ಶುಕ್ರವಾರ, ಮಾರ್ಚ್ 5, 2021
23 °C

1,500 ಕೋಟಿ ಅಕ್ರಮ ಗಳಿಕೆ ಎಚ್‌ಡಿಕೆ ವಿರುದ್ಧಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

1,500 ಕೋಟಿ ಅಕ್ರಮ ಗಳಿಕೆ ಎಚ್‌ಡಿಕೆ ವಿರುದ್ಧಆರೋಪ

ಬೆಂಗಳೂರು: ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಮತ್ತು ಅವರ ಕುಟುಂಬದವರ ಮೇಲಿನ ನಿರೀಕ್ಷಿತ ಆರೋಪ ಪಟ್ಟಿಯನ್ನು ಬಿಜೆಪಿ ಮಂಗಳವಾರ ಬಿಡುಗಡೆ ಮಾಡಿದ್ದು, ಅದರಲ್ಲಿ 62 ಆರೋಪಗಳನ್ನು ಪಟ್ಟಿ ಮಾಡಲಾಗಿದೆ.

 

ಕುಮಾರಸ್ವಾಮಿ ಮತ್ತು ಅವರ ಕುಟುಂಬದವರು ರಾಜಕೀಯ ಅಧಿಕಾರಕ್ಕೆ ಬಂದಾಗಿನಿಂದ ಸುಮಾರು 1,500 ಕೋಟಿ ರೂಪಾಯಿ ಅಕ್ರಮ ಆಸ್ತಿ ಗಳಿಸಿದ್ದಾರೆ ಎಂಬುದನ್ನು ಅದರಲ್ಲಿ ಪ್ರಮುಖವಾಗಿ ಉಲ್ಲೇಖಿಸಲಾಗಿದೆ.ರಾಜ್ಯ ಬಿಜೆಪಿ ಪ್ರಕಟಿಸಿರುವ 55 ಪುಟಗಳ ಆರೋಪ ಪಟ್ಟಿಯನ್ನು ಬಿಜೆಪಿಯ ರಾಷ್ಟ್ರೀಯ ವಕ್ತಾರರಾದ ನಿರ್ಮಲಾ ಸೀತಾರಾಮನ್ ಬಿಡುಗಡೆ ಮಾಡಿದರು.ಇದುವರೆಗೂ ಕುಮಾರಸ್ವಾಮಿ ಮತ್ತು ಅವರ ಕುಟುಂಬದ ವಿರುದ್ಧ ಬಿಜೆಪಿ ಮಾಡಿದ್ದ ಆರೋಪಗಳನ್ನೇ ಕ್ರೋಡೀಕರಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಲಾಗಿದೆ. ಈ ಕುರಿತು ಕೇಳಿದ ಪ್ರಶ್ನೆಗೆ `ಹಳೆ ಆರೋಪಗಳಿದ್ದರೂ ಜನರಿಗೆ ಮತ್ತೊಮ್ಮೆ ತಿಳಿಸಬೇಕೆನ್ನುವ ಉದ್ದೇಶದಿಂದ ಅದಕ್ಕೆ ಪುಸ್ತಕದ ರೂಪ ನೀಡಲಾಗಿದೆ~ ಎಂದು ನಿರ್ಮಲಾ ಉತ್ತರಿಸಿದರು.`ಮೂರು ವರ್ಷಗಳಿಂದಲೂ ಪ್ರತಿಪಕ್ಷಗಳು, ಸರ್ಕಾರಕ್ಕೆ ಸರಿಯಾಗಿ ಕೆಲಸ ನಿರ್ವಹಿಸಲು ಬಿಡುತ್ತಿಲ್ಲ. ಪದೇ ಪದೇ ಸುಳ್ಳು ಆರೋಪಗಳನ್ನು ಮಾಡುತ್ತಿದ್ದು, ಅವುಗಳಿಗೆ ಉತ್ತರ ನೀಡುವಲ್ಲಿಯೇ ಸರ್ಕಾರದ ಹೆಚ್ಚು ಸಮಯ ವ್ಯಯವಾಗಿದೆ. ಹೀಗೆ ಆರೋಪ ಮಾಡುವವರ ಚಾರಿತ್ರ್ಯ ಹೇಗಿದೆ ಎನ್ನುವುದನ್ನು ತಿಳಿಸುವ ಉದ್ದೇಶದಿಂದ ಈ ಆರೋಪ ಪಟ್ಟಿ ಬಿಡುಗಡೆ ಮಾಡಲಾಗಿದೆ~ ಎಂದು ಸಮರ್ಥಿಸಿಕೊಂಡರು.ಆರೋಪ ಪಟ್ಟಿಯಲ್ಲಿ ದೇವೇಗೌಡರ ವಂಶ ವೃಕ್ಷ ಮತ್ತು ಅವರ ಕುಟುಂಬದವರು ಎಲ್ಲೆಲ್ಲಿ ಏನೇನು ಆಸ್ತಿ ಸಂಪಾದಿಸಿದ್ದಾರೆ ಎಂಬುದರ ಪೂರ್ಣ ಮಾಹಿತಿಯನ್ನು ನೀಡಲಾಗಿದೆ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಗಣಿಗಾರಿಕೆಗೆ ಪರವಾನಗಿ ನೀಡಿದ್ದು, ಅವರ ಕುಟುಂಬದವರು ಬಿ.ಎಸ್.ಕೆ. ಟ್ರೇಡಿಂಗ್ ಕಂಪೆನಿ ಆರಂಭಿಸಿ, ಅದಿರು ರಫ್ತು ಮಾಡಿದ್ದರ ವಿವರಗಳನ್ನೂ ನೀಡಲಾಗಿದೆ.

 

ರಫ್ತು ಮಾಡಿದ 1,98,066 ಮೆಟ್ರಿಕ್ ಟನ್ ಕಬ್ಬಿಣದ ಅದಿರಿನ ಪೈಕಿ 47,500 ಮೆಟ್ರಿಕ್ ಟನ್ ಅದಿರನ್ನು ಅನುಮತಿ ಇಲ್ಲದೆಯೇ ಹೊರ ದೇಶಕ್ಕೆ ಕಳುಹಿಸಲಾಗಿದೆ ಎನ್ನುವ ಆರೋಪವನ್ನೂ ಮಾಡಲಾಗಿದೆ.ಕುಮಾರಸ್ವಾಮಿ ತಮ್ಮ ಅಧಿಕಾರಾವಧಿಯಲ್ಲಿ ಜಮೀನನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವ ಕೆಲಸ ಮಾಡಿದ್ದು, ಈ ಮೂಲಕವೂ ಅಕ್ರಮ ಎಸಗಿದ್ದಾರೆ ಎಂದೂ ದೂರಲಾಗಿದೆ.ಬಿಡದಿ ಸಮೀಪ 40 ಕೋಟಿ ರೂಪಾಯಿ ಬೆಲೆಯ 22 ಎಕರೆ ಜಮೀನು, ಕಸ್ತೂರಬಾ ರಸ್ತೆಯಲ್ಲಿನ ಕಸ್ತೂರಿ ಟಿ.ವಿ. ವಾಹಿನಿಯ ಕಟ್ಟಡ, ಜೆ.ಪಿ.ನಗರದ ಕುಮಾರಸ್ವಾಮಿ ಮನೆ, ದೊಡ್ಡನೆಕ್ಕುಂದಿ ಕೈಗಾರಿಕಾ ಪ್ರದೇಶದಲ್ಲಿ ಬಾಲಕೃಷ್ಣೇಗೌಡ ಖರೀದಿಸಿರುವ ವಾಣಿಜ್ಯ ಸಂಕೀರ್ಣಗಳನ್ನು ಪ್ರಕಟಿಸಲಾಗಿದೆ.ಈ ಎಲ್ಲ ಆಸ್ತಿಗಳ ಒಟ್ಟು ಮೌಲ್ಯ ರೂ 1290 ಕೋಟಿ. ಇದರ ಜತೆಗೆ ವಿವಿಧ ಕಂಪೆನಿಗಳಲ್ಲಿ ಹೂಡಿಕೆ ಮಾಡಿರುವ ಮೊತ್ತ ರೂ 210 ಕೋಟಿ ಸೇರಿದೆ ಎಂದೂ ಉಲ್ಲೇಖಿಸಲಾಗಿದೆ.ದಾಖಲೆ ಇವೆ: ನಂತರ ನಿರ್ಮಲಾ ಮಾತನಾಡಿ, `ನಾವು ಮಾಡಿರುವ ಆರೋಪಗಳಿಗೆ ಬದ್ಧ ಇದ್ದು, ಅದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳೂ ನಮ್ಮ ಬಳಿ ಇವೆ~ ಎಂದರು. ದಾಖಲೆ ಇದ್ದ ಮೇಲೂ ಏಕೆ ಅವರ ವಿರುದ್ಧ ಕ್ರಮ ತೆಗೆದುಕೊಂಡಿಲ್ಲ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ `ಸೂಕ್ತ ಕಾಲದಲ್ಲಿ ಸೂಕ್ತ ಪ್ರಾಧಿಕಾರದ ಮುಂದೆ ಅರ್ಜಿ ಸಲ್ಲಿಸಲಾಗುವುದು~ ಎಂದು ಹೇಳಿದರು.`ನಿಮ್ಮ ಸರ್ಕಾರ ಬಂದು ಮೂರು ವರ್ಷವಾದರೂ ಏಕೆ ಕ್ರಮ ತೆಗೆದುಕೊಂಡಿಲ್ಲ? ಇನ್ನೂ ಯಾವ ಸೂಕ್ತ ಕಾಲಕ್ಕಾಗಿ ಕಾಯುತ್ತಿದ್ದೀರಿ~ ಎಂದು ಕೇಳಿದ ಪ್ರಶ್ನೆಗೆ ನಿರ್ಮಲಾ ಸರಿಯಾದ ಉತ್ತರ ನೀಡಲಿಲ್ಲ.ಸಮರ್ಥನೆ: ರಾಜ್ಯ ಬಿಜೆಪಿ ಸರ್ಕಾರ ಉತ್ತಮ ಕೆಲಸ ಮಾಡುತ್ತಿದ್ದು, ಅದಕ್ಕೆ ಪಕ್ಷದ ಹೈಕಮಾಂಡ್‌ನ ಪೂರ್ಣ ಬೆಂಬಲ ಇದೆ ಎಂದು ಹೇಳಿದರು. `ಎಲ್ಲ ಉಪ ಚುನಾವಣೆಗಳಲ್ಲೂ ಪಕ್ಷ ಜಯಗಳಿಸಿದೆ. ಇದರರ್ಥ ಜನರ ಬೆಂಬಲ ಸರ್ಕಾರಕ್ಕೆ ಇದೆ ಎನ್ನುವುದು. ಹೀಗಾಗಿ ಹತಾಶೆಯ ಮನೋಭಾವದಿಂದ ಟೀಕೆ ಮಾಡುವವರಿಗೆ ಜನ ತಕ್ಕ ಪಾಠ ಕಲಿಸಿದ್ದಾರೆ~ ಎಂದರು.ಇತ್ತೀಚೆಗೆ ಅಡ್ವಾಣಿ ಅವರೇ ರಾಜ್ಯ ಸರ್ಕಾರದ ಕಾರ್ಯವೈಖರಿ ಬಗ್ಗೆ ಆಕ್ಷೇಪಿಸಿದ್ದರು ಎನ್ನುವುದನ್ನು ಗಮನಕ್ಕೆ ತಂದಾಗ `ಅವರು ದೊಡ್ಡವರು. ಅವರ ಹೇಳಿಕೆಗಳ ಬಗ್ಗೆ ನಾನೇನೂ ಪ್ರತಿಕ್ರಿಯೆ ನೀಡಲಾರೆ~ ಎಂದು ನುಣುಚಿಕೊಂಡರು.ಸರ್ಕಾರದ ವರ್ಚಸ್ಸು ವೃದ್ಧಿಗೆ ಏನಾದರೂ ಸಲಹೆಗಳನ್ನು ನೀಡುತ್ತೀರಾ ಎಂದು ಕೇಳಿದಾಗಲೂ `ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆ~ ಎಂದಷ್ಟೇ ಹೇಳಿದರು.ಹೋಗಲಿ, ಯಡಿಯೂರಪ್ಪ ಅವರಿಗೆ ಸಲಹೆ ನೀಡುತ್ತೀರಾ ಎಂದಾಗ, `ಅಗತ್ಯ ಬಿದ್ದರೆ ಪಕ್ಷದ ಹೈಕಮಾಂಡ್ ಆ ಕೆಲಸ ಮಾಡಲಿದೆ. ಆದರೆ, ಅದು ಪಕ್ಷದ ಆಂತರಿಕ ವಿಚಾರ. ನಿಮ್ಮ (ಮಾಧ್ಯಮಗಳ) ಮುಂದೆ ಹೇಳಲು ಆಗಲ್ಲ~ ಎಂದರು.ಇತ್ತೀಚೆಗೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಕೂಡ ರಾಜ್ಯ ಸರ್ಕಾರವನ್ನು ಕಡುಭ್ರಷ್ಟ ಸರ್ಕಾರ ಎಂದು ಟೀಕಿಸಿದ್ದರಲ್ಲ ಎಂದು ಕೇಳಿದ ಪ್ರಶ್ನೆಗೆ `ಅದು ಅವರ ಅಭಿಮತ ಅಷ್ಟೇ. ಅದೇನೂ ತೀರ್ಪಲ್ಲ. ಆದರೂ ನ್ಯಾಯಮೂರ್ತಿಗಳ ಅಭಿಪ್ರಾಯವನ್ನು ಗಂಭೀರವಾಗಿ ಪರಿಗಣಿಸಲಾಗುವುದು~ ಎಂದರು.`ಇನ್ನು ಮುಂದೆ ನಮ್ಮದೇನಿದ್ದರೂ ಉತ್ತಮ ಆಡಳಿತ ನೀಡುವ ಕಡೆಗೇ ಗಮನ. ಇನ್ನಾದರೂ ಪ್ರತಿಪಕ್ಷಗಳು ರಚನಾತ್ಮಕವಾಗಿ ಕೆಲಸ ನಿರ್ವಹಿಸಲಿ~ ಎಂದ ಅವರು `ದ್ವೇಷ ರಾಜಕಾರಣದಿಂದ ಕುಮಾರಸ್ವಾಮಿ ವಿರುದ್ಧದ ಆರೋಪಪಟ್ಟಿ ಬಿಡುಗಡೆ ಮಾಡಿಲ್ಲ~ ಎಂದು ಸ್ಪಷ್ಟಪಡಿಸಿದರು.ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ, ಸಚಿವೆ ಶೋಭಾ ಕರಂದ್ಲಾಜೆ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಬಿ.ಜೆ.ಪುಟ್ಟಸ್ವಾಮಿ, ದೆಹಲಿಯಲ್ಲಿನ ಕರ್ನಾಟಕದ ವಿಶೇಷ ಪ್ರತಿನಿಧಿ ವಿ.ಧನಂಜ ಯಕುಮಾರ್, ಶಾಸಕ ಸಿ.ಟಿ.ರವಿ, ಬಿಜೆಪಿ ಮಾಧ್ಯಮ ವಿಭಾಗದ ಮುಖ್ಯಸ್ಥ ಎಸ್.ಪ್ರಕಾಶ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು. 

`ಸಿಬಿಐಗೆ ವಹಿಸಿ~ - ದೇವೇಗೌಡ

ಬೆಂಗಳೂರು: ತಮ್ಮ ಕುಟುಂಬದವರು ಅಕ್ರಮ ಆಸ್ತಿ ಸಂಪಾದಿಸಿದ್ದಾರೆ ಎಂದು ಬಿಜೆಪಿ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿದ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ, `ಬಿಜೆಪಿಯವರು ನಮ್ಮ ಕುಟುಂಬದವರ ಮೇಲೆ ಮಾಡಿರುವ ಎಲ್ಲ ಆರೋಪಗಳನ್ನು ಸಿಬಿಐ ತನಿಖೆಗೆ ವಹಿಸಲಿ~ ಎಂದು ಸವಾಲು ಹಾಕಿದ್ದಾರೆ.ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಆರೋಪಗಳ ಕುರಿತ ತನಿಖೆಯನ್ನು ಸಿಬಿಐಗೆ ವಹಿಸಿ ಅವರು (ಬಿಜೆಪಿ) ತಮ್ಮ ಯೋಗ್ಯತೆ ಸಾಬೀತುಪಡಿಸಲಿ~ ಎಂದು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.