‘ವೃಕ್ಷ ಪ್ರಸಾದ’: 20 ಸಾವಿರ ಸಸಿ ನೀಡುವ ಗುರಿ

ಮಂತ್ರಾಲಯ: ‘ವೃಕ್ಷ ಪ್ರಸಾದ’ ಹೆಸರಿ ನಲ್ಲಿ ಮಂತ್ರಾಲಯದಲ್ಲಿ ನಡೆಯುತ್ತಿರುವ ಸಸಿಗಳ ವಿತರಣಾ ಕಾರ್ಯಕ್ರಮವು ಪೂರ್ವಾರಾಧನೆಯ ದಿನವಾದ ಶುಕ್ರವಾರ ಆರಂಭಗೊಂಡಿತು. ಈ ಸಾರಿ 20 ಸಾವಿರದಷ್ಟು ಸಸಿಗಳನ್ನು ವಿತರಿಸುವ ಗುರಿ ಹೊಂದಲಾಗಿದೆ.
ಆರಾಧನೆ ಸಮಯ ಮಂತ್ರಾಲಯಕ್ಕೆ ಬರುವ ಭಕ್ತರಿಗೆ ಉಚಿತವಾಗಿ ಒಂದು ಅಥವಾ ಎರಡು ಸಸಿಗಳನ್ನು ವಿತರಣೆ ಮಾಡಲಾಗುತ್ತಿದೆ. ಆರಾಧನೆಯ ಮೊದಲ ದಿನ 3,500 ಸಸಿಗಳನ್ನು ವಿತರಣೆಗೆ ಸಿದ್ಧ ಮಾಡಿಕೊಳ್ಳಲಾಗಿದೆ.
‘ವೃಕ್ಷ ಪ್ರಸಾದ’ ಸಸಿ ವಿತರಣೆಗೆ ಚಾಲನೆ ನೀಡಿದ ಶ್ರೀಸುಬುಧೇಂದ್ರ ತೀರ್ಥರು, ಸಸಿಗಳನ್ನು ಪಡೆದುಕೊಂಡ ಭಕ್ತರಿಂದ ಸಸಿಗಳನ್ನು ಬೆಳಸಿ, ಸಂರಕ್ಷಣೆ ಮಾಡುವುದು ಮತ್ತು ಮತ್ತೊಬ್ಬರಿಗೂ ಸಸಿ ವಿತರಣೆ ಮಾಡುವ ಕುರಿತು ಪ್ರಮಾಣ ಮಾಡಿಸಿದರು.
ಮೂರು ದಿನಗಳಲ್ಲಿ 8 ವಿಧದ ಸಸಿಗಳನ್ನು ನೀಡಲಾಗುತ್ತದೆ ಎಂದು ಸಸಿ ವಿತರಣೆಯ ಉಸ್ತುವಾರಿ ನೋಡಿಕೊಳ್ಳು
ತ್ತಿರುವ ರಾಜು ಹೇಳಿದರು.
ಈ ‘ವೃಕ್ಷ ಪ್ರಸಾದ’ಸೇವೆಯನ್ನು ಬೆಂಗಳೂರಿನ ಉದ್ಯಮಿ ಎಂ.ಕೆ. ಅನಿಲ್ ಕುಮಾರ್ ಮತ್ತು ಅವರ ಪತ್ನಿ ಲಕ್ಷ್ಮಿ ಅವರು 4 ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. ಇದಲ್ಲದೆ ಮಂತ್ರಾಲಯದಲ್ಲಿ ಎರಡು ಕಡೆ ಶುದ್ಧ ಕುಡಿಯುವ ನೀರಿನ ಘಟಕ ಮತ್ತು ಶೌಚಾಲಯ ಸ್ಥಾಪಿಸಿ ಅದರ ನಿರ್ವಹಣೆಯನ್ನು ಮಾಡುತ್ತಿದ್ದಾರೆ. ಈ ಸಾರಿ ಆರಾಧನೆಯ ಸಮಯದಲ್ಲಿ ವಸತಿ ಗೃಹಗಳ ಬುಕಿಂಗ್ ಕೇಂದ್ರದ ಬಳಿ ಹೊಸದಾಗಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿದ್ದಾರೆ.
‘ಶ್ರೀಗುರುರಾಯರ ಪ್ರೇರಣೆ ಮತ್ತು ಮಂತ್ರಾಲಯ ಶ್ರೀ ಅವರ ಆಶೀರ್ವಾದದಿಂದ ‘ವೃಕ್ಷ ಪ್ರಸಾದ’ ಸೇವೆ ಮಾಡುತ್ತಿದ್ದೇವೆ. ಕಳೆದ ವರ್ಷ 10 ಸಾವಿರ ತುಳಿಸಿ ಸಸಿಗಳು ಸೇರಿದಂತೆ ಸುಮಾರು 24 ಸಾವಿರ ಸಸಿಗಳನ್ನು ವಿತರಣೆ ಮಾಡಲಾಗಿತ್ತು. ಈ ಸಾರಿ 20 ಸಾವಿರ ಸಸಿಗ
ಳನ್ನು ವಿತರಣೆ ಮಾಡುವ ಉದ್ದೇಶ ಇದೆ’ ಎಂದು ಎಂ.ಕೆ. ಅನಿಲ್‌ಕುಮಾರ್ ತಿಳಿಸಿದರು.
‘ಒಂದು ಸಸಿಗೆ ಸಾಗಣೆ ವೆಚ್ಚವೂ ಸೇರಿ ₹12ರಿಂದ ₹15 ವೆಚ್ಚವಾಗುತ್ತದೆ. ಆದಷ್ಟೂ ಮಂತ್ರಾಲಯದ ಸಮೀಪದಲ್ಲೇ ಖಾಸಗಿ ಮತ್ತು ಸರ್ಕಾರಿ ನರ್ಸರಿಗಳಿಂದ ಸಸಿಗಳನ್ನು ಖರೀದಿ ಮಾಡುತ್ತೇವೆ. ಬೆಂಗಳೂರಿನಿಂದಲೂ ಸಸಿಗಳನ್ನು ತಂದಿದ್ದೇವೆ. ಮಂತ್ರಾಲಯ ಮಠದ ಸಮೀಪದಲ್ಲಿ ಸಸಿಗಳ ವಿತರಣೆಗೆ ಶಾಶ್ವತವಾದ ಕೌಂಟರ್ ತೆರೆಯುವ ಆಲೋಚನೆ ಕೂಡ ಇದೆ’ ಎಂದರು.
14 ವರ್ಷದಿಂದ ಆರಾಧನೆ ಸಮಯ ಮಂತ್ರಾಲಯಕ್ಕೆ ಬರುತ್ತಿದ್ದೇನೆ. ಆದರೆ, ‘ವೃಕ್ಷ ಪ್ರಸಾದ’ ತೆಗೆದುಕೊಂಡಿರಲಿಲ್ಲ. ಈ ಸಾರಿ ಎರಡು ಸಸಿ ಕೊಂಡೊಯ್ಯುವೆ.
-ಮುನಿರತ್ನ, ಬಂಗಾರಪೇಟೆ ಭಕ್ತ
ಮುಖ್ಯಾಂಶಗಳು
* 4 ವರ್ಷಗಳಿಂದ ‘ವೃಕ್ಷ ಪ್ರಸಾದ’
* ಸಸಿ ವಿತರಣೆಗೆ ಶಾಶ್ವತ ಕೌಂಟರ್ ತೆರೆಯುವ ಚಿಂತನೆ
* ಕಳೆದ ವರ್ಷ 24 ಸಾವಿರಕ್ಕೂ ಹೆಚ್ಚು ಸಸಿಗಳ ವಿತರಣೆ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.