ಮಂಗಳವಾರ, ಜೂನ್ 15, 2021
22 °C

‘ಹೆಗ್ಗೋಡು ಮಾದರಿ ಕೈಮಗ್ಗ ಸಂಸ್ಥೆ ಸ್ಥಾಪನೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಜೇಂದ್ರಗಡ: ‘ನಗರದಲ್ಲಿ ಶಿವಮೊಗ್ಗದ ಹೆಗ್ಗೋಡು ಚರಕ ಮತ್ತು ದೇಶಿ ಸಂಸ್ಥೆಯ ಮಾದರಿಯ ಕೇಂದ್ರ ಸ್ಥಾಪಿಸಲಾಗುವುದು. ಈ ಕೇಂದ್ರ ಸ್ಥಾಪನೆಯಿಂದಾಗಿ ಸಾವಿರಕ್ಕೂ ಅಧಿಕ ನೇಕಾ­ರರಿಗೆ ಉದ್ಯೋಗ ದೊರೆಯಲಿದೆ’ ಎಂದು ಚರಕ ಮತ್ತು ದೇಶಿ ಸಂಸ್ಥೆಯ ಪ್ರಧಾನ ವ್ಯವ­ಸ್ಥಾಪಕ ಹಾಗೂ ಅಖಿಲ ಭಾರತ ನೇಕಾರರ ಒಕ್ಕೂ­ಟದ ಸಂಚಾಲಕ ಎಸ್‌.ಸಿ.ದೇವರಮನೆ ಹೇಳಿದರು.ಇಲ್ಲಿನ ಆದಿಶಕ್ತಿ ಕೈಮಗ್ಗ ನೇಕಾರರ ಸಹಕಾರಿ ಸಂಘಕ್ಕೆ ಮಂಗಳವಾರ ಭೇಟಿ ನೀಡಿ ಬಟ್ಟೆ ತಯಾ­ರಿಕೆ ಕಾರ್ಯವನ್ನು ಪರಿಶೀಲಿಸಿ ಮಾತನಾಡಿದ ಅವರು,‘ಗದಗ, ಬಾಗಲಕೋಟೆ, ಕೊಪ್ಪಳ ಜಿಲ್ಲೆಗಳಲ್ಲಿ ಆಧುನಿಕತೆ ಅಬ್ಬರದ ಮಧ್ಯೆಯೂ ಕುಲ ಕಸುಬು ‘ಕೈಮಗ್ಗ ನೇಕಾರಿಕೆ’ ವೃತ್ತಿಯನ್ನೇ ನೆಚ್ಚಿಕೊಂಡು ಬದುಕು ಸಾಗಿಸುತ್ತಿರುವ ಕುಟುಂಬ­ಗಳು ಸಾಕಷ್ಟಿವೆ. ಹೀಗಾಗಿ ಈ ಕುಟುಂಬಗಳಿಗೆ ಅನುಕೂಲ ಕಲ್ಪಿಸುವ ­ ಹೆಗ್ಗೋಡು ಸಂಸ್ಥೆ ಮಾದರಿಯಲ್ಲಿಯೇ ಸಂಸ್ಥೆ ಸ್ಥಾಪಿಸಲು ಮುಂದಾಗಿದೆ’ ಎಂದರು.‘ಗಜೇಂದ್ರಗಡ ಸುತ್ತ–ಮುತ್ತಲು ನ್ಯಾಯಯುತ ಬೆಲೆಗೆ 15 ರಿಂದ 20 ಎಕರೆ ಜಮೀನು ಖರೀದಿಸುವ ಉದ್ದೇಶ ಹೊಂದಲಾಗಿದೆ. ಇಲ್ಲಿ ಕಾರ್ಯನಿರ್ವಹಿಸುವ ಉದ್ಯೋಗಗಳಿಗೆ ವಸತಿ ವ್ಯವಸ್ಥೆ, ನೇಕಾರಿಕೆಗೆ ಪೂರಕ­ವಾದ ನೂಲು, ಕಚ್ಚಾವಸ್ತು ತಯಾರಿಕೆ ಹಾಗೂ ಬಣಕಾರರಿಗೆ ಅಗತ್ಯ ಉದ್ಯೋಗ ಕಲ್ಪಿ­ಸುವ ಘಟಕಗಳನ್ನು ಆದಷ್ಟು ಶೀಘ್ರ ಸ್ಥಾಪಿಸ­ಲಾಗುವುದು’ ಎಂದರು.‘ಸರ್ಕಾರಿ ಮಟ್ಟದಲ್ಲಿ ಕುಲ ಕಸುಬು ಕೈಮಗ್ಗ ನೇಕಾರಿಕೆ ಉಳಿವಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದಕ್ಕಾಗಿ ರಾಜ್ಯ ಸರ್ಕಾರ ₨ 500 ಕೋಟಿ ನೀಡುವುದಾಗಿ ಭರವಸೆ ನೀಡಿದೆ.ಸದ್ಯ ₨ 120 ಕೋಟಿ ಅನುದಾನ ನೀಡಿದೆ. ಈ ಅನು­ದಾನವನ್ನು ಬಳಸಿಕೊಂಡೇ ಗಜೇಂದ್ರಗಡದಲ್ಲಿ ಹೆಗ್ಗೋಡು ಮಾದರಿಯ ಚರಕ ಮತ್ತು ದೇಶಿ ಸಂಸ್ಥೆ ಸ್ಥಾಪಿಸಲು ಮುಂದಾಗಿದೆ’ ಎಂದರು.‘ರಾಜ್ಯದ ಕೈಮಗ್ಗೆ ನೇಕಾರಿಕೆಗೆ ವಿಶ್ವ ಮಾನ್ಯತೆ ಇದೆ. ಆದರೆ ವಿದ್ಯುತ್‌ ಮಗ್ಗ ಹಾಗೂ ಆಧುನಿಕತೆಯ ರಾಸಾಯನಿಕ ಬಣ್ಣಗಳ ಭರಾಟೆಗೆ ಸಿಲುಕಿ ನೈಸರ್ಗಿಕ ಬಟ್ಟೆ ತಯಾರಿಕೆಗೆ ರಾಸಾಯನಿಕ ಆಪತ್ತು ಬಂದೊದಗಿತ್ತು. ಇದರ ನಿವಾರಣೆಗಾಗಿ ಮೂಲ ಕೈಮಗ್ಗ ತಯಾ­ರಿಕೆಯಲ್ಲಿ ನೈಸರ್ಗಿಕ ಬಟ್ಟೆಗಳ ತಯಾರಿಕೆಗೆ ಮುಂಬರುವ ದಿನಗಳಲ್ಲಿ ಗಜೇಂದ್ರಗಡ ನಗರ­ದಿಂದಲೇ ಚಾಲನೆ ನೀಡಲಾಗುವುದು’ ಎಂದರು.ನೈಸರ್ಗಿಕ ಬಣ್ಣ ಬಳಕೆ ಮಾಡಿ ಕೈಮಗ್ಗದಲ್ಲಿ ಬಟ್ಟೆ ಹಾಗೂ ಸೀರೆಗಳನ್ನು ಸಿದ್ಧಗೊಳಿಸುವ ನೇಕಾರರಿಗೆ ಮಾರುಕಟ್ಟೆ ಹಾಗೂ ಸ್ಥಿರ ದರ ಒದಗಿಸಿ ಕೊಡಲಾಗುವುದು. ನೈಸರ್ಗಿಕ ಬಣ್ಣ ಬಳಕೆ ಮಾಡಿ ತಯಾರಿಸುವ ಬಟ್ಟೆಗಳಿಗೆ ಸಾಕಷ್ಟು ಬೇಡಿಕೆ ಇದೆ. ಈಗಾಗಲೇ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಹಾಗೂ ಮಮತಾ ಬ್ಯಾನರ್ಜಿ ಯವರುಗಳು ನೈಸರ್ಗಿಕ ಬಣ್ಣ ಬಳಕೆ ಮಾಡಿ ತಯಾರಿಸಲಾದ ಸೀರೆಗಳನ್ನು ಧರಿ­ಸುತ್ತಿದ್ದಾರೆ. ಹೀಗಾಗಿ ಆರೋಗ್ಯಯುತ ನೈಸರ್ಗಿಕ ಬಣ್ಣ ಬಳಕೆ ಮಾಡಿ ತಯಾರಿಸುವ ಬಟ್ಟೆ ಮಾರಾ­ಟಗಾರರಿ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಒದಗಿಸುವ ಜವಾಬ್ದಾರಿ ಚರಕ ಮತ್ತು ದೇಶಿ ಸಂಸ್ಥೆಯ ಜವಾಬ್ದಾರಿ ಎಂದರು.ಆದಿಶಕ್ತಿ ಕೈಮಗ್ಗ ನೇಕಾರ ಸಂಘದ ಕಾರ್ಯದರ್ಶಿ ವಿಶ್ವನಾಥ ಕೆಂಚಿ, ಪ್ರಗತಿ ಪರ ಚಿಂತಕ ಬಿ.ಎ.ಕೆಂಚರೆಡ್ಡಿ, ನೇಕಾರ ಮುಖಂಡ ಪಾಡುರಂಗ ಶಿಲವೇರಿ, ಹನಮಂತ ಕೆಂಚಿ. ಎಂ.ಎಂ.ಕುಲಕರ್ಣಿ ಮತ್ತಿತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.