ಗುರುವಾರ , ಮೇ 19, 2022
21 °C

2012 ಒಲಿಂಪಿಕ್ಸ್: ಇನ್ನು 54 ದಿನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಒಲಿಂಪಿಕ್ಸ್ ನಡೆಯುವ ನಗರಗಳು ಕೆಲವು ಶಾಶ್ವತವಾದ ಸೌಲಭ್ಯಗಳನ್ನು ಪಡೆದುಕೊಳ್ಳುತ್ತವೆ. ಟೋಕಿಯೊ ಅಥವಾ ಬೀಜಿಂಗ್ ಇಲ್ಲವೇ ಸೋಲ್ ಮುಂತಾದ ನಗರಗಳಲ್ಲಿ ಒಲಿಂಪಿಕ್ ಕೂಟಗಳು ನಡೆದಿದ್ದವಲ್ಲಾ, ಆ ಸಂದರ್ಭದಲ್ಲಿ ಹೊಸ ಕ್ರೀಡಾಂಗಣ ನಿರ್ಮಾಣ, ಸಂಚಾರ ವ್ಯವಸ್ಥೆಯ ಆಧುನೀಕರಣ ಸೇರಿದಂತೆ ಹತ್ತು ಹಲವು ಅಭಿವೃದ್ಧಿ ಕಾರ್ಯಗಳು ನಡೆದವು. ಅದೇ ರೀತಿ ಇವತ್ತು ಲಂಡನ್ ನಗರ ಕೂಡಾ ಹೊಸ ರಂಗು ಪಡೆದುಕೊಳ್ಳುತ್ತಿದೆ.ಈ ಮಹಾ ಕ್ರೀಡಾಹಬ್ಬಕ್ಕಾಗಿ ಲಂಡನ್ ನಗರವೇ ಹೊಸ ರಂಗು ಪಡೆದುಕೊಳ್ಳುತ್ತಿದೆ. ನಗರದ ಪೂರ್ವ ಭಾಗದಲ್ಲಿ ರೂಪುಗೊಂಡಿರುವ ಪ್ರಧಾನ ಕ್ರೀಡಾಂಗಣದ ಸುತ್ತಮುತ್ತಲ ಪ್ರದೇಶವೆಲ್ಲವೂ ಅಭಿವೃದ್ಧಿಗೊಂಡಿದೆ. ಬಹಳ ಹಿಂದಿನಿಂದಲೂ ಹೆಸರುವಾಸಿಯಾದ ಹೈಡ್ ಪಾರ್ಕ್, ಹಾರ್ಸ್‌ಗಾರ್ಡ್ ಪೆರೇಡ್ ಮುಂತಾದ ಪ್ರದೇಶಗಳಲ್ಲಿಯೂ ಕೆಲವು ಕ್ರೀಡಾಂಗಣಗಳು ನಿರ್ಮಾಣಗೊಂಡಿವೆ. ಇಂತಹ ಕೆಲವು ಕಡೆ ತಾತ್ಕಾಲಿಕ ಕ್ರೀಡಾಂಗಣಗಳನ್ನು ನಿರ್ಮಿಸಲಾಗಿದ್ದು ಕೂಟದ ನಂತರ ಕ್ರೀಡಾಂಗಣಗಳನ್ನೆಲ್ಲಾ ಬಿಚ್ಚಿ ಬೇರೆಡೆ ಸಾಗಿಸಲಾಗುತ್ತದೆ. ಪ್ರಧಾನ ಕ್ರೀಡಾಂಗಣವಿರುವ ಪ್ರದೇಶದಲ್ಲಿ   ಒಲಿಂಪಿಕ್ಸ್‌ಗಾಗಿಯೇ ಸುಮಾರು 500 ಎಕರೆ ಪ್ರದೇಶವನ್ನು ಪಡೆದಿರುವ   ಒಲಿಂಪಿಕ್ಸ್ ಸಮಿತಿ ಕಳೆದ ಆರು ವರ್ಷಗಳಿಂದ ಅದನ್ನು ಇನ್ನಿಲ್ಲದಂತೆ ಅಭಿವೃದ್ಧಿ ಪಡಿಸಿದೆ.ಒಲಿಂಪಿಕ್ಸ್‌ನ ವಿವಿಧ ಸ್ಪರ್ಧೆಗಳು ನಡೆಯುವ ಪ್ರದೇಶಗಳಿಗೆ ಹೆಚ್ಚುವರಿ ರೈಲು ಸಂಚಾರ ವ್ಯವಸ್ಥೆಯನ್ನೂ ಮಾಡಲಾಗಿದೆ. ಜತೆಗೆ ಥೇಮ್ಸ ಗೇಟ್‌ವೆ ಕೇಬಲ್ ಕಾರ್ ಸೇವೆಯನ್ನೂ ಆರಂಭಿಸಲಾಗಿದೆ.ಕಾರ್ಲ್ ಲೂಯಿಸ್
ಅಥ್ಲೆಟಿಕ್ ಲೋಕದಲ್ಲಿ ಕಾರ್ಲ್ ಲೂಯಿಸ್ ಹೆಸರು ಸದಾ ಹೊಳೆಯುತ್ತಿರುವಂತಹದ್ದು. ಅಮೆರಿಕಾದ ಸರ್ವಕಾಲ ಶ್ರೇಷ್ಠ ಅಥ್ಲೀಟ್ ಎನಿಸಿರುವ ಇವರು 1984ರ ಲಾಸ್‌ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ 100ಮೀ., 200 ಮೀ. ಓಟದ ಸ್ಪರ್ಧೆಗಳಲ್ಲಿ ಚಿನ್ನ ಗೆದ್ದರು. ಇದಲ್ಲದೆ 4-100ಮೀ. ರಿಲೆ ಓಟದ ಸ್ಪರ್ಧೆಯಲ್ಲಿ ಅಮೆರಿಕ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಜತೆಗೆ ಲಾಂಗ್‌ಜಂಪ್ ಚಿನ್ನ ಬೇರೆ.ಒಲಿಂಪಿಕ್ಸ್‌ನಂತಹ ಕ್ರೀಡಾಕೂಟಗಳಲ್ಲಿ ಇಂತಹ ಅಪ್ರತಿಮ ಸಾಮರ್ಥ್ಯ ತೋರುವುದು ಅಸಾಮಾನ್ಯ ಸಾಹಸ.ಒಂದೇ ಒಲಿಂಪಿಕ್ಸ್‌ಗೆ ಇವರ ಸಾಧನೆ ಸೀಮಿತವಲ್ಲ. ಇವರು 1988ರ ಸೋಲ್ ಒಲಿಂಪಿಕ್ಸ್‌ನಲ್ಲಿಯೂ 100ಮೀ. ಓಟದ ಚಿನ್ನದ ಜತೆಗೆ ಲಾಂಗ್‌ಜಂಪ್‌ನಲ್ಲಿಯೂ ಸ್ವರ್ಣ ಗಳಿಸಿದ್ದರು. 1992ರ ಬಾರ್ಸಿಲೋನ ಒಲಿಂಪಿಕ್ಸ್‌ನ ಲಾಂಗ್‌ಜಂಪ್‌ನಲ್ಲಿ ಸ್ವರ್ಣ ಸಂಭ್ರಮ ಕಂಡರೆ, 4-100ಮೀ. ರಿಲೆ ಓಟದಲ್ಲಿ ಅಮೆರಿಕ ತಂಡ ಮೊದಲ ಸ್ಥಾನ ಪಡೆಯುವಲ್ಲಿ ಮುಖ್ಯ ಪಾತ್ರ ವಹಿಸಿದ್ದರು. 1996ರ ಅಟ್ಲಾಂಟಾ ಒಲಿಂಪಿಕ್ಸ್‌ನಲ್ಲಿ ಇವರು ತವರಿನ ಅಭಿಮಾನಿಗಳ ಎದುರಲ್ಲೇ ಲಾಂಗ್‌ಜಂಪ್‌ನಲ್ಲಿ ಚಿನ್ನ ಗೆದ್ದರು. ಇನ್ನು ಇವರು ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಗೆದ್ದ ಪದಕಗಳೂ ಹಲವು. ಸಾಧನೆಯ ಉತ್ತುಂಗದಲ್ಲಿದ್ದಾಗಲೇ (1997) ಇವರು ನಿವೃತ್ತಿಯನ್ನೂ ಪ್ರಕಟಿಸಿದ್ದರು.ಅಲಬಾಮಾ ಪ್ರಾಂತ್ಯದಲ್ಲಿ ಅಥ್ಲೆಟಿಕ್ ಕ್ಲಬ್ ಒಂದನ್ನು ನಡೆಸುತ್ತಿದ್ದ ದಂಪತಿಯ ಪುತ್ರ ಕಾರ್ಲ್ ಲೂಯಿಸ್ (ಹುಟ್ಟಿದ್ದು: 1961 ಜುಲೈ 1)ಗೆ ಎಳವೆಯಿಂದಲೂ ತಂದೆಯೇ ಕೋಚ್. ಕಾರ್ಲ್ ತಾಯಿ ಎವ್ಲಿನ್ 1952ರ ಹೆಲ್ಸಿಂಕಿ ಒಲಿಂಪಿಕ್ಸ್‌ನಲ್ಲಿ  ಪಾಲ್ಗೊಂಡಿದ್ದ ಅಥ್ಲೀಟ್. ತಂಗಿ ಕರೋಲ ಲೂಯಿಸ್ 1984ರ ಒಲಿಂಪಿಕ್ಸ್‌ನ ಲಾಂಗ್‌ಜಂಪ್‌ನಲ್ಲಿ ಸ್ಪರ್ಧಿಸಿ 9ನೇ ಸ್ಥಾನ ಗಳಿಸಿದ್ದರು. ಕಾರ್ಲ್ ಅವರು ಹ್ಯೂಸ್ಟನ್ ವಿವಿಯಲ್ಲಿದ್ದಾಗ ತರಬೇತು ನೀಡಿದ್ದ ಟಾಮ್ ಟೆಲೆಜ್ ನಂತರ ಕಾರ್ಲ್ ನಿವೃತ್ತಿಯವರೆಗೂ ಅವರಿಗೆ ಕೋಚ್ ಆಗಿದ್ದರು.
ಇಥಿಯೋಪಿಯಾ
ಒಲಿಂಪಿಕ್ಸ್‌ನಲ್ಲಿ ದೂರ ಓಟವೆಂದರೆ ಅಲ್ಲಿ ಆಫ್ರಿಕಾದ ಓಟಗಾರರದೇ ಮೇಲುಗೈ. ಅದರಲ್ಲಿಯೂ ಇಥಿಯೋಪಿಯಾದ ಸ್ಪರ್ಧಿಗಳ ಹೆಸರು ಕಳೆದ ಅರ್ಧ ಶತಮಾನದಿಂದ ಪದಕ ಪಟ್ಟಿಯಲ್ಲಿ ಕಂಡು ಬರುತ್ತಲೇ ಇದೆ. ಇದು ಆರ್ಥಿಕವಾಗಿ ಬಹಳ ಹಿಂದುಳಿದಿರುವ ದೇಶ. ಆದರೆ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವಲ್ಲಿ ಈ ದೇಶದ ಸ್ಪರ್ಧಿಗಳು ಭಾರತಕ್ಕಿಂತ ಮುಂದಿದ್ದಾರೆ.ಇಥಿಯೋಪಿಯಾದಲ್ಲಿ 1948ರಲ್ಲೇ ಒಲಿಂಪಿಕ್ ಸಂಸ್ಥೆ ಹುಟ್ಟು ಪಡೆಯಿತಾದರೂ, 1956ರಲ್ಲಿ ಈ ದೇಶದ ತಂಡ ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿತ್ತು. ಆ ನಂತರ 1976, 84 ಮತ್ತು 88ರ ಒಲಿಂಕ್ಸ್‌ನಲ್ಲಿ ವಿಭಿನ್ನ ಕಾರಣಗಳಿಗಾಗಿ ಈ ದೇಶದ ತಂಡ ಪಾಲ್ಗೊಂಡಿರಲಿಲ್ಲ.ಬೀಜಿಂಗ್‌ನಲ್ಲಿ ಗೆದ್ದ 4 ಚಿನ್ನದ ಪದಕಗಳೂ ಸೇರಿದಂತೆ ಇಥಿಯೋಪಿಯ ಒಲಿಂಪಿಕ್ಸ್‌ನಲ್ಲಿ ಈವರೆಗೆ 38 ಪದಕಗಳನ್ನು ಗೆದ್ದ ಹೆಗ್ಗಳಿಕೆಗೆ ಪಾತ್ರವಾಗಿದೆ. ಹೇಲೆ ಗ್ಯಾಬ್ರಸೆಲೆಸಿ, ಕೆನೆನಿಸ ಬೆಕೆಲೆ ಸೇರಿದಂತೆ ಹತ್ತಾರು ಓಟಗಾರರು ಒಲಿಂಪಿಕ್ಸ್ ಇತಿಹಾಸದ ಪುಟದಲ್ಲಿ ಸೇರಿದ್ದಾರೆ. ಮೆರಥಾನ್ ಓಟ, 10ಸಾವಿರ, 5ಸಾವಿರ, 3ಸಾವಿರ ಮೀಟರ್ಸ್ ಓಟದ ಸ್ಪರ್ಧೆಗಳಲ್ಲೇ ಈ ದೇಶದ ಅಥ್ಲೀಟ್‌ಗಳು ಪದಕ ಗೆದ್ದಿರುವುದು.
ಚುಟುಕು
ಒಲಿಂಪಿಕ್ ಕೂಟಗಳಲ್ಲಿ  ಇಂಗ್ಲಿಷ್ ಮತ್ತು ಫ್ರೆಂಚ್ ಅಧಿಕೃತ ಸಂವಹನ ಭಾಷೆಗಳಾಗಿವೆ. ಜತೆಗೆ ಆತಿಥೇಯ ದೇಶದ ಭಾಷೆ ಇರುತ್ತದೆ.

***

ಅಂತರ ರಾಷ್ಟ್ರೀಯ ಒಲಿಂಪಿಕ್ ಸಮಿತಿಯು ಪ್ರಸಕ್ತ 205 ದೇಶಗಳ ಒಲಿಂಪಿಕ್ ಸಮಿತಿಗಳಿಗೆ ಮಾನ್ಯತೆ ನೀಡಿದೆ.

***

ಒಲಿಂಪಿಕ್ಸ್ ಆಂದೋಲನಕ್ಕೆ ಬಲು ದೊಡ್ಡ ಕೊಡುಗೆ ನೀಡಿದವರಿಗೆ, ಈ ಆಂದೋಲನ ಇನ್ನಷ್ಟೂ ಜನಪ್ರಿಯತೆ ಪಡೆಯುವ ನಿಟ್ಟಿನಲ್ಲಿ ಸೇವೆ ಸಲ್ಲಿಸಿದವರಿಗೆ ಒಲಿಂಪಿಕ್ ಆರ್ಡರ್ ಪ್ರಶಸ್ತಿ ನೀಡಲಾಗುತ್ತದೆ.
ಭಾರತ... ಏನು ಎತ್ತ
ಪಿ.ಟಿ.ಉಷಾ

ದಶಕದ ಹಿಂದೆ ಪಿ.ಟಿ.ಉಷಾ ಹೆಸರು ಭಾರತದ ಮಟ್ಟಿಗೆ ಮನೆ ಮಾತಾಗಿತ್ತು. ಕೇರಳದ ಕಲ್ಲಿಕೋಟೆ ಶಾಲಾ ಕ್ರೀಡಾಕೂಟದಿಂದ (1976) ಏಷ್ಯಾಡ್ ಚಿನ್ನದ ಪದಕಗಳವರೆಗೆ ಏರಿದ ಎತ್ತರ ಅನನ್ಯ.

ಇವರು 1980ರಲ್ಲಿ ಮಾಸ್ಕೊದಲ್ಲಿ ನಡೆದಿದ್ದ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದರು. ಆಗ ಅವರ ವಯಸ್ಸು ಕೇವಲ ಹದಿನಾರು. ಆದರೆ 1984ರಲ್ಲಿ ಲಾಸ್‌ಏಂಜಲ್ಸ್‌ನಲ್ಲಿ ತೋರಿದ ಸಾಮರ್ಥ್ಯದಿಂದಾಗಿ ಉಷಾ ಇರುಳು ಕಳೆಯುವುದರೊಳಗೆ ಭಾರತದ ಕಣ್ಮಣಿಯಾಗಿಬಿಟ್ಟಿದ್ದರು. ಲಾಲ್‌ಏಂಜಲ್ಸ್‌ನಲ್ಲಿ 400 ಮೀಟರ್ಸ್ ಹರ್ಡಲ್ಸ್‌ನಲ್ಲಿ ಸ್ಪರ್ಧಿಸಿದ್ದ ಉಷಾ ಅಂತಿಮ ಘಟ್ಟ ತಲುಪಿದ್ದಾಗ ಇಡೀ ಭಾರತದ ಕ್ರೀಡಾರಂಗ ರೋಮಾಂಚನಗೊಂಡಿತ್ತು. ಆ ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳೆ ಅವರು. ಆದರೆ ಫೈನಲ್‌ನಲ್ಲಿ ಉಷಾ ಕೂದಲೆಳೆಯಷ್ಟು ಅಂತರದಿಂದ ಕಂಚಿನ ಪದಕ ಕಳೆದುಕೊಂಡರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.