23475 ಬಿಸಿಯೂಟ ಫಲಾನುಭವಿಗಳು
ಬೀಳಗಿ: ತಾಲ್ಲೂಕಿನಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಬಿಸಿಯೂಟದ ಫಲಾನುಭವಿಗಳು ದಾಖಲಾತಿಯಲ್ಲಿ 26060, ಹಾಜರಾತಿಯಲ್ಲಿ 24161ರಷ್ಟಿದ್ದು ಸರಾಸರಿ ಸಂಖ್ಯೆ 23475ರಷ್ಟು ಎಂದು ಅಕ್ಷರ ದಾಸೋಹ ಸಮಿತಿಯ ಅಧ್ಯಕ್ಷರಾದ ತಾ.ಪಂ. ಕಾರ್ಯ ನಿರ್ವಾಹಕ ಅಧಿಕಾರಿ ರಾಜಕುಮಾರ ತೊರವಿ ಸಭೆಗೆ ತಿಳಿಸಿದರು.
ತಾ.ಪಂ. ಸಭಾ ಭವನದಲ್ಲಿ ನಡೆದ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಅಕ್ಷರ ದಾಸೋಹ ಯೋಜನೆಯ ತಾಲ್ಲೂಕು ಮಟ್ಟದ ಚಾಲನಾ ಮತ್ತು ಪರಾಮರ್ಶೆ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಸಭೆಗೆ ವಿವರಣೆ ನೀಡಿದರು.
ಈಗಾಗಲೇ ತಾಲ್ಲೂಕಿನಲ್ಲಿ 113 ಅಡುಗೆ ಕೇಂದ್ರಗಳು ಕೆಲಸ ನಿರ್ವಹಿಸುತ್ತಿದ್ದು ಹೊಸದಾಗಿ ಮಂಜೂರಾದ 76 ಅಡುಗೆ ಕೇಂದ್ರಗಳಲ್ಲಿ 35 ಸಂಪೂರ್ಣಗೊಂಡಿವೆ. 13 ಛಾವಣಿ ಹಂತದಲ್ಲಿವೆ. 4 ಪ್ಲಿಂತ್ ಹಂತ, 4 ಪಾಯಾ ಹಂತದಲ್ಲಿವೆ. 9 ಪ್ರಾರಂಭಗೊಂಡಿಲ್ಲ. ಅವುಗಳನ್ನು ಅವಶ್ಯಕತೆ ಇದ್ದಲ್ಲಿ ವರ್ಗಾಯಿಸಲಾಗುವುದು ಎಂದು ತಿಳಿಸಿದರು.
ಪ್ರಾಥಮಿಕ ಶಾಲೆಯ ಅಡುಗೆ ಕೋಣೆ ನಿರ್ಮಾಣಕ್ಕಾಗಿ ರೂ. 60ಸಾವಿರ, ಪ್ರೌಢಶಾಲೆಯ ಅಡುಗೆ ಕೋಣೆ ನಿರ್ಮಾಣಕ್ಕೆ ರೂ. 1.20 ಲಕ್ಷ ನೀಡಲಾಗುವದು. ತರಕಾರಿ ವೆಚ್ಚಕ್ಕಾಗಿ 1ರಿಂದ 5ನೇ ತರಗತಿಯ ವಿದ್ಯಾರ್ಥಿಗಳಿಗೆ ತಲಾ 65 ಪೈಸೆ, 6ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ತಲಾ 97ಪೈಸೆ, ಗ್ಯಾಸ್ ಸಿಲಿಂಡರ್ಗಳು ದೊರೆಯದ ಸಂದರ್ಭಗಳಲ್ಲಿ ತಲಾ 30ಪೈಸೆ ಉರುವಲು ವೆಚ್ಚಕ್ಕಾಗಿ ಕೊಡಲಾಗುವುದು. ಫಲಾನುಭವಿಗಳ ಲೆಕ್ಕ ಹಾಕಿ ಎರಡು ತಿಂಗಳಷ್ಟು ಮೊದಲೇ ವೆಚ್ಚಕ್ಕಾಗಿ ಸಾದಿಲ್ವಾರ ಕೊಡಲಾಗುವುದು ಎಂದು ತಿಳಿಸಿದರು.
ಆರು ತಿಂಗಳಿಗೊಮ್ಮೆ ಜಂತು ನಾಶಕ ಅಲ್ಬೆಂಡೋಸ್ ಮಾತ್ರೆಗಳು ಹಾಗೂ ವಿಟಮಿನ್ಯುಕ್ತ ಮಾತ್ರೆಗಳನ್ನು ವಿತರಿಸಲಾಗುವದು. ಶೇ 90ರಷ್ಟು ಶಾಲೆಗಳಲ್ಲಿ ಅಗ್ನಿನಂದಕಗಳನ್ನು ಖರೀದಿಸಲಾಗಿದ್ದು ಉಳಿದ ಶಾಲೆಗಳಿಗೂ ಖರೀದಿಸಲು ಸೂಚಿಸಲಾಗಿದೆ. ಬರುವ ಜೂನ್ ತಿಂಗಳಿನಿಂದ ಮುಖ್ಯ ಅಡುಗೆಯವರಿಗೆ ಪ್ರತಿ ತಿಂಗಳು ರೂ. 1100, ಸಹಾಯಕ ಅಡುಗೆಯವರಿಗೆ ಹಾಗೂ ಅಡುಗೆ ಸಾಗಾಣಿಕೆ ಮಾಡುವವರಿಗೆ ರೂ. 1000 ಸಂಬಳ ಕೊಡಲಾಗುವುದೆಂದು ಹೇಳಿದ ಅವರು ಸರಕಾರದ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆ ಇದಾಗಿದ್ದು ಯೋಜನೆ ಫಲಪ್ರದವಾಗಲು ಅಕ್ಷರ ದಾಸೋಹ ಸಮಿತಿ ಸದಸ್ಯರು, ಸಾರ್ವಜನಿಕರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಸಹಾಯ ಸಹಕಾರ ನೀಡಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿಕೊಂಡರು.
ತಹಸೀಲ್ದಾರ ಎಲ್.ಬಿ. ಕುಲಕರ್ಣಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಜಿ. ದಾಸರ, ಸಮಿತಿ ಸದಸ್ಯರಾದ ಎಂ.ಆರ್. ಬುರ್ಲಿ, ವಾಣಿಶ್ರೆ ಕಣಮಡಿ, ಬಿ.ಎಸ್. ಹೆಳವರ, ಭಾರತಿ ಅಂಗಡಿ, ರೇಣುಕಾ ಗಡ್ಡಿ, ವಿಠ್ಠಲ ಸಿಂಗರೆಡ್ಡಿ ಸಭೆಯಲ್ಲಿ ಉಪಸ್ಥಿತರಿದ್ದು ಸಲಹೆ ಸೂಚನೆ ನೀಡಿದರು.
ಸಹಾಯಕ ನಿರ್ದೇಶಕ ವೀರೇಶ ಜೇವರಗಿ ಸ್ವಾಗತಿಸಿ, ವಂದಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.