ಶುಕ್ರವಾರ, ಜೂನ್ 18, 2021
20 °C

220 ಕೆವಿ ಸ್ಟೇಷನ್‌ನಲ್ಲಿ 110 ಕೆವಿ ಸಿಟಿ ಭಸ್ಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

220 ಕೆವಿ ಸ್ಟೇಷನ್‌ನಲ್ಲಿ 110 ಕೆವಿ ಸಿಟಿ ಭಸ್ಮ

ರಾಯಚೂರು: ಇಲ್ಲಿನ ಲಿಂಗಸುಗೂರು ರಸ್ತೆಯಲ್ಲಿ ಇರುವ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ(ಕೆಪಿಟಿಸಿಎಲ್) 220 ಕೆವಿ ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿನ 110 ಕೆವಿ `ಸಿಟಿ~ಗೆ ( ಕರೆಂಟ್ ಟ್ರಾನ್ಸಫಾರ್ಮರ್) ಶನಿವಾರ ರಾತ್ರಿ 11.30ಕ್ಕೆ ಹಠಾತ್ ಬೆಂಕಿ ಹೊತ್ತಿಕೊಂಡು ಸುಟ್ಟಿದೆ.ಭಾನುವಾರ ಬೆಳಿಗ್ಗೆಯಿಂದ ಕೆಪಿಟಿಸಿಎಲ್ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ದುರಸ್ತಿ ಕಾರ್ಯಕೈಗೆತ್ತಿಕೊಂಡಿದ್ದು, ಸಂಜೆಯವರೆಗೂ ದುರಸ್ತಿ ಕಾರ್ಯ ಮುಂದುವರಿದಿತ್ತು.ಶನಿವಾರ ರಾತ್ರಿಯಿಂದ ಜಿಲ್ಲಾ ಕೇಂದ್ರವಾದ ರಾಯಚೂರು ನಗರ ಸೇರಿದಂತೆ ಇಡೀ ಜಿಲ್ಲೆ ಕತ್ತಲಲ್ಲಿ ಮುಳುಗಿತ್ತು. ಜನಜೀವನ ಅಸ್ತವ್ಯಸ್ತಗೊಂಡಿತು. ಮೊದಲೇ ಬಿಸಿಲು ಕಾಲು. 39 ಡಿಗ್ರಿ ಸೆಲ್ಸಿಯಸ್ ತಾಪಮಾನಕ್ಕೆ ಹಗಲು ಹೊತ್ತಿನಲ್ಲಿ ತತ್ತರಿಸಿದ್ದ ಜನ ರಾತ್ರಿ ಕರೆಂಟ್ ಕೊಟ್ಟ ಶಾಖ್‌ಗೆ ಜಾಗರಣೆ ಮಾಡಿದರು.ಈಗ ವಿದ್ಯುತ್ ಬರುತ್ತದೋ. ಸ್ವಲ್ಪ ಹೊತ್ತು ಬಿಟ್ಟು ಬರುತ್ತದೋ ಎನ್ನುತ್ತ ಜನತೆ ಪರದಾಡಿದರು. ಮೊಬೈಲ್, ದೂರವಾಣಿ ಮೂಲಕ ಜೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿ ವಿಚಾರಿಸಿ ಸುಸ್ತಾದರು. ವಿಶೇಷವಾಗಿ ಪರೀಕ್ಷೆ ದಿನಗಳಾದ್ದರಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳು ಕಸಿವಿಸಿಗೊಂಡರು. ಶೆಖೆಗೆ ಪುಟಾಣಿ ಮಕ್ಕಳ ಕಿರಿಕಿರಿಗೆ ಮನೆ ಮಂದಿಯೆಲ್ಲಾ ನಿದ್ರೆ ಇಲ್ಲದ ರಾತ್ರಿ ಕಳೆದರು.ಬೆಳಿಗ್ಗೆ ವಿದ್ಯುತ್ ಬಂದೀತು ಎಂದು ಚಾತಕ ಪಕ್ಷಿಯಂತೆ ಕಾಯ್ದ ಜನತೆ ಮತ್ತೆ ಕಂಗಾಲಾದರು. ಜನತೆ ಸಮಸ್ಯೆ ಅರಿತ ಜೆಸ್ಕಾಂ ಅಧಿಕಾರಿಗಳು ಬೇರೇ ಮಾರ್ಗದಿಂದ ಜಿಲ್ಲೆಯ ಯಾವ್ಯಾವ ಕಡೆ ತಾತ್ಕಾಲಿಕವಾಗಿ ವಿದ್ಯುತ್ ಕಲ್ಪಿಸಲು ಸಾಧ್ಯವಿದೆಯೋ ಎಂಬುದರ ಬಗ್ಗೆ ಚಿಂತನೆ ನಡೆಸಿ ದೇವದುರ್ಗಕ್ಕೆ ಶಹಪುರ ವಿದ್ಯುತ್ ಮಾರ್ಗದಿಂದ, ಮಾನ್ವಿಗೆ ಸಿಂಧನೂರು ಕಡೆಯ ವಿದ್ಯುತ್ ಮಾರ್ಗದಿಂದ ಕೆಲ ತಾಸುಗಳ ಕಾಲ ವಿದ್ಯುತ್ ಪೂರೈಕೆ ವ್ಯವಸ್ಥೆಯನ್ನು ಮಾಡಿದರು.ಆದರೆ, ರಾಯಚೂರು ನಗರಕ್ಕೆ ಸಂಜೆಯಾದರೂ ವಿದ್ಯುತ್ ಸರಬರಾಜು ಸಾಧ್ಯವಾಗಿರಲಿಲ್ಲ. ಜನತೆಯ ಅಕ್ರೋಷಕ್ಕೆ ಜೆಸ್ಕಾಂ, ಕೆಪಿಟಿಸಿಎಲ್ ಅಧಿಕಾರಿಗಳು ತತ್ತರಿಸಿದ್ದರು. ಮೊಬೈಲ್ ಕರೆ ಸ್ವಿಕರಿಸಲಿಲ್ಲ. ವಿದ್ಯುತ್ ಇಲ್ಲದೇ ಕುಡಿಯುವ ನೀರಿನ ಪೂರೈಕೆ, ಕೊಳವೆ ಬಾವಿ ಚಾಲನೆ ಆಗದೇ ಇರುವುದು ರಜಾ ದಿನವಾದ ಭಾನವಾರ ನಗರದ ಜನತೆಯನ್ನು ಕಂಗೆಡಿಸಿತ್ತು. ಕರೆಂಟ್ ಇಲ್ಲದ್ದರಿಂದ ಟ್ಯಾಂಕರ್‌ನಿಂದ ಪಡೆಯುವ ಯತ್ನವೂ ಫಲಿಸಲಿಲ್ಲ.ಜೆಸ್ಕಾಂ-ಕೆಪಿಟಿಸಿಎಲ್ ಅಧಿಕಾರಿಗಳ ಹೇಳಿಕೆ: 220ಕೆವಿ ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿರುವ 110 ಕೆವಿ ಸಿಟಿ (ಕರೆಂಟ್ ಟ್ರಾನ್ಸಫಾರ್ಮರ್) ಸ್ಪೋಟಗೊಂಡು ಸುಟ್ಟಿದೆ. ಇದು ಸುಟ್ಟಿರುವುದಕ್ಕೆ ಕಾರಣ ಹಲವು ರೀತಿಯದ್ದು. ಸಿಟಿ ಹಳೆಯದಾಗಿದೆ. ನಿರಂತರ ವಿದ್ಯುತ್ ಒತ್ತಡ ಈಚೆಗೆ ಸಾಮಾನ್ಯ. ಇವು ಕಾರಣ ಇರಬಹುದು. ಸದ್ಯ ತುರ್ತಾಗಿ ಸಿಟಿ ದುರಸ್ತಿಗೊಳಿಸಿ ವಿದ್ಯುತ್ ಸರಬರಾಜು ಮಾಡಲು ಗಮನಹರಿಸಲಾಗಿದೆ ಎಂದು ಜೆಸ್ಕಾಂ ಗುಲ್ಬರ್ಗ ಮುಖ್ಯ ಎಂಜಿನಿಯರ್ ಚಂದ್ರಶೇಖರ, ಕೆಪಿಟಿಸಿಎಲ್‌ನ ಕಾರ್ಯನಿರ್ವಾಹಕ ಎಂಜಿನಿಯರ್ ತ್ರಿನೇಶ್ವರ್  ಪ್ರಜಾವಾಣಿಗೆ ತಿಳಿಸಿದರು.ಸುಮಾರು 50ಕ್ಕೂ ಹೆಚ್ಚು ಸಿಬ್ಬಂದಿ, ಅಧಿಕಾರಿಗಳು ದುರಸ್ತಿ ಕಾರ್ಯದಲ್ಲಿ ತೊಡಗಿದ್ದರು. 110 ಸಿಟಿಯ ವೈಯರ್, ತಂತಿಗಳು ಸುಟ್ಟು ಕರಕಲಾಗಿದ್ದು, ಬದಲಾವಣೆ ಕಾರ್ಯದಲ್ಲಿ ತೊಡಗಿದ್ದರು. ದುರಸ್ತಿ ಕಾರ್ಯದಲ್ಲಿ  ಕ್ರೇನ್ ಸಹಾಯಕ್ಕೆ ಖಾಸಗಿ ಉದ್ದಿಮೆ ಸಂಸ್ಥೆಗಳ ಸಹಾಯಕ್ಕೆ ಪರದಾಡಿದರು. ಜೆಸ್ಕಾಂ ಮುಖ್ಯ ಎಂಜಿನಿಯರ್ ಚಂದ್ರಶೇಖರ, ಕೆಪಿಟಿಸಿಎಲ್ ಅಧಿಕಾರಿಗಳು ಸ್ಥಳದಲ್ಲಿ ಖುದ್ದು ಹಾಜರಿದ್ದು ದುರಸ್ತಿ ಕಾರ್ಯ ಪರಿಶೀಲಿಸಿದರು.ಭಾನುವಾರ ಬೆಳಿಗ್ಗೆಯಿಂದಲೇ ದುರಸ್ತಿ ಕಾರ್ಯ ಆರಂಭಗೊಂಡಿದ್ದರೂ ಸಂಜೆಯವರೆಗೂ ದುರಸ್ತಿ ಕಾರ್ಯ ಪೂರ್ಣಗೊಂಡಿರಲಿಲ್ಲ.ಈಚೆಗಿನ ನಾಲ್ಕಾರೂ ವರ್ಷಗಳಲ್ಲಿ ಈ ರೀತಿ ವಿದ್ಯುತ್ ಕೈಕೊಟ್ಟಿರಲಿಲ್ಲ.ವಿದ್ಯುತ್ ಉತ್ಪಾದನೆ ಕೇಂದ್ರವಿದ್ದರೂ ಕೆಪಿಟಿಸಿಎಲ್ ಮತ್ತು ಜೆಸ್ಕಾಂ ಆಡಳಿತ ಯಂತ್ರ ವಿಭಾಗವು ಸಮರ್ಪಕ ರೀತಿ ವಿದ್ಯುತ್ ಸ್ವೀಕರಣ ಕೇಂದ್ರಗಳ ಸದೃಢತೆಗೆ ಗಮನಹರಿಸದೇ ನಿರ್ಲಕ್ಷ್ಯ ತೋರಿರುವುದೇ ಸಮಸ್ಯೆಗೆ ಮುಖ್ಯ ಕಾರಣ ಎಂದು ವ್ಯಾಪಾರಸ್ಥರು, ನಗರದ ಜನತೆ ಅಕ್ರೋಶವ್ಯಕ್ತಪಡಿಸುತ್ತಿದ್ದುದು ಕಂಡು ಬಂದಿತು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.