ಬುಧವಾರ, ಜನವರಿ 29, 2020
28 °C

‘ಶೋಷಿತ ವರ್ಗದ ದಾರ್ಶನಿಕ ಅಂಬೇಡ್ಕರ್‌’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ‘ಶೋಷಿತ ವರ್ಗದ ವಿಮೋಚನೆಗಾಗಿ ಶ್ರಮಿಸಿದ ದಾರ್ಶನಿಕ, ಮಹಾಮಾನವತಾವಾದಿ, ಸಂವಿಧಾನಶಿಲ್ಪಿ ಡಾ. ಬಿ.ಆರ್‌. ಅಂಬೇಡ್ಕರ್ ಅವರು ಹಾಕಿಕೊಟ್ಟ ಮಾರ್ಗದರ್ಶನ, ವಿಚಾರಗಳು ನಮ್ಮ ಪ್ರಗತಿಗೆ ದಿಕ್ಸೂಚಿ ಆಗಬೇಕು’ ಎಂದು ಹುಬ್ಬಳ್ಳಿ– ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಎ.ಎಂ. ಹಿಂಡಸಗೇರಿ ಆಶಿಸಿದರು.ಅಂಬೇಡ್ಕರ್‌ ಅವರ 57ನೇ ಮಹಾಪರಿನಿರ್ವಾಣ ಕಾರ್ಯಕ್ರಮದ ಅಂಗವಾಗಿ ನಗರದ ಪ್ರಧಾನ ಅಂಚೆಕಚೇರಿ ಬಳಿ ಇರುವ ಅಂಬೇಡ್ಕರ್‌ ಪುತ್ಥಳಿಗೆ ಶುಕ್ರವಾರ ಮಾಲಾರ್ಪಣೆ ಮಾಡಿದ ಬಳಿಕ ಅವರು ಮಾತನಾಡಿದರು.ಪಾಲಿಕೆ ಸದಸ್ಯ ಮೋಹನ ಹಿರೇಮನಿ, ಜಿಲ್ಲಾ ಕಾಂಗ್ರೆಸ್‌ ಘಟಕದ ಕಾರ್ಯದರ್ಶಿ ಕೃಷ್ಣಾ  ಜಕ್ಕಪ್ಪನವರ, ಪಕ್ಷದ ಮುಖಂಡರಾದ ಸಂತೋಷ ಜಕ್ಕಪ್ಪನವರ, ಮಲ್ಲಿಕಾರ್ಜುನ ಯಾತಗೇರಿ, ಫಕ್ಕೀರಪ್ಪ ಚಲವಾದಿ, ವಿಜಯ ಗುಂಟ್ರಾಳ ಮತ್ತಿತರರು ಇದ್ದರು.ಪಾಲಿಕೆ ವತಿಯಿಂದ ನಗರದ ಪ್ರಧಾನ ಅಂಚೆಕಚೇರಿ ಮತ್ತು ಕಿಮ್ಸ್‌ ಆವರಣದಲ್ಲಿರುವ ಪ್ರತಿಮೆಗೆ ಆಯುಕ್ತ ರಮಣದೀಪ ಚೌಧರಿ ಮಾಲಾರ್ಪಣೆ ಮಾಡಿದರು. ಪಾಲಿಕೆ ಸದಸ್ಯರಾದ ರಾಜಣ್ಣ ಕೊರವಿ, ಚನ್ನೋಜಿ ಶಾಂತಾ  ಬಸವರಾಜ ಮತ್ತಿತರರಿದ್ದರು.

ಕಿಮ್ಸ್‌ನಲ್ಲಿ ಅಂಬೇಡ್ಕರ್‌ ಪುತ್ಥಳಿಗೆ ನಿರ್ದೇಶಕಿ ವಸಂತಾ ಕಾಮತ್‌ ಮಾಲಾರ್ಪಣೆ ಮಾಡಿದರು. ಪ್ರಾಂಶುಪಾಲ ಡಾ. ಯು.ಎಸ್‌. ಹಂಗರಗಾ, ಚಿಕ್ಕ ಮಕ್ಕಳ ವಿಭಾಗದ ಮುಖ್ಯಸ್ಥ ಡಾ. ಶೇಪೂರ ಎಸ್‌.ಎ., ಡಾ. ಸುಜಾತಾ ಗಿರಿಯಾನ, ಶ್ರೀಪಾದ ಎಚ್‌. ಸಾವಕಾರ, ಸುರೇಶ ಕನಮಕ್ಕಲ್‌ ಇದ್ದರು.ಬಹುಜನ ಸಮಾಜ ಪಕ್ಷದ ವತಿಯಿಂದ ಪಕ್ಷದ ಕಚೇರಿಯಲ್ಲಿ ಅಂಬೇಡ್ಕರ್‌ ಭಾವಚಿತ್ರಕ್ಕೆ ಪ್ರೇಮನಾಥ ಚಿಕ್ಕತುಂಬಳ ಮಾಲಾರ್ಪಣೆ ಮಾಡಿದರು. ಹನುಮಂತಪ್ಪ ಟಗರಗುಂಟಿ, ರೇವಣ ಸಿದ್ದಪ್ಪ ಹೊಸಮನಿ, ಬಸವರಾಜ ಹೊಸಮನಿ, ರಾಜಪ್ಪ ಕಾಳೆ ಮತ್ತಿತರರು ಇದ್ದರು.ಸಮತಾಸೇನೆಯ ವತಿಯಿಂದ ಪ್ರಧಾನ ಅಂಚೆಕಚೇರಿ, ಕಿಮ್ಸ್‌ ಆವರಣ, ಕೈಗಾರಿಕಾ ವಸಾಹತು ಬಳಿ ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಬಳಿಕ ಹಳೇಹುಬ್ಬಳ್ಳಿಯ ಹೆಗ್ಗೇರಿಯಲ್ಲಿರುವ ಆಯುರ್ವೇದ ಮಹಾ ವಿದ್ಯಾಲಯ ಹಾಗೂ ಆಸ್ಪತ್ರೆಯ ರೋಗಿಗಳಿಗೆ ಹಣ್ಣುಹಂಪಲು ವಿತರಿಸಲಾಯಿತು. ಈ ವೇಳೆ ಉಪಸ್ಥಿತರಿದ್ದ ಹಳೇಹುಬ್ಬಳ್ಳಿ ಪೊಲೀಸ್‌ ಇನ್‌ಸ್ಪೆಕ್ಟರ್ ಶಿವಾನಂದ ಚಲವಾದಿ, ಅಂಬೇಡ್ಕರ್‌ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವ ಮೂಲಕ ದಲಿತರು, ಶೋಷಿತರು ಸಮಾಜದ ಮುಖ್ಯವಾಹಿನಿಗೆ ಬರುವಂತೆ ಕರೆ ನೀಡಿದರು. ಡಾ.ಎಸ್‌.ವಿ. ಹಿರೇಮಠ, ಗುರುನಾಥ ಉಳ್ಳಿಕಾಶಿ, ಎಲ್ಲಪ್ಪ ಬಾಗಲಕೋಟೆ ಮುಂತಾದವರು ಇದ್ದರು.ಬಿಜೆಪಿ ಮಹಾನಗರ ಜಿಲ್ಲಾ ಘಟಕದ ವತಿಯಿಂದ ಅಧ್ಯಕ್ಷ ಲಿಂಗರಾಜ ಪಾಟೀಲ ಅವರು ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ ಮತ್ತಿತರರು ಇದ್ದರು.ಪೌರ ಕಾರ್ಮಿಕರ ಹುಬ್ಬಳ್ಳಿ– ಧಾರವಾಡ ಜಿಲ್ಲಾ ಸಮಿತಿ ವತಿಯಿಂದ ಪ್ರಧಾನ ಅಂಚೆಕಚೇರಿ ಮುಂಭಾಗದಲ್ಲಿರುವ ಅಂಬೇಡ್ಕರ್‌ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು.  ಕೆಪಿಸಿಸಿ ಕಾರ್ಯದರ್ಶಿ ರಾಜಸೇಖರ ಮೆಣಸಿನಕಾಯಿ, ತಮ್ಮಣ್ಣ ಮಾದಾರ, ಬಸಪ್ಪ ಬೆಂತೂರ, ಚಂದ್ರು ವಿಜಯ ಎಂ. ಗುಂಟ್ರಾಳ ಮತ್ತಿತರರು ಇದ್ದರು.ಕರ್ನಾಟಕ ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿ ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ನಡೆದ ಸಂದರ್ಭದಲ್ಲಿ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಎನ್‌. ಪಾಮಡಿ. ಪ್ರಮುಖರಾದ ದುರ್ಗೇಶ ಚ. ಪೂಜಾರ, ಎಸ್‌.ಪಿ. ಹುಬಳಿಕರ, ಮೇಘರಾಜ ಎಂ. ಹಿರೇಮನಿ ಮತ್ತಿತರರು ಇದ್ದರು. ಅಂಬೇಡ್ಕರ್‌ ಅವರು ದೀನದಲಿತರ ಪರವಾಗಿ, ಬಡವರ ಏಳಿಗೆಗೆ ದುಡಿದ ದಿನಗಳನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಲಾಯಿತು.‘ವಿ.ವಿ.ಗಳಲ್ಲಿ ಜಾತಿ ಆಧರಿತ ಆಯ್ಕೆ’

ಧಾರವಾಡ:
‘ಈ ಸಮಾಜದಲ್ಲಿ ಅವಿದ್ಯಾವಂತರ ಸಮುದಾಯ ಒಂದೆಡೆ ಇದ್ದರೆ ಇನ್ನೊಂದೆಡೆ ವಿದ್ಯಾವಂತರ ಸಮುದಾಯ ಇದೆ. ಆದರೆ, ಸ್ವಾತಂತ್ರ್ಯ ಸಿಕ್ಕು ಹಲವಾರು ವರ್ಷಗಳು ಗತಿಸಿದರೂ ನಾವು ಇನ್ನೂ ಗುಲಾಮಗಿರಿಯಲ್ಲಿ ಬದುಕುತ್ತಿದ್ದೆವೆಯೇ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತಿದೆ’ ಎಂದು ವಿಧಾನಸಭೆಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಸದನ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಕಳವಳ ವ್ಯಕ್ತಪಡಿಸಿದರು.ಇಲ್ಲಿನ ಕರ್ನಾಟಕ ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್‌ ಅಧ್ಯಯನ ವಿಭಾಗವು ಸಿನೆಟ್ ಹಾಲ್‌ನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 57ನೇ ಮಹಾಪರಿನಿರ್ವಾಣ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.‘ಜವಾಬ್ದಾರಿಯುತ ಸಮಾಜ ನಮ್ಮದಾಗಿದ್ದರೂ ಇನ್ನೂ ನಾವು ಗುಲಾಮರಾಗಿ ಬದುಕುತ್ತಿದ್ದೇವೆ. ಮೇಲಾಗಿ ವಿದ್ಯಾವಂತ ಸಮುದಾಯದಿಂದಲೇ ನಾವು ಗುಲಾಮತನವನ್ನು ಅನುಭವಿಸುತ್ತಿದ್ದೇವೆ. ಅಸ್ಪೃಶ್ಯತೆಯನ್ನು ತೊಲಗಿಸಲು ಅಂಬೇಡ್ಕರ್‌ ಅಂದು ಹೋರಾಡಿದರು. ಇಂದು ಕಾಲೇಜು ಮತ್ತು ವಿಶ್ವವಿದ್ಯಾಲಯಕ್ಕೆ ಸೇರಲು ಜಾತಿಯ ಆಧಾರದ ಮೇಲೆ ಆಯ್ಕೆಗಳು ನಡೆಯುತ್ತಿವೆ’ ಎಂದು ವಿಷಾದಿಸಿದರು.ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಎಚ್.ಬಿ.ವಾಲೀಕಾರ, ‘ಒಂದು ಸಂಘರ್ಷ ಕಾಲದಲ್ಲಿ ಅಪವಾದಗಳು ಬರುವುದು ಸಹಜ. ಯಾರು ಇತಿಹಾಸವನ್ನು ಓದಿರುತ್ತಾರೋ ಅವರಿಗೆ ಈ ಅಪವಾದಗಳು ನೋವನ್ನುಂಟು ಮಾಡುವುದಿಲ್ಲ. ಇಂಥ ಅಪಮಾನ ಹಾಗೂ ಸಂಘರ್ಷಗಳು ಪುರಾಣ ಕಾಲದಿಂದಲೂ ಬಂದಿವೆ. ಅಪವಾದಗಳಿಗೆ ತಳ್ಳುವವರು ತಮ್ಮ ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಸೇವಾಲಾಲ, ಜಗಜೀವನರಾಮ್ ಇವರೆಲ್ಲ ಸುಗುಣ ಬ್ರಹ್ಮರೇ ಆಗಿದ್ದಾರೆ. ಇವರೆಲ್ಲರ ತತ್ವಗಳನ್ನು ಹೀರಿಕೊಂಡು ಬೆಳೆದ ನಿರ್ಗುಣ ಬ್ರಹ್ಮ ಅಂಬೇಡ್ಕರರಾಗಿದ್ದಾರೆ’ ಎಂದರು. ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್‌.ಟಿ.ಪೋತೆ ಇದ್ದರು. ಕುಲಸಚಿವೆ ಡಾ.ಚಂದ್ರಮಾ ಕಣಗಲಿ ಸ್ವಾಗತಿಸಿದರು. ಪ್ರೊ.ನಿಜಲಿಂಗಪ್ಪ ಮಟ್ಟಿಹಾಳ ಪ್ರಾಸ್ತಾವಿಕವಾಗಿ ಮಾತನಾಡಿದರು.‘ಯುವಜನರೇ ನಾಡಿನ ಭವಿಷ್ಯ’

ಧಾರವಾಡ:
‘ದೇಶದ ಭವಿಷ್ಯವನ್ನು ರೂಪಿಸುವ ಶಕ್ತಿ ಹೊಂದಿರುವ ಯುವಜನರು ನಾಡಿನ ಇತಿಹಾಸ ಪರಂಪರೆ ಸ್ವಾತಂತ್ರ್ಯ ಹಾಗೂ ಸಾಮಾಜಿಕ ಹೋರಾಟಗಳ ಕುರಿತು ಅರಿವು ಹೊಂದಿರುವುದು ಅಗತ್ಯ’ ಎಂದು ಜಿಲ್ಲಾಧಿಕಾರಿ ಸಮೀರ್ ಶುಕ್ಲಾ ನುಡಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ, ಸಮಾಜ ಕಲ್ಯಾಣ ಇಲಾಖೆಗಳು ಹಾಗೂ ಅಡೆಪ್ಟ್‌ ಪಿಯು ಕಾಲೇಜಿನ ಸಹಯೊಗದಲ್ಲಿ ಶುಕ್ರವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 57ನೇ ಮಹಾಪರಿನಿರ್ವಾಣ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದರು.ಡಾ.ವೈ.ಎಂ.ಭಜಂತ್ರಿ ಮಾತನಾಡಿ, ‘ಶಿಕ್ಷಣ ಮತ್ತು ಮನ ಪರಿವರ್ತನೆಯಿಂದ ಅಸ್ಪ್ರಶ್ಯತೆ ಹೋಗಲಾಡಿಸಬಹುದು ಎಂದು ಅಂಬೇಡ್ಕರ್ ನಂಬಿದ್ದರು. ಭಾರತದಂತಹ ಬೃಹತ್ ದೇಶದ ಸಂವಿಧಾನ ರಚನೆಯಂತಹ ಅಸಾಮಾನ್ಯ ಕಾರ್ಯ ಮಾಡಿದ ಅವರು ಎಲ್ಲ ವರ್ಗಗಳ ಆಶಯಗಳಿಗೆ ಸಮಾನ ಅವಕಾಶ ಕಲ್ಪಿಸಿರುವುದು ಅನುಕರಣೀಯ ನಡೆಯಾಗಿದೆ’ ಎಂದರು.

ಪ್ರತಿಕ್ರಿಯಿಸಿ (+)