ಸೋಮವಾರ, ಜನವರಿ 20, 2020
20 °C

‘ಶ್ರಮವಹಿಸಿ ದುಡಿದು ಪ್ರಗತಿ ಹೊಂದಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಶ್ರಮವಹಿಸಿ ದುಡಿದು ಪ್ರಗತಿ ಹೊಂದಿ’

ಬೆಳಗಾವಿ: ‘ಸರ್ಕಾರದ ಯೋಜನೆಗಳ ಮೇಲೆಯೇ ಅವಲಂಬಿತರಾಗಬೇಡಿ. ಬದಲಾಗಿ ಶ್ರಮವಹಿಸಿ ದುಡಿಯುವ ಮೂಲಕ ಬದುಕು ಕಟ್ಟಿಕೊಳ್ಳಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಸಲಹೆ ನೀಡಿದರು.ಇಲ್ಲಿನ ಕುಮಾರ ಗಂಧರ್ವ ರಂಗಮಂದಿರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಡಾ. ಬಾಬಾಸಾಹೇಬ ಅಂಬೇಡ್ಕರರ ಮಹಾಪರಿನಿರ್ವಾಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಿಂದುಳಿದ ಜನಾಂಗದವರ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಆದರೆ, ಜನರು ಇದರ ಲಾಭ ಪಡೆಯುತ್ತಿಲ್ಲ. ಸರ್ಕಾರದ ಯೋಜನೆಗಳ ಮೇಲೆಯೇ ಅವಲಂಬಿತರಾಗಿ ಸೋಮಾರಿಗಳಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ತಮ್ಮ ಮನೋಭಾವನೆಯನ್ನು ಬದಲಿಸಿಕೊಳ್ಳಬೇಕು. ಶ್ರಮವಹಿಸಿ ದುಡಿಯುವ ಮೂಲಕ ಆರ್ಥಿಕ, ಸಾಮಾಜಿಕವಾಗಿ ಪ್ರಗತಿ ಹೊಂದಬೇಕು’ ಎಂದರು.‘ಶಿಕ್ಷಣ ಅಭಿವೃದ್ಧಿಯ ಮೂಲಮಂತ್ರ. ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವತ್ತ ಗಮನ ಹರಿಸಬೇಕು. ಮನೆಯ ಸುತ್ತಲೂ ಶೈಕ್ಷಣಿಕ ವಾತಾವರಣ ನಿರ್ಮಿಸಬೇಕು. ಕೇವಲ ಹೋರಾಟದಲ್ಲಿಯೇ ಕಾಲಹರಣ ಮಾಡು ವುದನ್ನು ಬಿಟ್ಟು, ಸ್ವಾವಲಂಬಿಯಾಗಿ ದುಡಿಯ ಬೇಕು. ಆಗ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.‘ಬುದ್ಧ, ಬಸವ, ಅಂಬೇಡ್ಕರರು ವ್ಯಕ್ತಿ ಪೂಜೆ ಹಾಗೂ ಗುಡಿ ಪೂಜೆಯನ್ನು ಪ್ರಬಲವಾಗಿ ವಿರೋಧಿಸಿದ್ದಾರೆ. ಹೀಗಾಗಿ ಪ್ರತಿಯೊಬ್ಬರು ಪುರೋಹಿತಶಾಹಿ ವ್ಯವಸ್ಥೆಯಿಂದ ಹೊರಬರ ಬೇಕು. ವಾಮಾಚಾರ, ವಾಸ್ತು ಶಾಸ್ತ್ರ ಹಾಗೂ ಧಾರ್ಮಿಕ ಆಚರಣೆಗಳಿಗಾಗಿ ಹಣ ಹೂಡುವು ದನ್ನು ನಿಲ್ಲಿಸಬೇಕು. ದುಂದುವೆಚ್ಚದ ವಿವಾಹಗಳಿಗೆ ಕಡಿವಾಣ ಹಾಕಬೇಕು’ ಎಂದು ಸಲಹೆ ನೀಡಿದರು.‘ಡಾ. ಬಾಬಾಸಾಹೇಬ ಅಂಬೇಡ್ಕರರು ಸಮಾಜದಲ್ಲಿ ನೆಲೆಯೂರಿರುವ ಮೌಢ್ಯಗಳನ್ನು ತೊಲಗಿಸಲು ಅವಿರತವಾಗಿ ಶ್ರಮಿಸಿದ್ದಾರೆ. ಸಮಾಜದಲ್ಲಿ ಬದಲಾವಣೆ ತರಲು ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಅವರ ವಿಚಾರಧಾರೆಗಳು ಇಂದಿಗೂ ಪ್ರಸ್ತುತವಾಗಿವೆ. ಪ್ರತಿಯೊಬ್ಬರು ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ಸಾಗುವ ಮೂಲಕ ಜೀವನದಲ್ಲಿ ಸಾರ್ಥಕತೆ ಪಡೆದುಕೊಳ್ಳಿ’ ಎಂದರು.ಮಾಜಿ ಸಚಿವ ಆರ್‌.ಬಿ.ತಿಮ್ಮಾಪುರ ಅವರು, ‘ಜನರು ಚುನಾವಣೆ ಸಂದರ್ಭದಲ್ಲಿ ಸೀರೆ, ಮದ್ಯ ಪಡೆದು ಮತ ಹಾಕುವುದನ್ನು ನಿಲ್ಲಿಸಬೇಕು. ಯಾವುದೇ ಕಾರಣಕ್ಕೂ ಆಮಿಷಗಳಿಗೆ ಬಲಿಯಾಗಬಾರದು. ಸಾಮಾಜಿಕ ಕಳಕಳಿ ಹಾಗೂ ಸಚ್ಚಾರಿತ್ರ್ಯ ಹೊಂದಿದ ಅಭ್ಯರ್ಥಿಗೆ ಮತ ಚಲಾಯಿಸಬೇಕು. ಆಗ ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಸಾಧ್ಯ’ ಎಂದು ತಿಳಿಸಿದರು.‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಿಂದುಳಿದ ವರ್ಗದವರ ಶ್ರೇಯೋಭಿವೃದ್ಧಿಗಾಗಿ ನಾನಾ ಯೋಜನೆಗಳನ್ನು ಜಾರಿಗೆ ತರುತ್ತಿವೆ. ಇವುಗಳ ಸದುಪಯೋಗ ಪಡೆದುಕೊಂಡು ಆರ್ಥಿಕ ವಾಗಿ ಸಬಲರಾಗಬೇಕು’ ಎಂದರು.ದಲಿತ ಸಂಘರ್ಷ ಸಮಿತಿಯ ರಾಜ್ಯ ಘಟಕದ ಸಂಚಾಲಕ ಲಕ್ಷ್ಮೀನಾರಾಯಣ ನಾಗವಾರ, ಬಸವರಾಜ ಮುಧೋಳ, ದಲಿತ ಮಹಿಳಾ ಒಕ್ಕೂಟದ ರಾಜ್ಯ ಘಟಕದ ಸಂಚಾಲಕಿ ಶೋಭಾ ಕಟ್ಟೀಮನಿ, ಶ್ಯಾಮ್‌ ಘಾಟಗೆ, ಕಲ್ಲಪ್ಪ ಕಾಂಬಳೆ, ಶಿವಾಜಿ ಬನವಾಸಿ, ಸುರೇಶ ಮಣ್ಣೂರ, ಮಲ್ಲಿಕಾರ್ಜುನ ಮಲ್ಲಾಪುರ, ಎಫ್‌.ವೈ. ದೊಡ್ಡಮನಿ, ಪ್ರಕಾಶ ಕೆಲ್ಲೂರ, ಕಲ್ಲಪ್ಪ ಕಾಂಬಳೆ, ರಮೇಶ ಸಣ್ಣಕ್ಕಿ, ದಾದಾಸಾಬ ಮಾನೆ, ಬಾಳೇಶ ಬನಹಟ್ಟಿ, ಲತೀಫ್‌ಖಾನ್‌ ಪಠಾಣ ಉಪಸ್ಥಿತರಿದ್ದರು.

 

ಪ್ರತಿಕ್ರಿಯಿಸಿ (+)