ಭಾನುವಾರ, ಮೇ 9, 2021
17 °C

13 ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: `ತೀವ್ರ ಕುಡಿಯುವ ನೀರಿನ ತೊಂದರೆ ಅನುಭವಿಸುತ್ತಿರುವ ಜಿಲ್ಲೆಯ ಕುಂದಗೋಳ ತಾಲ್ಲೂಕಿನ 12 ಹಾಗೂ ಹುಬ್ಬಳ್ಳಿ ತಾಲ್ಲೂಕಿನ ಒಂದು ಹಳ್ಳಿ ಸೇರಿದಂತೆ ಒಟ್ಟು 13  ಹಳ್ಳಿಗಳಿಗೆ ಟ್ಯಾಂಕರ್  ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ~ ಎಂದು ಜಿಲ್ಲಾಧಿಕಾರಿ ದರ್ಪಣ ಜೈನ್ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಕುಡಿಯುವ ನೀರಿನ ತೊಂದರೆ ಕಂಡುಬರುವ ಇನ್ನೂ ಎರಡು ಹಳ್ಳಿಗಳಾದ ಸಂಶಿ ಹಾಗೂ ಕೊಡ್ಲಿವಾಡ ಗ್ರಾಮಗಳಲ್ಲಿ ನೀರು ಕಡಿಮೆ ಆಗಿರುವ ಹಿನ್ನೆಲೆಯಲ್ಲಿ ಇಲ್ಲಿಯೂ ಸಹ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಬೋರ್‌ವೆಲ್ ಸ್ವಚ್ಛ ಮಾಡಿ ನೀರು ಹೆಚ್ಚಿಸಲು ಹಾಗೂ ಹ್ಯಾಂಡ್‌ಪಂಪ್‌ಗಳ ದುರಸ್ತಿಗೆ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯ ಬರ ಪರಿಸ್ಥಿತಿಯ ಬಗ್ಗೆ ಗಮನಹರಿಸಲು ಪ್ರತಿ ಸೋಮವಾರ ತಾಲ್ಲೂಕು ಮಟ್ಟದಲ್ಲಿ ಹಾಗೂ ಪ್ರತಿ ಶುಕ್ರವಾರ ಜಿಲ್ಲಾಮಟ್ಟದಲ್ಲಿ ಸಭೆಗಳನ್ನು ನಡೆಸಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.ಜಿಲ್ಲೆಯ ಕಲಘಟಗಿ, ನವಲಗುಂದ ಹಾಗೂ ಧಾರವಾಡ ತಾಲ್ಲೂಕಿನಲ್ಲಿ ದನಕರುಗಳಿಗೆ ಮೇವಿನ ಸಮಸ್ಯೆ ಕಂಡುಬಂದಿಲ್ಲ. ಕುಂದಗೋಳ ತಾಲ್ಲೂಕಿನ ಮುಳ್ಳೊಳ್ಳಿ, ಹಿರೇಗುಂಜಾಳ ಹಾಗೂ ಹುಬ್ಬಳ್ಳಿ ತಾಲ್ಲೂಕಿನ ಶಿರಗುಪ್ಪಿ ಸೇರಿದಂತೆ 3 ಗ್ರಾಮಗಳಲ್ಲಿ ಮೇವು ಬ್ಯಾಂಕ್ ಆರಂಭಿಸಲಾಗಿದೆ. 43 ಮೆಟ್ರಿಕ್ ಟನ್ ಮೇವು ಸಂಗ್ರಹಿಸಿಡಲಾಗಿದೆ. ಪ್ರತಿ ಕೆಜಿ ಗೆ 2 ರೂ. ಗಳಂತೆ ಮೇವು ನೀಡಲಾಗುತ್ತಿದೆ, ಜಿಲ್ಲೆಯಲ್ಲಿ 3.1 ಲಕ್ಷ ದನಕರುಗಳಿದ್ದು, ಕಾಲು ಬಾಯಿ ಬೇನೆಗಳಿಗೆ ಉಪಚಾರ ನೀಡಲು 5.00 ಲಕ್ಷ ರೂ. ಔಷಧಿ ಖರೀದಿಗಾಗಿ ಪಶುಸಂಗೋಪನೆ ಇಲಾಖೆಗೆ ನೀಡಲಾಗಿದೆ ಎಂದರು.ಜಿಲ್ಲೆಯ ಬರ ಪರಿಹಾರ ಕಾರ್ಯಕ್ರಮಗಳ ನಿರ್ವಹಣೆಗಾಗಿ ಸರ್ಕಾರದಿಂದ 2 ಕೋಟಿ ರೂಪಾಯಿ ಅನುದಾನ ಬಿಡುಗಡೆ ಆಗಿದ್ದು, ಈ ಅನುದಾನವನ್ನು ಕುಡಿಯುವ ನೀರು ಪೂರೈಕೆಗೆ ಹಾಗೂ ಮೇವಿಗಾಗಿ ವಿನಿಯೋಗಿಸಲಾಗುತ್ತಿದೆ.  ಇದಲ್ಲದೇ ಕುಡಿಯುವ ನೀರು ಪೂರೈಕೆ ಯೋಜನೆಗಳ ಸುಧಾರಣೆಗಾಗಿ ಪಂಚಾಯತ್ ಇಲಾಖೆಯಿಂದ 2.4 ಕೋಟಿ ರೂ. ಬಂದಿದ್ದು, ತಾಲ್ಲೂಕು ಮಟ್ಟದ ಟಾಸ್ಕ್‌ಫೋರ್ಸ್ ಸಮಿತಿ ಸಭೆಯಲ್ಲಿ ಚರ್ಚಿಸಿ ನಿರ್ಧರಿಸಲಾಗುವುದೆಂದರು.ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ನೀಡಲು ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೊಜನೆಯಡಿಯಲ್ಲಿ ಉದ್ಯೋಗ ನೀಡಲಾಗುತ್ತಿದೆ. ಈ ಯೋಜನೆಯಡಿಯಲ್ಲಿ ಒಟ್ಟು 57 ಕೋಟಿ ರೂ. ಖರ್ಚು ಮಾಡಲಾಗಿದ್ದು, ಕಳೆದ ಅಕ್ಟೋಬರ್ 1 ರಿಂದ ಮಾರ್ಚ್ 31 ರ ವರೆಗೆ ರೂ.31.00 ಕೋಟಿಗಳನ್ನು ವಿನಿಯೋಗಿಸಲಾಗಿದೆ ಎಂದು ತಿಳಿಸಿದ ಅವರು ಯಾವುದೇ ಅನುದಾನದ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಇದಲ್ಲದೇ ಬರಪರಿಹಾರಕ್ಕಾಗಿ ಇನ್ನೂ 3 ಕೋಟಿ ರೂಪಾಯಿ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.