹಾಗೂ ಲೇಖಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಪ್ರತಿಭಟನೆ ನಡೆಸುವಂತಿಲ್ಲ ಎಂದು ತಹಶೀಲ್ದಾರ್ ರಮೇಶ್ ಕೋನರಡ್ಡಿ ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಆಕ್ರೋಶಗೊಂಡ ಪ್ರತಿಭಟನಾಕಾರರು ಬೇಕಾದರೆ ನಮ್ಮನ್ನು ಬಂಧಿಸಿ. ಆದರೆ ನಾನು ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಪಟ್ಟು ಹಿಡಿದರು. ಇದೇ ಸಂದರ್ಭದಲ್ಲಿ ಅಧಿಕಾರಿಗಳು ಮತ್ತು ಪ್ರತಿಭಟನಾಕಾರರ ಮಧ್ಯೆ ಮಾತಿನ ಚಕಮಕಿ ನಡೆಯಿತು.ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಧರ್ಮದರ್ಶಿ ಬಿ.ಎಸ್.ಜಂಬಯ್ಯ ನಾಯಕ, ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಅಧ್ಯಕ್ಷ ಕಿಚಿಡಿ ಶ್ರೀನಿವಾಸ, ಕಾರ್ಯದರ್ಶಿ ಪೂಜಾರ್ ವೆಂಕೋಬ ನಾಯಕ್, ಜಿಲ್ಲಾ ಕಾರ್ಯದರ್ಶಿ ಡಾ. ತಾರಿಹಳ್ಳಿ ವೆಂಕಟೇಶ್, ಗೋಸಲ ಭರಮಪ್ಪ, ತಾಯಪ್ಪ ನಾಯಕ, ವಕೀಲ ಬಿ.ಮಹೇಶ್, ರಾಮಣ್ಣ ಹಾಗೂ ಜೆ.ವಸಂತ, ಜೆ.ಸತ್ಯನಾರಾಯಣ, ಕಟಗಿ ಜಂಬಯ್ಯ, ಗಣೇಶ, ಗುಂಡಿ ರಾಘವೇಂದ್ರ, ಸಣ್ಣಕ್ಕಿ ರುದ್ರಪ್ಪ, ಯಮುನರಪ್ಪ, ಶಂಕ್ರಪ್ಪ, ನೀಲಕಂಠ, ಪಂಪಾಪತಿ ಸೇರಿದಂತೆ ನೂರಾರು ಜನರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.